ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ ಬಜೆಟ್...

ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ ಬಜೆಟ್...

ಹಕ್ಕು ಮತ್ತು ಕರ್ತವ್ಯಗಳನ್ನು ನೆನಪಿಸುವ ಅಂಶಗಳನ್ನು ಒಳಗೊಂಡಿರುವ ಬಜೆಟ್. ದೇಶದ ಅಭಿವೃದ್ಧಿಗೆ ಆರ್ಥಿಕ ಬಜೆಟ್ ಅತ್ಯವಶ್ಯಕ ನಿಜ. ಆದರೆ ಆ ಅಭಿವೃದ್ಧಿ ಜನರ ಜೀವನಮಟ್ಟ ಸುಧಾರಿಸಿ ನೆಮ್ಮದಿಯ ಬದುಕು ಸಾಗಿಸಲು ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ ಬಜೆಟ್ ನ ಅವಶ್ಯಕತೆಯೂ ಇದೆ. ಈಗಿನ ಬಜೆಟ್ ಸಹ ಸಾಮಾಜಿಕ ಅಭಿವೃದ್ಧಿಯ ಹೆಸರಿನ ಬಜೆಟ್ ಎಂದು ಕರೆಯಬಹುದಾದರೂ ಬಹುತೇಕ ಆರ್ಥಿಕ ಅಭಿವೃದ್ಧಿಯನ್ನೇ ಮುಖ್ಯ ಗುರಿಯಾಗಿ ಇಟ್ಟುಕೊಂಡಿರುತ್ತದೆ. ಒಂದು ದೇಶ ಅಥವಾ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಮಾಡುವ ಆದಾಯ ಮತ್ತು ಖರ್ಚಿನ ಲೆಕ್ಕಾಚಾರದಂತೆ ಒಳ್ಳೆಯತನ ಮತ್ತು ಕೆಟ್ಟತನದ ಆತ್ಮಾವಲೋಕನದ ಸ್ವಯಂ ಅಂಕಿಅಂಶಗಳ ಲೆಕ್ಕ ಸಹ ಮುಖ್ಯವಾಗುತ್ತದೆ.

1) ನಾನು ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದ ಉದ್ಯೋಗಿಯಾಗಿದ್ದು ನನಗೆ ಬರುವ ಸಂಬಳದಲ್ಲಿ ಹೇಗೆ ಜೀವಿಸಬೇಕು, ಒಂದು ವೇಳೆ ಇದು ನನ್ನ ಅವಶ್ಯಕತೆ ಪೂರೈಸಲು ಸಾಧ್ಯವಾಗದಿದ್ದರೆ  ಇದನ್ನು ಹೊರತುಪಡಿಸಿ ಮತ್ತೆ ಉಳಿದ ಸಮಯದಲ್ಲಿ ಯಾವ ಆದಾಯದ ಮೂಲಗಳನ್ನು ಹುಡುಕಬೇಕು ಎಂದು ಯೋಚಿಸುವುದರ ಜೊತೆಗೆ ಲಂಚ ಮೋಸ ವಂಚನೆ ಸುಳ್ಳು ಅನ್ಯಾಯದ ಮೂಲಕ ಬರಬಹುದಾದ ಆದಾಯಗಳನ್ನು ಯಾವ ಕಾರಣಕ್ಕೂ ಸ್ವೀಕರಿಸದೆ ಅದನ್ನು ಅನೈತಿಕ ಎಂದು ಪರಿಗಣಿಸುವ ಮಾನಸಿಕ ಲೆಕ್ಕಾಚಾರ ಮಾಡುತ್ತೇನೆ ಮತ್ತು ಆ ಮೂಲಕ ದೇಶದ ಅಭಿವೃದ್ಧಿಯ ಲೆಕ್ಕಕ್ಕೆ ನನ್ನ ಕೊಡುಗೆಯನ್ನು ಸಲ್ಲಿಸುತ್ತೇನೆ.

2) ಈ ದೇಶದ ಎಲ್ಲಾ ಪ್ರಾಕೃತಿಕ ಸಂಪನ್ಮೂಲಗಳನ್ನು ನನಗೆ ಅವಶ್ಯಕತೆ ಇರುವಷ್ಟು ಮಾತ್ರ ಮಿತಿಯಾಗಿ ಉಪಯೋಗಿಸಿಕೊಂಡು ಉಳಿದದ್ದನ್ನು ಮುಂದಿನ ಪೀಳಿಗೆಗೆ ಅದರ ಮೂಲ ಸ್ವರೂಪದಲ್ಲಿಯೇ ಉಳಿಸುತ್ತೇನೆ. ಅಭಿವೃದ್ಧಿಯ ಲೆಕ್ಕದಲ್ಲಿ ಇದು ನನ್ನ ಉಳಿತಾಯ.

3) ಯಾವುದೇ ಸಂದರ್ಭದಲ್ಲಿ ದೇಶದ ಸಾಮರಸ್ಯ ಕದಡುವ, ಹಾನಿ ಉಂಟು ಮಾಡುವ, ಪ್ರಚೋದಿಸುವ, ದೇಶ ಮತ್ತು ಜನರ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವ ವೈಯಕ್ತಿಕ ರಾಗ ದ್ವೇಷಗಳನ್ನು ಹರಡುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ‌ಇದು ಅಭಿವೃದ್ಧಿಯ ಲೆಕ್ಕದಲ್ಲಿ ನನ್ನ ಕೊಡುಗೆಯ ಸೇರ್ಪಡೆ.

4) ನನ್ನ ಸಂಪಾದನೆಯಲ್ಲಿ ತೆರಿಗೆಯ ನಂತರ ಉಳಿಯುವ ಲಾಭದಲ್ಲಿ ( ಇದು ಅನ್ವಯವಾಗುವವರಿಗೆ ಮಾತ್ರ ) ಶೇಕಡಾ ‌80% ರಷ್ಟು ನನ್ನ ವೈಯಕ್ತಿಕ ಜೀವನಕ್ಕಾಗಿ ಉಪಯೋಗಿಸಿ ಉಳಿದ ‌20% ಅನ್ನು ಅವಶ್ಯಕತೆ ಇರುವವರಿಗಾಗಿ ಉಪಯೋಗಿಸುತ್ತೇನೆ. ಇದು ನನ್ನ ಸಾಮಾಜಿಕ ಕಾಳಜಿಯ ವಾರ್ಷಿಕ ಬಜೆಟ್.

5) ನನ್ನ ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರದಷ್ಟೇ ತೊಡಕಾಗಿರುವ ಜಾತಿ ಪದ್ದತಿಯ ನಿರ್ಮೂಲನೆಗೆ ನಾನು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ. ಹುಟ್ಟಿನ‌ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೇ ಎಲ್ಲರೂ ಸಮಾನರು ಮತ್ತು ಭಾರತೀಯರು ಎಂಬ ಭಾವನೆಯಲ್ಲಿ ನನ್ನ ನಡವಳಿಕೆಯನ್ನು ರೂಪಿಸಿಕೊಂಡು ಸಾಮಾಜಿಕ ಸಾಮರಸ್ಯಕ್ಕೆ ಕೊಡುಗೆ ನೀಡುವ ಸಂಕಲ್ಪ ಮಾಡುತ್ತೇನೆ.

6) ಮಾನವೀಯ ಮೌಲ್ಯಗಳಾದ ಪ್ರೀತಿ, ಪ್ರೇಮ, ಸಹಕಾರ, ಸಂಯಮ, ಸಭ್ಯತೆ, ಕರುಣೆ, ತ್ಯಾಗ, ಕ್ಷಮಾಗುಣ ಮುಂತಾದ ಭಾವ ನಡವಳಿಕೆಗಳನ್ನು ಹಣ ಅಧಿಕಾರ ಪ್ರಚಾರ ಪ್ರಶಸ್ತಿ ಸಿದ್ದಾಂತಗಳಿಗೆ  ಮಾರಿಕೊಳ್ಳದೆ ಈಗಿನ ಆಧುನಿಕ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸಹ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಅನುಷ್ಠಾನ ಮಾಡಿ ಮಾನವೀಯ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲು ಪ್ರಯತ್ನಿಸಿ ದೇಶದ ನೆಮ್ಮದಿಯ ಗುಣಮಟ್ಟ ಹೆಚ್ಚಿಸುವ ಮೂಲಕ ಅಭಿವೃದ್ಧಿಯ ಬಜೆಟ್ ಗೆ ನನ್ನ ಕಾಣಿಕೆ ಸಲ್ಲಿಸುತ್ತೇನೆ.

7) ಮಾದಕದ್ರವ್ಯಗಳೆಂಬ ಅನಾರೋಗ್ಯಕಾರಿ ಮತ್ತು ಅಪಾಯಕಾರಿ ವಸ್ತುಗಳಿಂದ ದೂರವಿರುತ್ತೇನೆ ಮತ್ತು ಅವುಗಳ ನಿರ್ಮೂಲನೆಗಾಗಿ‌ ನನ್ನ ಹಂತದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇನೆ. ದೇಶದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ತಡೆದು ಅಭಿವೃದ್ಧಿಯ ಲೆಕ್ಕಕ್ಕೆ ನನ್ನ ಸೇವೆ ಸೇರಿಸುತ್ತೇನೆ.

8) ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳು ಹಾಗು ಮತದಾರರಲ್ಲಿ ರಾಜಕೀಯ ಪ್ರಜ್ಞೆ ಮತ್ತು ‌ಸೇವಾ ಮನೋಭಾವದ ಜವಾಬ್ದಾರಿಯನ್ನು ತಕ್ಕಮಟ್ಟಿಗೆ ಅಳವಡಿಸಿಕೊಳ್ಳುವ ಜೊತೆಗೆ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವ ಬಗ್ಗೆ ನನಗೆ ನಿಲುಕಿದ ಅರಿವನ್ನು ಸುತ್ತಮುತ್ತಲಿನ ಜನರ ನಡುವೆ ಹಂಚಿಕೊಂಡು ಅಭಿವೃದ್ಧಿಯ ಬಜೆಟ್ ನಲ್ಲಿ ನಾನು ಪಾತ್ರ ನಿರ್ವಹಿಸಲು ಇಚ್ಚಿಸುತ್ತೇನೆ.

ಹೀಗೆ ಹಲವಾರು ರೀತಿಯ ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ ಬಜೆಟ್ ಬಗ್ಗೆ ಸಹ ಆರ್ಥಿಕ ಬಜೆಟ್ ಸಮಯದಲ್ಲಿ ಚರ್ಚಿಸುವ ಅವಶ್ಯಕತೆ ಇದೆ. ಮೂಲಭೂತವಾಗಿ ಜನರು ಪ್ರಜ್ಞಾವಂತರು ಮತ್ತು ಪ್ರಾಮಾಣಿಕರಾಗದಿದ್ದರೆ ಬಜೆಟ್ ಗಳು ಕೇವಲ ಅಂಕಿ ಸಂಖ್ಯೆಗಳ ಸರ್ಕಸ್ ಮಾತ್ರ ಆಗುತ್ತದೆ. ಅನುಷ್ಠಾನ ಗಗನ ಕುಸುಮವಾಗುತ್ತದೆ. ಈ ನಿಟ್ಟಿನಲ್ಲಿ ಮತ್ತಷ್ಟು ಚಿಂತನೆಗಳು ನಡೆಯಲಿ...

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ