ಸಾಮಾಜಿಕ ಜವಾಬ್ದಾರಿಗಳಿಂದ ಜಾರಿಕೊಳ್ಳದಿರಿ…

ಸಾಮಾಜಿಕ ಜವಾಬ್ದಾರಿಗಳಿಂದ ಜಾರಿಕೊಳ್ಳದಿರಿ…

ಕೆಲವು ದಿನಗಳ ಹಿಂದೆ ನಾನು ಕರ್ನಾಟಕದ ಒಂದು ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ಹೋಗಿದ್ದೆ. ಅಲ್ಲಿ ನೂರಾರು ಜನರು ದೇವರ ದರ್ಶನಕ್ಕಾಗಿ ನೆರೆದಿದ್ದರು. ಆದರೆ ಯಾರೂ ಮಾಸ್ಕ್ ಧರಿಸಿರಲಿಲ್ಲ. ಅದನ್ನು ಧರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಮತ್ತು ಸಾಮಾಜಿಕ ಕಳಕಳಿಯ ದ್ಯೋತಕವೆಂಬ ಕಿಂಚಿತ್ತೂ ಪ್ರಜ್ಞೆ ಅವರಲ್ಲಿರಲಿಲ್ಲ. ಭಾರತದಂತಹ ದೇಶದಲ್ಲಿ ಸಾಮಾಜಿಕ ಅಂತರ ಕಾಪಾಡುವಿಕೆ ಬಹಳ ಕಷ್ಟ. ಆ ಕಾರಣದಿಂದ ಎಲ್ಲೂ ಸಾಮಾಜಿಕ ಅಂತರಗಳು ಕಂಡು ಬರಲೇ ಇಲ್ಲ. ಕೆಲವು ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಹೋಗುವಾಗ ಮಾಸ್ಕ್ ಧರಿಸಲೇ ಬೇಕು ಎಂದಾಗ ಮಾತ್ರ ಎಲ್ಲರ ಕಿಸೆಯಲ್ಲಿದ್ದ ಮಾಸ್ಕ್ ಗಳು ಹೊರ ಬಂದು ಮುಖದ ಮೇಲೆ ರಾರಾಜಿಸಿದವು. ನಮಗ್ಯಾಕೆ ನಮ್ಮದೇ ಜೀವದ ಮೇಲೆ ಆಸೆ ಇಲ್ಲ.

ಕೋವಿಡ್-೧೯ ಭಾರತಕ್ಕೆ ಬಂದ ಪ್ರಥಮ ಹಂತದಲ್ಲಿ ಇದರ ಬಗ್ಗೆ ಬಹಳ ಹೆದರಿಕೆ ಇತ್ತು, ಮೊದಲನೇ ಅಲೆ ಬಂದು ಹೋಗಿ ಎರಡನೇ ಅಲೆ ಕಾಡಿದಾಗ ಮತ್ತೆ ಹೆದರಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಲು ಶುರು ಮಾಡಿದರು. ಅಲೆಯ ಪ್ರಭಾವ ಕಮ್ಮಿ ಆಗಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಲೇ, ಜನರು ಮತ್ತೆ ಮಾಸ್ಕ್, ಸ್ಯಾನಿಟೈಸರ್ ಮೊದಲಾದುವುಗಳನ್ನು ಮರೆತು ಬಿಟ್ಟರು. ಈಗ ಮತ್ತೆ ಮೂರನೇ ಅಲೆ ಬರುವ ಸಣ್ಣ ಲಕ್ಷಣ ಗೋಚರವಾಗುತ್ತಿದೆ.

ದಿನಾಲೂ ದುಡಿದು ತಿನ್ನುವ ವರ್ಗವೇ ನಮ್ಮ ದೇಶದಲ್ಲಿ ಪ್ರಧಾನವಾಗಿರುವಾಗ ನಾವು ಒಂದು ದಿನವೂ ಮನೆಯಲ್ಲಿ ಕೆಲಸ ಮಾಡದೇ ಕುಳಿತುಕೊಳ್ಳುವ ಪರಿಸ್ಥಿತಿ ಇಲ್ಲ. ಹಾಗಿರುವಾಗ ವಾರಗಟ್ಟಲೇ ಮನೆಯಿಂದ ಹೊರಗೆ ಬಾರದೇ, ಕೆಲಸ ಮಾಡದೇ ಇದ್ದಲ್ಲಿ ಕುಟುಂಬದ ಹೊಟ್ಟೆ ತುಂಬಿಸುವವರಾರು? ನಾವು ಈ ಸಾಂಕ್ರಾಮಿಕ ಕಾಯಿಲೆಯ ಜೊತೆ ಬದುಕುವುದನ್ನು ಕಲಿಯಬೇಕಾಗಿದೆ. ಸಾಧ್ಯವಾದಷ್ಟು ಮಾಸ್ ಧರಿಸಿ, ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಹೋಗಿ, ತೀರಾ ಅನಿವಾರ್ಯವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ನಾವು ಮತ್ತೊಮ್ಮೆ ‘ಲಾಕ್ ಡೌನ್' ಎಂಬ ಭೂತದಿಂದ ಬಚಾವ್ ಆಗಬಹುದು. ಸರಕಾರಗಳು ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಬಂದ್ ಮಾಡಿ ಬಿಡುತ್ತಾರೆ. ಅವರಿಗೆ ದುಡಿದು ತಿನ್ನುವವರ ಸಂಕಷ್ಟಗಳಿಗಿಂತ ತಮ್ಮ ತಮ್ಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಮ್ಮಿ ಮಾಡುವುದೇ ಪ್ರಥಮ ಆದ್ಯತೆಯಾಗಿರುತ್ತದೆ. ಬಹುತೇಕ ರಾಜಕೀಯ ಕಾರಣಗಳಿಂದ ಬಡ ಹಾಗೂ ಮಧ್ಯಮ ವರ್ಗದವರ ಬದುಕು ಮೂರಾಬಟ್ಟೆಯಾಗುತ್ತದೆ. ಬಹುತೇಕ ಈ ವರ್ಗಗಳಲ್ಲಿ ಒಟ್ಟು ಮಾಡಿಟ್ಟ ಸಂಗ್ರಹಿತ ಹಣ ಇರುವುದಿಲ್ಲ. ದಿನಾ ದುಡಿದು ಉಣ್ಣುವ ಜನರು ಇವರು. ಕೆಲಸವಿಲ್ಲದೇ ಇದ್ದಾಗ, ಅಂಗಡಿ ಮುಂಗಟ್ಟುಗಳು ತೆರೆಯದೇ ಇದ್ದಾಗ ಅದರ ಮಾಲೀಕರು ಅವರ ಕೆಲಸದವರಿಗೆ ಎಷ್ಟು ಸಮಯ ಸಂಬಳ ಕೊಟ್ಟಾರು? ಆಗೆಲ್ಲಾ ಜೀವಕ್ಕಿಂತ ಜೀವನವೇ ಮುಖ್ಯವಾಗುತ್ತದೆ. ಹಸಿವಿನಿಂದ ಸಾಯುವುದಕ್ಕಿಂತ, ಕೊರೋನಾದಿಂದ ಸಾಯುವುದೇ ಮೇಲು ಎಂದು ಒಬ್ಬ ವ್ಯಕ್ತಿಗೆ ಅನಿಸತೊಡಗಿದರೆ ಅದಕ್ಕಿಂತ ದೊಡ್ದ ದುರಂತ ಬೇಕಾ?

ನಮ್ಮಲ್ಲಿ ಸಾಮಾಜಿಕ ಜವಾಬ್ದಾರಿಗಳು ಕಮ್ಮಿಯಾಗತೊಡಗಿವೆ. ನಾನೊಬ್ಬ ಸುಖವಾಗಿದ್ದರೆ ಸಾಕು ಎನ್ನುವ ಮನೋಭಾವನೆ ಹಲವರಲ್ಲಿ ಬೆಳೆಯಲಾರಂಭಿಸಿದೆ. ಆದರೂ ಸಮಾಜಮುಖಿ ಮನಸ್ಥಿತಿಯ ವ್ಯಕ್ತಿ, ಸಂಸ್ಥೆಗಳು ಹಲವಾರು ಇವೆ. ಆದುದರಿಂದಲೇ ಹಿಂದೆ ಎರಡು ಬಾರಿ ಕೋವಿಡ್ ಅಲೆಗಳು ಬಂದರೂ ಜನರು ಸರಕಾರದ, ಇಲಾಖೆಯ ವಿರುದ್ಧ ದಂಗೆ ಏಳಲಿಲ್ಲ. ಬಹಳಷ್ಟು ಮಂದಿ ಅಸಹಾಯಕರಿಗೆ ತಮ್ಮಿಂದ ಆದಷ್ಟು ಸಹಕಾರ ನೀಡಿದರು. ಈ ವಿಷಯಗಳನ್ನು ಮೊದಲೇ ಹಲವಾರು ಸಲ ನೀವು ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಓದಿರುತ್ತೀರಿ. ಆದರೆ ಮತ್ತೆ ಮತ್ತೆ ಬರೆಯಬೇಕಾದ ಅನಿವಾರ್ಯತೆ ಈಗಿನ ಕಾಲಘಟ್ಟದಲ್ಲಿ ಕಂಡುಬರುತ್ತಿದೆ. ಏಕೆಂದರೆ ಲಸಿಕೆ ತೆಗೆದುಕೊಳ್ಳಲು ಬನ್ನಿ ಎಂದು ಕರೆದರೆ ಯಾರೂ ಹೋಗುವುದಿಲ್ಲ. ಅದೇ ಕೋವಿಡ್ ಅಲೆ ಜೋರಾಗಿರುವ ಸಂದರ್ಭದಲ್ಲಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಲಸಿಕೆ ಪಡೆದುಕೊಳ್ಳುತ್ತಾರೆ. ಅಲೆಯ ಪ್ರಮಾಣ ಕಮ್ಮಿಯಾದ ಕೂಡಲೇ ಲಸಿಕೆಯ ಸಂಗತಿ ಮರೆತೇ ಬಿಡುತ್ತಾರೆ. 

ಒಮಿಕ್ರಾನ್ ರೂಪಾಂತರಿ ವೈರಸ್: ಈಗ ಕೊರೋನಾ ವೈರಸ್ ಹೊಸ ರೂಪಾಂತರಿ ವೈರಸ್ ಆಗಿ ಬದಲಾಗಿದೆ. ಪ್ರತಿಯೊಂದು ವೈರಸ್ ಗಳೂ ಹಾಗೆಯೇ. ಪರಾಕಾಷ್ಟೆಯ ಹಂತ ತಲುಪಿದ ಬಳಿಕ ಅವುಗಳು ರೂಪಾಂತರ ಹೊಂದುತ್ತವೆ. ಆಲ್ಫಾ, ಡೆಲ್ಟಾ ಹೀಗೆ ಹೆಸರು ಹೊಂದಿ ಈಗ ಒಮಿಕ್ರಾನ್ (Omicron) ಎಂಬ ವೈರಸ್ ಆಗಿ ರೂಪಾಂತರ ಹೊಂದಿದೆ. ಈ ರೂಪಾಂತರಿ ವೈರಸ್ ‘ಬೋಟ್ಸ್ ವಾನಾ ರೂಪಾಂತರಿ’ ಅಥವಾ ‘ಬಿ.1.1.529 ರೂಪಾಂತರಿ' ಗೆ ವಿಶ್ವ ಆರೋಗ್ಯ ಸಂಸ್ಥೆ ‘ಒಮಿಕ್ರಾನ್’ ಎಂದು ನಾಮಕರಣ ಮಾಡಿತು. ಈ ಹಿಂದೆಯೂ ವೈರಸ್ ರೂಪಾಂತರಿಗಳಿಗೆ ಗ್ರೀಕ್ ವರ್ಣಮಾಲೆಯ ಅಕ್ಷರಗಳ ಹೆಸರುಗಳನ್ನೇ ಇಡಲಾಗಿದೆ. ಉದಾಹರಣೆಗೆ ಮೊದಲ ಅಕ್ಷರ ಆಲ್ಫಾದಿಂದ ಹಿಡಿದು ಅನಂತರ ಬೀಟಾ, ಗಾಮಾ, ಡೆಲ್ಟಾ, ಎಪ್ಸಿಲಿಯನ್, ಝೆಟಾ, ಇಟಾ, ಥೀಟಾ, ಐಯೋಟಾ, ಕಪ್ಟಾ, ಲ್ಯಾಮ್ಡಾ, ಮ್ಯೂ ವರೆಗೆ ವಿಶ್ವ ಆರೋಗ್ಯ ಸಂಸ್ಥೆ ಹೆಸರನ್ನಿಟ್ಟಿತ್ತು. ಈ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಈ ಹೊಸ ರೂಪಾಂತರಿಗೆ ಮ್ಯೂ ನ ನಂತರದ ಅಕ್ಷರವಾದ ನ್ಯೂ ಅಕ್ಷರವನ್ನೇ ಇಡಲಾಗುತ್ತದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ನ್ಯೂ ಹಾಗೂ ನಂತರದ ಕ್ಸಿ ಅಕ್ಷರವನ್ನು ಕೈಬಿಟ್ಟು ಅದರ ನಂತರ ಬರುವ ಒಮಿಕ್ರಾನ್ ಎಂಬ ಅಕ್ಷರವನ್ನೇ ಬಳಸಿ ಹೆಸರಿಡಲಾಗಿದೆ. 

ಉದ್ದೇಶಪೂರ್ವಕವಾಗಿಯೇ ನ್ಯೂ ಹಾಗೂ ಕ್ಸಿ ಎಂಬ ಅಕ್ಷರಗಳನ್ನು ಬಿಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟ ಪಡಿಸಿದೆ. ನ್ಯೂ ಎಂದರೆ ಹೊಸತು ಎಂಬ ಅರ್ಥ ಬರುವ ಕಾರಣ ಮತ್ತು ಕ್ಸಿ ಅಕ್ಷರದಿಂದ ಚೀನಾ ಅಧ್ಯಕ್ಷರ ಹೆಸರು ಪ್ರಾರಂಭವಾಗುವ ಕಾರಣದಿಂದ ಕ್ಸಿ ಎಂಬ ಹೆಸರು ಇರಿಸಿದರೆ ಚೀನಾ ದೇಶಕ್ಕೆ ಇರುಸುಮುರುಸಾದೀತು ಎಂಬ ಉದ್ದೇಶದಿಂದ ಆ ಎರಡು ಅಕ್ಷರಗಳನ್ನು ಕೈಬಿಡಲಾಯಿತಂತೆ.

ಹೆಸರು ಏನಾದರಾಗಿರಲಿ, ಈ ಒಮಿಕ್ರಾನ್ ರೂಪಾಂತರಿ ವೈರಸ್ ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ ೨೨-೨೩ ರಂದು ಅಲ್ಲಿ ಎರಡೇ ದಿನಗಳಲ್ಲಿ ೨೫೦೦ ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಒಮಿಕ್ರಾನ್ ವೈರಾಣುವಿನ ಮೇಲೆ  ಮುಳ್ಳಿನಾಕಾರದ ಪ್ರೋಟೀನ್ ಯುಕ್ತ ಅಂಗಾಂಶಗಳಿವೆ. ಇವುಗಳು ಮಾನವನ ದೇಹದಲ್ಲಿರುವ ಜೀವಾಂಶಗಳಿಗೆ ಅಂಟಿಕೊಳ್ಳುತ್ತವೆ. ಈ ಒಮಿಕ್ರಾನ್ ಮೊದಲಿನ ಎಲ್ಲಾ ರೂಪಾಂತರಿಗಳಿಗಿಂತ ಬಲಿಷ್ಟವಾಗಿದೆ ಎನ್ನುತ್ತಾರೆ ಸಂಶೋಧಕರು. ನಮ್ಮಲ್ಲಿ ಈಗ ಲಭ್ಯವಿರುವ ಲಸಿಕೆಗಳು ಈ ರೂಪಾಂತರಿ ವೈರಸ್ ಗಳಿಂದ ನಮಗೆ ರಕ್ಷಣೆ ನೀಡುತ್ತದೆಯೋ? ಇನ್ನೂ ಸಾಬೀತು ಆಗಿಲ್ಲ. ಅದಕ್ಕೇ ಹೇಳುವುದು, ನಮ್ಮ ಜಾಗ್ರತೆಯಲ್ಲಿ ನಾವಿರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲೂ ಹಲವಾರು ರೂಪಾಂತರಿ ವೈರಸ್ ಗಳು ನಮ್ಮ ಮೇಲೆ ದಾಳಿ ಮಾಡಬಹುದು. 

ಸರಕಾರ ಹಾಗೂ ಆರೋಗ್ಯ ಇಲಾಖೆ ನಿರ್ದೇಶಿಸಿದ ಸುರಕ್ಷಾ ಮಾನದಂಡಗಳನ್ನು ಪಾಲಿಸಿ, ನಾವು ಸುರಕ್ಷಿತರಾಗಿರುವುದನ್ನು ಕಲಿಯುವ. ನಾವು ಆದಷ್ಟು ಸಾಮಾಜಿಕ ಕಳಕಳಿಯನ್ನು ಪ್ರದರ್ಶನ ಮಾಡುವ. ಮನೆಯಿಂದ ಹೊರಗಡೆ ಇದ್ದಾಗ ಜಾಗರೂಕತೆಯಿಂದ, ಪ್ರಜ್ಞಾವಂತಿಕೆಯಿಂದ ವರ್ತಿಸೋಣ. 

ಚಿತ್ರ ಕೃಪೆ: ಅಂತರ್ಜಾಲ ತಾಣ