ಸಾಧ್ಯ ಅಸಾಧ್ಯಗಳ ನಡುವೆ
ಭರವಸೆಯ ಕಾದಂಬರಿಕಾರ ಪ್ರಮೋದ ಕರಣಂ ಅವರು ಬರೆದ ಜನ ಜಾಗೃತಿ ಮೂಡಿಸಬಲ್ಲ ಕಥಾ ಹಂದರವನ್ನು ಹೊಂದಿರುವ ಪುಟ್ಟ ಕಾದಂಬರಿಯೇ ‘ಸಾಧ್ಯ ಅಸಾಧ್ಯಗಳ ನಡುವೆ'. ಈ ಕಾದಂಬರಿಯು ನಮ್ಮ ಈಗಿನ ಯುವ ಜನಾಂಗದ ನಡುವೆ ಪ್ಯಾಷನ್-ಫ್ಯಾಷನ್, ಸ್ಟೈಲ್ ಎಂಬ ನೆಪದಲ್ಲಿ ಹುಟ್ಟಿಕೊಂಡಿರುವ ಮದ್ಯಪಾನ, ಧೂಮಪಾನ, ಮಾದಕ ದ್ರವ್ಯಗಳಂತಹ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುತ್ತದೆ.
ಸ್ವಚ್ಛತೆಯನ್ನರಸಿ ಕಲ್ಬುರ್ಗಿಯಿಂದ ಬೆಂಗಳೂರಿಗೆ ಬರುವ ಗಣೇಶನಿಗೆ, ಅಲ್ಲಿ ಬಾಹ್ಯ ಸ್ವಚ್ಛತೆಗಿಂತ ಆಂತರಿಕ ಸ್ವಚ್ಛತೆ ಮಹತ್ವದೆಂದು ಅರಿವಾಗುವುದು. ಕನಸುಗಳು ನುಚ್ಚುನೂರಾಗಿ ದುಶ್ಚಟಗಳಿಗೆ ಬಲಿಯಾಗುವ ಪ್ರಕೃತಿ ಸಿಗುವುದು, ಸ್ವೇಚ್ಛಾಚಾರದ ಬೆಂಗಳೂರಿನ ಜೀವನದ ಪರಿಚಯ ಸಹೋದ್ಯೋಗಿ ರುಚಿಯ ಮೂಲಕ ಆಗುವುದು ಹೀಗೆ ಯುವತಿಯರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಂಡು ಅದನ್ನು ತಡೆಗಟ್ಟುವ ಹಾಗೂ ಪ್ರಕೃತಿಯ ನುಚ್ಚು ನೂರಾದ ಕನಸುಗಳನ್ನು ಪುನಃ ಕಟ್ಟುವಲ್ಲಿ ಗಣೇಶ ಯಶಸ್ವಿಯಾಗುವನೇ...? ಎಂಬ ಕಥಾ ಹಂದರದಲ್ಲಿ ಕುತೂಹಲದಿಂದ ಓದಿಸಿಕೊಂಡು ಹೋಗುವ ಸನ್ನಿವೇಶಗಳ ಸರಮಾಲೆಯೇ..."ಸಾಧ್ಯ ಅಸಾಧ್ಯಗಳ ನಡುವೆ" ಎಂಬ ಮಾತುಗಳು ಬೆನ್ನುಡಿಯಲ್ಲಿವೆ.
ಲೇಖಕರಾದ ಪ್ರಮೋದ ಕರಣಂ ಅವರು ತಮಗೆ ಈ ಕಾದಂಬರಿಯನ್ನು ಬರೆಯಲು ಪ್ರೇರಣೆಯಾದ ಸನ್ನಿವೇಶವನ್ನು ಮುನ್ನುಡಿಯಲ್ಲಿ ಬರೆದಿದ್ದಾರೆ. “ ಹೊಸಪೇಟೆ ಹಾಗೂ ಕಲಬುರಗಿಯಲ್ಲಿ ಕೌಟುಂಬಿಕ ಕಟ್ಟು ಪಾಡುಗಳ ನಡುವೆ ದುಶ್ಚಟಗಳ ಬಲೆಗೆ ಬೀಳದೆ ವಿದ್ಯಾಭ್ಯಾಸ ಮುಗಿಸಿ ನೌಕರಿಗಾಗಿ ಬೆಂಗಳೂರಿಗೆ ಬಂದಾಗ, ಅಲ್ಲಿನ ಅಲಿ-ಅಸ್ಕರ್ ರಸ್ತೆಯಲ್ಲಿನ ನನ್ನ ಕಚೇರಿಗೆ ಸಮಾನಾಂತರ ರಸ್ತೆಯಾಗಿದ್ದ ಕನ್ನಿಂಗ್ ಹ್ಯಾಂ ರಸ್ತೆಗೆ ಪ್ರತಿದಿನ ಬೆಳಿಗ್ಗೆ ಹಾಗೂ ಮದ್ಯಾಹ್ನ ಟೀ ಕುಡಿಯಲು ‘ಅರಸು' ಹೋಟೇಲಿಗೆ ಹೋಗುತ್ತಿದ್ದಾಗ ಅದೇ ಹೋಟೇಲಿಗೆ ಬರುತ್ತಿದ್ದ ಯುವತಿಯರು ಟೀ/ಕಾಫಿ ಜೊತೆಗೆ ಸಿಗರೇಟನ್ನು ಯುವಕರೊಂದಿಗೆ ಸಾರ್ವಜನಿಕವಾಗಿ ಯಾವುದೇ ಮುಚ್ಚುಮರೆ ಸಂಕೋಚವಿಲ್ಲದೆ ಸೇದುವುದನ್ನು ನೋಡಿ ನೋಡಿ ತಲೆಯಲ್ಲಿ ಹುಟ್ಟಿಕೊಂಡ ಆಲೋಚನೆಗಳ ಸರಮಾಲೆಯೇ ಈ “ಸಾಧ್ಯ ಅಸಾಧ್ಯಗಳ ನಡುವೆ" ಕಾದಂಬರಿ.” ಎಂದಿದ್ದಾರೆ ಕಾದಂಬರಿಕಾರರು.
ಕಾದಂಬರಿ ಉತ್ತಮವಾದ ಕಥಾ ವಸ್ತುವನ್ನು ಹೊಂದಿದೆ. ಸುಮಾರು ೬೦ ಪುಟಗಳನ್ನು ಹೊಂದಿರುವ ಪುಟ್ಟ ಕಾದಂಬರಿಯನ್ನು ಒಂದೇ ಗುಟುಕಿಗೆ ಓದಿ ಮುಗಿಸಬಹುದು. ಕಾದಂಬರಿಯ ಕೆಲವೆಡೆ ಹಿಂದಿ ಭಾಷೆಯ ಸಂಭಾಷಣೆಗಳು ಇರುವುದು ಸರಾಗವಾದ ಓದಿಗೆ ಅಡಚಣೆಯಾದಂತೆ ಅನಿಸುತ್ತದೆ. ಆದರೂ ಪುಟ್ಟ ಪುಟ್ಟ ಅಧ್ಯಾಯಗಳ ಮೂಲಕ ಕಾದಂಬರಿಕಾರರು ಓದುಗರನ್ನು ಕೊನೆಯವರೆಗೆ ಓದುವಂತೆ ಪ್ರೇರೇಪಿಸುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ದುಶ್ಚಟಗಳ ಬಲೆಗೆ ಬೀಳದೇ ಉತ್ತಮ ನಾಗರಿಕರಾಗಿ ಬಾಳಿ ಎನ್ನುವ ಉತ್ತಮ ಸಂದೇಶವೂ ಈ ಕಾದಂಬರಿಯಲ್ಲಿ ಅಡಕವಾಗಿದೆ.