ಸಾಮಾನ್ಯ ಜನರಲ್ಲಿ ಅಸಾಮಾನ್ಯ ಚಿಂತನೆ ಮೈಗೂಡಿದರೆ…

ಸಾಮಾನ್ಯ ಜನರಲ್ಲಿ ಅಸಾಮಾನ್ಯ ಚಿಂತನೆ ಮೈಗೂಡಿದರೆ…

ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುತ್ತಿರುವಾಗ ಈ ಚಿತ್ರ ನನ್ನ ಕಣ್ಣಿಗೆ ಬಿತ್ತು. ಮೊದಲಿಗೆ ಯಾರೋ ರಸ್ತೆ ಕಾಂಕ್ರೆಟೀಕರಣದ ಕಾರ್ಮಿಕ ನೀರು ಹಾಕುತ್ತಿದ್ದಾನೆ ಎಂದು ಅನಿಸಿತು. ನಂತರ ಆ ಚಿತ್ರದ ಅಡಿಬರಹ ಓದಿದ ನಂತರ ನನ್ನ ಮನದಾಳದಲ್ಲಿ ಆ ವ್ಯಕ್ತಿಯ ಬಗ್ಗೆ ಒಂದು ಕೃತಜ್ಞತಾಭಾವ ಮೂಡಿತು.

ಈ ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಸಾಂತಪ್ಪ ಗೌಡರು. ತನ್ನ ಭಾಗದಲ್ಲಿ ಹೊಸದಾಗಿ  ನಿರ್ಮಾಣವಾದ ಕಾಂಕ್ರೀಟ್ ರಸ್ತೆಗೆ ಸ್ವಇಚ್ಛೆಯಿಂದ ನೀರು ಹಾಕುತ್ತಿದ್ದಾರೆ. ಗ್ರಾಮ ಕದಿರಡ್ಕ ಎಂದು ಬರಹದಲ್ಲಿ ತಿಳಿಸಲಾಗಿದ್ದರೂ ಎಲ್ಲಿ ಎಂದು ಸರಿಯಾಗಿ ತಿಳಿದು ಬರುತ್ತಿಲ್ಲ. ವ್ಯಕ್ತಿಯ ಬಗ್ಗೆಯೂ ಅಧಿಕ ಮಾಹಿತಿ ಇಲ್ಲ. ಆದರೆ ಅವರ ಸೇವಾ ಕೈಂಕರ್ಯ ಪ್ರಶಂಸನೀಯ. ಇಲ್ಲಿ ಕಾಂಕ್ರೀಟ್ ರಸ್ತೆ ಅಥವಾ ಸಾಂತಪ್ಪ ಗೌಡರು ನೀರು ಹಾಕುವ ವಿಚಾರದ ಪ್ರಚಾರ ಅಲ್ಲ… ಒಬ್ಬ ಅನಕ್ಷರಸ್ಥರ ಮನದಾಳದೊಳಗೆ ಸಾಮಾಜಿಕ ಕಾಳಜಿ ಅಂತರ್ಗತವಾಗಿರುವುದು‌ ವಿಶೇಷ.

ಯಾರು ಹೇಳದೆ, ಯಾರ ನಿರ್ದೇಶನ‌ ಇಲ್ಲದೆ ಕಳೆದ 20 ದಿನಗಳಿಂದ ಕನಿಷ್ಠ ಎರಡು ದಿನಕೊಮ್ಮೆ 

( ದಿನ ಹಾಕುತ್ತಾರೆ ತಪ್ಪಿದರೆ ಎರಡು ದಿನಕೊಮ್ಮೆ) ಈ ರಸ್ತೆಗೆ ನೀರು ಹಾಕುತ್ತಾರೆ. 

ಸರ್ಕಾರ ನಮಗೆ ಒಂದು ಒಳ್ಳೆಯ ರೋಡ್ ಮಾಡಿದೆ, ಅದು ಗಟ್ಟಿಯಾಗಲೆಂದು ಇದು ನನ್ನ ಸೇವೆ ಅಷ್ಟೇ. ಗಟ್ಟಿ ಯಾದರೆ ನಮಗೆ ಒಳ್ಳೆಯದು ಆ ದೃಷ್ಟಿಯಿಂದ ನಮ್ಮಿಂದ ಆಗುವಷ್ಟು, ಕೂಡಿದಷ್ಟು ಕೆಲಸ ಮಾಡುವುದು ಎಂದು ಬಹಳ ಮೆದು ಮಾತಿನಲ್ಲಿ ಹೇಳುತ್ತಾರೆ. ಸೇವೆಯನ್ನು ಒಬ್ಬ ವ್ಯಕ್ತಿ ತನ್ನ ವ್ಯಾಪ್ತಿಯೊಳಗೆ ಹೇಗೆಲ್ಲಾ ಮಾಡಬಹುದು ಅನ್ನುವುದನ್ನು ತೋರಿಸುತ್ತದೆ ಇವರ ಕಾರ್ಯ. ಸಮಾಜದಲ್ಲಿ ಇಂತಹ ಅನೇಕರು ನಮ್ಮೊಳಗೆ ಇದ್ದಾರೆ ಅಂತಹವರಿಗೊಂದು ಸದಾ ನಮ್ಮದೊಂದು ಸಲಾಮ್‌ ಇರಲಿ.

ವಿದ್ಯೆಯೇ ಮುಖ್ಯ ಅಲ್ಲ. ವಿನಯ ಮತ್ತು ಮನಸ್ಸು ಕೂಡ ಸಮಾಜದೊಳಿತಿಗೆ ಬೇಕು ಅನ್ನುವ ಸಾಕ್ಷಿ. ಸಾಮಾನ್ಯ ಜನರಲ್ಲಿ ಅಸಾಮಾನ್ಯ ಚಿಂತನೆ ಮೈಗೂಡಿದರೆ  ಪರಿಪೂರ್ಣ ಸೇವೆ ಹೊರಹೊಮ್ಮುವುದು

(ಸಂಗ್ರಹ)