ಸಾಧನೆಯ ಸಮಾವೇಶ....

ಸಾಧನೆಯ ಸಮಾವೇಶ....

ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಸಾಧನೆಯ ಸಮಾವೇಶ ಮಾಡುತ್ತಿದೆ. ಈ ಎರಡು ವರ್ಷಗಳ ನಂತರ ನಿಜಕ್ಕೂ ಸಮಾರಂಭವೆಂಬ ಬೃಹತ್ ವಿಜೃಂಭಣೆಯ ಕಾರ್ಯಕ್ರಮ ಮಾಡುವಷ್ಟು ಸಾಧನೆ ಈ ಸರ್ಕಾರದಿಂದಾಗಿದೆಯೇ ? ಇಲ್ಲಿನ ಶಾಸಕಾಂಗ ಮತ್ತು ಕಾರ್ಯಾಂಗ ಕಾನೂನು ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಿಜಕ್ಕೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿದೆಯೇ ?

ಸರ್ಕಾರದ ಸಾಧನೆಯ ಬಹುದೊಡ್ಡ ಮಾನದಂಡವೆಂದರೆ  ಶಿಕ್ಷಣ, ಆರೋಗ್ಯ, ಭದ್ರತೆ, ಬೆಲೆ ನಿಯಂತ್ರಣ, ಭ್ರಷ್ಟಾಚಾರ ಇಲ್ಲದಿರುವಿಕೆ, ಸಾಮಾಜಿಕ ನ್ಯಾಯ, ಪರಿಸರ ಸಂರಕ್ಷಣೆ, ಅಪರಾಧಗಳ ನಿಯಂತ್ರಣ, ಉದ್ಯೋಗ ಸೃಷ್ಟಿ, ಮೂಲ ಸೌಕರ್ಯಗಳ ಅಭಿವೃದ್ಧಿ, ಆಡಳಿತದ ಮೇಲೆ ನಿಯಂತ್ರಣ, ಪ್ರಾದೇಶಿಕ ತಾರತಮ್ಯ ನಿವಾರಣೆ, ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆ, ಕ್ರೀಡೆ ಸಾಹಿತ್ಯ ಸಂಗೀತ ವಿಜ್ಞಾನಗಳಲ್ಲಿ ಮಹತ್ತರ ಸಾಧನೆ, ವ್ಯಕ್ತಿತ್ವ ನಿರ್ಮಾಣ, ಒಟ್ಟಾರೆ ಈ ಎಲ್ಲದರ ಬೆಳವಣಿಗೆಯಿಂದ ಜನರ ಜೀವನ ಮಟ್ಟ ಸುಧಾರಣೆ. 

ಈ ನಿಟ್ಟಿನಲ್ಲಿ ಏನಾದರೂ ದೊಡ್ಡಮಟ್ಟದ ವ್ಯತ್ಯಾಸವಾಗಿದ್ದಲ್ಲಿ ಖಂಡಿತವಾಗಲು ಅದನ್ನು ಸಾಧನೆ ಎಂದು ಒಂದಷ್ಟು ಸಂಭ್ರಮ ಪಡಬಹುದು. ಇಲ್ಲದಿದ್ದರೆ ಉಳಿದ ಮೂರು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆ ಮಾಡಿ ಆನಂತರ ಸಾಧನೆಯ ಸಮಾವೇಶ ಮತ್ತು ಮುಂದಿನ ಚುನಾವಣೆಗೆ ಜನರಲ್ಲಿ ಮತ ಕೇಳಬೇಕಾಗುತ್ತದೆ. 

ಇದರ ಆಧಾರದ ಮೇಲೆ ಕರ್ನಾಟಕವನ್ನು ಸಮಗ್ರವಾಗಿ  ನೋಡುವುದಾದರೆ ರಾಜ್ಯ ಸರ್ಕಾರದ ಸಾಧನೆ ತೃಪ್ತಿದಾಯಕವಾಗಿಲ್ಲ. ಒಂದಷ್ಟು ಸಣ್ಣಪುಟ್ಟ ಸಹಜ ತಾಂತ್ರಿಕ ಬದಲಾವಣೆಯ ಬೆಳವಣಿಗೆ, ಅಭಿವೃದ್ಧಿಯನ್ನು ಹೊರತುಪಡಿಸಿದರೆ ಒಟ್ಟಾರೆ ಜನಜೀವನದ ಮೇಲೆ ಪರಿಣಾಮ ಬೀರುವಂತಹ ಯಾವುದೇ ಗಂಭೀರ ಪ್ರಯತ್ನಗಳು ಸಾಗುತ್ತಿಲ್ಲ. ವಸ್ತು ಸಂಸ್ಕೃತಿ ಎಂದಿನಂತೆ ಅಭಿವೃದ್ಧಿಯ, ಆಧುನಿಕ ತಂತ್ರಜ್ಞಾನದ ಬೆಳವಣಿಗೆಯ ಹಾದಿಯಲ್ಲಿದೆ ಎಂಬುದು ನಿಜ, ಆದರೆ ಸುಸ್ಥಿರ ಅಭಿವೃದ್ಧಿ ಮಾತ್ರ ಸಾಧ್ಯವಾಗುತ್ತಿಲ್ಲ. 

ಆರ್ಥಿಕ ಅಭಿವೃದ್ಧಿ ಕೆಲವೇ ವ್ಯಕ್ತಿಗಳಲ್ಲಿ, ಕೆಲವೇ ಸಂಸ್ಥೆಗಳಲ್ಲಿ ಕೇಂದ್ರೀಕೃತವಾಗುತ್ತಿದ್ದರೆ, ಸಾಮಾಜಿಕ ವ್ಯವಸ್ಥೆ ಮನಸ್ಸುಗಳು ಒಡೆದ ಸನ್ನಿವೇಶದತ್ತ ಸಾಗುತ್ತಿದೆ, ಶಾಂತಿ ಕದಡುತ್ತಿದೆ. ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ರಿಮಿನಲ್ ಅಪರಾಧಗಳು ಬೇರೆ ಬೇರೆ ರೂಪ ಪಡೆದು ಜನರನ್ನು ವಂಚಿಸುತ್ತಲೇ ಇದೆ. ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದೆ ದಿನೇ ದಿನೇ ಹದಗೆಡುತ್ತಿದೆ. ಪರಿಸರ ನಾಶವು ನಿರಂತರವಾಗಿ ನಡೆಯುತ್ತಿದೆ. ಉದ್ಯೋಗ ಸೃಷ್ಠಿಯಲ್ಲಿ ಗಣನೀಯ ಸುಧಾರಣೆ ಏನು ಇಲ್ಲ. ಮಾನವೀಯ ಮೌಲ್ಯಗಳ, ನೈತಿಕ ಮೌಲ್ಯಗಳ ಅಧ:ಪತನವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರ ಮತ್ತು ವಿಶ್ವಮಟ್ಟದಲ್ಲಿ ಕ್ರೀಡೆ, ಸಂಗೀತ, ಸಾಹಿತ್ಯದಲ್ಲಿ ಅಂತಹ ಬದಲಾವಣೆಯನ್ನು ಕಾಣುತ್ತಿಲ್ಲ. 

ಹಾಗಾದರೆ ಸಾಧನೆ ಸಮಾವೇಶ ಯಾರಿಗಾಗಿ, ಏತಕ್ಕಾಗಿ. ಕೇವಲ ರಾಜಕೀಯ ಪಕ್ಷಗಳ ಪ್ರಚಾರಕ್ಕಾಗಿ, ಮುಂದಿನ ಚುನಾವಣೆಯ ಗೆಲುವಿಗಾಗಿ, ಮತದಾರರ ಮೇಲೆ ಪ್ರಭಾವ ಬೀರುವ ಸಲುವಾಗಿ ಮಾತ್ರ ಈ ಸಮಾವೇಶವೇ. ಸಾಧನೆಯ ಸಮಾವೇಶವೆಂದರೆ, ಅದು ಆಡಳಿತ ವ್ಯವಸ್ಥೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪುವಂತೆ ಆದಾಗ ಮಾತ್ರ, ಸಾಧನೆಯ ಪ್ರಚಾರವೆಂದರೆ, ಮಧ್ಯಮ ವರ್ಗದ ಜನ ಹಿಂದಿಗಿಂತ ಈಗ ತಮ್ಮ ಸುಖ, ಸಂತೋಷ, ನೆಮ್ಮದಿಯ ಗುಣಮಟ್ಟದಲ್ಲಿ ಖುಷಿ ಖುಷಿಯಾಗಿದ್ದಾಗ ಮಾತ್ರ, ಸಾಧನೆಯ ಸಂಭ್ರಮವೆಂದರೆ, ಮಕ್ಕಳು, ಮಹಿಳೆಯರು, ದುರ್ಬಲರು, ಶೋಷಿತರು ತಮ್ಮ ರಕ್ಷಣೆ, ಸ್ವಾತಂತ್ರ್ಯ ಸಮಾನತೆಯನ್ನು ನಿಜವಾಗಲೂ ಅನುಭವಿಸಿದಾಗ,  ಸಾಧನೆಯ ಸಾಧನೆ ಎಂದರೆ ಇಡೀ ಪರಿಸರ ತನ್ನ ಅಸ್ತಿತ್ವವನ್ನು ಹಾಗೆಯೆ ಉಳಿಸಿಕೊಂಡು ಯಾವುದೇ ಮಲಿನವಾಗದೆ ನಳನಳಿಸುತ್ತಿದ್ದಾಗ, ಸಾಧನೆಯ ಹೆಮ್ಮೆ ಎಂದರೆ ಭಾಷೆ, ನೆಲ, ಜಲ, ಸಂಸ್ಕೃತಿ ತನ್ನ ಸ್ಥಾನವನ್ನು ಕಳೆದುಕೊಳ್ಳದೆ ಸಮೃದ್ಧವಾಗಿ ಬೆಳವಣಿಗೆಯಾದಾಗ ಮಾತ್ರ.

ಈ ಎಲ್ಲವೂ ಸರ್ಕಾರದ ಕಡೆಯಿಂದ ಸಾಧ್ಯವಾದಾಗ ಮಾತ್ರ ಸಾಧನೆಯ ಸಮಾವೇಶಕ್ಕೆ ಅರ್ಥವಿರುತ್ತದೆ. ಏಕೆಂದರೆ ರಾಜ್ಯದ ಎಲ್ಲಾ ಸಂಪನ್ಮೂಲಗಳ ಒಡೆತನ ಇರುವುದು ಸರ್ಕಾರದ ನಿಯಂತ್ರಣದಲ್ಲಿ. ಆದ್ದರಿಂದ ಸಮಾಜದಲ್ಲಿ ಹಿಂಸೆ, ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ಆತ್ಮಹತ್ಯೆ, ಅಪಘಾತ, ಅನಾಹುತ ನಿರಂತರವಾಗಿ ಹೆಚ್ಚುತ್ತಲೇ ಇರುವಾಗ ಸಾಧನೆಯ ಸಮಾವೇಶ ಒಂದು ಪ್ರಚಾರದ ತಂತ್ರ ಅಥವಾ ಅಪಹಾಸ್ಯವಾಗುತ್ತದೆ. 

ರೈತ, ಕಾರ್ಮಿಕರು ಮುಖದಲ್ಲಿ ನಗುವನ್ನು ಕಂಡಾಗ ಅದು ನಿಜವಾದ ಸಾಧನೆ. ಕೇವಲ ಕೆಲವು ದೊಡ್ಡ ಮಟ್ಟದ ಉದ್ಯಮಿಗಳು, ಬ್ರೋಕರ್ಗಳು, ಪುಡಾರಿಗಳು ಮಾತ್ರ ಅಭಿವೃದ್ಧಿ ಹೊಂದಿದರೆ ಅದು ಸಾಧನೆಯಲ್ಲ. ರಸ್ತೆ ಬದಿಯ ಸಣ್ಣಪುಟ್ಟ ಹಣ್ಣು, ತರಕಾರಿ, ಊಟ, ಔಷಧಿ, ಬಟ್ಟೆ, ದಿನಸಿ ಮಾರುವವರು, ಕೆಲವು ವೃತ್ತಿ ನಿರತರು ನೆಮ್ಮದಿಯ ನಿಟ್ಟುಸಿರು ಬಿಟ್ಟಾಗ ಅದು ನಿಜವಾದ ಸಾಧನೆ. ಇದು ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಅನ್ವಯಿಸುತ್ತದೆ.  ಆ ಸರ್ಕಾರದ ಸಾಧನೆ  ಹೆಚ್ಚೇನು ಇಲ್ಲ. ಅದು ಸಹ ವಿಫಲತೆಯ ಹಾದಿಯನ್ನು ಹಿಡಿದಿದೆ. ಕೇವಲ ಪ್ರದರ್ಶನ, ಭಾವುಕತೆಯಲ್ಲಿ ಮಾತ್ರ ಮುನ್ನಡೆಯುತ್ತಿದೆ. ಸಮಗ್ರ ಅಭಿವೃದ್ಧಿ ಸಾಧ್ಯವಾಗಿಲ್ಲ. 

ನಮಗೆ ಕೇಂದ್ರ ಮತ್ತು ರಾಜ್ಯವೆಂಬ ಭೇದವೇನು ಇಲ್ಲ. ಆಡಳಿತ ಸಮಗ್ರವಾಗಿ ಎಲ್ಲಾ ಜನರನ್ನು ತಲುಪಿದಾಗ  ರಾಜ್ಯ ಮತ್ತು ದೇಶದ ನಿಜವಾದ ಅಭಿವೃದ್ಧಿ. ಆಗ ಅದೊಂದು ಸಾಧನೆ ಎಂದು ಸಂಭ್ರಮಿಸಬೇಕು. ಈಗಂತೂ ಆ ಪರಿಸ್ಥಿತಿ ಖಂಡಿತ ಇಲ್ಲ, ಅದಕ್ಕಾಗಿ ವಿಷಾದವಿದೆ. ಹಾಗೆಂದು ಏನು ಕೆಲಸವೇ ಆಗಿಲ್ಲವೆಂದಲ್ಲ, ಖಂಡಿತವಾಗಲೂ ಒಂದಷ್ಟು ಒಳ್ಳೆಯ ಕೆಲಸಗಳು ಆಗುತ್ತಿವೆ. ಆದರೆ ಅದನ್ನು ಸಾಧನೆ ಎಂದು ವಿಜೃಂಭಿಸುವಷ್ಟು ವಾಸ್ತವವಾಗಿ ಇಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಆತ್ಮ ವಿಮರ್ಶೆ ಮಾಡಿಕೊಂಡು, ತನ್ನ ತಪ್ಪುಗಳನ್ನು ತಿದ್ದಿಕೊಂಡು, ಒಂದಷ್ಟು ಬದಲಾವಣೆಯಾಗಿ ನಿಜವಾದ ಸಾಧನೆ ಮಾಡುವಂಥಾಗಲಿ ಎಂದು ಆಶಿಸೋಣ, ಹಾರೈಸೋಣ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ