ಸಾಬಕ್ಕಿ ಹೇಗೆ ತಯಾರಿಸುತ್ತಾರೆ?

ಸಾಬಕ್ಕಿ ಹೇಗೆ ತಯಾರಿಸುತ್ತಾರೆ?

ಅಂದಹಾಗೆ.. ನನಗೆ ತಿಳಿದುಕೊಳ್ಳಬೇಕೆನಿಸಿದ ವಿಷಯ ಸಬ್ಬಕ್ಕಿ/ಸಾಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ಹೇಗೆ ಸಿಗುತ್ತದೆ ಎಂಬುದು. ಇದೊಂದು ಧಾನ್ಯವೇ? ಅಲ್ಲವೇ ಎಂಬ ಸಂಶಯವಿತ್ತು. ಅದು ಧಾನ್ಯದಂತೆ ಅನಿಸುತ್ತಿರಲಿಲ್ಲ. ಅದನ್ನು ಎಲ್ಲಾದರೂ ಬೆಳೆಯುವ ಬಗ್ಗೆಯಾಗಲೀ ಕೇಳಿರಲಿಲ್ಲ. ಇತ್ತೀಚೆಗೆ ಅಜ್ಜನ ಮನೆಗೆ ಹೋದಾಗ ಸಾಬಕ್ಕಿ ಪಾಯಸ ತಿಂದ ಮೇಲೆ ಇದರ ಬಗ್ಗೆ ತಿಳಿದುಕೊಳ್ಳಲೇಬೇಕೆಂದು ನಿಶ್ಚಯಿಸಿದೆ. ಮೊದಲನೆಯದಾಗಿ, ಕೇಳಬಹುದು ಅನ್ನಿಸಿದವರನ್ನು ಕೇಳಿದಾಗ ’ಗೊತ್ತಿಲ್ಲ’ ಎಂಬ ಉತ್ತರ ಸಿಕ್ಕಿದ್ದೇ ಹೆಚ್ಚು. ಇನ್ನೂ ಕೆಲವರು ಆ ವಿಷಯವನ್ನು ಇದೂವರೆಗೂ ಯೋಚಿಸಿಯೇ ಇರಲಿಲ್ಲ. ನಾನು ಕೇಳಿದ ಮೇಲೆ ’ಹೌದಲ್ವಾ, ಇದು ಹೇಗೆ ಬರುತ್ತದೆ’ ಎಂದು ತಲೆಕೆಡಿಸಿಕೊಂಡು ಸುಮ್ಮನಾದರು. ಕೆಲವರು ಇದು ಒಂದು ಧಾನ್ಯವಲ್ಲ ಅಥವಾ ಅಕ್ಕಿ, ರಾಗಿ, ಕಾಳುಗಳಂತೆ ಗದ್ದೆತೋಟದಲ್ಲಿ ಬೆಳೆಯುವುದಲ್ಲ ಎಂದು ಖಾತ್ರಿಯಾಗಿ ಹೇಳಿದರೂ ಕೂಡ ’ಮತ್ತೇನು, ಹೇಗೆ?’ ಎಂಬ ಪ್ರಶ್ನೆಗೆ ಉತ್ತರಕೊಡಲಾಗಲಿಲ್ಲ. ಹೀಗೆಯೇ ತನಿಖೆ ಜಾರಿಯಲ್ಲಿದ್ದಾಗ ಒಬ್ಬರಿಂದ ಇದನ್ನು ಗೆಣಸಿನಿಂದ ಮಾಡುತ್ತಾರೆ ಎಂದು ತಿಳಿದುಬಂತು. ಗೆಣಸು ಎಂದು ಕೇಳಿದ ಕೂಡಲೇ ನನ್ನ ಕುತೂಹಲ ಇಮ್ಮಡಿಯಾಯಿತು. ಎಲ್ಲಿಯ ಗೆಣಸು ಎಲ್ಲಿಯ ’ಅಕ್ಕಿ’! ಕೊನೆಗೂ ಯಾರಿಂದಲೂ ’ಹೇಗೆ ಮಾಡುತ್ತಾರೆ’ ಎಂಬ ಉತ್ತರ ಸಿಗದೇ ಕಿಸಾನ್ ಕಾಲ್ ಸೆಂಟರ್ ಅಥವಾ ಕೃಷಿ ಕಾಲೇಜಿಗೆ ಫೋನ್ ಮಾಡಿ ಅಥವಾ ಭೇಟಿ ಕೊಟ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡುವುದರೊಳಗಾಗಿ ಬೇರೊಂದು ಕಡೆಯಿಂದ ಬೇಕಾದ ಮಾಹಿತಿಯನ್ನು ಪಡೆಯಲು ಯಶಸ್ವಿಯಾದೆ.

ಸಾಬಕ್ಕಿ ತಯಾರಿಕೆಯ ಮಾಹಿತಿಗಳು ಇಂತಿವೆ. ಗೊತ್ತಿಲ್ಲದವರು ತಿಳಿದುಕೊಳ್ಳಿ. ಗೊತ್ತಿದ್ದವರು ತಪ್ಪಿದ್ದರೆ ತಿದ್ದಿ.

ಸಾಬಕ್ಕಿ ತಯಾರಿಸುವುದು ಮರಗೆಣಸಿನಿಂದ.

ಭಾರತದಲ್ಲಿ ೯೫% ಸಾಬಕ್ಕಿಯನ್ನು ತಮಿಳುನಾಡಿನಲ್ಲಿ (ಸೇಲಂನಲ್ಲಿ ಹೆಚ್ಚು) ತಯಾರಿಸಲಾಗುತ್ತದೆ.

ತಯಾರಿಕೆಯ ವಿಧಾನ:

*ಮೊದಲು ರಾಶಿ ರಾಶಿ ಮರಗೆಣಸುಗಳನ್ನು ತೊಳೆದು ಸಿಪ್ಪೆ ಸುಲಿಯಲಾಗುತ್ತದೆ.

*ನಂತರ ಅವುಗಳನ್ನು ಕ್ರಷರ್ ಗಳಲ್ಲಿ ಹಿಸುಕಲಾಗುತ್ತದೆ. ಈ ಹಿಸುಕುವ ಪ್ರಕ್ರಿಯೆಯಲ್ಲಿ ನಾರಿನ ಭಾಗವು ಬೇರೆಯಾಗುತ್ತದೆ.

*ಹಿಸುಕಿದಾಗ ಬಂದ ಹಾಲಿನಂತ ದ್ರವವನ್ನು ಟ್ಯಾಂಕ್ ಗಳಲ್ಲಿ ಶೇಖರಿಸಿ ೨-೮ ತಾಸಿನವರೆಗೆ ತಂಗಲು ಬಿಡಲಾಗುತ್ತದೆ. ತಂಗಿದ ಬಳಿಕ ಹಾಲಿನಲ್ಲಿನ ಕಲ್ಮಶಗಳು ಮೇಲೆ ತೇಲುತ್ತವೆ ಮತ್ತು ಕೆಳಗೆ ಪೇಸ್ಟಿನಂತಹ ಪಿಷ್ಟ, ಹಿಟ್ಟು (Starch) ವಸ್ತುವು ಉಳಿಯುತ್ತದೆ.

*ತೇಲುವ ಕೊಳೆ ಇತ್ಯಾದಿಗಳನ್ನು ತೆಗೆದ ನಂತರ ಉಳಿದ ಪೇಸ್ಟನ್ನು ಭಾಗಶಃ ಒಣಗಿಸಿ ಕೇಕ್ ನಂತಹ ತುಂಡುಗಳನ್ನು ಪಡೆಯಲಾಗುತ್ತದೆ.

*ನಂತರ ತೂತುಗಳುಳ್ಳ ಉಕ್ಕಿನ ಹಾಳೆಗಳನ್ನು ಅಥವಾ ಯಂತ್ರಗಳನ್ನು ಬಳಸಿ ಬೇಕಾದ ಗಾತ್ರದಲ್ಲಿ ಸಣ್ಣ ಸಣ್ಣ ಗುಂಡುಗಳ ಆಕಾರಕ್ಕೆ ತರಲಾಗುತ್ತದೆ.

*ಅವುಗಳನ್ನು ೧೦೦ ಡಿಗ್ರಿ ಸೆಲಿಷಿಯಸ್ ಬಿಸಿಯಲ್ಲಿ ೬-೮ ನಿಮಿಷಗಳು ಹುರಿಯಲಾಗುತ್ತದೆ (roasting).

*ಸೂರ್ಯನ ಬೆಳಕಿನಲ್ಲಿ ೮-೧೨ ಗಂಟೆಗಳ ಕಾಲ ಒಣಗಿಸಲಾಗುತ್ತದೆ.

*ಕೊನೆಯದಾಗಿ ಪಾಲಿಶ್ ಮಾಡಿದ ಮೇಲೆ ಸಾಬಕ್ಕಿ ತಯಾರಾಗುತ್ತದೆ.

(ಮಾಹಿತಿ ಸಂಗ್ರಹ)

 

Comments