ಸಾಯೀ ಬಾಬಾ
ಪವಾಡ ಪುರುಷರಾದ ಶಿರಡಿಯ ಸಾಯೀ ಬಾಬಾ ಬಗ್ಗೆ ಮಕ್ಕಳಿಗಾಗಿ ಒಂದು ಪುಟ್ಟ ಪುಸ್ತಕವನ್ನು ‘ಬಾಲ ಸಾಹಿತ್ಯ ಮಾಲೆ' ಮೂಲಕ ಸಪ್ನ ಬುಕ್ ಹೌಸ್ ನವರು ಹೊರತಂದಿದ್ದಾರೆ. ಸಾಯೀ ಬಾಬಾ ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಗಿರಿಜಾ ಶಾಸ್ತ್ರಿಯವರು. ಸಾಯೀ ಬಾಬಾ ಅವರ ಜೀವನದ ಬಗ್ಗೆ ಪುಟ್ಟ ಪುಟ್ಟ ಘಟನೆಗಳನ್ನು ರೇಖಾಚಿತ್ರಗಳ ಮೂಲಕ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
ಸಾಯೀ ಬಾಬಾ ಅವರ ಪರಿಚಯದಲ್ಲಿ ಹೀಗೆ ಬರೆದಿದ್ದಾರೆ “ಮತಗಳನ್ನೂ ಮೀರಿ ಹೋದ ಶಿರಡಿ ಸಾಯೀಬಾಬಾ ಎಂಬ ಭಾರತದ ಸಂತರು, ಸರಳವಾದ ನೀತಿಗಳನ್ನೂ ಮತ್ತು ಆಧ್ಯಾತ್ಮಿಕ ನಿಯಮಗಳನ್ನೂ ಬೋಧಿಸಿದರು. ಇಂದಿನ ಸಂಕೀರ್ಣತೆಯ ಯುಗದಲ್ಲಿ ಅವರ ಸಂದೇಶಗಳು ಹೆಚ್ಚಿನ ಜನರಿಗೆ ರುಚಿಸುತ್ತವೆಯಾದರೂ, ಇತರರೂ ಅವರಲ್ಲಿ ಶರಣಾಗುತ್ತಾರೆ. ಅದಕ್ಕೆ ಮುಖ್ಯ ಕಾರಣವೆಂದರೆ, ಅವರು, ‘ಕಷ್ಟಕಾಲದಲ್ಲಿ ಭಕ್ತರನ್ನು ಕಾಪಾಡುತ್ತೇನೆ' ಎಂದು ಭಾಷೆ ಕೊಟ್ಟಿರುವುದರಿಂದಲೇ ಎನ್ನಬಹುದು.
ಅವರು ಒಂದು ಉದ್ದನೆಯ ಕಫ್ನಿ (ನಿಲುವಂಗಿ) ತೊಡುತ್ತಿದ್ದ ಸಂತರು. ತಮ್ಮ ಕೊನೆಯ ದಿನದವರೆಗೂ ಅವರು ಭಿಕ್ಷಾನ್ನಕ್ಕೆ ಹೋಗುತ್ತಿದ್ದರು. ಅವರು ಯಾವುದೇ ಮತ ಅಥವಾ ಜಾತಿಯನ್ನು ಸ್ಥಾಪಿಸಲಿಲ್ಲ. ಆಧ್ಯಾತ್ಮಿಕ ಜೀವನಕ್ರಮದ ಬಗ್ಗೆ ವಿಶಿಷ್ಟ ಲಕ್ಷಣವನ್ನೂ ಹುಟ್ಟುಹಾಕಲಿಲ್ಲ. ಕಡೆಗೆ ಯಾವ ಅಭ್ಯಾಸ ಪದ್ಧತಿಗಳನ್ನೂ ಮತ್ತು ಚಳುವಳಿಗಳನ್ನೂ ಆರಂಭಿಸಲಿಲ್ಲ.
ಇಂದು ಭಾರತದಲ್ಲಿ ಮತ್ತು ವಿಶ್ವದ ಇತರ ಭಾಗಗಳಲ್ಲಿ ಕೋಟ್ಯಾಂತರ ಭಕ್ತರನ್ನು ಶಿರಡಿ ಬಾಬಾ ಹೊಂದಿದ್ದಾರೆ. ಭಾರತದ ಮಹಾರಾಷ್ಟ್ರದಲ್ಲಿನ ಅಹಮದ್ ನಗರದ ಜಿಲ್ಲೆಯ ಒಂದು ಚಿಕ್ಕಹಳ್ಳಿಯಾದ ಶಿರಡಿಯು ಬೆತ್ಲಹಾಮ್ ಅಥವಾ ಕಾಶಿಯಷ್ಟೇ ಪ್ರಮುಖ ಯಾತ್ರಾ ಸ್ಥಳವಾಗಿದೆ.”
ಸಾಯೀಬಾಬಾ ಅವರ ಜನನ ಮತ್ತು ಬಾಲ್ಯ, ಪವಾಡಗಳು, ದೀಪೋತ್ಸವ, ವಿಭೂತಿಯ ಮಹಿಮೆ ಮೊದಲಾದ ವಿಷಯಗಳನ್ನು ಸೊಗಸಾಗಿ ಲೇಖಕಿ ವರ್ಣಿಸಿದ್ದಾರೆ. ಸುಮಾರು ೧೩೦ ಪುಟಗಳ ಈ ಪುಸ್ತಕವನ್ನು ಮಕ್ಕಳು ಓದಿದರೆ ಸಾಯೀಬಾಬಾ ಅವರ ಬಗ್ಗೆ ಬಹಳ ಮಾಹಿತಿಯನ್ನು ತಿಳಿದುಕೊಳ್ಳಬಹುದು.