ಸಾಮಾನ್ಯ ಕೀಪ್ಯಾಡ್ ಫೋನಿನಲ್ಲೂ ಯುಪಿಐ ಬಳಕೆ ಸಾಧ್ಯ !

ಸಾಮಾನ್ಯ ಕೀಪ್ಯಾಡ್ ಫೋನಿನಲ್ಲೂ ಯುಪಿಐ ಬಳಕೆ ಸಾಧ್ಯ !

ಪ್ರಪ್ರಥಮವಾಗಿ ಮೊಬೈಲ್ ಫೋನ್ ಮಾರುಕಟ್ಟೆಗೆ ಬಂದಾಗ, ಅದರಲ್ಲಿ ಸಂಖ್ಯೆಗಳನ್ನು ಒತ್ತಲು ಬಟನ್ (ಕೀಪ್ಯಾಡ್) ಇರುತ್ತಿದ್ದವು. ಕಾಲಕ್ರಮೇಣ ಮೊಬೈಲ್ ಫೋನ್ ಗಳು ಸ್ಮಾರ್ಟ್ ಫೋನ್ ಗಳಾದುವು. ಇಂಟರ್ನೆಟ್ ವ್ಯವಸ್ಥೆಯೂ ಬಂತು. ಟಚ್ ಸ್ಕ್ರೀನ್ ಬಂದವು. ವಿಶ್ವವೇ ನಮ್ಮ ಅಂಗೈಯಲ್ಲಿರುವಂತೆ ಭಾಸವಾಗತೊಡಗಿತು. ಹದಿಹರೆಯದ ಹಾಗೂ ಮಧ್ಯ ವಯಸ್ಕ (ಪ್ರಾಥಮಿಕ ಶಾಲಾ ಮಕ್ಕಳೂ ನಮಗಿಂತ ಸೊಗಸಾಗಿ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ) ಯುವಕ, ಯುವತಿಯರು ಈ ಟಚ್ ಸ್ಕ್ರೀನ್ (ಪರದೆ) ವ್ಯವಸ್ಥೆಗೆ ಹೊಂದಿಕೊಂಡರು. ಅದರೆ ಬಹಳಷ್ಟು ಹಿರಿಯ ನಾಗರಿಕರಿಗೆ ಈ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟವಾಯಿತು. ಉದಾಹರಣೆಗೆ ನನ್ನ ತಂದೆಯವರನ್ನೇ ತೆಗೆದುಕೊಂಡರೆ, ಅವರು ಈಗಲೂ ಫೋನ್ ನಿಂದ ಕರೆ ಮಾಡಲು ಬಳಸುವುದು ಸಾಮಾನ್ಯ ಫೀಚರ್ ಫೋನ್. ಅವರ ಬಳಿ ನನ್ನ ತಮ್ಮ ತೆಗೆದುಕೊಟ್ಟ ಸ್ಮಾರ್ಟ್ ಫೋನ್ ಇದೆ. ಆದರೆ ಪ್ರತೀ ಸಲ ಫೋನ್ ಮಾಡುವಾಗಲೂ ಅವರದ್ದು ಒಂದೇ ಕಂಪ್ಲೇಂಟ್ ‘ಅದರ ಸ್ಕ್ರೀನ್ ನಲ್ಲಿ ಒತ್ತುವಾಗ ಹೆಸರು ಎಲ್ಲೆಲ್ಲೋ ಓಡಿ ಹೋಗುತ್ತದೆ. ಯಾರಿಗೋ ಡಯಲ್ ಆಗುತ್ತದೆ ಎಂದು’ ಇದು ನನ್ನ ಅಪ್ಪನ ದೂರು ಮಾತ್ರವಲ್ಲ, ಬಹುತೇಕ ಹಿರಿಯ ನಾಗರಿಕರ ದೂರೂ ಇರಬಹುದು. 

ಒಂದು ಅಂದಾಜಿನ ಪ್ರಕಾರ ಈಗಲೂ ಈ ಸಾಮಾನ್ಯ ಕೀಪ್ಯಾಡ್ ಫೋನ್ ಬಳಸುವವರ ಸಂಖ್ಯೆ ೩೦-೩೫ ಕೋಟಿಗಳಷ್ಟಿರಬಹುದು ಎನ್ನುತ್ತಾರೆ. ಈ ಫೋನ್ ಗಳಲ್ಲಿ ಈಗ ಇಂಟರ್ನೆಟ್ ವ್ಯವಸ್ಥೆ ಬಂದಿದೆ. ಪುಟ್ಟ ಪರದೆಯಲ್ಲಿ ವಿಡಿಯೋ ನೋಡಬಹುದಾಗಿದೆ. ಕೆಲವು ಫೋನ್ ಗಳಲ್ಲಿ ಫೇಸ್ಬುಕ್ ಆಪ್ ನ ವ್ಯವಸ್ಥೆಯೂ ಇದೆ. ಅದರೆ ಈವರೆಗೆ ಯಾವ ಸಾಮಾನ್ಯ ಫೋನ್ (ಕೀಪ್ಯಾಡ್, ಬೇಸಿಕ್) ನಲ್ಲೂ ಏಕೀಕೃತ ಪಾವತಿ ವ್ಯವಸ್ಥೆ (UPI) ಇರಲಿಲ್ಲ. ಕೀಪ್ಯಾಡ್ ಫೋನ್ ಬಳಸುವವರ ಕಷ್ಟಗಳನ್ನು ಅರಿತ ಭಾರತೀಯ ರಿಜರ್ವ್ ಬ್ಯಾಂಕ್ (RBI) ಇಂತಹ ಗ್ರಾಹಕರಿಗೂ ಯುಪಿಐ ೧೨೩ ಪೇ ಸೇವೆ (UPI-123 Pay Service) ಬಳಕೆಗೆ ತಂದಿದೆ. ಈ ಮೊದಲು ಯುಪಿಐ ಎಂಬ ವ್ಯವಸ್ಥೆಯನ್ನು ರಾಷ್ಟ್ರೀಯ ಪಾವತಿ ನಿಗಮವು (ಎನ್ ಪಿ ಸಿ ಐ) ರೂಪಿಸಿತ್ತು. ಯು ಎಸ್ ಎಸ್ ಡಿ ಆಧಾರಿತ ಯುಪಿಐ ವ್ಯವಸ್ಥೆಯನ್ನು ಸಾಮಾನ್ಯ ಫೋನುಗಳಿಗೆ ಆ ಸಮಯದಲ್ಲೇ ಒದಗಿಸಲಾಗಿತ್ತು. ಆದರೆ ಯು ಎಸ್ ಎಸ್ ಡಿ ಮೂಲಕ ಇದನ್ನು ಬಳಕೆ ಮಾಡುವುದು ಬಹಳ ತ್ರಾಸಕರ ಎಂಬ ಕಾರಣದಿಂದ ಈ ವ್ಯವಸ್ಥೆ ಜನಪ್ರಿಯವಾಗಿರಲಿಲ್ಲ. ಈ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಕೀಪ್ಯಾಡ್ ಮೊಬೈಲ್ ಬಳಕೆದಾರರು ಬಹಳ ದೂರುಗಳನ್ನು ಸಲ್ಲಿಸಿದ್ದರು. ಈ ಕಾರಣದಿಂದ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತರಲೇ ಬೇಕಾದ ಒತ್ತಡ ನಿಗಮದ ಮೇಲೆ ಇತ್ತು. 

ಹೊಸ ಪಾವತಿಗಳ ಸೇವೆಯಲ್ಲಿ ನೀವು ಕರೆ ಮಾಡುವಿಕೆ, ಆಯ್ಕೆ ಮತ್ತು ಪಾವತಿ ಈ ಮೂರು ಹಂತಗಳಲ್ಲಿ ನಿಮ್ಮ ಹಣ ವರ್ಗಾವಣೆಯನ್ನು ಮಾಡಬಹುದಾಗಿದೆ. ಕೀಪ್ಯಾಡ್ ಮೊಬೈಲ್ ಹೊಂದಿರುವ ಗ್ರಾಹಕರು ಮೊದಲಿಗೆ ತಮ್ಮ ಬ್ಯಾಂಕ್ ಖಾತೆಯನ್ನು ನೀವು ಆ ಸಾಧನದಲ್ಲಿ ಬಳಸುತ್ತಿರುವ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬೇಕು. ಈ ಲಿಂಕ್ ಪ್ರಕ್ರಿಯೆಯನ್ನು ಮಾಡದೇ ಇದ್ದಲ್ಲಿ ನಿಮಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಖಾತೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ ಬಳಿಕ ಐವಿಆರ್ ಸಂಖ್ಯೆಗೆ (೦೮೦೪೫೧೬೩೬೬೬) ಕರೆ ಮಾಡಿ ನಿಮ್ಮದೇ ಆದ ಯುಪಿಐ ಪಾಸ್ ವರ್ಡ್ ಅನ್ನು ಸೆಟ್ ಮಾಡಿಕೊಳ್ಳಬೇಕು. ನಿಮ್ಮಲ್ಲಿ ಸಂಬಂಧಿತ ಬ್ಯಾಂಕ್ ನ ಡೆಬಿಟ್ ಕಾರ್ಡ್ ಅಗತ್ಯವಾಗಿ ಇರಬೇಕು. ಇಷ್ಟು ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ನೀವು ಹಣವನ್ನು ವರ್ಗಾಯಿಸಬಹುದಾಗಿದೆ.

ವರ್ಗಾವಣೆ ಹೇಗೆ: ಯುಪಿಐ ೧೨೩ ಪೇ ಸೇವೆಯನ್ನು ಬಳಸಲು ನೀಡಿರುವ ಐವಿಆರ್ ಸಂಖ್ಯೆ 08045163666. ಹಣ ವರ್ಗಾವಣೆ ಮಾಡ ಬಯಸುವ ಕೀಪ್ಯಾಡ್ ಮೊಬೈಲ್ ಹೊಂದಿರುವ ಗ್ರಾಹಕ ಮೊದಲಿಗೆ ತನ್ನ ಮೊಬೈಲ್ ನಿಂದ ಮೇಲಿನ ಸಂಖ್ಯೆಗೆ ಕರೆ ಮಾಡಿ ಆ ಬದಿಯ ಧ್ವನಿ ನೀಡುವ ಸಲಹೆಯಂತೆ ಮುಂದುವರಿಯಬೇಕು. 

ಧ್ವನಿಯ ಸೂಚನೆಯಂತೆ ಮೊದಲು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಬಳಿಕ ಯುಪಿಐ ವ್ಯವಸ್ಥೆಯ ಜೊತೆ ಲಿಂಕ್ ಆದ ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ದುಕೊಳ್ಳಬೇಕು. ಅತ್ತ ಕಡೆಯ ಧ್ವನಿ ನೀಡುವ ಸಲಹೆಯಂತೆ ನೀವು ಯಾರಿಗೆ ಹಣವನ್ನು ವರ್ಗಾಯಿಸಲು ಬಯಸಿರುವಿರೋ ಅವರ ಮೊಬೈಲ್ ಸಂಖ್ಯೆಯನ್ನು ಒತ್ತಬೇಕು. ಆ ಮೊಬೈಲ್ ಸಂಖ್ಯೆಯೂ ಸಹ ಯಾವುದಾದರೂ ಬ್ಯಾಂಕ್ ಖಾತೆ ಜೊತೆ ಲಿಂಕ್ ಆಗಿರುವುದು ಅವಶ್ಯಕ. ನಂತರ ನೀವು ಪಾವತಿ ಮಾಡಬೇಕಾದ ಹಣದ ಸಂಖ್ಯೆಯನ್ನು ಒತ್ತಬೇಕು. ನೀವು ಧೃಢೀಕರಣ ಸೂಚನೆ ನೀಡಿದ ಬಳಿಕ ಯುಪಿಐ ಪಿನ್ ಒತ್ತಲು ಹೇಳುತ್ತದೆ. ನೀವು ಮೊದಲೇ ಸೆಟ್ ಮಾಡಿಟ್ಟ ಪಿನ್ ಸಂಖ್ಯೆಯನ್ನು ಒತ್ತಿದರೆ, ನಿಮ್ಮ ಖಾತೆಯಿಂದ ನೀವು ಆಯ್ಕೆ ಮಾಡಿದ ಖಾತೆಗೆ ಹಣ ವರ್ಗಾವಣೆಗೊಂಡು, ನಿಮಗೆ ಹಣ ಪಾವತಿಯಾದ ಬಗ್ಗೆ ಮಾಹಿತಿ ಬರುತ್ತದೆ. 

ಇಲ್ಲಿ ನೀವು ಜಾಗ್ರತೆ ವಹಿಸಬೇಕಾದ ವಿಷಯವೆಂದರೆ ನೀವು ಪಾವತಿ ಮಾಡಲು ನಮೂದಿಸುವ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು. ಇಲ್ಲವಾದರೆ ಬೇರೆ ಖಾತೆದಾರರಿಗೆ ಹಣ ವರ್ಗಾವಣೆಗೊಳ್ಳುವ ಸಾಧ್ಯತೆ ಇರುತ್ತದೆ. ಈ ವ್ಯವಸ್ಥೆಯ ಮೂಲಕ ಗ್ಯಾಸ್ ನ ಹಣಪಾವತಿ, ಮೊಬೈಲ್ ರೀಚಾರ್ಜ್, ಫಾಸ್ಟ್ ಟ್ಯಾಗ್ ರೀಚಾರ್ಜ್ ಹಾಗೂ ಬೇರೆ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾವಣೆ ಅಥವಾ ಪಾವತಿ ಮಾಡಬಹುದು. ನಿಮ್ಮ ಬ್ಯಾಂಕ್ ನಲ್ಲಿರುವ ಹಣದ ಮೊತ್ತವನ್ನೂ (ಬ್ಯಾಲೆನ್ಸ್) ಪರಿಶೀಲಿಸಬಹುದು. 

ಈ ಯುಪಿಐ ೧೨೩ ಪೇ ಸೇವೆಯ ಮುಖಾಂತರ ಇದುವರೆಗೆ ಡಿಜಿಟಲ್ ಪಾವತಿ ವಿಧಾನದಿಂದ ಹೊರಗುಳಿದವರೂ ತಮ್ಮ ಕೀಪ್ಯಾಡ್ ಮೊಬೈಲ್ ಮೂಲಕ ಯುಪಿಐ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ರಿಜರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ತಿಳಿಸಿದ್ದಾರೆ. ಕೆಲವು ಬೇಸಿಕ್ ಮೊಬೈಲ್ ಗಳಲ್ಲಿ ಆಪ್ ಬಳಕೆ ಸಾಧ್ಯವಿದೆ. ಅಂತಹ ಮೊಬೈಲ್ ಮೂಲಕ ಮಿಸ್ ಕಾಲ್ ಕೊಡುವುದರ ಅಥವಾ ಐವಿಆರ್ ಸೇವೆಯನ್ನು ಬಳಸುವುದರ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಈ ಪಾವತಿ ವಿಧಾನ ಬಳಕೆಯಲ್ಲಿ ನಿಮಗೆ ಸಮಸ್ಯೆಗಳಾಗುತ್ತಿದ್ದಾರೆ ‘ಡಿಜಿಸಾಥಿ' (೧೪೪೩೧ ಮತ್ತು ೧೮೦೦ ೮೯೧ ೩೩೩೩) ಎಂಬ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.digisaathi.info ಇಲ್ಲಿ ಲಾಗ್ ಇನ್ ಆಗಬಹುದು.       

(ಆಧಾರ) ಸಾಂದರ್ಭಿಕ ಕೃಪೆ: ಅಂತರ್ಜಾಲ ತಾಣ