ಸಾಧನೆಗೆ ಮೊದಲ ಹೆಜ್ಜೆ

ಸಾಧನೆಗೆ ಮೊದಲ ಹೆಜ್ಜೆ

ಬರಹ

ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಅನೇಕ ಗುಣಗಳನ್ನು ಬಳುವಳುಯಾಗಿ ಪಡೆದುಕೊಂಡು ಬಂದಿರುತ್ತಾನೆ. ಮಗು ನಡೆಯೋದಕ್ಕೆ ಶುರು ಮಾಡ್ಬೇಕು ಅಂತಂದ್ರೆ, ತಾನೇ ಬೋರಲು ಬಿದ್ದೋ, ಅಂಬೆಗಾಲಿಟ್ಟೋ, ಮುಂದೆ ಎದ್ದು ನಿಂತು, ನಂತರ ಒಂದೊಂದೇ ಹೆಜ್ಜೆ ಇಟ್ಟು, ಎದ್ದು-ಬಿದ್ದು, ಗೋಡೆ ಹಿಡಿದು, ಇಲ್ಲಾ ಅಪ್ಪ ಅಮ್ಮನ ಕೈಬೆರಳನ್ನು ಹಿಡಿದೋ ನೆಡೆದು ಮುಂದೊಂದು ದಿನ ತನ್ನ ಕಾಲ ಮೇಲೆ ತಾನೇ ನೆಡೆಯುವಂತಾಗುತ್ತಾನೆ/ಳೆ. ಹಾಗೆಯೇ ಸೃಜನಶೀಲತೆ(ಕ್ರಿಯೇಟಿವಿಟಿ) ಕೂಡ. ಎಲ್ಲರಲ್ಲೂ ಒಂದಲ್ಲಾ ಒಂದು ತೆರನಾದ ಸೃಜನಶೀಲತೆ ಹುಟ್ಟಿನಿಂದಲೋ, ಬೆಳೆಯುತ್ತಾ ಹೋದಂತೆ ಮೈಗೂಡಿಸಿಕೊಂಡಂತೆಯೂ ಇರುತ್ತದೆ. ತನ್ನ ಸಾಮರ್ಥ್ಯವನ್ನು ಅರಿತು, ತಾನೇನು ಹೊಸತನ್ನು ಮಾಡಬಲ್ಲೆನು ಎಂದು ಗುರುತಿಸಿಕೊಳ್ಳುವವರೆಗೂ, ಆತ್ಮವಿಶ್ವಾಸದಿಂದ ಮುನ್ನೆಡೆದು ಏನನ್ನಾದರೂ ಮಾಡಿ ಸಾಧಿಸುವವರೆಗೂ ಮನುಷ್ಯನಿಗೆ ಅದರ ಅರಿವು ಇರುವುದೇ ಇಲ್ಲ.

ಓದಿನ ನಂತರ ಮುಂದೇನು ಎಂದು ನಮ್ಮಲ್ಲನೇಕರು ತಲೆಕೆಡಿಸಿಕೊಂಡಿದ್ದಿರಬಹುದು. ಮನೆಯಲ್ಲಿನ ಇತರರು ಏನು ಮಾಡಬಲ್ಲರು ಎಂಬ ಚಿಂತೆಯೂ ನಮ್ಮಲ್ಲಿ ಕೆಲವರಿಗೆ ಇರಬಹುದು. ನಮಗೆಲ್ಲ ಗೊತ್ತಿರುವಷ್ಟು ವಿಷಯಗಳನ್ನು ನಾವು ಎಲ್ಲರೊಡನೆ ಹಂಚಿಕೊಂಡು, ಕೆಲವು ಸಲ "ನೀನು ಇದನ್ನು ಮಾಡಿದರೆ ಚೆನ್ನಾಗಿರುತ್ತೆ" ಎಂದು ಹೇಳುವುದಕ್ಕೆ ಮಾತ್ರ ಸಾಧ್ಯವಾಗುತ್ತೆ. ಆದರೆ ತಾನೇನು ಮಾಡಬಲ್ಲೆನು ಎಂದು ನಿರ್ಧರಿಸಬೇಕಾದದ್ದು ಕೆಲಸದ ಹುಡುಕಾಟದಲ್ಲಿರುವವನು ಮಾತ್ರ.

ಸರಿ, ಈಗ ನಾನು ಈ ಕೆಲಸಗಳನ್ನು ಮಾಡ್ಲಿಕ್ಕೆ ಸಾಧ್ಯ, ನನ್ನ ಸಾಮರ್ಥ್ಯ ಇಂತದ್ದು, ನನಗೆ ಈ ಕೆಲಸ ಮಾಡ್ಲಿಕ್ಕೆ ಇಷ್ಟ. ಹೀಗೆ ಪಟ್ಟಿ ಮಾಡುತ್ತಾ ಹೋಗಿ ನಂತರ ಉತ್ತಮವಾದದ್ದನ್ನು ಆರಿಸಿಕೊಳ್ಳುವ ಪರಿಪಾಠ ನಮ್ಮಲ್ಲಿ ಎಲ್ಲರಲ್ಲೂ ಇದೆಯೇ? ಇಲ್ಲದಿದ್ದಲ್ಲಿ ನಮಗೆ ಗೊತ್ತಿಲ್ಲದ ಕೆಲವು ವಿಷಯಗಳ ಮಾಹಿತಿ ಸಂಗ್ರಹಣೆ ಮಾಡಲಿಕ್ಕೆ ಪ್ರಯತ್ನಿಸುತ್ತೇವೆಯೇ? ಎಲ್ಲಿ ಈ ಮಾಹಿತಿಯನ್ನು ನಾವು ಪಡೆದು ಕೊಳ್ಳಬಹುದು? ಈ ಪ್ರಶ್ನೆಗಳು ನಿಮ್ಮಲ್ಲಿ ಮೂಡಿವಿಯೇ? ಈ ಪ್ರಶ್ನೆಗಳು ತುಂಬಾ ಸಾಮಾನ್ಯದವು ಎಂದೆನಿಸುತ್ತಿವೆಯೇ? ಹೌದು ಇವೆಲ್ಲಾ ತುಂಬಾ ಸಾಮಾನ್ಯ ಪ್ರಶ್ನೆಗಳೇ. ಅವಕ್ಕೆ ಉತ್ತರ ಏಷ್ಟು ಬೇಗ ಹುಡುಕ್ತೇವೋ ಅಷ್ಟೇ ಒಳ್ಳೇಯದು. ಉತ್ತರ ಹುಡುಕ್ಲಿಕ್ಕೆ ಶುರು ಮಾಡಿದ್ರಾ?. "ಸಾಮಾನ್ಯ ಜ್ಞಾನ ಸಾಮಾನ್ಯವಾದುದಲ್ಲ" ಎಂದು ಕೇಳಿದ್ದೀರಲ್ಲವೇ? (ಈ ವಾಕ್ಯವನ್ನು ಇಂಗ್ಲೀಷಿನಲ್ಲಿ ತುಂಬಾ ಉಪಯೋಗಿಸ್ತಾರೆ).

ಈಗಲಾದರು ಈ ವಿಷಯಗಳ ಬಗ್ಗೆ ಗಮನ ಹರಿಸದವರು ಚಿಂತಿಸಲಿಕ್ಕೆ ಪ್ರಾರಂಭಿಸಿದ್ದೀರಾ? ಹೊಸ ಕೆಲಸವನ್ನು ಪ್ರಾರಂಭಿಸಲಿಕ್ಕೆ ಎಷ್ಟು ಜನ ಸಿದ್ದರಿದ್ದೀರಿ? ಕೈ ಎತ್ತಿ ನೋಡುವ.

ಎಲ್ಲಾರೂ ಎನಾದ್ರೂ ಮಾಡ್ಬೇಕು, ಸಾಧಿಸಬೇಕು ಎಂದುಕೊಂಡವರೇ. ಆದರೆ ಯಾರು ಹೊಸ ಕೆಲಸವನ್ನು ಕೈಗೆ ತೆಗೆದುಕೊಳ್ಳಲು ನಿಜವಾಗಲೂ ಸಿದ್ದರಿದ್ದಾರೆ ಎಂದು ಪರೀಕ್ಷಿಸಲು ಉದ್ಯೋಗ ವಿನಿಮಯ ಕೆಂದ್ರದ ತರಬೇತಿ ತರಗತಿಯಲ್ಲಿ ಒಮ್ಮೆ ಈ ಮೇಲಿನ ಪ್ರಶ್ನೆಯನ್ನು ಕೇಳಲಾಯಿತು. ಮೊದಲು ಒಂದೆರಡು ಕೈಗಳು, ಮತ್ತೆ ಮತ್ತೊಂದಿಷ್ಟು. ಹೀಗೆ ನಿಧಾನವಾಗಿ ಕೈಗಳು ಮೇಲೆ ಬರಲಾರಂಭಿಸಿದವು. ಅರೆರೆ.. ಯಾಕೆ ಹೀಗೆ? ಎಲ್ಲರೂ ಕೆಲಸಕ್ಕಾಗಿಯಲ್ಲವೇ ಇಲ್ಲಿ ಬಂದವರು ಎಂದದ್ದಕ್ಕೆ ಕೊನೆಗೆ ಎಲ್ಲರ ಕೈಗಳೂ ಮೇಲೆ ಬಂದವು..

ಆ ನಂತರ ಒಂದು ಸಣ ಕಥೆ. ನಿಮ್ಮಲ್ಲಿ ಮೊದಲು ಕೈ ಎತ್ತಿದವರೆಲ್ಲಾ ಅರ್ಲಿ ಬರ್ಡ್ ಗಳು. ಅವಕ್ಕೆಲ್ಲಾ ಒಳ್ಳೆಯ ಹಣ್ಣುಗಳು ಸಿಗ್ತವೆ.. ಮಿಕ್ಕವಕ್ಕೆ.. ಏನಂತ ನೀವೇ ಯೋಚನೆ ಮಾಡಿ ಬಿಡಿ ಅಂತಂದ್ರು.. ಅದೇ ಕಥೆಯನ್ನು ಹೊಲುವ ಒಂದು ಕಾಮಿಕ್ ವಿಡಿಯೋ ಇಲ್ಲಿದೆ. ಒಮ್ಮೆ ನೋಡಿ ಬಿಡಿ.

ಕಲಿಯುವುದಕ್ಕೆ ಆಸೆಯಿರುವವನು, ಹೊಸ ಅವಕಾಶಗಳು ತನ್ನ ಮುಂದೆ ಬಂದಾಗ ಮುನ್ನುಗ್ಗಿ ಅದನ್ನು ತನ್ನದಾಗಿಸಿಕೊಳ್ಳಬೇಕು ಅಥವಾ ಪ್ರಯತ್ನವನಾದರೂ ಮಾಡಬೇಕು. ತನ್ನ ಸೃಜನಶೀಲತೆಯನ್ನು ಉಪಯೋಗಿಸಿ ಕಾರ್ಯಸಾಧಿಸಿದರೆ ಆತ್ಮವಿಶ್ವಾಸ, ಆತ್ಮಬಲ ಹೆಚ್ಚ ಬಹುದಲ್ವಾ? ಸೋಮಾರಿಯಂತೆ ಮಲಗಿ ನಿದ್ರಿಸಿದರೆ (ಹೆದರಿ ಹಿಂದುಳಿದರೆ) ಯಾವಾಗಲೂ ಹಿಂದೆ ಬೀಳುತ್ತೇವೆ, ನಮ್ಮ ಪಾಲಿನ ಭಾಗ್ಯಲಕ್ಷ್ಮಿ ಬೇರೆಯವರ ಸ್ವತ್ತಾಗುತ್ತಾಳೆ ಅನ್ನೋದೇ ಈ ಕಥೆಯ ಸಾರಾಂಶ.

ಇದನ್ನೆಲ್ಲಾ ಏಕೆ ಹೇಳಿದೆ ಅಂತಂದ್ರೆ, ಏನಾದ್ರೂ ಮಾಡ್ಬೇಕು ಅಂದುಕೊಂಡಾಗ ಪ್ರಾರಂಭ ಶೂರತ್ವವೋ, ಇಲ್ಲ ಅಂಜಿಕೆಯೋ ಮನದಲ್ಲಿ ಮನೆಮಾಡಿ, ಆಗಬೇಕಾದ, ಆಗಬಹುದಾದ ಅನೇಕ ಕೆಲಸಗಳಿಗೆ ಮೊದಲ ಹೆಜ್ಜೆಯಲ್ಲಿಯೇ ಇತಿಶ್ರೀ ಹಾಡುವಂತಾಗುವುದು ಅನೇಕರ ಬದುಕಲ್ಲಿ ಸಾಮಾನ್ಯ. ಅದರಿಂದಲೇ ಬೇರೆಯವರಿಂದ ಸೋಂಬೇರಿ ಎಂದೋ, ಕೆಲಸಕ್ಕ ಬಾರದವನೆಂದೋ ಬೈಸಿಕೊಳ್ಳುವ ಪರಿಪಾಠದಿಂದ ನೊಂದುಕೊಳ್ಳುವವರೂ ಅನೇಕ. ಅದೇ ಕೆಲವರಲ್ಲಿ ಸಾಧಿಸಬೇಕೆಂಬ ಕಿಚ್ಚು ಹೊತ್ತಿಸಲೂ ಸಾಕು.. ಜವಾಬ್ದಾರಿಯ ನೊಗ ಹೊರುವ ವಯಸ್ಸು ಹತ್ತಿರ ಬರುವ ಹೊತ್ತಿಗೆ ನಾವೂ ಎಚ್ಚೆತ್ತು, ನಮ್ಮ ಕೆಲಸಗಳನ್ನು ಹೇಗೆ ಅಚ್ಚುಕಟ್ಟಿನಿಂದ ಮಾಡಲು ಸಾಧ್ಯ ಎಂದು ಕಾರ್ಯಪ್ರವೃತ್ತರಾದರೆ ಲಕ್ಷ್ಮೀ ಕಟಾಕ್ಷದ ಕೃಪೆಗೆ ಯಾರು ಬೇಕಾದರೂ ಪಾಲುದಾರರಾಗಬಹುದು.

ಮುಂದೆ ಸ್ವಯಂ ಉದ್ಯೋಗ, ಇಂಟರ್ವ್ಯೂ ಎದುರಿಸುವುದರ ಬಗ್ಗೆ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ನಿಮ್ಮಲ್ಲಿ ಚರ್ಚಿಸಿ ಉತ್ತಮ ಮಾಹಿತಿಗಳನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುವ ಕನಸು. ತಂತ್ರಜ್ಞಾನದ ವಿಷಯದ ಜೊತೆ ಈ ಬೇಸಿಕ್ ವಿಷಯಗಳ ಮಿಶ್ರಣ ಬೇಕಲ್ವಾ? ನಿಮಗೂ ಇಂತಹ ವಿಷಯಗಳಲ್ಲಿ ಆಸ್ತೆ ಇದ್ದರೆ ಬರೆಯಲಿಕ್ಕೆ ಶುರು ಮಾಡಿ ತಪ್ಪಿದ್ದರೆ ತಿದ್ದಿಕೊಳ್ಳೋಣ. ಹೆದರಬೇಡಿ. ಹೊಸದೊಂದು ಕಾರ್ಯಸಾಧನೆ ಮಾಡಿದಾಗೆ ಆಗುತ್ತೆ. ಮೇಲಿನ ಕಥೆ ಇಲ್ಲೂ ಅನ್ವಯಿಸುತ್ತದಲ್ಲವೇ?

ಕಾಯಕವೇ ಕೈಲಾಸ - ಬಸವಣ್ಣನವರ ಈ ಮುತ್ತಿನಂತ ಮಾತನ್ನು ನೆನೆಯುತ್ತ..

ವಿ.ಸೂ:- ನನಗೆ ತಿಳಿದ ಕೆಲವು ಮಾಹಿತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ. ಈ ಮಾಹಿತಿಗಳಲ್ಲಿ ನ್ಯೂನ್ಯತೆಗಳು ಕಂಡು ಬಂದಲ್ಲಿ ತಪ್ಪದೇ ನನಗೆ ಮೈಲಾಯಿಸಿ ಅಥವಾ ಅದರ ಬಗ್ಗೆ ಕಾಮೆಂಟುಗಳಲ್ಲಿ ಚರ್ಚಿಸಿ.

ಚಿತ್ರ: ಹರಿ ಸೌತ್ ಎಂಡ್ ಬಳಿಯ ದೇಸಿಯಲ್ಲಿ ತೆಗೆದದ್ದು