ಸಾಧನೆಯ ಸಾಧನಗಳು (ಭಾಗ 1)
![](https://saaranga-aws.s3.ap-south-1.amazonaws.com/s3fs-public/styles/article-landing/public/money.jpeg?itok=yrtjlMk4)
ಕ್ಷಮಿಸಿ, ಸ್ವಲ್ಪ ಧೀರ್ಘವಿದೆ. ಧ್ಯಾನಸ್ಥ ಮನಸ್ಥಿತಿಯಲ್ಲಿ ಓದಿದರೆ ಸಾಧನೆಗೆ ಗಂಭೀರ ಪರಿಣಾಮ ಬೀರಬಹುದು. ಸಾಹಿತ್ಯ, ಸಂಗೀತ, ಸಿನಿಮಾ, ಕ್ರೀಡೆ, ವಿಜ್ಞಾನ, ರಾಜಕೀಯ, ವ್ಯಾಪಾರ, ಉದ್ಯಮ, ವ್ಯವಸಾಯ, ಉದ್ಯೋಗ ಮುಂತಾದ ಬದುಕಿನ ಯಾವುದೇ ಕ್ಷೇತ್ರವಾಗಿರಲಿ ಅಥವಾ ಸಹಜ, ಸಾಮಾನ್ಯ ಮೌಲ್ಯಯುತ ಬದುಕೇ ಆಗಿರಲಿ, ಅಸಾಮಾನ್ಯ ಸಾಧನೆ ಅಥವಾ ಜನಪ್ರಿಯತೆಯ ಸಾಧನೆ ಅಥವಾ ಅಧಿಕಾರ ಸಾಧನೆ ಅಥವಾ ಆತ್ಮ ತೃಪ್ತಿಯ ಸಾಧನೆ ಯಾವುದೇ ಆಗಿರಲಿ, ಅದಕ್ಕಾಗಿ ಕೆಲವು ಸಾಧನಗಳು ಅಸ್ತ್ರಗಳಂತೆ ಇವೆ. ಆ ಸಾಧನೆಗಳನ್ನು ಹೇಗೆ ನಾವು ಉಪಯೋಗಿಸಿಕೊಳ್ಳುತ್ತೇವೆ ಮತ್ತು ಅದರಲ್ಲಿ ಎಷ್ಟರಮಟ್ಟಿಗೆ ಸೋಲು ಅಥವಾ ಗೆಲುವಾಗುತ್ತದೆ, ಅದರಲ್ಲಿ ಎಷ್ಟರಮಟ್ಟಿಗೆ ದುರಾದೃಷ್ಟ ಅಥವಾ ಅದೃಷ್ಟ ನಮ್ಮ ಜೊತೆಗೂಡುತ್ತದೆ ಎಂಬುದರ ಮೇಲೆ ನಮ್ಮ ಬದುಕಿನ ಗುಣಮಟ್ಟ ಅಥವಾ ಯಶಸ್ಸು ನಿರ್ಧಾರವಾಗುತ್ತದೆ. ಆರೋಗ್ಯ, ಶ್ರಮ, ಶ್ರದ್ಧೆ, ಹಣ, ಸಮಯ, ಸಂಬಂಧ, ಸಂಸ್ಕಾರ, ತಾಳ್ಮೆ, ಗ್ರಹಿಕೆ, ದೂರದೃಷ್ಟಿ, ವಿಶಾಲತೆ, ಒಳ್ಳೆಯತನ, ಪ್ರಬುದ್ಧತೆ, ಕ್ರಿಯಾತ್ಮಕತೆ ಇವು ಅತ್ಯಂತ ಪ್ರಮುಖ ಸಾಧನಗಳು. ಹಾಗೆಯೇ ಕೆಲವು ಅಪರೂಪದ ದಿವ್ಯಾಂಗ ಅಥವಾ ವಿಶೇಷ ಚೇತನ ಸಾಧಕರನ್ನು ಹೊರತುಪಡಿಸಿ ಸರಳ ಸಾಮಾನ್ಯ ವ್ಯಕ್ತಿಗಳಿಗೆ ಅನ್ವಯಿಸಿ ಮಾತ್ರ.
ಆರೋಗ್ಯ; ಬಹುಶಃ ಸಾಧನೆಗೆ ಮೊದಲ ಮೆಟ್ಟಿಲು ಅಥವಾ ಅಡಿಪಾಯವೇ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ. ಸಹಜ, ಸಾಮಾನ್ಯ, ಆರೋಗ್ಯವಂತ ಮಾತ್ರ ಪರಿಪೂರ್ಣ ಬದುಕಿನತ್ತ ಸಾಗಲು ಮತ್ತು ಸಾಧಿಸಲು ಸಾಧ್ಯವಾಗುತ್ತದೆ. ಹಾಗಾದರೆ ದೈಹಿಕ ಮತ್ತು ಮಾನಸಿಕ ಕುಂದು ಅಥವಾ ದೌರ್ಬಲ್ಯ ಇರುವ ವ್ಯಕ್ತಿಗಳು ಯಾರು ಸಾಧಿಸಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಖಂಡಿತ ಅದು ಸಹ ಸಾಧ್ಯ. ಅದಕ್ಕಾಗಿಯೇ ಅವರನ್ನು ವಿಶೇಷ ಚೇತನರು ಅಥವಾ ದಿವ್ಯಾಂಗ ಚೇತನರು ಎಂದು ಕರೆಯಲಾಗುತ್ತದೆ. ಆದರೆ ಆ ದೌರ್ಬಲ್ಯಗಳ ನಡುವೆಯೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಅದು ಒಂದು ಕನಿಷ್ಠ ಅಗತ್ಯತೆ. ಯಾರಿಗಾದರೂ ಆಗಲಿ, ಅದು ಸಾಮಾನ್ಯರೇ ಆಗಿರಲಿ ಅಥವಾ ದಿವ್ಯಾಂಗರೇ ಆಗಿರಲಿ ಆರೋಗ್ಯವನ್ನು ಯಾರು ಕಠಿಣ ಶ್ರಮದಿಂದ, ಅದರ ನಿರಂತರತೆಯನ್ನು ಕಾಪಾಡಿಕೊಂಡು ಬರುತ್ತಾರೋ, ಯಾರು ತಮ್ಮ ಬದುಕಿನ ಆಯಸ್ಸನ್ನು ಹೆಚ್ಚು ಗುಣಮಟ್ಟದಲ್ಲಿ ಮುಂದುವರಿಸಿಕೊಂಡು ಬರುತ್ತಾರೋ ಅವರಿಗೆ ಸಾಧನೆಯ ಸಾಧ್ಯತೆ ಹೆಚ್ಚಿರುತ್ತದೆ. ಅದು ಬಹುದೊಡ್ಡ ಸಾಧನವೂ ಆಗುತ್ತದೆ.
ಶ್ರಮ : ಎರಡನೆಯದಾಗಿ ಶ್ರಮ ಸಹ ಮುಖ್ಯವಾದ ಪಾತ್ರವಹಿಸುತ್ತದೆ. ಶ್ರಮದ ಆಯಾಮಗಳು ವಿವಿಧ ರೀತಿಯಲ್ಲಿ ಇರುತ್ತದೆ. ಅದು ದೈಹಿಕ ಶ್ರಮವೋ, ಮಾನಸಿಕ ಶ್ರಮವೋ, ಅಭ್ಯಾಸವು ಶ್ರಮವೋ ಯಾವುದೇ ಆಗಿರಲಿ ನಿರಂತರವಾಗಿ ಮತ್ತು ಬಹುತೇಕ ಧ್ಯಾನಸ್ಥ ಸ್ಥಿತಿಯಲ್ಲಿ ಶ್ರಮ ಪಡುತ್ತಲೇ ಇರಬೇಕು. ಆಗ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಶ್ರಮದಲ್ಲಿ ಒಂದಷ್ಟು ಬುದ್ಧಿವಂತಿಕೆ ಮತ್ತು ಗುಣ ಮಟ್ಟ ಕಾಯ್ದುಕೊಳ್ಳಬೇಕಾದದ್ದು ತೀರಾ ಅವಶ್ಯಕವಾಗಿರುತ್ತದೆ. ಹೇಗೋ ಏನೋ ಎನ್ನುವ, ಕೇವಲ ಗುರಿಯಿಲ್ಲದ, ಆತ್ಮವಿಶ್ವಾಸವಿಲ್ಲದ ಶ್ರಮದಿಂದ ಹೆಚ್ಚಿನ ಪ್ರತಿಫಲ ನಿರೀಕ್ಷಿಸಲಾಗದು.
ಶ್ರದ್ಧೆ: ಸಾಧನೆಯಲ್ಲಿ ಶ್ರದ್ಧೆಯೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಶ್ರದ್ಧೆ ಎಂಬುದು ಒಂದು ಅಗೋಚರ ಭಾವ. ಅದನ್ನು ನಿರ್ದಿಷ್ಟವಾಗಿ ಪದಗಳಲ್ಲಿ ಹಿಡಿದಿಡುವುದು ಕಷ್ಟ. ಜೊತೆಗೆ ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಲೂ ಬಹುದು. ಅರ್ಥ ಮಾತ್ರ ಒಂದೇ. ಆದರೆ ಅನುಷ್ಠಾನದ ಶ್ರದ್ದೆ ಇತರ ಹಲವಾರು ಪೂರಕ ಅಂಶಗಳನ್ನು ಒಳಗೊಂಡಿರುತ್ತದೆ. ಏನೇ ಆಗಲಿ ಶ್ರದ್ಧೆ ಎಂಬುದು ಏಕಾಗ್ರತೆಯ ಅತ್ಯಂತ ಬಹು ಪ್ರಮುಖವಾದ ಅಂಶ ಮತ್ತು ಭಾವ. ಅದನ್ನು ಸಾಧನೆಗೆ ಅಳವಡಿಸಿಕೊಳ್ಳಲೇ ಬೇಕಾದಂತಹ ಮಹತ್ವ ಪಡೆದಿದೆ. ಇದು ಅರ್ಥ ಆಗಬೇಕಾದರೆ ಶ್ರದ್ಧೆಯಿಲ್ಲದ ಉಡಾಫೆ ಮನೋಭಾವದವರ ಗುಣಮಟ್ಟವನ್ನು ನೋಡಿದಾಗ ನಮಗೆ ಶ್ರದ್ಧೆಯ ಮಹತ್ವ ಅರ್ಥವಾಗುತ್ತದೆ.
ಹಣ : ಸಾಧನೆಯ ಮತ್ತೊಂದು ಬಹು ಮುಖ್ಯ ಮೂಲ ದ್ರವ್ಯ ಇತ್ತೀಚಿನ ಆಧುನಿಕ ಕಾಲದಲ್ಲಿ ಹಣ ಸಹ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಹಣವಿಲ್ಲದೆ ಅಥವಾ ಆ ಸಾಧನೆಗೆ ಪೂರಕವಾದಷ್ಟು ಹಣವಿಲ್ಲದಿದ್ದರೆ ಸಾಧನೆ ಮಾಡುವುದು ಕಷ್ಟ. ಅದು ನಮ್ಮ ಸ್ವಂತದ್ದೋ ಅಥವಾ ಇತರರ ಸಹಾಯವೋ ಅಥವಾ ಪ್ರಾಯೋಜಕವೋ ಅಥವಾ ಭಿಕ್ಷೆಯೋ ಒಟ್ಟಿನಲ್ಲಿ ಹಣವಂತೂ ಬೇಕೇ ಬೇಕಾಗುತ್ತದೆ. ಹಣವಿಲ್ಲದೆ ಸಾಧಿಸಿರುವ ಕೆಲವು ಅಲ್ಪ ಉದಾಹರಣೆಗಳು ಇರಬಹುದು. ಆದರೆ ಸಾಮಾನ್ಯ ಪರಿಸ್ಥಿತಿಯಲ್ಲಿ ಹಣವಿಲ್ಲದೆ ಯಾವುದೇ ಸಾಧನೆ ಅಸಾಧ್ಯ. ಈ ವಿಷಯದಲ್ಲಿ ಬಹುತೇಕ ಎಲ್ಲರಿಗೂ ಇದೇ ಅಭಿಪ್ರಾಯ ಇರುವುದರಿಂದ ಈ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ.
ಸಮಯ : ಸಮಯ ಎಂಬುದು ಸಹ ಸಾಧನೆಯಲ್ಲಿ ಪ್ರಮುಖ ಪಾತ್ರವನ್ನೇ ವಹಿಸುತ್ತದೆ. ಏಕೆಂದರೆ ಸಮಯ ಬದುಕಿನಲ್ಲಿ ನಿರಂತರ ಚಲನೆಯನ್ನು ಸೃಷ್ಟಿಸುತ್ತದೆ. ಹಾಗೆಯೆ ಬದುಕು ವಿವಿಧ ಹಂತಗಳಲ್ಲಿ ಸಮಯವನ್ನು ದಾಟಿ ಮುನ್ನಡೆಯುತ್ತಿರುತ್ತದೆ. ಬಾಲ್ಯ, ಪ್ರೌಢ, ಯೌವನ, ಮಧ್ಯ ವಯಸ್ಸು, ಮುಪ್ಪು ಹೀಗೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಾಶ್ರಮಗಳೆಂಬ ವಿವಿಧ ಹಂತಗಳನ್ನು ಭಾರತೀಯ ಜೀವನ ಶೈಲಿಯಲ್ಲಿ ದಾಟಬೇಕಾಗುತ್ತದೆ. ಈ ನಡುವೆ ನಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಮಯದ ಮಿತಿಯೂ ಇರುತ್ತದೆ. ಅದನ್ನು ಯಾವ ಯಾವ ಸಂದರ್ಭದಲ್ಲಿ, ಯಾವ ಯಾವ ರೀತಿ ನಾವು ಉಪಯೋಗಿಸಿಕೊಳ್ಳುತ್ತೇವೆಯೋ ಎಂಬುದರ ಮೇಲೆಯೂ ನಮ್ಮ ಸಾಧನೆಯ ಯಶಸ್ಸು ಅವಲಂಬಿತವಾಗಿರುತ್ತದೆ. ಅದರ ಅರ್ಥ ಸಮಯ ಸಂದರ್ಭಕ್ಕೆ ಅತ್ಯಂತ ಹೆಚ್ಚಿನ ಮಹತ್ವ ಕೊಡಬೇಕು. ಸಮಯ ಪಾಲನೆ ಅಂದರೆ ಶಿಸ್ತು ಕಾಪಾಡಬೇಕಾಗುತ್ತದೆ ಎಂದೇ ಅರ್ಥ.
ಸಂಬಂಧ : ಸಂಬಂಧಗಳ ನಿರ್ವಹಣೆ ಸಹ ವ್ಯಕ್ತಿಯ ಯಶಸ್ಸಿನಲ್ಲಿ ಗಂಭೀರವಾದ ಪಾತ್ರ ನಿರ್ವಹಿಸುತ್ತದೆ. ಅದು ಯಾವುದೇ ರೀತಿಯ ಸಂಬಂಧವಾಗಿರಲಿ ಅಪ್ಪ, ಅಮ್ಮ, ರಕ್ತ ಸಂಬಂಧಗಳು, ಒಡಹುಟ್ಟಿದವರು, ಶಾಲೆ, ಬೀದಿ, ಗೆಳೆಯರು, ಗುರುಗಳು ಹೀಗೆ ಅಥವಾ ಇನ್ಯಾವುದೇ ಸಂಬಂಧಗಳೇ ಆಗಿರಲಿ ಅದನ್ನು ನಾವು ಯಾವ ರೀತಿಯಲ್ಲಿ ನಿರ್ವಹಿಸುತ್ತೇವೆ, ನಮ್ಮ ಮನಸ್ಥಿತಿ ಏನು, ಅದು ವಾಣಿಜ್ಯೀಕರಣಗೊಂಡಿದೆಯೇ ಅಥವಾ ಮಾನವೀಯ ಮೌಲ್ಯಗಳ ತುಡಿತ ಹೊಂದಿದೆಯೇ ಎಂಬುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಈಗಿನ ಕಾಲಮಾನದಲ್ಲಿ ಯಾರನ್ನೂ ಅಷ್ಟು ಸುಲಭವಾಗಿ ವಂಚಿಸಲು ಸಾಧ್ಯವಿಲ್ಲ. ಮುಖವಾಡಗಳು ಒಂದಲ್ಲ ಒಂದು ದಿನ ಬಯಲಾಗುತ್ತದೆ. ಕೆಲವೊಮ್ಮೆ ಮುಖವಾಡಗಳಿಂದ ತಾತ್ಕಾಲಿಕ ಯಶಸ್ಸು ಸಿಗಬಹುದೇ ಹೊರತು ದೊಡ್ಡ ಸಾಧನೆಗೆ ಅದು ಖಂಡಿತವಾಗಲು ಮಾರಕ. ಆದ್ದರಿಂದ ನಾವು ಸಂಬಂಧಗಳನ್ನು ಎಷ್ಟು ಆಳವಾಗಿ, ಗಟ್ಟಿಯಾಗಿ ಹಿಡಿದಿಡುತ್ತೇವೆಯೋ, ಆ ಗುಣಲಕ್ಷಣಗಳು ನಮ್ಮಲ್ಲಿ ಇರುತ್ತವೆಯೋ ಅದರ ಆಧಾರದ ಮೇಲೆ ನಮ್ಮ ಯಶಸ್ಸು ನಿಂತಿರುತ್ತದೆ.
(ಇನ್ನೂ ಇದೆ)
-ವಿವೇಕಾನಂದ. ಎಚ್. ಕೆ. , ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ