ಸಾಮಾಜಿಕ ಕ್ರಾಂತಿಯ ಹೊಸ ಮಾರ್ಗಾನ್ವೇಷಣೆ - ಉಧೋ ಉಧೋ
ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ್ಲು, ಅಥವಾ ಎಲ್ಲ ಬಗೆಯ ಅತಿಯನ್ನು ಕೊಂಕುವ ಒಂದು ವ್ಯಂಗ್ಯದ ಸೊಲ್ಲು ಇತ್ಯಾದಿಗಳಲ್ಲಿ ಯಾವುದೂ ಆಗಬಹುದಾದ್ದು. ಬಾಳಾಸಾಹೇಬ ಲೋಕಾಪುರ ಸೃಷ್ಟಿಸುವ ನಂದೋವಾಡಿಯ ಮಟ್ಟಿಗೆ ಈ ಉಧೋ ಉಧೋ ಎಂಬ ಜೈಕಾರ ಇದೆಲ್ಲವನ್ನೂ ಸೂಚಿಸುತ್ತದೆ ಎನ್ನಬೇಕು. ಅದನ್ನು ಅದರ ವಿಭಿನ್ನ ಪಾತಳಿಗಳಲ್ಲೇ ಅರ್ಥೈಸಿಕೊಳ್ಳಲು ಮಾತ್ರ ಈ ಕಾದಂಬರಿಯ ಪ್ರತಿಯೊಂದು ಪಾತ್ರದ ಪ್ರಜ್ಞೆ ಹರಿಯುವ ಬಗೆಯನ್ನು ಮತ್ತು ಆ ಪ್ರಜ್ಞೆ ಒಟ್ಟಾರೆಯಾಗಿ ಊರಿನ ಸಮಷ್ಟಿಪ್ರಜ್ಞೆಯೊಂದಿಗೆ ಚಲಿಸುವ ಬಗೆಯನ್ನು ಒಟ್ಟಾಗಿಯೇ ಗ್ರಹಿಸಬೇಕಾಗುತ್ತದೆ. ಅಷ್ಟರಮಟ್ಟಿಗೆ ವ್ಯಕ್ತಿಯೊಬ್ಬ ತನ್ನೊಳಗೆ ತನ್ನ ಸುತ್ತಲಿನ ಸಮಾಜವನ್ನು ಅನುಭವಿಸುತ್ತಿರುತ್ತಾನೆ ಮತ್ತು ಸಮಾಜ ಎಂದು ನಾವು ಸರಳಗೊಳಿಸುವ ಸಂಗತಿ ವ್ಯಕ್ತಿ ನಿರ್ಮಿತ ಸಮಷ್ಟಿಯೇ ಆಗಿರುತ್ತದೆ ಎನ್ನುವುದು ಇಲ್ಲಿ ಸಾಕಾರಗೊಂಡಿರುವ ಬಗೆ ಅನನ್ಯವಾಗಿದೆ.
ಊರಿಗಿರುವ ಒಂದೇ ಬಾವಿಯ ನೀರಿಗಾಗಿ ಹೊಲೆಯರ ಮತ್ತು ಮೇಲ್ಜಾತಿಯವರ ನಡುವೆ ನಡೆಯುವ ಒಂದು ಪ್ರಹಸನದಂಥ ಸಂಘರ್ಷ ಮತ್ತು ಅದಕ್ಕೆ ಕಾರಣವಾದ ಕೆಲವು ಕ್ಷುಲ್ಲಕ ಘಟನೆಗಳು, ಅದರ ಫಲಶ್ರುತಿ ಎನ್ನಬಹುದಾದ ಇನ್ನು ಕೆಲವು ಘಟನೆಗಳು ಹಲವಾರು ಗಹನವಾದ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತವೆ.
ನಂದೋವಾಡಿಯನ್ನು ಅದರ ಮನೋಧರ್ಮಕ್ಕೆ ತಕ್ಕಂತೆ ಅಲ್ಲಿನ ಪ್ರಕೃತಿಯೇ ಒಂದು ರೀತಿಯಲ್ಲಿ ಸೃಜಿಸಿದೆ. ಹೊಲಗೇರಿಗೂ ಊರಿಗೂ ನಡುವೆ ಹರಿಯುವ ನದಿ ದೇವೀರಿ ಹಳ್ಳ. ಅಗತ್ಯ, ಅನುಕೂಲಗಳಿಗೆ ತಕ್ಕಂತೆ ಬದಲಾಗುವ ಊರವರ ಮಡಿ ಮೈಲಿಗೆಯ ಪ್ರಜ್ಞೆಯಂತೆಯೇ ಈ ನದಿಯೂ ಒಣಗುತ್ತ, ಹರಿಯುತ್ತ, ಹರಿಯುವಾಗ ಮೈಲಿಗೆಯನ್ನು ಮೀರಿದವಳಾಗಿಯೂ ನಿಂತಲ್ಲಿ ಹೊಲೆತನದ ಕುರುಹಾಗಿಯೂ ಊರನ್ನು ಹೊಲೆಯರ ಕೇರಿಯಿಂದ ಬೇರ್ಪಡಿಸುವವಳು. ಅವಳ ಹೆಸರು ದೇವೀರಿ. ಆದರೆ ಊರಿಗೇ ಕುಡಿಯುವ ನೀರು ನೀಡುವ ಗುಂಡೋಪಂತ ಕಟ್ಟಿಸಿದ ಬಾವಿ ಇರುವುದು ಮಾತ್ರ ಊರೊಳಗೆ. ಹೊಲೆಯರು ಕೂಡಾ ಅದೇ ಬಾವಿಯನ್ನು ನೆಚ್ಚಿದವರು. ಮಧ್ಯಾಹ್ನ ಬಾರಾದ ತನಕ ಅಲ್ಲಿಗೆ ಹೊಲಗೇರಿಯವರು ಬರುವಂತಿಲ್ಲ. ಅನುಕೂಲಕ್ಕೆ ತಕ್ಕಂತೆ ಹಿಂದೆ ಚಾಲ್ತಿಯಲ್ಲಿದ್ದ, ಹೊಲೆಯರಿಗೆ ಮೇಲ್ಜಾತಿಯವರೇ ನೀರು ಎತ್ತಿ ಕೊಡುವ ವ್ಯವಸ್ಥೆ ಹೋಗಿ ಈಗ ಅವರವರೇ ಎತ್ತಿ ಕೊಂಡೊಯ್ಯುವ, ಆ ನಂತರ ಶುದ್ಧಿ ನಡೆಸಿ ಬಾವಿಗೆ ಕೀಲಿ ಹಾಕುವ ವ್ಯವಸ್ಥೆ ಜಾರಿಯಾಗಿದೆ. ಕೊಡಕ್ಕೆ ಹಗ್ಗ ಕಟ್ಟಿ ಬಾವಿಯಲ್ಲಿ ಇಳಿಬಿಟ್ಟು ಜಗ್ಗುವುದರಿಂದ ಮೈಲಿಗೆ ನೀರಿಗೆ ತಗಲದೆ ಬಾವಿಯ ಕಟ್ಟೆಯ ಮೇಲೆಯೇ ಕುಳಿತಿರುತ್ತದೆ ಎಂಬುದು ಊರವರ ಆಧುನಿಕ ತರ್ಕ.
ಈ ಊರಿಗೆ ಒಂದು ವಿಚಿತ್ರ ಜೀವಶಕ್ತಿಯೂ ಇದೆ. ಅದು ಗಂಡು ಹೆಣ್ಣು ಸಂಬಂಧದ ಅತಿರೇಕವಾದ ಹಾದರವನ್ನು, ಆಧುನಿಕತೆಯ ಸಂಕೇತವಾದ ವಿದ್ಯುತ್ತನ್ನು, ಪ್ರಗತಿಯ ಮೂಲವಾದ ವಿದ್ಯೆಯನ್ನು, ಇವೆಲ್ಲವೂ ಒಂದೇ ಊರಿನಲ್ಲಿ ಒಳಗೊಳಗೇ ಹುಟ್ಟಿಸಿದ ಪ್ರತಿರೋಧವನ್ನು, ಇವು ಒಂದಲ್ಲ ಒಂದು ರೀತಿಯಲ್ಲಿ ಪೋಷಿಸುವ ಶೋಷಣೆಯನ್ನು ಒಂದು ಬಗೆಯ ಸೋಜಿಗದಿಂದಲೇ ಕಂಡು ಕೊನೆಗೆ ಅದು ಸಹಜವೇ ಏನೋ ಎಂಬ ಬೆರಗಿನಲ್ಲೇ ಸ್ವೀಕರಿಸಿ ತಣ್ಣಗೆ ಬದುಕುತ್ತಿರುವ ಊರಿದು.
ಕಾದಂಬರಿಯ ಪ್ರಧಾನವೆನ್ನಬಹುದಾದ ಕೆಲವು ಪಾತ್ರಗಳಲ್ಲಿ ರಾಜವ್ವ, ಕಾಲೇಜು ಕಲಿಯಲು ಹೋಗಿ ಅರ್ಧಕ್ಕೆ ಬಿಟ್ಟು ಬಂದ ಅವಳ ಮಗ ಮಲ್ಲು, ಶಿವಬಸವ್ವ, ಅವಳ ಗಂಡ ಚಿನ್ನಪ್ಪ, ಏಕತಾರೀ ಬಾಬಾ, ತನ್ನದೇ ಆದ ತತ್ವ, ನೀತಿ, ಮೌಲ್ಯಗಳೆಲ್ಲ ಇರುವ, ಸಿಂದೀ ಮಾರುವ ಮೀರಾಸಾಬ, ಆಗಾಗ ಊರಿಗೆ ಇರಿಸು ಮುರಿಸು ಉಂಟುಮಾಡುವ ಗಾಂಧೀವಾದಿಯಾದ ಕಾಂಗ್ರೆಸ್ ದೇವಪ್ಪ, ಸೂಳೆಯರಾದ ಚಂಪವ್ವ, ರತ್ನಮಾಲಾ, ತಾರವ್ವ ಮತ್ತು ಅವಳ ಮಗಳು ನಾಗೂ, ಮಾಣಿಕ ಪೂಜಾರಿ, ಪರಪ್ಪ ಸಾವಕಾರ, ವಿದ್ಯಾವಂತನೂ ಕ್ರಾಂತಿಕಾರಿ ದಲಿತನೂ ಆದ ದೇವೇಂದ್ರ ಮತ್ತು ಅವನನ್ನು ಆದರಿಸುವ ಮೇಲ್ಜಾತಿಯ ಪಾರ್ವತಿ ಮುಖ್ಯ. ಇಲ್ಲಿ ಬಾಳಾ ಸಾಹೇಬರು ಕೆಲವೊಂದು ಬಿಂಬ ಪ್ರತಿಬಿಂಬಗಳ ಪ್ರತೀಕವನ್ನೂ ಒದಗಿಸುವಂಥ ಪಾತ್ರ ನಿರ್ಮಿತಿ ಮಾಡಿದಂತಿದೆ.
ಎರಡು ದಿನಗಳಿಂದಲೂ ಕರೆಂಟಿಲ್ಲದೆ ಇಡೀ ಊರು ಕತ್ತಲೆಯಲ್ಲಿ ಅದ್ದಿ ಕೂತಿದ್ದಂಥ ಒಂದು ಕಗ್ಗತ್ತಲ ರಾತ್ರಿಯಲ್ಲಿ ಮಳೆ ಬೇರೆ ಸುರಿಯುತ್ತಿರ ಬೇಕಾದರೆ ಫಳ್ನೆ ಮಿಂಚು ಮಿಂಚುತ್ತಿರುವ ಹೊತ್ತಿನಲ್ಲಿ ಬರುವ ಏಕತಾರೀ ಬಾಬಾ ಪ್ರತಿನಿಧಿಸುವ ಮೌಲ್ಯಗಳು; ಊರ ಮುಂದಿನ ನೀರಿನ ಬಾವಿಯಷ್ಟೇ ಮಹತ್ವ ಪಡೆದಿರುವ ಭಜನಾದ ಮೂಲಕ ಆತ ಮಂದಿಯ ನಾಡಿಯನ್ನು ತನ್ನ ಏಕತಾರಿಯಲ್ಲಿ ಮೀಟುವ ರೀತಿ; ನಂದೋವಾಡಿಯ ಸಂಘರ್ಷದಲ್ಲಿ ಆತ ವಹಿಸುವ ಪಾತ್ರ; ಅವನ ಸೋಲಿನೊಂದಿಗೇ ತೆರೆದು ಕೊಳ್ಳುವ ಅವನ ಹಿನ್ನೆಲೆ ಎಲ್ಲವೂ ಕಟ್ಟಿ ಕೊಡುವ ಚಿತ್ರ ಅತ್ಯಂತ ಸಂಕೀರ್ಣವಾದುದು ಮತ್ತು ಧ್ವನಿಪೂರ್ಣವಾದದ್ದು. ಪ್ರತಿಯೊಬ್ಬ ಸಂತನಿಗೂ ಒಂದು ಗತಕಾಲವಿರುತ್ತದಂತೆ; ಪ್ರತಿಯೊಬ್ಬ ಭ್ರಷ್ಟನಿಗೂ ಭವಿಷ್ಯವಿರುವುದಂತೆ! ನಮ್ಮ ದೇಶದಲ್ಲಿ ಇದು ತದ್ವಿರುದ್ಧವಾಗುತ್ತಿರುವುದನ್ನು ಕಾಣುತ್ತಿರುವಾಗಲೇ ಇಲ್ಲಿ ಗಾಂಧೀವಾದಿ ದೇವಪ್ಪನಿದ್ದಾನೆ. ಅವನ ಸತ್ಯಾಗ್ರಹ, ಮೌನ, ಊರಿನವರಿಗೆ ಅವನ ಕುರಿತು ಇರುವ ಗೌರವ, ಪ್ರೀತಿ ಎಲ್ಲದರಾಚೆ ಮುಖ್ಯವಾಗುವ ಅವರವರ ಸ್ವಾರ್ಥ, ಈ ಎಲ್ಲದರ ಫಲವಾಗಿ ಕೊನೆಗೂ ಅವನಿಗೆ ದಕ್ಕುವುದೇನು ಎಂಬಲ್ಲಿ ಗಾಂಧೀವಾದ ಎಂಬುದರ ಕುರಿತು ನಮ್ಮಲ್ಲಿ ಇವತ್ತು ಇರುವ ಪರಿಕಲ್ಪನೆಯೇ ಸಾರ್ವತ್ರಿಕವಾಗಿ ಬದಲಾದ ಮನೋಧರ್ಮದ ಎದುರು ನಿಕಷಕ್ಕೆ ಒಡ್ದಲ್ಪಟ್ಟಿದೆ ಅನಿಸುತ್ತದೆ.
ಚಂಪವ್ವ, ರತ್ನಮಾಲಾ ಇಬ್ಬರೂ ಸೂಳೆಯರು. ತಾರವ್ವ ಕೂಡ ನಾಗೂ ಎಂಬ ವೇಶ್ಯೆಯ ತಾಯಿ. ಇವರಿಗೆ ಒಂದು ಹಂತದಲ್ಲಿ ಹಣವೇ ಮುಖ್ಯ. ಅದಕ್ಕಾಗಿಯೇ ಇವರು ತಮ್ಮ ಬದುಕನ್ನು ಪಣಕ್ಕೊಡ್ಡಲು ಮಾನಸಿಕವಾಗಿ ಸಜ್ಜುಗೊಂಡವರು. ಆದರೆ ಇವರ ಆಳದ ಭಾವುಕ ತಲ್ಲಣಗಳನ್ನು, ದ್ವಂದ್ವಗಳನ್ನು, ಹಪಹಪಿಕೆಗಳನ್ನು ಬಾಳಾಸಾಹೇಬರು ಅನೇಕ ಸಂದರ್ಭಗಳಲ್ಲಿ ಮರೆಯದೇ ಗಮನಿಸುತ್ತಾರೆ. ಒಬ್ಬಳು ಒಂದು ಅನಾಥ ಮಗುವಿನ ಎದುರು ಕರಗುತ್ತಾಳೆ. ಎಂದೋ ಜನ್ಮಕ್ಕೆ ಕಾರಣನಾಗಿ ದೂರವಾದ ತಂದೆ ಎಂಬ ಕರುಳಿನ ಸೆಳೆತದ ಎದುರು ಮಿಡಿಯುತ್ತಾಳೆ. ಸಾವಿನ ಎದುರು, ಹೃದಯದ ಕರೆಯಾದ ಪ್ರೀತಿಯ ಎದುರು ಮುಂತಾಗಿ ಮನುಷ್ಯತ್ವದ ವಿವಿಧ ಮುಖಗಳ ಎದುರು ಹಾಗೂ ಅವಕ್ಕೆ ಸಂವಾದಿಯಾಗಿ ನಿಲ್ಲುವ ದುಡ್ಡಿನ ಎದುರು ಇವರು ವರ್ತಿಸುವ ರೀತಿ, ಅವರ ಆದ್ಯತೆಗಳು ನಿಚ್ಚಳಗೊಳ್ಳುವ ರೀತಿ ಇಲ್ಲಿ ಅತ್ಯಂತ ಸಹಜವಾಗಿ ತೆರೆದುಕೊಳ್ಳುವುದೇ ಒಂದು ವಿಶೇಷ.
ಹಾಗೆಯೇ ಇಂಥ ಒಬ್ಬ ಸೂಳೆಯಾದ ಚಂಪವ್ವನ ಆಸ್ತಿ ಪಾಸ್ತಿಯನ್ನೂ ಅವಳ ಸಾವಿನ ಬೆನ್ನಿಗೇ ನುಂಗಿ ಗುಳುಂ ಮಾಡುವ ನೀಚ ಪರಪ್ಪ ಸಾವಕಾರ ಇಲ್ಲಿದ್ದಾನೆ. ಮತ್ತೀತ ಊರಿನವರೇ ಹೇಳುವಂತೆ ಜೈನರ ಜಾತಿಯಲ್ಲಿ ಹುಟ್ಟಿಯೂ ಹೀಗೆ ನಡೆದುಕೊಳ್ಳುತ್ತಾನೆ. ಅದೇ ಚಂಪವ್ವಳ ಮಗನ ಕತೆಯೂ ಕುತೂಹಲಕರ. ಗಂಡು ಜೋಗಿಯಾಗಿ ಅವಮಾನಿತನಾದ ಈತ ವ್ಯಾವಹಾರಿಕವಾಗಿ ಹೆಚ್ಚು ಮರ್ಯಾದೆಯ ಕಾಯಕ ಎಂಬ ಕಾರಣಕ್ಕೇ ಪೂಜಾರಿಯಾಗುವ, ಅದಕ್ಕಾಗಿಯೇ ಒಂದು ದೇವಸ್ಥಾನ, ಉತ್ಸವ ಎಲ್ಲ ಸೃಷ್ಟಿಸಿಕೊಳ್ಳುವ ಅವಕಾಶವಾದಿ! ಈ ಪರಪ್ಪ, ಮಾಣಿಕ ಪೂಜಾರಿಯ ಪಾತ್ರಗಳಿಗೆ ಸಂವಾದಿಯಾಗಿ ನಿಲ್ಲುವ ಏಕತಾರೀ ಬಾಬಾ, ಮೀರಾಸಾಬ ಅಥವಾ ಕಾಂಗ್ರೆಸ್ ದೇವಪ್ಪ ಮುಂತಾದವರ ಪಾತ್ರಗಳು ಇಲ್ಲಿ ನಮಗೆ ಎದುರಾಗುತ್ತವೆ. ಇಲ್ಲಿಯೇ ಒಂದು ಸಂಕೀರ್ಣ ಸಮಾಜದ ವಿಭಿನ್ನ ಸ್ತರಗಳಾಗಿ ನಮಗೆ ಒಬ್ಬ ಚಿನ್ನಪ್ಪ, ಒಬ್ಬ ದೇವೇಂದ್ರ ಕೂಡ ಸಿಗುತ್ತಾರೆ. ಇಬ್ಬರಿಗೂ ವಿಭಿನ್ನವಾದ ಅಮಲುಗಳು, ಭ್ರಾಂತಿಗಳು ತಗುಲಿವೆ. ಒಬ್ಬನಿಗೆ ಭಜನಾದ ಅಮಲಾದರೆ ಇನ್ನೊಬ್ಬನಿಗೆ ಕ್ರಾಂತಿಯ ಅಮಲು. ದೇವೇಂದ್ರ - ಪಾರ್ವತಿಯರ ಸಂಭಾವ್ಯ ರೂಪಾಂತರವನ್ನು ಇವರೇ ಸೂಚಿಸ್ತುತ್ತಾರೆಯೇ ಎಂಬಂತೆ ಮಲ್ಲು ಮತ್ತು ನಾಗೂ ಕೂಡ ಕಾಣಸಿಗುತ್ತಾರೆ.
ಅದೇ ರೀತಿ ಶಿವಬಸವ್ವ ಮತ್ತು ರಾಜವ್ವ ಕೂಡ ಒಂದು ಬಗೆಯ ಬೇಜವಾಬ್ದಾರಿಯ ಗಂಡಂದಿರ ಹೊರತಾಗಿಯೂ ಸಂಸಾರದ ಹೊಣೆಯನ್ನು, ಗಂಡಂದಿರ ಅತಿ-ಮಿತಿಗಳನ್ನು ತಮ್ಮದೇ ಜಾಣತನದಿಂದ ನಿರ್ವಹಿಸುವ ಬಗೆಯನ್ನು ಕಾಣಿಸುತ್ತಲೇ ಪಾರ್ವತಿಯ ಪಾತ್ರದ ಕಸುವನ್ನು, ಮುಂದೆ ಅವಳು ನಿಭಾಯಿಸಬೇಕಾದ ಸವಾಲನ್ನು ಪರೋಕ್ಷವಾಗಿ ಕಾಣಿಸಬಲ್ಲವರಾಗುತ್ತಾರೆಂಬುದೂ ಕೃತಿಯ ಧ್ವನಿಶಕ್ತಿಯನ್ನು ಸೂಚಿಸುತ್ತದೆ.
ಭಜನಾದ ಗುಂಗಿಗೆ ಸಿಲುಕಿ ಮಮತೆಯ ತಾಯಿ, ಹೆಂಡತಿ, ಮಕ್ಕಳು ಎಲ್ಲವನ್ನೂ ಮರೆಯಬಲ್ಲ ಚಿನ್ನಪ್ಪನಿಗೆ ಮುತ್ಯಾನ ಪಾಲಕಿಯ ಮೆರವಣಿಗೆಯ ಸದ್ದು ಗದ್ದಲದಿಂದ ಬೆದರಿದ ಎಮ್ಮೆ ಓಟಕಿತ್ತು ಅದೇ ತನ್ನ ಮಗನ ದಾರುಣ ಸಾವಿಗೆ ಕಾರಣವಾದಾಗ, ಆ ಸಾವಿನ ಆಘಾತದಿಂದ ಚೇತರಿಸಿಕೊಳ್ಳದ ಹೆಂಡತಿ ಶಿವಬಸವ್ವ ಎಲ್ಲಿ `ತನುವಿನ ಆಶೆಯನ್ನು ಅಳಿದು ವಿರಕ್ತಿಗೆ' ಜಾರುತ್ತಿದ್ದಾಳೋ ಎನಿಸಿ ಭಯವಾಗುತ್ತದೆ. ಮಗನ ಸಾವಿಗಿಂತಲೂ ಹೆಂಡತಿಯ ಈ ಬಗೆಯ ವಿರಕ್ತಿ ಅವನನ್ನು ವಿಚಲಿತಗೊಳಿಸುತ್ತದೆ. ಹಾಡುಗಳು ಹಾಡಲು ಮಾತ್ರ ಚಂದ, ಅವುಗಳಲ್ಲಿಯ ಭಾವಾರ್ಥ ಸಂಸಾರದಲ್ಲಿ ಸೇರಿಕೊಳ್ಳುವಷ್ಟು ಮುಂದೆ ಹೋಗಬಾರದು ಅನಿಸುತ್ತದೆ. ಅವನ ಮತ್ತು ಊರವರ ಶ್ರದ್ಧೆ, ನಂಬುಗೆಯ ಕೇಂದ್ರವಾದ ದೈವ ಎಲ್ಲಮ್ಮನ ಮೇಲೆ ಬಿದ್ದ ಕಲ್ಲುಗಳು ಮತ್ತು ಅವಳ ಪವಿತ್ರ ಜಗಕ್ಕೆ ಆದ ಗತಿ ಅವನನ್ನು ವೇದಾಂತಿಯ ಸ್ಥಾನದಿಂದ ಸಂಸಾರಕ್ಕೆ ಎಳೆಯತೊಡಗುತ್ತದೆ. ಚಿನ್ನಪ್ಪನಲ್ಲಾದಂಥ ಪರಿವರ್ತನೆಯ ಪ್ರಕ್ರಿಯೆ ಊರ ಹಲವರಲ್ಲಿ ಹಲವು ಬಗೆಯಲ್ಲಿ ಸರಿಸುಮಾರು ಅವೇ ಘಟನೆಗಳ ಹಿನ್ನೆಲೆಯಲ್ಲಿ ನಡೆಯುವುದನ್ನು ಕಾದಂಬರಿ ಅರ್ಥಪೂರ್ಣವಾಗಿ ಧ್ವನಿಸುತ್ತದೆ.
ದೇವೇಂದ್ರನ ಹಸಿಹಸಿಯಾದ ಕ್ರಾಂತಿಯ ನಿಲುವುಗಳನ್ನೂ ಪಕ್ವಗೊಳಿಸುವ ಕಸು ಹೊಂದಿದವಳಂತೆ ತೋರಿಸಿಕೊಳ್ಳುವ ಪಾರ್ವತಿ ಮಾತ್ರ ಓದುಗನಲ್ಲಿ ಅಂಥ ವಿಶ್ವಾಸವನ್ನು ಸಮರ್ಥವಾಗಿ ಮೂಡಿಸುವಲ್ಲಿ ವಿಫಲವಾದರೂ ಈ ಅಂಶವನ್ನು ಕಡೆಗಣಿಸಲಾಗದು. ಅಷ್ಟೇ ಅಲ್ಲ, ಇಲ್ಲಿನ ನದಿ, ಬಾವಿ, ಸತ್ತ ಎಮ್ಮೆ, ಎಲ್ಲಮ್ಮನ ಹಿತ್ತಾಳೆಯ ಜಗ, ಏಕತಾರೀ, ಚೌಡಿಕಿ ಎಲ್ಲವೂ ರೂಪಕಗಳಾಗುವ, ಕಾದಂಬರಿಗೆ ಹೊಸತೇ ಆದ ಒಂದು ಧ್ವನಿ ನೀಡುವ ಶಕ್ತಿ ಪಡೆಯುವುದು ಕೂಡ ಗಮನಾರ್ಹವಾದ ಸಂಗತಿಯೇ ಆಗಿದೆ.
ಕಾದಂಬರಿಯಲ್ಲಿ ಒಂದೆಡೆ ಶಿವಬಸವ್ವ ಮತ್ತು ರೇಣವ್ವ ಕೂಡಿ ಹೊಲಕ್ಕೆ ಹೋಗುವ, ಹೊಲತಿಯಾದ ರೇಣವ್ವ ಶಿವಬಸವ್ವನ ಕೂಸಿಗೆ ಮೊಲೆಯೂಡಿಸುವ ಸಂದರ್ಭದ ಚಿತ್ರಣವಿದೆ. ಶಿವಬಸವ್ವ ಕಂಡುಬಿಟ್ಟಳಲ್ಲ ಎಂದು ಭಯದಿಂದ ರೇಣುಕಮ್ಮ ತಟ್ಟನೆ ಮಗುವಿಗೆ ಮೊಲೆಬಿಡಿಸುವುದು ಮತ್ತು ಸ್ವತಃ ಶಿವಬಸವ್ವನೇ ರೇಣವ್ವ ಹಾಗೆ ಮಾಡಬಾರದಿತ್ತೆಂದು ಹಾಲೂಡಿಸಲು ಹೇಳುವುದು ಇಲ್ಲಿಯೇ. ಆದರೆ ಈ ಒಂದು ಹೃದಯಸ್ಪರ್ಶಿ ವಿವರಗಳ ಅಧ್ಯಾಯ ಕಾದಂಬರಿಯ ಮೂಲ ಎಳೆಗೆ ಸರಿಯಾಗಿ ಜೋಡಿಸಲ್ಪಡದೆ ಅದರ ಹಂದರದ ಹೊರಗೇ ಉಳಿದುಬಿಡುತ್ತದೆ. ಹೊಲೆಯರ ಮತ್ತು ಊರವರ ನಡುವಿನ ಸಂಬಂಧದ ಆರ್ಥಿಕ ಪಾತಳಿಯನ್ನು, ಅವರಲ್ಲಿನ ಪರಸ್ಪರ ಅವಲಂಬನದ ಅರಿವನ್ನು ಮರೆತು ಯಾವುದೇ ಕ್ರಾಂತಿಯಾಗಲೀ, ಸಾಮಾಜಿಕ ಪರಿವರ್ತನೆಯಾಗಲೀ ಸಾಧ್ಯವೂ ಅಲ್ಲ, ಸಾಧುವೂ ಅಲ್ಲ ಎಂಬ ಬಹಳ ಆಳವಾದ ವಿಚಾರವನ್ನು ಹೊಂದಿರುವ ಪಾರ್ವತಿ ಕೂಡ ಗಮನಿಸದೇ ಹೋಗುವ ಈ ಮಾನವೀಯ ಸಂಬಂಧದ ಪಾತಳಿಯನ್ನು ಸ್ವತಃ ಕಾದಂಬರಿಕಾರರು ಮುಂದಿನ ಕಥಾನಕದ ಯಾವುದೇ ಹಂತದಲ್ಲೂ ಬಳಸಿಕೊಳ್ಳುವುದಿಲ್ಲ ಎಂಬುದು ಅಚ್ಚರಿಯನ್ನು ಮೂಡಿಸುತ್ತದೆ. ಜೀವಸೆಲೆಯಾದ ನೀರಿನ ಕುರಿತೇ ವ್ಯಾಜ್ಯ, ಜಗಳ ಎಲ್ಲ ನಡೆಯುತ್ತಿರುವಾಗಲೂ ಮಲ್ಲು ನಾಗೂರ ಪ್ರೀತಿಯ ಸೆಲೆ ಬತ್ತುವುದಿಲ್ಲ ಎಂಬುದು ನಿಜವಾದರೂ ಬಾಳಾಸಾಹೇಬರು ಗಮನಿಸಿದ ಮನುಷ್ಯ ಸಂಬಂಧದ ಒಂದು ಮೂಲ ಎಳೆ, ಎದೆಹಾಲಿನಂಥ ಒಂದು ಸೆಲೆ ಮತ್ತೊಮ್ಮೆ ಇಲ್ಲಿ ಪ್ರಧಾನ ಭೂಮಿಕೆಗೆ ಬರುವುದಿಲ್ಲ. ಪಾರ್ವತಿಯ ವೈಚಾರಿಕತೆಗಿಂತ ಮಾನವೀಯ ಸಂವೇದನೆಗಳೂ ದಲಿತರ ಸಮಸ್ಯೆಗಳಿಗಿರುವ ಪರಿಹಾರಗಳನ್ನು ರೂಪಿಸುವಲ್ಲಿ ಪ್ರಧಾನಪಾತ್ರವಹಿಸಬೇಕು ಎಂಬ ಕಾದಂಬರಿಯ ಮೂಲ ಆಶಯವೇ ತೆಳ್ಳಗಾಗಲು ಇದು ಪರೋಕ್ಷವಾಗಿ ಕಾರಣವಾಗುತ್ತದೆ. ವೈಚಾರಿಕತೆ ಮತ್ತು ಮಾನವೀಯ ಅನುಬಂಧ ಎರಡೂ ಇಂಥ ಸಮಸ್ಯೆಗಳನ್ನು ಮುಖಾಮುಖಿಯಾಗುವಾಗ ನಮಗೆ ಮುಖ್ಯವಾಗುತ್ತವೆ ಎಂಬುದು ಕಾದಂಬರಿಯ ಉದ್ದಕ್ಕೂ ಕಂಡು ಬರುವ ನಿಲುವಾದರೂ ಪಾರ್ವತಿಯ ಪಾತ್ರ ಅದನ್ನು ಪರಿಪೂರ್ಣವಾಗಿ ಮೈದುಂಬಿಕೊಂಡು ಬಂದಿಲ್ಲ ಎನ್ನುವುದನ್ನು ಗಮನಿಸಬೇಕು. ಬಹುಷಃ ಪಾರ್ವತಿಯ ಪಾತ್ರಕ್ಕೆ ಅಗತ್ಯವಾದ ಪೋಷಣೆ ಸಿಗದೇ ಹೋದುದು ಹೀಗಾಗಲು ಕಾರಣವಿದ್ದೀತು. ದೇವೇಂದ್ರನ ಕ್ರಾಂತಿಕಾರಕ ನಿಲುವು ಅದರ ದುಡುಕುತನ ಮತ್ತು ತಕ್ಷಣದ ಫಲಿತಾಂಶದ ಬಯಕೆ ಒಂದು ಮಿತಿಯುಳ್ಳದ್ದು ಮತ್ತು ಮಾನವೀಯ ಸಂಬಂಧಗಳ ಅಸ್ತಿತ್ವವನ್ನೇ ಮರೆತು ರಟ್ಟೆಯೇರಿಸುವ ಬಗೆಯದ್ದು ಎಂಬುದು ಪಾರ್ತತಿಗೆ ಗೊತ್ತಾದರೂ ಅವಳು ಬಯಸುವ ಮಾನವೀಯ ನೆಲೆಯ ವೇದಿಕೆಯೊಂದನ್ನು ಅವಳೇ ಸೃಜಿಸಿಕೊಳ್ಳುವಷ್ಟು ನಂದೋವಾಡಿಯಲ್ಲಿ ಅವಳ ಸಂವೇದನೆಗಳು ಪಕ್ವಗೊಂಡಿವೆಯೇ ಎಂಬುದು ಓದುಗರ ಊಹೆಗೆ ಬಿಟ್ಟ ವಿಚಾರವಾಗಿಯೇ ಉಳಿದಿರುವುದಂತೂ ಸತ್ಯ.
ಮೆರವಣಿಗೆಯೊಂದು ಆಡುವ ಕೂಸಿನ ಸಾವಿಗೆ ಕಾರಣವಾದ ದಾರುಣ ಘಟನೆಗೆ ಕವಳ್ಳಿ ಮುತ್ಯಾ ಪ್ರತಿಕ್ರಿಯಿಸುವ ಬಗೆ ಬಹಳ ಮಹತ್ವದ್ದಾಗಿದೆ. "ಭೂಮಿ ಮ್ಯಾಲಿನ ನೀರೆಲ್ಲಾ ಒಂದ. ಅದೆಲ್ಲಾ ದೇವರು ಕೊಟ್ಟದ್ದು. ಇದನ್ನ ತಿಳಿಕೊಲಾಕ ನನ್ನ ಮುಂದೆ ಒಂದ ಸಾವ ಬೇಕಾಗಿತ್ತಾ.... ಕರಿಸಿದ್ಧಾ ಯಾನ ನಿನ್ನ ಆಟಾ!" ಈ ಮಾತು ಆಡುವ ಹೊತ್ತಿಗೆ ಊರಲ್ಲಿ ನೀರಿಗಾಗಿ ಜಗಳ, ದ್ವೇಷ, ಜಿದ್ದು ಎಲ್ಲ ಸುರುವಾಗಿರಲಿಲ್ಲ. ಆದರೆ ದೇವರ ಜಳಕಕ್ಕಾಗಿಯೇ ಈ ಊರಿಗೆ ಬರುವ ಅಗತ್ಯವಿರಲಿಲ್ಲ, ಹಾಗೆ ಬರಲು ಹೂಡಿದ ಮೆರವಣಿಗೆ ಮಗುವಿನ ಸಾವಿಗೆ ಮೂಲವಾಯಿತು ಎಂಬುದಷ್ಟೇ ಮುತ್ಯಾನ ಹಳಹಳಿಕೆಯಾದರೂ ಕಾದಂಬರಿಯ ಕಥಾನಕದ ಸಂದರ್ಭದಲ್ಲಿ ಈ ಸಾವು, ಈ ಮಾತು ಎರಡೂ ಬಹಳ ಧ್ವನಿಪೂರ್ಣವಾಗುತ್ತವೆ. ಸಾವಿರಾರು ಮಂದಿಯ ಮಾರಣಹೋಮಕ್ಕೆ ಕಾರಣವಾದ ರಥಯಾತ್ರೆಯ ನೆನಪನ್ನೂ ಇದು ತರುತ್ತದೆ. ಇಲ್ಲಿಯೂ ಗುಡಿಕಟ್ಟುವ, ಸ್ವಾರ್ಥಕ್ಕಾಗಿ ದೇವರನ್ನು ಬಳಸಿಕೊಳ್ಳುವ ಪಂಗಡಗಳಿರುತ್ತ ಇದು ಹೆಚ್ಚು ಪ್ರಾಸಂಗಿಕವಾಗಿದೆ. ಉಧೋ ಉಧೋ ಎಂಬ ಕೊಂಚ ಉನ್ಮಾದವನ್ನೂ, ಭಕ್ತಿರಸದ ಉತ್ತುಂಗದ ಮನಸ್ಥಿತಿಯನ್ನೂ ಪ್ರತಿನಿಧಿಸುವ ಶಬ್ದಗಳು ಜೊತೆಜೊತೆಗೇ ಅದರ ಅಡ್ಡ ಪರಿಣಾಮಗಳನ್ನೂ, ವಿವೇಚನಾ ರಹಿತ ಸಮೂಹಸನ್ನಿಯನ್ನೂ ಪ್ರತಿನಿಧಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ. ಕಾದಂಬರಿ ಇದನ್ನು ಯಶಸ್ವಿಯಾಗಿ ಚಿತ್ರಿಸಿದೆ.
ರತ್ನಮಾಲಾಳ ಕರುಳಿನ ಕಕ್ಕುಲಾತಿ ಮತ್ತು ದುಡ್ಡಿನ ಲೆಕ್ಕಾಚಾರದೆದುರು ಅದು ಹಿಡಿಯುವ ವಿಲಕ್ಷಣ ಹಾದಿಯನ್ನು ಈ ಹಿನ್ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳ ಬೇಕಾಗುತ್ತದೆ. ಊರ ಹೊಲೆಯರಿಗಾಗಿ ಬಾವಿ ತೋಡಿಸುವ, ಅವರ ಜಾನುವಾರುಗಳಿಗೆ ಮೇವು ತಿನ್ನಿಸುವ, ಅವರಿಗೆ ಅನ್ನ ಉಣಿಸುವ ಔದಾರ್ಯ ಮೆರೆದ ಬೆನ್ನಿಗೇ ತನ್ನ ಕ್ರಿಯೆಯ ಅರ್ಥಹೀನತೆಯನ್ನೂ, ಹಣದ ದುಂದನ್ನೂ ಗುರುತಿಸಿ ವಿಲಕ್ಷಣವಾಗಿ ವರ್ತಿಸುವ ರತ್ನಮಾಲಾ ದಲಿತರ ಸಮಸ್ಯೆಗಳಿಗಿರುವ ಸಾಮಾಜಿಕ ಮುಖದಾಚೆಗಿನ ಆರ್ಥಿಕ ಆಯಾಮವನ್ನು ನುರಿತ ರಾಜಕಾರಣಿಯಂತೆ ಬಳಸಿಕೊಳ್ಳಲು ತೊಡಗುವುದು ಮತ್ತು ಅದರ ಸದ್ಯದ ಮೂಲ ನೀರೇ ಆಗುವುದು ವಿಪರ್ಯಾಸ.
ಇಷ್ಟೆಲ್ಲ ಇದ್ದೂ ಕಾದಂಬರಿಯ ಓದು ಒಂದು ಅನುಭವವಾಗಿ ಮೈತಳೆಯುವುದಿಲ್ಲ ಅನಿಸುತ್ತದೆ. ಈ ಎಲ್ಲ ಪಾತ್ರಗಳು ಪರಸ್ಪರ ಹೆಣೆದುಕೊಂಡು ಕಥಾನಕದ ಚಲನೆಯೊಂದಿಗೇ ಸಂತುಲಿತವಾಗಿ, ಸಹಜವಾಗಿ ಒಳಗುಗೊಳ್ಳುವುದಿಲ್ಲ. ಬದಲಿಗೆ, ಬಿಡಿಬಿಡಿಯಾಗಿಯೇ ಉಳಿದುಬಿಟ್ಟಂತನಿಸುತ್ತದೆ. ಬಾಳಾಸಾಹೇಬರು ಹಲವಾರು ಪಾತ್ರ, ಚಿತ್ರಗಳ ಮೂಲಕ ಹಲವು ಸ್ತರಗಳಲ್ಲಿ ಒಂದು ನಂದೋವಾಡಿಯನ್ನು ನಮಗೆ ಕಟ್ಟಿಕೊಡಲು ಪ್ರಯತ್ನಿಸುತ್ತಾರೆ. ಅಷ್ಟರಮಟ್ಟಿಗೆ ಅವರು ಯಶಸ್ವಿಯಾಗುತ್ತಾರೆ ಕೂಡ. ಆದರೆ ಎಲ್ಲೋ ಒಂದುಕಡೆ ಕಥಾನಕದ ಎಲ್ಲ ಎಳೆಗಳೂ ಊರ ಒಂದೇ ಬಾವಿ ಎರಡಾಗುವುದು ಮತ್ತು ಊರನ್ನು ಆರೋಗ್ಯಕರವಾಗಿ ಬೆಸೆದು-ಬಿರಿದು ಹರಿಯುತ್ತಿದ್ದ ದೇವೀರಿ ಹಳ್ಳದಲ್ಲಿ ಅನಾಥವಾಗಿ ಬಿದ್ದ ದೈವದ ಜಗ ಊರನ್ನು ಎರಡಾಗಿಸುವುದು - (ಅದರ ಕಾರ್ಯ-ಕಾರಣ-ಪರಿಣಾಮ ಎಲ್ಲದರೊಂದಿಗೇ) ಎಂಬಲ್ಲಿಗೇ ಬಂದು ನಿಲ್ಲುವುದು ಕಾದಂಬರಿಯ ಗಮ್ಯ ಆಗಿರುವುದರಿಂದ ಆ ಸಂದರ್ಭದಲ್ಲಿ ಓದುಗನಿಗೆ ಅದು ಕಾದಂಬರಿಯಲ್ಲಿ ಸಹಜವಾಗಿ ಆಗಿದೆ ಎಂದು ಅನಿಸುವುದಿಲ್ಲ.
ವಿನಾಶದ ಹಂತದಲ್ಲಿರುವ ನಂದೋವಾಡಿಗೆ ಎರಡು ಭರವಸೆಗಳ ಆಶಾವಾದ ಉಳಿದಿದೆ. ಒಂದು ಮಲ್ಲು ಮತ್ತು ನಾಗೂ ಹಣಕ್ಕೆ ಬೆನ್ನು ಹಾಕಿ ಹಿಡಿದ ಮನುಷ್ಯ ಪ್ರೀತಿಯನ್ನು ಪೊರೆಯಬಲ್ಲ ಹಾದಿ. ಅದು ಊರಿನಿಂದ ದೂರ ಹೋಗಿ ನಿಂತು ಚಿಗುರಿಸಬೇಕಾದ್ದು. ಇನ್ನೊಂದು ಪಾರ್ವತಿ. ಅವಳೀಗ ಹೊಲೆಯರ ಕೇರಿಗೆ, ಮೊದಲ ಬಾರಿಗೆ ದೇವೀರಿ ಹಳ್ಳ ದಾಟಿ ಕಾಲಿಟ್ಟಿದ್ದಾಳೆ. ಅಲ್ಲಿ ಅರೆಬೆಂದ ವಿಚಾರಗಳ ಕ್ರಾಂತಿಕಾರಿ ದೇವೇಂದ್ರ ಇದ್ದಾನೆ. ಹಾಗೆ ನೋಡಿದರೆ ಅವಳು ಹೊರಟಿದ್ದೇ ಅವನನ್ನು ಭೇಟಿಯಾಗಲಿಕ್ಕೆ. ಇದು ಶಾಬ್ದಿಕವಾಗಿ ಎಂತೋ ಅಂತೆಯೇ ಧ್ವನಿಯಾಗಿಯೂ ಒಂದು ಅಪೂರ್ವ ಭೇಟಿ. ಒಂದು ಸಾಮಾಜಿಕ ಕ್ರಾಂತಿಗೆ ಅಗತ್ಯವಾದ ಪರಸ್ಪರ ಪೂರಕವಾದ ಆದರೂ ವಿಭಿನ್ನ ವಿಚಾರಧಾರೆಗಳ ಒಂದು ಸಂಕಲನ. ಮತ್ತೆ ಅಲ್ಲಿ ಮೂರ್ತಿಯೇ ಇಲ್ಲದ ಎಲ್ಲಮ್ಮನ ಖಾಲಿ ಗುಡಿ ಇದೆ. ಕೀಲಿ ಜಡಿದ ರತ್ನಮಾಲಾಳ ಬಾವಿ ಇದೆ. ಎಲ್ಲಕ್ಕಿಂತ ಹೆಚ್ಚು ಹಿಂದೆ ಹೇಳಿದ ಉನ್ಮಾದವನ್ನೂ ಸಮೂಹ ಸನ್ನಿಯನ್ನೂ ಅದರ ಎಲ್ಲ ಸಾಧಕ ಬಾಧಕಗಳ ಜೊತೆಯಲ್ಲೇ ಗುರುತಿಸಬೇಕಾದ ಉಧೋ ಉಧೋ ಎಂಬ ಏರುತ್ಸಾಹದ ಮಂದಿ ಇದ್ದಾರೆ. ಆದರೆ ಪಾರ್ವತಿ ದೇವೇಂದ್ರನ ಅನುಸಂಧಾನದೊಂದಿಗೆ ಸಾಧಿಸ ಬೇಕಾದುದು ಬಹಳವಿದೆ ಮತ್ತು ಅದನ್ನೆಲ್ಲ ಕಾಂಗ್ರೆಸ್ ದೇವಪ್ಪ, ಏಕತಾರೀ ಬಾಬಾ ಮತ್ತು ಮೀರಾಸಾಬನಂಥವರ ಅನುಪಸ್ಥಿತಿಯಲ್ಲಿ ಸಾಧಿಸ ಬೇಕಾದ ಸವಾಲಿದೆ. ಕಾದಂಬರಿ ಈ ದಾಟುವಿಕೆಯಲ್ಲೇ ಮುಗಿಯುತ್ತದೆ.
ಬಾಳಾ ಸಾಹೇಬರು ಬಳಸುವ ಭಾಷೆ, ನುಡಿಕಟ್ಟು ಮತ್ತು ವಿವರಗಳಲ್ಲಿ ಕಟ್ಟಿಕೊಡುವ ಚಿತ್ರಗಳು ಈ ಕಾದಂಬರಿಯ ಓದು ಆಪ್ತವಾಗಿಸಲು, ಓದುಗನನ್ನು ತನ್ನೊಂದಿಗೆ ಸೆಳೆದೊಯ್ಯಲು ಸಹಕರಿಸುವುದರ ಜೊತೆಗೇ ಕೃತಿಗೆ ಒಂದು ವಿನೂತನ ಲಯವನ್ನೂ ದೊರಕಿಸಿಕೊಡುತ್ತವೆ. ಅದು ದೇವನೂರ ಮಹದೇವ ಕುಸುಮಬಾಲೆಯಲ್ಲಿ ಸಾಧಿಸಿದ ಲಯದ ನೆನಪನ್ನು ಅಲ್ಲಲ್ಲಿ ಮೂಡಿಸಿದರೆ ಅಚ್ಚರಿಯಿಲ್ಲ. ಆದರೆ ಈ ಲಯದ ಮೋಹದಲ್ಲಿ ಬಾಳಾಪುರ ಕಳೆದು ಹೋಗುವುದಿಲ್ಲ ಎನ್ನುವುದು ಮುಖ್ಯ. ವಿಭಿನ್ನ ಕಾರಣಗಳಿಗಾಗಿ ರಾವ್ ಬಹದ್ದೂರರ ಗ್ರಾಮಾಯಣವನ್ನೂ, ರಾಘವೇಂದ್ರ ಪಾಟೀಲರ ತೇರು ಕಾದಂಬರಿಯನ್ನೂ, ಅನಂತಮೂರ್ತಿಯವರ ದಿವ್ಯವನ್ನೂ ನೆನಪಿಸುವ ಉಧೋ ಉಧೋ ಒಂದು ಅಗತ್ಯ ಓದ ಬೇಕಾದ ಕಾದಂಬರಿ.
(ಮನೋಹರ ಗ್ರಂಥ ಮಾಲಾದವರು ಹೊರತಂದ ೧೪೩ ಪುಟಗಳ ಈ ಕಾದಂಬರಿಯ ಬೆಲೆ ತೊಂಭತ್ತು ರೂಪಾಯಿ.)