ಸಾಧನೆಯ ಸಾಧನಗಳು (ಭಾಗ 2)

ಸಾಧನೆಯ ಸಾಧನಗಳು (ಭಾಗ 2)

ಸಂಸ್ಕಾರ : ಯಶಸ್ಸಿಗೆ ಸಂಸ್ಕಾರಗಳು ಸಹ ಮುಖ್ಯವಾಗುತ್ತದೆ. ಇಲ್ಲಿ ಸಂಸ್ಕಾರ ಎಂದರೆ ಧಾರ್ಮಿಕ ಆಚರಣೆಗಳೆಲ್ಲ. ನಮ್ಮ ಗುಣ ನಡತೆಗಳು, ಮಾನವೀಯ ಮೌಲ್ಯಗಳು. ಈ ಸಂಸ್ಕಾರಗಳು ಎಷ್ಟು ತೀವ್ರವಾಗಿ ನಮ್ಮೊಳಗೆ ಅಡಗಿರುತ್ತದೆ ಮತ್ತು ಸಮಾಜದಲ್ಲಿ ಅದು ಪ್ರಕಟಗೊಳ್ಳುತ್ತದೆ ಎಂಬ ಅಂಶಗಳ ಆಧಾರದ ಮೇಲೆ ನಮ್ಮ ಸಾಧನೆಯ ಯಶಸ್ಸು ಅವಲಂಬಿತವಾಗಿರುತ್ತದೆ . ಈ ಗುಣ ನಡತೆಗಳು ಎಂಬ ಸಂಸ್ಕಾರ ನಾಗರೀಕವಾಗಿ, ಜೀವ ಪರವಾಗಿ, ಆತ್ಮೀಯವಾಗಿ ಇದ್ದದ್ದೇ ಆದರೆ ಅದು ಖಂಡಿತವಾಗಲೂ ಸಮಾಜದಲ್ಲಿ ನಮ್ಮ ವ್ಯಕ್ತಿತ್ವವನ್ನು ಸೆಳೆಯುತ್ತದೆ, ಆಕರ್ಷಕವಾಗಿಸುತ್ತದೆ ಮತ್ತು ಅದು ಯಶಸ್ಸಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ನಾವು ಯಾರನ್ನೂ ನಮ್ಮ ವರ್ತನೆಯಲ್ಲಿ ಶಾಶ್ವತವಾಗಿ ವಂಚಿಸಲು ಸಾಧ್ಯವಿಲ್ಲ. ಆದ್ದರಿಂದ ಸಂಸ್ಕಾರಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ.

ತಾಳ್ಮೆ : ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ ಎಂಬ ಮಾತಿದೆ. ತಾಳ್ಮೆ ನಮ್ಮ ಯಶಸ್ಸಿನ ಅದ್ಭುತ ಭಾವ. ಏಕೆಂದರೆ ತಾಳ್ಮೆಯಿಂದಲೇ ನಮ್ಮ ಮನಸ್ಸು ನಮ್ಮ ಹಿಡಿತಕ್ಕೆ ಸಿಗುತ್ತದೆ. ಒಮ್ಮೆ ಮನಸ್ಸು ಹಿಡಿತಕ್ಕೆ ಸಿಕ್ಕರೆ ಅದರ ಸದುಪಯೋಗ ಖಂಡಿತ ಆಗುತ್ತದೆ. ಸಮಾಜ ಅದನ್ನು ಗುರುತಿಸುತ್ತದೆ ಸಹ. ತಾಳ್ಮೆ ಕಳೆದುಕೊಂಡರೆ ನಮ್ಮ ಗುರಿ ತಲುಪುವುದು ಕಷ್ಟ ಅಥವಾ ಆ ಗುರಿಯ ದಿಕ್ಕು ತಪ್ಪಬಹುದು. ಆದ್ದರಿಂದ ತಾಳ್ಮೆ ಯಾವುದೇ ಸಾಧನೆಗೆ ಅತ್ಯುತ್ತಮ ಬ್ರಹ್ಮಾಸ್ತ್ರ.

ಗ್ರಹಿಕೆ : ಸಾಧನೆಯ ಯಶಸ್ಸಿಗೆ ಗ್ರಹಿಕೆ ಅತ್ಯಮೂಲ್ಯ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಎಲ್ಲರೂ ಯಶಸ್ವಿಯಾಗದೆ ಕೆಲವರು ಮಾತ್ರ ಯಶಸ್ವಿಯಾಗಲು ಬಹು ಮುಖ್ಯ ಕಾರಣ ಅವರ ಗ್ರಹಿಕೆ. ಅಂದರೆ ಯಾರು, ಯಾವಾಗ, ಎಲ್ಲಿ, ಎಷ್ಟು, ಹೇಗೆ, ಏಕೆ, ಯಾವರೀತಿ, ಎಲ್ಲಿಂದ ಹೀಗೆ ಸಮಾಜವನ್ನು, ವ್ಯಕ್ತಿಯನ್ನು, ಸಿದ್ಧಾಂತಗಳನ್ನು ಗ್ರ‌ಹಿಸುವುದಿದೆಯಲ್ಲ ಅದು ಬಹಳ ಮುಖ್ಯವಾಗುತ್ತದೆ. ಸರಿಯಾದ ಗ್ರಹಿಕೆ ನಮ್ಮನ್ನು ಯಶಸ್ಸಿನ ದಾರಿಯಲ್ಲಿ ನಡೆಸಿದರೆ, ತಪ್ಪು ಗ್ರಹಿಕೆ ನಮ್ಮನ್ನು ಕೆಳಕ್ಕೆ ಬೀಳಿಸಬಹುದು ಅಥವಾ ದಾರಿ ತಪ್ಪಿಸಬಹುದು. ಗ್ರಹಿಕೆ ಅಷ್ಟು ಸುಲಭವಾಗಿ ಸಿಗುವುದೂ ಇಲ್ಲ. ಅದಕ್ಕೆ ಬಹುದೊಡ್ಡ ಮತ್ತು ಆಳವಾದ ತಿಳಿವಳಿಕೆ ಬೇಕಾಗುತ್ತದೆ. ಅದನ್ನು ಪಡೆದಾಗ ಬಹುತೇಕ ನಮ್ಮ ಗ್ರಹಿಕೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಆದ್ದರಿಂದ ಬದುಕಿನ ಎಲ್ಲವನ್ನು ‌ಸರಿಯಾಗಿ ಗ್ರಹಿಸುವುದು ಬಹಳ ಮುಖ್ಯವಾಗುತ್ತದೆ.

ದೂರ ದೃಷ್ಟಿ : ಇದು ಸಹ ಸಾಧನೆಯ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭವಿಷ್ಯವನ್ನು ನಾವು ಯಾವ ರೀತಿ, ಯಾವ ದೃಷ್ಟಿಕೋನದಲ್ಲಿ ನೋಡುತ್ತೇವೆ, ಅದು ಮುಂದಿನ ದಿನಗಳಲ್ಲಿ ಸಮಾಜ, ದೇಶ, ಆರ್ಥಿಕ, ರಾಜಕೀಯ ಪರಿಸ್ಥಿತಿಗಳು ಯಾವ ದಿಕ್ಕಿನತ್ತ ಸಾಗಬಹುದು ಎಂಬ ಊಹೆ ಅಥವಾ ಕಲ್ಪನೆ ನಮ್ಮ ಯಶಸ್ಸಿಗೆ ಬಹು ಮುಖ್ಯ ಕಾರಣವಾಗುತ್ತದೆ. ಅನೇಕ ಸಾಧಕರನ್ನು ನೋಡಿದಾಗ ಅವರಲ್ಲಿ ಅವರ ದೂರ ದೃಷ್ಟಿಯ ಚಿಂತನೆಗಳೇ ಎದ್ದು ಕಾಣುತ್ತದೆ. ಅವರು ಎಲ್ಲರಿಗಿಂತ ವೇಗವಾಗಿ ಮುಂದಿನ ಪರಿಣಾಮಗಳನ್ನು ಊಹಿಸಿರುತ್ತಾರೆ. ಆದ್ದರಿಂದ ದೂರದೃಷ್ಟಿಯೂ ನಮ್ಮ ಯಶಸ್ವಿಗೆ ಬಹಳ ಮುಖ್ಯ.

ವಿಶಾಲತೆ : ಸಾಧನೆಯ ಹಾದಿಯಲ್ಲಿ ಪ್ರಮುಖ ಅಸ್ತ್ರ ಮನೋ ವಿಶಾಲತೆ ಬಹಳ ಮುಖ್ಯವಾದದ್ದು. ಏಕೆಂದರೆ ಮನೋ ವಿಶಾಲತೆ ಸಮಗ್ರ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಸಂಕುಚಿತ ಮನೋಭಾವವನ್ನು ಹೊಡೆದೋಡಿಸುತ್ತದೆ. ಯಾವುದೇ ಇಸಂಗಳಗೆ ಒಳಗಾಗುವುದನ್ನು ತಪ್ಪಿಸುತ್ತದೆ. ವಿಶಾಲವಾಗಿ, ಅನಂತವಾಗಿ ಎಲ್ಲವನ್ನೂ ಅರಿತುಕೊಳ್ಳುವ, ಸ್ವೀಕರಿಸುವ, ವಿಮರ್ಶಿಸುವ ಶಕ್ತಿಯನ್ನು ಕೊಡುವುದೇ ಮನೋ ವಿಶಾಲತೆ. ನಮ್ಮ ಸಣ್ಣತನವನ್ನು ಅದು ತೋರಿಸಿಕೊಡುತ್ತದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ನೋಡುವಂತೆ ಮಾಡುತ್ತದೆ. ಹೌದು ನಮ್ಮ ಸಾಧನೆಗೆ ಅತ್ಯುತ್ತಮ ಮಾರ್ಗದರ್ಶನವಾಗುತ್ತದೆ. ಆದ್ದರಿಂದ ವಿಶಾಲತೆಯು ಸಾಧನೆಯ ಬಹು ಮುಖ್ಯ ಮತ್ತು ಬಹುದೊಡ್ಡ ಸಾಧನ.

ಒಳ್ಳೆಯತನ : ಅನುಮಾನವೇ ಇಲ್ಲ ಯಾವುದೇ ಸಾಧನೆಗೆ ನಮ್ಮೊಳಗಿನ ಒಳ್ಳೆಯತನ ಬಹಳ ಮುಖ್ಯವಾಗುತ್ತದೆ. ಆ ಒಳ್ಳೆಯತನ ಎಲ್ಲಾ ಕಡೆ ಪಸರಿಸುವುದರಿಂದ, ಜನ ಒಳ್ಳೆಯತನವನ್ನು ಗುರುತಿಸುವುದರಿಂದ ಖಂಡಿತವಾಗಲೂ ಯಶಸ್ಸು ಸಾಧ್ಯ. ಹೌದು ಕೆಲವು ಕಡೆ ಕೆಟ್ಟವರು ಯಶಸ್ವಿಯಾಗಿರುವುದನ್ನು ಕಾಣುತ್ತೇವೆ. ಹಾಗೆಂದು ಅದು ಯಶಸ್ಸಿನ ಸಾಧನವಲ್ಲ. ಆ ಕ್ಷಣದ ತಾತ್ಕಾಲಿಕ ಮತ್ತು ಒಂದಷ್ಟು ಪರಿಸ್ಥಿತಿಯ ಒತ್ತಡದಿಂದ ಕೆಟ್ಟವರಿಗೆ ಯಶಸ್ಸು ಸಿಕ್ಕಿರಬಹುದು. ನಿಜವಾದ ಯಶಸ್ಸಿನಲ್ಲಿ ಒಳ್ಳೆಯತನದ್ದೇ ಬಹುಮುಖ್ಯ ಪಾತ್ರವಾಗಿರುತ್ತದೆ. ಒಳ್ಳೆಯತನ ಎಂದರೇನು ಎಂಬುದು ವಿವರಿಸಬೇಕಾದ ವಿಷಯವಲ್ಲ. ಬಹುತೇಕ ಎಲ್ಲರಿಗೂ ಒಳ್ಳೆಯತ ಎಂದರೇನು ಎಂಬ ಸಾಮಾನ್ಯ ಜ್ಞಾನ ಇದ್ದೇ ಇರುತ್ತದೆ. ಆದ್ದರಿಂದ ಯಶಸ್ವಿಯಾಗಲು ಒಳ್ಳೆಯವರಾಗಿರಬೇಕಾಗಿದ್ದು ಕಡ್ಡಾಯವಾಗಿರುತ್ತದೆ.

ಪ್ರಬುದ್ಧತೆ : ಈ ಅಂಶ  ಸಾಧನೆಗೆ ಕಳಸವಿದ್ದಂತೆ. ಅದು ಆಂತರಿಕವಾಗಿ ಬಹುದೊಡ್ಡ ಪರಿಣಾಮ ಬೀರುತ್ತದೆ. ಈ ಪ್ರಬುದ್ಧತೆಯನ್ನು ಸಹ ನಿರ್ಧಿಷ್ಟವಾಗಿ ಪದಗಳಲ್ಲಿ ಹಿಡಿದಿಡುವುದು ಕಷ್ಟ. ಏಕೆಂದರೆ ಪ್ರಬುದ್ಧತೆ ಎಂಬುದೇ ಒಂದು ಉತ್ಕೃಷ್ಟ ಮಾನಸಿಕ ಸ್ಥಿತಿ. ಅದನ್ನು ತಲುಪಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ದೇಹ, ಮನಸ್ಸುಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿ, ಜ್ಞಾನದ ಬಲದಿಂದ ಕ್ರಿಯೆ ಪ್ರತಿಕ್ರಿಯೆಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಇರುವಂತೆ ನೋಡಿಕೊಳ್ಳುವುದೇ ಪ್ರಬುದ್ಧತೆ. ಅದು ಯಶಸ್ಸಿನ ಬಹುದೊಡ್ಡ ಭಾಗ ಅಥವಾ ಕಿರೀಟವಿದ್ದಂತೆ.

ಕ್ರಿಯಾಶೀಲತೆ : ನಮ್ಮ ಸಾಧನೆಗಳ ನಿಜವಾದ ಆತ್ಮ ಕ್ರಿಯಾಶೀಲತೆ. ಏಕೆಂದರೆ ಮೇಲೆ ಹೇಳಿದ ಎಲ್ಲವನ್ನು ಎಲ್ಲರೂ ಮಾಡಬಹುದು. ಆದರೆ ಅದರಲ್ಲಿ ಯಶಸ್ಸು ಅಥವಾ ವಿಶಿಷ್ಟತೆ ಅಥವಾ ವಿಶೇಷವನ್ನು ಎತ್ತಿ ತೋರಿಸುವುದೇ ಕ್ರಿಯಾಶೀಲತೆ. ನಮ್ಮೊಳಗಿನ ಕ್ರಿಯಾಶೀಲತೆ ಎಷ್ಟು ಆಕರ್ಷಕ, ಸುಂದರ, ಜನಪ್ರಿಯ ಮತ್ತು ಉತ್ತಮ ಗುಣಮಟ್ಟದ್ದಾಗಿರುತ್ತದೆ ಅಷ್ಟರಮಟ್ಟಿಗೆ ನಾವು ಯಶಸ್ವಿಯಾಗಲು ಸಾಧ್ಯ. ಈ ಆತ್ಮವೇ ಬಹುತೇಕ ಯಶಸ್ಸು ಮತ್ತು ಸೋಲನ್ನು ನಿರ್ಧರಿಸುತ್ತದೆ.

ಇವುಗಳ ಜೊತೆಗೆ ಅದೃಷ್ಟ ಮತ್ತು ದುರಾದೃಷ್ಟವೆಂಬ ವಿವರಿಸಲಾಗದ, ಊಹಿಸಲಾಗದ, ನಿರೀಕ್ಷಿಸಲಾಗದ ಒಂದು ಮಾನದಂಡವಿದೆ. ಯಶಸ್ವಿಯಾದರೆ ಅದು ಅದೃಷ್ಟ, ಸೋಲಾದರೆ ದುರಾದೃಷ್ಟ ಎಂದು ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ನಮ್ಮ ನಿರೀಕ್ಷೆಗೂ ಮೀರಿ ಅನೇಕ ಅಂಶಗಳು ನಮಗೆ ಪೂರಕವಾಗಿ ಕೆಲಸ ಮಾಡಬಹುದು ಅದು ಅದೃಷ್ಟ. ಕೆಲವೊಮ್ಮೆ ನಮ್ಮ ನಿರೀಕ್ಷೆ ಮೀರಿ ಏನೇನೋ ಕಾರಣಗಳು ನಮಗೆ ತೊಂದರೆ ಕೊಡಬಹುದು ಅದು ದುರಾದೃಷ್ಟ. ಅದರಲ್ಲಿ ಅಪಘಾತ, ಅನಾರೋಗ್ಯ, ಹಣದ ಲಾಟರಿ ಹೊಡೆಯುವುದು, ಶತ್ರುನಾಶ ಮುಂತಾದವು ನಮ್ಮ ಅರಿವಿಗೆ ಬಾರದೆ ಸಂಭವಿಸಬಹುದು. ಅದನ್ನು ಅದೃಷ್ಟ ದುರಾದೃಷ್ಟ ಎನ್ನಬಹುದು.

ಇದು ಕೆಲವು ಮುಖ್ಯ ಅಂಶಗಳು ಮಾತ್ರ. ಇದನ್ನು ಮೀರಿಯೂ ಇತರ ಅನೇಕ ವಂಶಗಳು ಇರಬಹುದು. ಈ ಎಲ್ಲಾ ಇದ್ದೂ ವಿಫಲವಾಗಬಹುದು. ಇದರಲ್ಲಿ ಕೆಲವು ಕೈಹಿಡಿಯಬಹುದು. ಒಟ್ಟಿನಲ್ಲಿ ಒಂದಷ್ಟು ಮೇಲಿನ ಅಂಶಗಳು ನಮ್ಮ ಯಶಸ್ಸಿಗೆ ಕಾರಣವಾಗಬಹುದು ಅಥವಾ ಕಾರಣವಾಗುತ್ತದೆ ಎಂಬುದು ನನ್ನ ಇಲ್ಲಿಯವರೆಗಿನ ಬದುಕಿನ ಅನುಭವದ ನುಡಿಗಳು. ಇದಕ್ಕಿಂತ ಹೆಚ್ಚಿನ ಮಾಹಿತಿ ನಿಮ್ಮಲ್ಲಿದ್ದರೆ ಹಂಚಿಕೊಳ್ಳಬಹುದು. ಎಲ್ಲರೂ ಸಾಧಕರಾಗಲು ಪ್ರಯತ್ನಿಸಿ. ನಮ್ಮಿಷ್ಟದಂತೆ ಬದುಕುವುದೇ ಒಂದು ಸಾಧನೆ.

(ಮುಗಿಯಿತು)

-ವಿವೇಕಾನಂದ. ಎಚ್. ಕೆ. , ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ