ಸಾಮಿ ಎಂಬ ಕಂಪನಿ ಕೊಡುವ ವಾನ್ ಇಂಜನ್

ಸಾಮಿ ಎಂಬ ಕಂಪನಿ ಕೊಡುವ ವಾನ್ ಇಂಜನ್

ಬರಹ

4

ಸಾಮಿ ಒಬ್ಬ ಪ್ರವಾದಿಯಂತೆ ಕಾಣುತ್ತಿದ್ದ ನನಗೆ. ತಾರು ಬಳಿಯುವ, ಮರ ಕಡಿಯುವ ಯಂತ್ರಗಳನ್ನು ಮಾತನಾಡಿಸಿದ ನಂತರ ಹಸುಗಳ ಫಾರ್ಮ್‌ಗೆ ಕರೆದುಕೊಂಡು ಹೋದ. ಮತ್ತೆ ಸ್ಕ್ರಿಪ್ಟ್ ಪುನರಾವರ್ತನೆಯಾದಂತಾಯ್ತು. ಐವತ್ತು ಹಸುಗಳು, ಒಬ್ಬನೇ ಮೇಲ್ವಿಚಾರಕ ಹಾಗೂ ಪ್ರತಿದಿನ ಆ ಐವತ್ತೂ ಜಾನುವಾರುಗಳ ಹಾಲು ಕರೆವ ಕ್ರಿಯೆ. ಹಸು ಯಂತ್ರೀಕೃತ ಕಟ್ಟೆಯ ಒಳಕ್ಕೆ ಬರುತ್ತದೆ, ಯಂತ್ರದ ಬಟ್ಟಲು ಯಾಂತ್ರಿಕವಾಗಿ ಅದರ ಕೆಚ್ಚಲನ್ನು ಹಿಂಡುತ್ತದೆ, ಹಾಲು ನಿಂತು ರಕ್ತ ಬರುವುದಕ್ಕೆ ಸ್ವಲ್ಪ ಮುಂಚೆಯೇ, ಮನುಷ್ಯರಿಗೆ ಸೆನ್ಸ್ ಇರುವಂತೆ ಯಂತ್ರಕ್ಕೆ ಇರುವ ಸೆನ್ಸರ್ ಅದನ್ನು ಗ್ರಹಿಸಿ ಬಾಲ ಮುದುರಿಕೊಳ್ಳುತ್ತದೆ. ಹಸು ನಿರಾಳವಾಗಿ ಎದೆಯ ಭಾರ ಇಳಿಸಿಕೊಂಡಂತೆ ವಾಕಿಂಗ್ ಹೋಗಿ, ಮೈಭಾರವಾದ ಮತ್ತೊಂದು ಹಸುವಿಗೆ ಜಾಗ ಬಿಟ್ಟುಕೊಡುತ್ತದೆ.

ಹಿಂದೆ ಬಂದರೆ ಹಾಯದ, ಮುಂದೆ ಬಂದರೆ ಒದೆಯದ, ಹಿಂದೆ ಮುಂದೆ ಬರುವವರಿಲ್ಲದ ಆ ಫಾರ್ಮ್ ಹೌಸಿನಿಂದ ಹೊರಬಂದು ಮತ್ತೆ ನಮ್ಮ ಗಂಟೆಗೆ ನೂರ ಇಪ್ಪತ್ತು ಕಿಲೋಮೀಟರ್ ಪ್ರಯಾಣವನ್ನೂ ನಿಧಾನವಾಗಿ ಆರಂಭಿಸಿದೆವು. ಆ ಎಲೆಕ್ಟ್ರಾನಿಕ್ ಯಂತ್ರಗಳಿಂದಾಗಿ ನನ್ನಲ್ಲಿ ವಿದ್ಯುದ್‌ಸಂಚಾರವಾಗಿತ್ತು. "ಯಾಕೆ ಮೌನವಾಗಿದ್ದೀ?" ಎಂದಿದ್ದ ಸ್ಯಾಮ್. "ಒಂದರೊಳಗೊಂದಾಗಿ ಎರಡು ಪ್ರಶ್ನೆಗಳಿವೆ ನನ್ನಲ್ಲಿ" ಎಂದಿದ್ದೆ. "ಮೊದಲನೆಯದು ಗೊತ್ತಿರುವುದೇ. ಈ ಮೂರು ಯಾಂತ್ರಿಕ ದರ್ಶನ. ಎರಡನೆಯದು ಊರಿಗೆ ಹೋಗಿ ಹೇಗೆ ಇವುಗಳ ಬಗ್ಗೆ ಸ್ನೇಹಿತರನ್ನು ನಂಬಿಸುವುದು" ಎಂದೆ. ಸಾಮ್ ಸುಮ್ಮನಿದ್ದ. ಆತ ಫಿನ್ನಿಶ್ ಆದ್ದರಿಂದ ಅದನ್ನು "ನಕ್ಕು ಸುಮ್ಮನಾದ" ಎಂದುಕೊಂಡೆ.

ಹಿಂದಿರುಗಿ ಹೆಲ್ಸಿಂಕಿಗೆ ಬಂದಾಗ ನಿಜವಾದ ವಿದ್ಯುದ್‌ಸಂಚಾರ ಕಾದಿತ್ತು ನನಗೆ. ('ವಿದ್ಯುದ್‌ಸಂಚಾರ'ದಷ್ಟು ಪರಿಣಾಮಕಾರಿಯಾಗಿ ಶಾಕ್ ನೀಡಲಾರದು 'ಶಾಕ್' ಅಲ್ಲವೆ). "ವಾವ್, ನಮ್ಮ ಬಗ್ಗೆ ನಮಗೇ ತಿಳಿಯದ್ದನ್ನು ಈ ಇಂಡಿಯನ್ ತಿಳಿಸುತ್ತಿದ್ದಾನೆ ಎಂದು ಸಕ್ಕರಿ ವಯಕ್ಕು ಹಾಗೂ ಇರ್ಮೇಲಿ ಕೊಕ್ಕೊ ಆಶ್ಚರ್ಯ ಪಟ್ಟರು.

ಸಾಮಿಯ ಮನೆಗೆ ತಲುಪುವಾಗ ಸಂಜೆ ಬಿಸಿಲು. ಹಕ್ಕಿಗಳು ಅದ್ಯಾವ ಭಾಷೆಯಲ್ಲೋ ಚಿಲಿಪಿಲಿಗುಟ್ಟುತ್ತ, ಎಲ್ಲ ಭಾಷೆಯ ಕವಿಗಳು ನಮಗೆ ತಿಳಿಸಿರುವಂತೆ ತಮ್ಮ ತಮ್ಮ ರೆಸಿಡೆನ್ಸ್‌ಗೆ ಮರಳುತ್ತಿದ್ದವು. ಸಮಯ: ಹನ್ನೆರೆಡು ಮುವತ್ತು ಎ.ಎಂ! ಫಿನ್ಲೆಂಡಿನಲ್ಲಿ ವರ್ಷಕ್ಕೆ ಹತ್ತು ತಿಂಗಳು, ದಿನಕ್ಕೆ ಎರಡು ಗಂಟೆ ಸೂರ್ಯದರ್ಶನವಾದರೆ ಇನ್ನುಳಿದ ಎರಡು ತಿಂಗಳು ದಿನಕ್ಕೆ ಎರಡು ಗಂಟೆ ಕತ್ತಲು! ಅದರಲ್ಲೂ ಜೂನ್ ೨೧ರಂದು ಅವರಿಗೆ ಶಿವರಾತ್ರಿ. ರಾತ್ರಿ ಒಂದೂವರೆಗೆ ಪಶ್ಚಿಮದಲ್ಲಿ ಸೂರ್ಯ ಮುಳುಗಿ, ನಿಮ್ಮ ಕೈಬೆರಳುಗಳನ್ನು ಎಣಿಸಿ, ಕಾಲೆರಡರ ಕೊನೆಯ ಬೆರಳನ್ನು ಎಣಿಸುವಷ್ಟರಲ್ಲಿ ಪೂರ್ವದಲ್ಲಿ ಸೂರ್ಯ ಹುಟ್ಟಿಬಿಟ್ಟಿರುತ್ತಾನೆ. ಅದೊಂದು ಕಡೆ ನನಗೆ ಸ್ಪಷ್ಟವಾಗಿದ್ದೇನೆಂದರೆ ಆಕಾಶ ಅರ್ಧವೆಂದು. ಇನ್ನರ್ಧ ಅದರ ಪ್ರತಿಫಲನವೆಂದು. ಇಲ್ಲದಿದ್ದರೆ ಪಶ್ಚಿಮದಲ್ಲಿ ಹೀಗೆ ಹೋದ ಸೂರ್ಯದೇವ ಇಡೀ ಭೂಮಿಯನ್ನು ಅರ್ಧ ಗಂಟೆಯಲ್ಲಿ ಸುತ್ತುಹಾಕಿ, ಹಾಗೆ ಪೂರ್ವದಲ್ಲಿ ಬರಬೇಕೆಂದರೆ ಆತನೇನು ಅಪ್ಪನನ್ನೇ ರೌಂಡ್ ಹಾಕಿ ಜಗಸುತ್ತಿದ ಲೆಕ್ಕ ತೋರಿಸಿದ ನಮ್ಮ ಗಣಪ ಕೆಟ್ಟುಹೋದನೆ?

 

ರಾತ್ರಿ--ಅಥವ ಬೆಳಿಗ್ಗೆ--ಅಷ್ಟೊತ್ತಿನಲ್ಲಿ 'ಸಾನ' ಮಾಡಿದೆವು. ಸ್ನಾನ ಎಂದು ಮುಂಚಿನ ವಾಕ್ಯದ ಪದವನ್ನು ತಪ್ಪರ್ಥ ಮಾಡಿಕೊಳ್ಳಬೇಡಿ. ಸಾನಕ್ಕೂ ಸ್ನಾನಕ್ಕೂ ಇರುವ ವ್ಯತ್ಯಾಸವೇ ಅದನ್ನು ಮಾಡುವ ಅವರ ಮತ್ತು ನಮ್ಮ ಕ್ರಮಕ್ಕೂ ವ್ಯತ್ಯಾಸದಷ್ಟೇ.....

ಸಾಮಿಯ ಕಥೆ ಒಂದಷ್ಟು: ಆತನ ತಂದೆ ಮೈಸೂರು-ಕೊಡಗು ಮಧ್ಯದವರು. ಆತನ ತಂದೆಯ ಪೂರ್ವಜರು ಅಮೆರಿಕನ್ನರು. ಮಹಾರಾಜರ ಕಾಲದಲ್ಲಿ ಟಾಕ್ಸಿಡಡರ್ಮಿಸ್ಟ್ ಆಗಿದ್ದವರು. ಅಂದರೆ ಸತ್ತ ಅಥವ ಸಾಯಿಸಲಾದ ಪ್ರಾಣಿಗಳನ್ನು ಮಮ್ಮಿಫೈ ಮಾಡಿ ಮನೆಗಳಲ್ಲಿ ಶೃಂಗಾರ, ಶೌರ್ಯಗಳ ಸಂಕೇತಗಳಾಗಿ ತೂಗಾಕುತ್ತಿದ್ದವರು. ಇದರಿಂದ ಖುಷಿಗೊಂಡ ಮಹಾರಾಜರು ಬೇಕಾದಷ್ಟು, ಅಥವ ಬೇಡವಾದಷ್ಟು ಕಾಡನ್ನು ಸಾಮಿಯ ಡ್ಯಾಡ್‌ಗೆ ಕೊಡುಗೆಯಾಗಿ ಕೊಟ್ಟಿದ್ದರು.

ಅಂದ ಹಾಗೆ ಫಿನ್ಲೆಂಡ್‌ನ ಬುಡಕಟ್ಟು ಜನರನ್ನು 'ಸಾಮಿ'ಗಳು ಎನ್ನುತ್ತಾರೆ. ಉತ್ತರದ ಫಿನ್ಲೆಂಡನ್ನು ಸಾಮಿಗಳು ಸಾಂತ ಕ್ಲಾಸ್‌ನೊಂದಿಗೆ ಬೈಟು ಮಾಡಿಕೊಳ್ಳುತ್ತಾರೆ. ಏಕೆಂದರೆ ಅಲ್ಲಿ ಫಿನ್ನಿಶ್ ಅಥವ ಪರದೇಶೀ ಜನರಿರಲಿ (ಇದನ್ನು ಬಯ್ಗುಳ ಎಂದು ಭಾವಿಸದೆ ಬೇರೆ ದೇಶದವರು ಎಂದು ಅರ್ಥ ಮಾಡಿಕೊಳ್ಳತಕ್ಕದ್ದು) ಸರ್ಕಾರದ ರೈಲು ಸಹ ಹೋಗುವುದಿಲ್ಲ. ವಿಪರೀತ್ ಸೊಳ್ಳೆಕಾಟ ಬೇರೆ. ಅಲ್ಲಿ ವಾರ್ಷಿಕವಾಗಿ ನಡೆವ ಫಿನ್ನಿಶ್ ಸಿನೆಮ ಉತ್ಸವ ನೋಡಲು ಹೋಗುವವರು ಸೊಳ್ಳೆಪರದೆಯಲ್ಲೇ, ಬುರ್ಕ ಎಂಬ ಬಟ್ಟೆಯನ್ನೇ ಹೊಲಿದುಕೊಂಡು, ಆ ನಂತರ ಅದನ್ನು ತೊಟ್ಟುಕೊಂಡು ಅಲ್ಲಿ ಹೋಗಿ ಬರುತ್ತಾರೆ. ಅಲ್ಲಿ ಹೋದ ನಂತರ ಹಾಕಿಕೊಳ್ಳಬಹುದೆಂದರೆ ಅದು ಆಗದ ಮಾತು. ಏಕೆಂದರೆ ಅದಾಗಲೇ ಬಂದಿರಬಹುದಾದ ಮೈಮೇಲಿನ ಸಹಸ್ರ ಬೊಬ್ಬೆಗಳಿಂದಾಗಿ ಸೊಳ್ಳೆಪರದೆ ಬಟ್ಟೆ ಸೈಜ್ ಚಿಕ್ಕದಾಗಿ ಹಾಕಿಕೊಳ್ಳುವುದು ಕಷ್ಟವಾಗುತ್ತದೆ. ಹಾಕಿಕೊಂಡರೂ ನೂಲಿನ ಎಳೆಗಳ ಮೂಲಕ ಬೊಬ್ಬೆಗಳು, ಸರಳುಗಳ ಹಿಂದಿನಿಂದ ಕೈಹೊರಗೆ ಹಾಕುವ ಸೆರೆಮನೆ ವಾಸಿಗಳಂತೆ, ಹೊರಚಾಚಿ ಸೊಳ್ಳೆಗಳಿಗೆ ತಮ್ಮ ತಮ್ಮಲ್ಲೇ ಇಂತಿಷ್ಟು ನೂಲುಗಳ ನಡುವಿನ ಊತವಿರುವ ಮನುಷ್ಯ ದೇಹ ತಮ್ಮದೆಂದು ಸ್ಪಷ್ಟವಾಗಿ ಸ್ವಾಧೀನಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಸೊಳ್ಳೆ ಪರದೆಯ ಸಣ್ಣ ಸಣ್ಣ ಪದರಗಳು ಮೈಮೇಲಿನ ಬೊಬ್ಬೆಗಳಿಗೆ ಅಂಟಿಕೊಂಡು ವಿಪರೀತ ಹಿಂಸೆ ಕೊಡುತ್ತವೆ ತೊಟ್ಟವರಿಗೆ.

ಆದ್ದರಿಂದಲೇ ಸಾಂತಕ್ಲಾಸ್ ಮೈತುಂಬ ಬಟ್ಟೆ, ಮುಖದ ತುಂಬ ದಾಡಿ ಧರಿಸಿರುವುದು. ಸ್ವತಃ ಸಾಂತ ಕ್ಲಾಸ್ ಹಾಗೂ ಶರ್ಲಾಕ್ ಹೋಮ್ಸ್ ತಾವು ಕಲ್ಪಿತ ವ್ಯಕ್ತಿಗಳೆಂದು ಹೇಳಿದರೂ ಜನ ಕೇಳರು. ಭಾರತದ ರಸ್ತೆಗಳು ಮಧ್ಯದಲ್ಲಿ ಉದ್ಭವ ಮೂರ್ತಿ ಸ್ವತಃ ತಾನೇ ಬಂದು ಇದು ಉದ್ಭವವಾದುದಲ್ಲ, ಯಾರೋ ಮನುಷ್ಯರ ಕೈವಾಡವೆಂದು ಹೇಳಿದರೂ ಹೇಗೆ ಜನ ನಂಬುವುದಿಲ್ಲವೋ ಹಾಗೆ ಇದು...!

ಗೆಳೆಯ ಸಾಮಿಯ ಅಮ್ಮ ಫಿನ್ಲೆಂಡಿನವಳು. ಮುಂದೆ ತನ್ನ ಮಕ್ಕಳ ಅಪ್ಪನಾಗುವ ಮೈಸೂರಿನ ಟಾಕ್ಸಿಡರ್ಮಿಸ್ಟ್ ಮಲ್ಲನನ್ನು ದಸರ ಹಬ್ಬದಲ್ಲಿ ಭೇಟಿಮಾಡಿ, ಪ್ರೀತಿಯಲ್ಲಿ ಬಿದ್ದು, ಮದುವೆಯಲ್ಲಿ ಎದ್ದರಂತೆ. ಪ್ರೀತಿಯ ನೆಪದಿಂದ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದವರು ಒಂದಾಗಿ, ಪ್ರೀತಿಯ ಫಲಿತಾಂಶದ ನೆಪದಿಂದ ಅದೇ ಪ್ರೀತಿಯ ಬಂಧನವನ್ನು ತೊಡೆದುಹಾಕಿಕೊಂಡರು! ಮಕ್ಕಳನ್ನು ಫಿನ್ನಿಶ್ ಮಾಡಿಬಿಡಪವ ಸಲುವಾಗಿ ಅವರಮ್ಮ ಫಿನ್ಲೆಂಡಿನಲ್ಲೇ ನೆಲೆಸಿಬಿಟ್ಟರು. ಸಾಮಿ ಮತ್ತು ಆತನ ಅಣ್ಣ ಇಬ್ಬರೂ ಪ್ರಸಿದ್ದ ಸಮಕಾಲೀನ ಫಿನ್ನಿಶ್ ಕಲಾವಿದರು. "ಸಾಮಿ, ನೀನು ಫಿನ್ಲೆಂಡಿಗೇ ಜಗತ್ಪ್ರಸಿದ್ಧ ಕಲಾವಿದ" ಎಂದು ಹೊಗಳಿದೆ. ಹೊಗಳಿಕೆ ಕಡಿಮೆಯಾಯಿತು, ಅಷ್ಟು ಒಳ್ಳೆಯ ಕಲಾಬೋಧಕ ಆತ.

ಈ ಪ್ರವಾಸ ಕಥನದ ಇತರ ಭಾಗಗಳು

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ