ಸಾಧನೆಯ ಸುಗ್ಗಿ

ಸಾಧನೆಯ ಸುಗ್ಗಿ

ಪುಸ್ತಕದ ಲೇಖಕ/ಕವಿಯ ಹೆಸರು
ನಾಗರಾಜು ಕೆಂಪಯ್ಯ
ಪ್ರಕಾಶಕರು
ಪುರು ಪ್ರಕಾಶನ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

‘ಸಾಧನೆಯ ಸು‌ಗ್ಗಿ’ ನಾಗರಾಜು ಕೆಂಪಯ್ಯ ಅವರ ಕಾದಂಬರಿ. ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಜನಿಸಿದ ವ್ಯಕ್ತಿಯೋರ್ವನ ಜೀವನದ ಕಥೆ ಇಲ್ಲಿದೆ. ಆ ಹುಡುಗನ ಜೀವನ ವೃತ್ತಾಂತದ ಏಳು ಬೀಳುಗಳನ್ನು ಈ ಕೃತಿಯು ಒಳಗೊಂಡಿದೆ. ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಊರ ಗೌಡರ ಮನೆಯ ಜೀತದಾಳಾಗಿ ದುಡಿಯುವ ಸಂತೋಷ ತನ್‌ನ ಸುತ್ತಲಿನ ವಿರೋಧಗಳನ್ನು ಎದುರಿಸುತ್ತಲೇ ಜೀವನವನ್ನು ರೂಪಿಸಿಕೊಳ್ಳುವ ಪರಿ ಇಲ್ಲಿ ವಿಶಿಷ್ಟವಾಗಿ ಮೂಡಿದೆ. ದ್ವೇಷ, ಅಸೂಯೆ, ಅಸಹಿಷ್ಣತೆ- ಇವೆಲ್ಲದರ ಮಧ್ಯೆ ಗಂಡು ಹೆಣ್ಣಿನ ಪ್ರೀತಿ ಇದೆ. ಹದಿಹರೆಯದ ಆಕರ್ಷಣೆ, ನಿಸ್ವಾರ್ಥವಾದ ಸ್ನೇಹ, ಬೆಂಕಿ ಹಾಯುವ ಸ್ಪರ್ಧೆ, ಕಬಡ್ಡಿ ಸ್ಪರ್ಧೆ, ಸ್ಪರ್ಧಾತ್ಮಕ ಪರೀಕ್ಷೆಯ ಸ್ಪರ್ಧೆಗಳೊಟ್ಟಿಗೆ ಜಾತಿ, ಮೇಲುಕೀಳು, ಬಡವ ಶ್ರೀಮಂತ ಎಂಬ ಸಮಾಜೋ- ಆರ್ಥಿಕ ಸ್ಪರ್ಧೆಗಳೂ ಕಂಡುಬರುತ್ತವೆ.

ಈ ಕಾದಂಬರಿಯ ಲೇಖಕರಾದ ನಾಗರಾಜು ಕೆಂಪಯ್ಯನವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಬರೆದುಕೊಂಡಿದ್ದಾರೆ. ಅದರ ಆಯ್ದ ಭಾಗಗಳು ಇಲ್ಲಿವೆ…” ‘ಸಾಧನೆಯ ಸುಗ್ಗಿ’ ಎಂಬ ಪುಸ್ತಕವು ಹೇಗೆ ಮೂಡಿಬಂದಿದೆ ಎಂಬುದು ತಿಳಿದಿಲ್ಲ, ಪುಸ್ತಕ ಹೇಗಿದೆ ಎಂಬುದನ್ನು ಓದುಗರೆ ನಿರ್ಧಾರ ಮಾಡಬೇಕು. ಓದುಗರು ಮತ್ತು ಅವರ ಅಭಿಪ್ರಾಯಗಳೇ ಒಬ್ಬ ಲೇಖಕನ ಆಸ್ತಿ. ಈ ಪುಸ್ತಕವು ಬೆನ್ನುಡಿಯನ್ನೊಳಗೊಂಡಿಲ್ಲ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಹುದ್ದೆಯ ಕನಸನ್ನೊತ್ತು ಊರುಬಿಟ್ಟು ಬಂದು, ಪ್ರತಿಷ್ಠಿತ ನಗರಗಳಲ್ಲಿನ ಗ್ರಂಥಾಲಯಗಳಲ್ಲಿ ಓದುತ್ತಿರುವ ಸ್ಪರ್ಧಾರ್ಥಿಗಳ ಪಾಲಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ಎಂಬುದು ಇನ್ನಿಲ್ಲದಂತೆ ಕಾಡುತ್ತಿದೆ. ಸರಿಯಾದ ಸಮಯಕ್ಕೆ ಸರ್ಕಾರಿ ಹುದ್ದೆಗಳ ಅಧಿಸೂಚನೆಗಳಾಗುತ್ತಿಲ್ಲ, ಅಧಿಸೂಚನೆಗೊಂಡ ಹುದ್ದೆಗಳು ನಿರ್ಧಿಷ್ಠ ಅವಧಿಗೆ ಪೂರ್ಣಗೊಳ್ಳುತ್ತಿಲ್ಲ. ನಮ್ಮ ಸರ್ಕಾರವು ಸಾಧ್ಯವಾದಷ್ಟು ನಿಷ್ಠಾವಂತ ಅಧಿಕಾರಿಗಳ ಕೈಗೆ ಸರ್ಕಾರಿ ಹುದ್ದೆಗಳನ್ನು ಭರ್ತಿಮಾಡಿಕೊಳ್ಳುವ ಅಧಿಕಾರವನ್ನು ನೀಡುವುದರ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಾಗುತ್ತಿರುವ ಅಕ್ರಮವನ್ನು ಬುಡಸಮೇತವಾಗಿ ಕಿತ್ತೊಗೆಯುವ ಕೆಲಸ ಮಾಡಬೇಕು ಹಾಗೂ ಹುದ್ದೆಗಳನ್ನು ಭರ್ತಿಮಾಡಿಕೊಳ್ಳುವ ಪ್ರಕ್ರಿಯೆಯು ವೇಗ ಪಡೆದುಕೊಳ್ಳುವಂತಾಗಬೇಕು. ನಾನೂ ಕೂಡ ಭಾರತೀಯ ಆಡಳಿತ ಸೇವೆ ಹುದ್ದೆಯ ಆಕಾಂಕ್ಷಿ.

ನಾನು ನನ್ನ ಬರವಣಿಗೆಯನ್ನು ಶುರುಮಾಡಿದ ಪುಸ್ತಕವನ್ನು ಕಾರಣಾಂತರಗಳಿಂದ ಅರ್ಧಕ್ಕೆ ನಿಲ್ಲಿಸಿ, “ಸಾಧನೆಯ ಸುಗ್ಗಿ" ಎಂಬ ಕಾದಂಬರಿಯನ್ನು ಕೈಗೆತ್ತುಕೊಂಡೆ ಅದು ಈಗ ನಿಮ್ಮ ಮುಂದಿದೆ. ನಾನು ಪದವಿ ವ್ಯಾಸಾಂಗದ ಅಂತಿಮ ವರ್ಷದ. ಕೊನೆಯ ಸೆಮ್ ನಲ್ಲಿ ಅಧ್ಯಯನ ಮಾಡುತ್ತಿದ್ದಾಗ, ವಿದ್ಯಾರ್ಥಿನಿಯರ ಪ್ರತಿನಿಧಿಯವರು ನನಗೆ ಮಾಡಿದ ಒಂದು ಸಣ್ಣ ಅವಮಾನವು ಈ ಪುಸ್ತಕವನ್ನು ಬರೆಯಲು ಪ್ರಚೋದಿಸಿತು ಹಾಗೂ ಕಾಲೇಜಿನ ಸಮೀಪವೇ ಇದ್ದ ಬಸ್ ನಿಲ್ದಾಣದಲ್ಲಿ ನಡೆದ ಒಂದು ಘಟನೆಯೂ ಸಹ ಪುಸ್ತಕದ ರಚನೆಗೆ ಕಾರಣವಾಯಿತು. ನನ್ನ ಜೀವನದಲ್ಲಿ ನಡೆದ ಕೆಲ ನೈಜಘಟನೆಗಳನ್ನೊರತು ಪಡಿಸಿದರೆ ಸಂಪೂರ್ಣ ಪುಸ್ತಕವು ಕಲ್ಪನೆಯಾಗಿದೆ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಸನ್ನಿವೇಶಗಳನ್ನಾಧರಿಸಿದೆ. ಮೈಸೂರಿನಲ್ಲಿ ನಾನು, ನನ್ನ ಮೊದಲ ಬರವಣಿಗೆಯನ್ನು ಶುರುಮಾಡಿದ ಕಾರಣದಿಂದ ಪುಸ್ತಕದಲ್ಲಿ ಬರುವ ಸ್ಥಳಕ್ಕೆ ಮೈಸೂರಿನ ಹೆಸರನ್ನೆ ತೆಗೆದುಕೊಂಡಿದ್ದೇನೆ.

ಸಂಕ್ರಾಂತಿ ಹಬ್ಬದಂದು ನಾವು ಆಚರಣೆ ಮಾಡುವ ಕಿಚ್ಚುಹಾಯುವ ಪದ್ಧತಿಯು ಸ್ಪರ್ಧೆಯಾಗಿ ಮೂಡಿಬರಬೇಕೆಂಬುದೇ ನನ್ನ ಮನದ ಬಯಕೆ. ಹೋರಿಗಳ ಹಬ್ಬದ ಜೊತೆಗೆ, ಕಿಚ್ಚು ಹಾಯುವ ಪದ್ಧತಿಯು ವಿಜೃಂಭಣೆಯಿಂದ ನಡೆಯಬೇಕು. ಸಂಕ್ರಾಂತಿ ಹಬ್ಬದಂದು ಕಿಚ್ಚು ಹಾಯುವ ಸ್ಪರ್ಧೆಯನ್ನು ಮಾಡುವ ಮೂಲಕ ಯುವಕರ ಎದೆಯಲ್ಲಿ ಆಸಕ್ತಿ ಚಿಗುರುವಂತೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಕಿಚ್ಚನ್ನು ಹಾಯುವ ಪದ್ಧತಿಯು ಕುಂಟಿತಗೊಳ್ಳುತ್ತಿದೆ. ಜೊತೆಗೆ ಯುವಕರಲ್ಲಿನ ಆಸಕ್ತಿಯೂ ಸಹ ಕ್ಷೀಣಿಸುತ್ತಿದೆ. ಅದನ್ನು ತಡೆಯಬೇಕೆಂದರೆ ಕಿಚ್ಚುಹಾಯುವ ಸ್ಪರ್ಧೆಯನ್ನು ನಡೆಸಬೇಕು. ಆಗ ಯುವಕರಲ್ಲಿ ಆಸಕ್ತಿ ಹೆಚ್ಚಾಗಿ ಹಸುಗಳನ್ನು/ಹೋರಿಗಳನ್ನು ಕಿಚ್ಚುಹಾಯಿಸುವ ಆಚರಣೆಯು ಮತ್ತಷ್ಟು ಮುನ್ನಲೆಗೆ ಬರುತ್ತದೆ.

ಈ ಕಾದಂಬರಿಯು ಒಂತಿಷ್ಟು ಆಕಾರಪಡೆದು ನಿಮ್ಮ ಮುಂದಿದೆ ಎಂದರೆ ಅದಕ್ಕೆ ಕಾರಣ ನನ್ನ ಗುರುಗಳಾದ ನಾಗೇಶ್.ಎನ್ ಎಂಬ ಮಹಾನ್ ವ್ಯಕ್ತಿಯ ಮಾರ್ಗದರ್ಶನ. ಪುಸ್ತಕದ ಮೂಲ ಪ್ರತಿಯನ್ನು ತೆಗೆದುಕೊಂಡು ಗುರುಗಳನ್ನು ಮೊದಲ ಬಾರಿಗೆ ಭೇಟಿಯಾದಾಗ, ಅವರು ಆ ಕ್ಷಣದಲ್ಲೇ ಕೆಲ ಪುಟಗಳನ್ನು ಓದಿದರು. ಓದಿದ ನಂತರ ಅವರಿಗೆ ಏನನಿಸಿತೋ ಎನೋ, ಅವರು 'ಇನ್ನೂ ಚೆನ್ನಾಗಿ ಮೂಡಿಬರಬಹುದಿತ್ತೇನೋ ನಾಗರಾಜು' ಎಂದು ಹೇಳಿ ಕೆಲ ದೃಶ್ಯಗಳನ್ನು ತಮ್ಮ ಮೊಬೈಲ್ ಕ್ಯಾಮರದ ಮೂಲಕ ಸೆರೆಹಿಡಿದರು. ಸೆರೆಹಿಡಿದ ಚಿತ್ರಗಳನ್ನು ನನಗೆ ತೋರಿಸಿ ಒಂದೊಂದೆ ಸನ್ನಿವೇಶವನ್ನು ವಿವರಿಸುತ್ತಲೇ 'ಪಾತ್ರಗಳನ್ನು ನೇರವಾಗಿ ತೋರಿಸುವ ಬದಲು, ಪಾತ್ರಗಳ ಸುತ್ತಲಿನ ಸನ್ನಿವೇಶವನ್ನು ವಿವರಿಸಿ' ಎಂದು ಸಲಹೆ ಕೊಡುವುದರ ಜೊತೆಗೆ ಎರಡು ಬಾರಿ ರೀ ರೈಟಿಂಗ್ ಕೂಡ ಮಾಡಿಸಿದ್ದಾರೆ. ಒಬ್ಬ ಶಿಲ್ಪಿ ಒಂದು ಶಿಲೆಯನ್ನು ಕೆತ್ತಿ ಹೇಗೆ ಒಂದು ಸುಂದರ ಮೂರ್ತಿಯನ್ನಾಗಿಸುತ್ತಾನೋ ಹಾಗೆ ನನ್ನ ಸಣ್ಣ ಸಣ್ಣ ತಪ್ಪುಗಳನ್ನು ತಿದ್ದುವ ಮೂಲಕ “ಸಾಧನೆಯ ಸುಗ್ಗಿ" ಎಂಬ ನನ್ನ ಕಾದಂಬರಿಯನ್ನು ಓದುಗರ ಮುಂದೆ ಬರುವಂತೆ ಮಾಡಿದ್ದಾರೆ. ಈ ಪುಸ್ತಕದ ಕುರಿತು ಈಗಲು ಗುರುಗಳಿಗೆ ಸಂಪೂರ್ಣ ತೃಪ್ತಿ ಇಲ್ಲ 'ಇನ್ನು ಕೆಲ ಸಮಯ ತೆಗೆದುಕೊಂಡಿದ್ದರೆ, ಇನ್ನಷ್ಟು ಚೆನ್ನಾಗಿ ಬರುತ್ತಿತ್ತೇನೋ' ಎಂದು ಈಗಲೂ ಹೇಳುತ್ತಿರುತ್ತಾರೆ. ಶಿಷ್ಯನಾದವನು ವರುಷಗಳು ಉರುಳಿದಂತೆ ಗುರುಗಳಲ್ಲಿರುವ ಜ್ಞಾನದ ಸಮೀಪ ಹೋಗಬಹುದೇನೋ, ಆದರೆ ಆರಂಭದಲ್ಲೇ ಶಿಷ್ಯನಾದವನು ಗುರುಗಳ ಜ್ಞಾನಕ್ಕೆ ಸರಿಸಾಟಿಯಾಗುತ್ತಾನೆಯೇ? ಶಿಷ್ಯನಾದವನು ಗುರುಗಳ ಮುಂದೆ ಎಂದಿಗೂ ಕಿರಿಯವನೆ. ನನ್ನ ೨೬ ವರ್ಷದ ಜೀವನದಲ್ಲಿ ಇಂತಹ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿಯನ್ನು ನೋಡಲೇ ಇಲ್ಲ. ನನ್ನ ಮನದ ಬಯಕೆ ಏನೆಂದರೆ ಗುರುಗಳು ಯಾವುದಾದರೊಂದು ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಒಂದು ಕಾಲೇಜಿನ ಪ್ರಾಂಶುಪಾಲರಾಗಬೇಕೆಂಬುದು. ಇದರಿಂದ ೧೦೦% ಕ್ಕೆ ೯೫% ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರುವುದರಲ್ಲಿ ಸಂಶಯವೇ ಇಲ್ಲ. ಪರಿಚಯವಿಲ್ಲದ ವ್ಯಕ್ತಿಯನ್ನೆ ತಿದ್ದಿತಿದ್ದಿ ಅವನಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದರೆ, ಒಂದು ವೇಳೆ ಮುಖ್ಯೋಪಾಧ್ಯಯರೋ ಅಥವಾ ಪ್ರಾಂಶುಪಾಲರೋ ಆದರೆ ಅದು ಅವರ ಕರ್ತವ್ಯವಾಗುತ್ತದೆ. ಆಗ ಅವರು ತಮ್ಮ ಸಂಪೂರ್ಣ ಜೀವನವನ್ನು ವಿದ್ಯಾರ್ಥಿಗಳ ಏಳಿಗೆಗಾಗಿಯೇ ಮೀಸಲಿಡುತ್ತಾರೆ. ನನ್ನ ಗುರುಗಳು ಬಿ.ಎ, ಎಮ್.ಎ, ಬಿ.ಎಡ್. ಎಮ್.ಫಿಲ್ ಹಾಗೂ ಪಿ.ಎಚ್.ಡಿ ಪದವಿಗಳನ್ನು ಪಡೆದಿದ್ದಾರೆ.” ೧೮೮ ಪುಟಗಳ ಈ ಕಾದಂಬರಿಯನ್ನು ಚೆನ್ನಾದ ಓದಿಗಾಗಿ ಖಂಡಿತವಾಗಿಯೂ ಓದಬಹುದು.