ಸಾಮೂಹಿಕ ಹೊಣೆ ಅಗತ್ಯ

ಸಾಮೂಹಿಕ ಹೊಣೆ ಅಗತ್ಯ

ಬ್ರೆಜಿಲ್ ನ ಶರ್ಮ್ ಎಲ್ ಶೇಖ್ ನಲ್ಲಿ ಜರುಗಿದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲಿ (ಕಾಪ್೨೭) ಭಾರತದ ಪ್ರಸ್ತಾಪಕ್ಕೆ ಆರಂಭಿಕ ಹಿನ್ನಡೆ ಕಂಡುಬಂದರೂ ಅಂತಿಮವಾಗಿ ಸಮ್ಮತಿ ದೊರೆಯುವುದರೊಂದಿಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಐತಿಹಾಸಿಕ ಒಪ್ಪಂದವೊಂದು ಏರ್ಪಟ್ಟಿದೆ. ಮೂರು ದಿನಗಳ ಈ ಸಮಾವೇಶದಲ್ಲಿ ಭಾರತವು ಹವಾಮಾನ ಬದಲಾವಣೆಯಿಂದ ಹೆಚ್ಚು ಪ್ರಭಾವಿತವಾಗಿರುವ ಬಡ ರಾಷ್ಟ್ರಗಳಿಗೆ ನೆರವಾಗುವ ನಿಟ್ಟಿನಲ್ಲಿ.'ನಷ್ಟ ಮತ್ತು ಹಾನಿ' ನಿಧಿ ರಚಿಸಬೇಕೆಂಬ ಪ್ರಸ್ತಾಪವನ್ನು ಮೊದಲ ದಿನವೇ ಮುಂದಿಟ್ಟಿತ್ತು. ಹಲವಾರು ವರ್ಷಗಳಿಂದ ನಿರೀಕ್ಷಿಸಲಾಗುತ್ತಿದ್ದ ಈ ಕುರಿತ ಐತಿಹಾಸಿಕ ನಿರ್ಣಯವನ್ನು ಸಮಾವೇಶದ ಕೊನೆಯ ದಿನವಾದ ಭಾನುವಾರ (ನ.೨೦) ಅಂಗೀಕರಿಸುವುದರೊಂದಿಗೆ ಭಾರತದ ಪ್ರಸ್ತಾಪಕ್ಕೆ ಮನ್ನಣೆ ದೊರೆತಿದೆ. ಈ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನ ಬದಲಾವಣೆಯ ಅನಪೇಕ್ಷಿತ ಪರಿಣಾಮಗಳನ್ನು ಎದುರಿಸಲು  ಬಡ ದೇಶಗಳಿಗೆ ಸಹಾಯ ಮಾಡಲು ನಿಧಿ ರಚಿಸಲು ಒಪ್ಪಿಕೊಂಡಿವೆ. ಅಭಿವೃದ್ಧಿಶೀಲ ರಾಷ್ಟ್ರಗಳು ಪ್ರವಾಹ, ಬರ ಮತ್ತು ಶಾಖದ ಅಲೆಗಳಂತಹ ವಿಪತ್ತುಗಳನ್ನು ಎದುರಿಸಿದಾಗ ಈ ನಿಧಿಯಿಂದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಯಾವ ದೇಶಗಳು ನಿಧಿಯನ್ನು ಒದಗಿಸುತ್ತವೆ? ಯಾವ ದೇಶಗಳು ಎಷ್ಟು ಪ್ರಮಾಣದ ನೆರವನ್ನು ಒದಗಿಸಬೇಕು? ಯಾವ ರಾಷ್ಟ್ರಗಳು ಎಷ್ಟು ಪ್ರಮಾಣದ ಪ್ರಯೋಜನಗಳನ್ನು ಪಡೆಯಲು ಅರ್ಹವಾಗಿವೆ? ಎಂಬಿತ್ಯಾದಿ ಸಂಗತಿಗಳು ಮುಂದಿನ ದಿನಗಳಲ್ಲಿ ಚರ್ಚೆಗೆ ಬರಲಿವೆ. ಆರಂಭಿಕ ಹಂತದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು  ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ರೀತಿಯ ಘಟನೆಗಳಿಂದ ಹಣಕಾಸು ನೆರವನ್ನು ಈ ನಿಧಿಗೆ ಒದಗಿಸುವ ಸಾಧ್ಯತೆಗಳಿವೆ. ಈ ಬೆಳವಣಿಗೆಯು ಅಮೆರಿಕದಂತಹ ದೇಶಗಳಿಗೆ ಹೆಚ್ಚಿನ ಹೊರೆಯಾಗಬಹುದಾಗಿದೆ. ಹೀಗಾಗಿ, ಇಂತಹ ನಿಧಿಗಳನ್ನು ರಚಿಸುವ ಪ್ರಸ್ತಾಪಕ್ಕೆ ಈ ಹಿಂದೆ ಅಮೇರಿಕಾ ವಿರೋಧಿಸಿತ್ತು. ಆದರೀಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವರ್ಗೀಕರಣದ ಅಡಿಯಲ್ಲಿ ಬರುವ ಚೀನಾದಂತಹ ದೇಶಗಳು ದೊಡ್ಡ ಪ್ರಮಾಣದಲ್ಲಿ ಮಾಲಿನ್ಯಕ್ಕೆ ಕಾರಣವಾಗಿದ್ದು, ಉದ್ದೇಶಿತ ನಿಧಿಗೆ ಹಣಕಾಸು ಒದಗಿಸುವ ಜವಾಬ್ದಾರಿಯನ್ನು ಚೀನಾ ಕೂಡ ತೆಗೆದುಕೊಳ್ಳಬೇಕು ಎಂದು ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕ ಆಗ್ರಹಿಸಿರುವುದು ವಿಶೇಷವಾಗಿದೆ. ಈ ನಿಧಿ ಸ್ಥಾಪಿಸುವ ಪ್ರಸ್ತಾಪಕ್ಕೆ ಪಾಕಿಸ್ತಾನ ತೀವ್ರ ಸಂತಸ ವ್ಯಕ್ತಪಡಿಸಿದೆ. ವಿನಾಶಕಾರಿ ಪ್ರವಾಹದ ಹಿನ್ನಲೆಯಲ್ಲಿ ವರ್ಷದ ಆರಂಭದಲ್ಲಿ ಪಾಕಿಸ್ತಾನದ ಮೂರನೇ ಒಂದು ಭಾಗವು ಮುಳುಗಡೆಯಾಗಿತ್ತು ಎಂಬುದು ಗಮನಾರ್ಹ. ಹವಾಮಾನ ಬದಲಾವಣೆಯು ತಾಪಮಾನ ಮತ್ತು ಹವಾಮಾನ ಮಾದರಿಗಳಲ್ಲಿನ ದೀರ್ಘಾವಧಿಯ ಬದಲಾವಣೆಗಳನ್ನು ಸೂಚಿಸುತ್ತದೆ. ೧೯ನೇ ಶತಮಾನದಿಂದಲೂ ಬಹುಮುಖ್ಯವಾಗಿ ಕಲ್ಲಿದ್ದಲು, ತೈಲ ಮತ್ತು  ಅನಿಲದಂತಹ ಪಳೆಯುಳಿಕೆ ಇಂಧನಗಳನ್ನು ಸುಡುವಂತಹ ಮಾನವ  ಚಟುವಟಿಕೆಗಳು ಹವಾಮಾನ ಬದಲಾವಣೆಯ ಪ್ರಮುಖ ಕಾರಣವಾಗಿವೆ. ಇದರಿಂದಾಗಿ ತೀವ್ರವಾದ ಬರ, ಚಂಡಮಾರುತ, ಶಾಖದ ಅಲೆಗಳು, ಸಮುದ್ರ ಮಟ್ಟ ಏರಿಕೆ, ಹಿಮನದಿಗಳ ಕರಗುವಿಕೆ, ಕಾಡ್ಗಿಚ್ಚು ಮುಂತಾದ ಹವಾಮಾನ ವೈಪರಿತ್ಯಗಳು ತಲೆದೋರುತ್ತಿವೆ. ಪರಿಸರಕ್ಕೆ ಹಾನಿಯಾಗದಂತೆ ನಮ್ಮ ಕೈಗೊಳ್ಳುವ ಸಾಮೂಹಿಕ ಜವಾಬ್ದಾರಿಯನ್ನು ಸ್ವೀಕರಿಸಿ ಜಗತ್ತಿನ ಎಲ್ಲ ರಾಷ್ಟ್ರಗಳು ಸೂಕ್ತರೀತಿಯಲ್ಲಿ ಕಾರ್ಯನಿರ್ವಹಿಸಿದಲ್ಲಿ ಈ ಸಮಸ್ಯೆಯನ್ನು ಎದುರಿಸಬಹುದು. ಈ ನಿಟ್ಟಿನಲ್ಲಿ ಕಾಪ್ ೨೭ ನಲ್ಲಿ ಕೈಗೊಂಡಿರುವ ನಿರ್ಣಯ ಮಹತ್ವದ ಹೆಜ್ಜೆ ಎನ್ನಬಹುದು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೧-೧೧-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ