'ಸಾನ' ಮಾಡಿದರೆ ಫಿನ್ನಿಶ್

'ಸಾನ' ಮಾಡಿದರೆ ಫಿನ್ನಿಶ್

ಬರಹ

ಫಿನ್ನಿಶ್ 'ಸಾನ'ವನ್ನು ಅಲ್ಲಿಗೆ ಹೋಗುವ ಭಾರತೀಯರು ಮಾಡುವುದಿಲ್ಲ. ಮಾಡದಿದ್ದರೆ ನೋಡಲು ಸಿಗುವುದೂ ಇಲ್ಲ. ಬಚ್ಚಲ ಮನೆಯಲ್ಲಿ ದೊಡ್ಡ ಹಗೇವು ಅಥವ ಉದ್ದನೆಯ ಹಂಡೆ ಇರುತ್ತದೆ. ಅದರೊಳಗೆ ಕಲ್ಲು ಗುಂಡುಗಳು. ಇಡೀ ಸಾನದ ಕೋಣೆಗೆ ಹಬೆ ಉಕ್ಕುವುದು ಆ ಅಲ್ಲಾದೀನನ ಮ್ಯಾಜಿಕ್ ಹಂಡೆಯಿಂದ. ಹೊರಗಿನ ಚಳಿಯಿಂದಾಗಿ ಹಬೆ ಬೇಗನೆ ತಣ್ಣಗಾಗ ತೊಡಗುತ್ತದೆ. ಕೋಣೆಯ ಕಾಲು ಭಾಗ ಆಕ್ರಮಿಸಿಕೊಂಡಿರುತ್ತದೆ ಆ ಹಂಡೆ. ಅದರ ಸುತ್ತಲೂ ಮರದ ಚಜ್ಜ ಮತ್ತು ಅದನ್ನು ಹತ್ತಿ ಹೋಗಲು ನಾಲ್ಕಾರು ಮೆಟ್ಟಿಲುಗಳು. ಮರದ ಚಜ್ಜೆಯ ಮೇಲೆ ಜನ ಸುಮ್ಮನು, ದುಂಡಗೆ ಕುಳಿತುಕೊಳ್ಳಬೇಕು (ದುಂಡಗೆ ಎಂದರೆ 'ಬರ್ತ್‌ಡೆ ಡ್ರಸ್' ಎಂದರ್ಥ). ಆದ್ದರಿಂದಲೇ ಭಾರತೀಯರು ಸಾನ ಮಾಡಲು ನಿರಾಕರಿಸುವುದು.

'ಸಾನ'ದ ನಂತರ ಬೋಟ್ ರೈಡ್ಹಬೆ ಏರತೊಡಗಿದಂತೆಲ್ಲ ಸೌಟಿನಲ್ಲಿ ನೀರನ್ನು ಹಂಡೆಗೆ ಸುರಿದರಾಯಿತು. ಹಬೆ ಹೆಚ್ಚಾಗುತ್ತದೆ. ಕ್ರಮೇಣ ನಿಧಾನವಾಗುತ್ತದೆ. ಫಿನ್ನಿಶ್ ಜನ ಎಷ್ಟು ಕಡಿಮೆ ಹಬೆಯಿಂದ ಸಾನ ಆರಂಭಿಸುತ್ತಾರೋ ಪರದೇಶೀಯರು ಅಷ್ಟಕ್ಕೇ ಹೊರ ಓಡಿಹೋಗುತ್ತಾರೆ, ತಡೆಯಲಾರದೆ. ಗೋಡೆಯ ಮೇಲೊಂದು ಬಿಸಿಯನ್ನು ತೋರಿಸುವ ಗಡಿಯಾರ. ಸುಮಾರು ೧೦೦ ಡಿಗ್ರಿ ಬಿಸಿ ದಾಟಿಬಿಡುತ್ತದೆ ಒಮ್ಮೊಮ್ಮೆ. ಆದರೆ ಅದು ನಿಜವಾದ ೧೦೦ ಡಿಗ್ರಿಗೆ ಸಮನಲ್ಲ--ಒಂದು ಅಥವ ಒಂದೂವರೆ ಡಿಗ್ರಿ ಕಡಿಮೆ ಇರುತ್ತದೆ. ಮತ್ತು ಹಬೆ ತಡೆಯಲು ಬಿರ್ಚಿ ಸೊಪ್ಪನ್ನು ಮೈಗೆಲ್ಲ ಹೊಡೆದುಕೊಳ್ಳಬೇಕು, ನಮ್ಮ ಭದ್ರಕಾಳಿ ಮೈಮೇಲೆ ಬಂದವರಂತೆ. ಮತ್ತು ಬಿಯರ್ ಕುಡಿದಷ್ಟೂ ದೇಹದ ಒಳಹೊರಗಿನ ಟೆಂಪರೇಚರ್ ಮಧ್ಯೆ ಒಂದು ಸಾವಯವ ಸಂಬಂಧ ಏರ್ಪಟ್ಟುಬಿಡುತ್ತದೆ.

ಸಾನದ ಬಿಸಿ ತಡೆಯಲಾರದೆ ಹೊರಗೆ ಬಂದೆವು. "ಕೊಳ ಎಲ್ಲಿ?" ಎಂದು ಕೇಳಿದೆ. ವಿಪರೀತ ಬಿಸಿ ತಪ್ಪಿಸಿಕೊಂಡು ವಿಪರೀತ ತಣ್ಣಗಿನ (ಅಥವ ಫಿನ್ನಿಶ್ ಭಾಷೆಯಲ್ಲಿ 'ತಣ್ಣಗಿನ') ನೀರಿನಲ್ಲಿ ಮುಳುಗಬೇಕು. ಆಗ ಬಿಸಿಲಿನ ಮಹತ್ವ ಅರ್ಥವಾಗುತ್ತದೆ. ಗಡಗಡ ನಡುಗುತ್ತ ಮತ್ತೆ ಸಾನದ ಮನೆಗೆ ಓಡಬೇಕು--ದುಂಡಗೆ. ಇದೊಂದು ಕೋಳಿ-ಮೊಟ್ಟೆ ಪ್ರಶ್ನೆ. ಚಳಿಯಿಂದ ಬಿಸಿಗೋ ಅಥವ ಬಿಸಿಯಿಂದ ಚಳಿಗೋ ಎಂದು. "ಬೇರೆಯದು ಎಂದೆಂದಿಗೂ ಆಕರ್ಷಕವೇ" ಎಂದು ಬೇರೆ ಬೇರೆಯವರು ತಿಮಿರಾನದಂದಿಂದ ತುದಿಯಾನಂದದವರೆಗೆ ಹೇಳಿರುವ ಅಮೃತ ವಾಕ್ಯದಂತೆ ಇದು. 'ನ'ಒತ್ತು ತೆಗೆದ ಈ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಗಲೇ ಅಂತಹ ಮಹಾತ್ಮರಿಗೆ ಈ ಜಗದ ಈ ನಿಗೂಢ ಹೊಳೆದಿರಬಹುದು. ಅಂತಯವರ ಹೊಟ್ಟೆ ತಣ್ಣಗೆ ಮಿಕ್ಕೆಲ್ಲ ಅಂಗಗಳು ಬೆಚ್ಚಗಿರಲಿ ಪ್ರಭುವೆ!

ಒಂದಿಪ್ಪತ್ತಡಿ ಅಗಲ ಆರಡಿ ಆಳದ ಒಂದು ಕೊಳ ತೋಡಿಟ್ಟಿದ್ದ ಸಾಮಿ. ಅದನ್ನೇನೂ ತಣ್ಣಗೆ ಮಾಡುವ ಅವಶ್ಯಕತೆ ಇಲ್ಲವಲ್ಲ. ಅಷ್ಟರಲ್ಲಾಗಲೇ ಬೆಳಗಿನ ಜಾವ ಒಂದೂವರೆ. ಸೂರ್ಯ ಮುಳುಗುವ ಹೊತ್ತು!! ಹೊರಗಿದ್ದಂತಹ ಬೆಳಕು ಮಾತ್ರ ನಾನು ನಿಜ ಜೀವನದಲ್ಲೇಲ್ಲೂ ನೋಡಿರಲಿಲ್ಲ. ಆ ಬೆಳಕಿನಿಂದ ನಮ್ಮ ಭಾಷೆಯ ಇತಿಮಿತಿ ಅರ್ಥವಾದಂತಾಯ್ತು. ಅದನ್ನು ವರ್ಣಿಸುವುದು ಹೇಗೆ? "ಸ್ಲೀಪಿ ಹ್ಯಾಲೋಸ್" ಸಿನೆಮದಲ್ಲಿರುವಂತಹ ಬೆಳಕದು. ಅದರಲ್ಲಿ ಒಂದೇ ಒಂದು ಪ್ರಕರ ಸೂರ್ಯನಬೆಳಕಿನ ದೃಶ್ಯವಿಲ್ಲ!

ಸಾಮಿಯ ಹೆಂಡತಿ ಮಿನ್ನ ಯೂನಿವರ್ಸಿಟಿ ಪ್ರೊಫೆಸರ್. ಆತನಿಗಿಂತ ಒಂದೈದಾರು ಪಟ್ಟು ಹೆಚ್ಚು ಸಂಬಳ. ಮದುವೆಯಾಗಿದ್ದಾರೋ ಇಲ್ಲ ಸುಮ್ಮನೆ "ಲಿವಿಂಗ್ ಟುಗೆದರ್" ವ್ಯವಸ್ಥೆಯೊ ಗೊತ್ತಿಲ್ಲ. ಆದರೆ ಎಂಟತ್ತು ವರ್ಷದಿಂದ ಸುಖವಾಗಿ ಬದುಕಿದ್ದಾರೆ. "ಇನ್ನತ್ತು ವರ್ಷಕ್ಕೆ ಆಕೆ ಜೊತೆಯಲ್ಲಿರುತ್ತಾಳೋ ಇಲ್ಲವೋ" ಎಂದಿದ್ದ ಮಾತಿನ ಮಧ್ಯೆ ಸಾಮಿ. "ಹಾಗೆ ಹೇಳಲು ಕಾರಣವೇನಾದರೂ ಇದೆಯ?" "ನಿರ್ದಿಷ್ಟ ಕಾರಣವೇನೂ ಇಲ್ಲ" ಎಂದು ಸುಮ್ಮನಾದ. ಆ ದೇಶದಲ್ಲಿ ಜೊತೆಯಲ್ಲಿ ಇರುವವರೆಗು ಮಾತ್ರ ಸಂಬಂಧಗಳು. ಹೆನ್ರಿ ಗ್ರಹನ್ ಎಂಬ ಸ್ವೀಡನ್ನಿನಲ್ಲಿ ಹುಟ್ಟಿ ಫಿನ್ಲೆಂಡಿನಲ್ಲಿದ್ದ ಕಲಾವಿದ ಗೆಳೆಯನೊಬ್ಬ ಒಮ್ಮೆ ಹೇಳಿದ್ದ, "ಏನು ಮಾಡುವುದು, ಒಬ್ಬಳೂ ಸರಿಯಾಗಿ ಜೊತೆಯಲ್ಲಿರುವುದಿಲ್ಲ. ನಾನು ಭಾರತೀಯಳನ್ನೇ ಮದುವೆಯಾಗುವುದು. ಭಾರತೀಯ ಹುಡುಗಿ ಎಂದಿಗೂ ತನ್ನ ಗಂಡನನ್ನು ತೊರೆಯುವುದಿಲ್ಲ", ಎಂದು ತಮಾಷೆ ಮಾಡಿದ್ದ. "ಹೌದು, ಈ ಜನ್ಮಕ್ಕೆ ಭಾರತೀಯಳು ಹಾಗೂ ನೀನು ಒಟ್ಟಿಗೆ ಅಂಟಿಕೊಳ್ಳುತ್ತೇವೆಂದು ನಿಮ್ಮ ಮದುವೆಯಲ್ಲಿ ಅರ್ಥವಾಗದ ಸಂಸ್ಕೃತದಲ್ಲಿ ಒಪ್ಪಿಕೊಂಡರೆ ಮುಂದಿನ ಇನ್ನಾರು ಜನ್ಮದಲ್ಲಿ ಅದೇ ಪಾರ್ಟ್ನರ್ ಪರಸ್ಪರ ನಿಮ್ಮಿಬ್ಬರಿಗೂ ಬಿಟ್ಟಿ", ಎಂದೆ. "ವಾಟ್ ಅ ಡಿಸ್ಕೌಂಟ್" ಎಂದು ಉದ್ಘರಿಸಿದ. ಸಾಮಿಯ ಹೆಂಡತಿಯ ತಂಗಿಯೂ ರಜಕ್ಕೆ ಬಂದಿದ್ದಳು. "ಆಕೆಗೆ ನಲ್ಕಾರು ಮಕ್ಕಳು" ಎಂದು ಪರಿಚಯಿಸಿದ್ದ ಸಾಮಿ. "ನನಗೆ ಮಕ್ಕಳೇ ಇಲ್ಲ" ಎಂದಿದ್ದಳಾಕೆ, ಮಾರನೇ ದಿನ ವಾಪಸ್ ನನ್ನನ್ನು ಸಮೀಪದ (೧೨೦ ಕಿಲೋಮೀಟರ್ ಸ್ಪೀಡಿನಲ್ಲಿ ಕೇವಲ ಒಂದು ಗಂಟೆ ಡ್ರೈವ್ ನಂತರ ಸಿಗುತ್ತಿದ್ದ ಸಮೀಪದ ಸಾವೊನ್‌ಲಿನ ಎಂಬ ರೈಲು ನಿಲ್ದಾಣಕ್ಕೆ ಡ್ರಾಪ್ ಮಾಡುತ್ತಿದ್ದಾಗ). ಅಂದರೆ ಆಕೆಯ ಈಗಿನ ಗಂಡನ ಆಗಿನ ಹೆಂಡತಿಯರಿಂದ ಇರಬಹುದಾದ ಮಕ್ಕಳನ್ನು ಸಾಕಿಕೊಂಡಿದ್ದಾಳೆಂದು ಅರ್ಥಮಾಡಿಕೊಂಡೆ).

ಸುರೇಖಳ ಫೋಟೋ ತೋರಿಸಿ, "ನನ್ನ ಹೆಂಡತಿ" ಎಂದೆ. "ಅಂದರೆ ನಿನ್ನ ಪಾಟ್ನರ್ ಅಲ್ಲವೆ?" ಎಂದಳು. "ಅಲ್ಲ ನನ್ನ ಹೆಂಡತಿ, ಮಾಜಿ ಪ್ರೇಯಸಿ" ಎಂದು ತಮಾಷೆ ಮಾಡಿದೆ. ಮದುವೆ ಎಂಬ ಸಂಸ್ಥೆ ಮುರಿದುಬಿದ್ದಿರುವ ಸಮಾಜ 'ಫಿನ್ನಿಶ್'ನದಾಗಿದೆ. ಇಲ್ಲಿನ ಜನರು ಏಕಾಂಗಿಗಳೋ, ಏಕಾಂಗಿಗಳಾಗಿ ಬದುಕುವುದನ್ನು ಕಾಡು ಕಲಿಸಿದೆಯೋ ಅಥವ ಏಕಾಂಗಿಗಳಾಗಿರುವುದರಿಂದಲೇ ಅದೊಂದು ಚಟವಾಗಿಬಿಟ್ಟಿದೆಯೋ ಒಂದೂ ತಿಳಿಯುವುದಿಲ್ಲ. ಏಕೆಂದರೆ ಮುಂಚಿನ ವಾಕ್ಯದ ಮೂರೂ ಕ್ರಿಯೆಗಳು ಅವರ ಮಟ್ಟಿಗೆ ಐತಿಹಾಸಿಕವಾಗಿ ಸತ್ಯವಾದ ವಿಚಾರ. ಕೇವಲ ನೂರು ವರ್ಷದ ಹಿಂದೆ ಕಾಡುಗಳಲ್ಲಿ ರೈತರಾಗಿ, ಭೇಟಿಗಾರರಾಗಿದ್ದವರಿವರು. ಸರ್ಕಾರವು ಹೆಣ್ಮಕ್ಕಳಿಗೆ ಓದಲು ವಿದ್ಯಾರ್ಥಿವೇತನ ನೀಡಿದ ಕೂಡಲೆ ಕಾಡಿನ ಹೆಣ್ಮಕ್ಕಳೆಲ್ಲ ಹೊಸಿಲು ದಾಟಿದ ಹೆಣ್ಣುಗಳಾಗಿ ಹೋದರು ನಗರಕ್ಕೆ. ಜನರೇ ಇಲ್ಲದ ನಾಡಾದ ಫಿನ್ಲೆಂಡಿನ ಕಾಡುಗಳಲ್ಲಿ ಇದ್ದ ಹೆಣ್ಮಕ್ಕಳೂ ಇಲ್ಲದಾದಾಗ ಶೇಕಡ ಅರವತ್ತು ಮಂದಿ ಮಾಯವಾದಂತಾಯ್ತು (ಅಲ್ಲಿ ಹೆಂಗಸರದ್ದೆ ಇಂದಿಗೂ ಕಾರುಬಾರು ಮತ್ತು ಕಾರು ಮತ್ತು ಬಾರು ಹೆಚ್ಚು). ಇಡಿಯ ಹಳ್ಳಿಯ ರೈತಾಪಿ ಜನಜೀವನ ಕುಸಿದು ಬಿದ್ದದ್ದು ಹೀಗೆ. ಅದಕ್ಕೇ ಕನ್ನಡದಲ್ಲಿ ಹೇಳುವುದು, "ಹೆಂಗಸು ಹೊಸಿಲು ದಾಟಬಾರದೆಂದು". ಇಂತಹ ಕ್ರಿಯೆಯ ಫಲ ಅದೆಷ್ಟು ಸಮೃದ್ಧ!!

ಈ ಪ್ರವಾಸ ಕಥನದ ಇತರ ಭಾಗಗಳು

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ