ಸಾರಗ್ರಾಹಿಯ ರಸೋದ್ಗಾರಗಳು -4
ಪಂ. ಸುಧಾಕರ ಚತುರ್ವೇದಿಯವರು ದೇಹ, ಮನಸ್ಸು ಮತ್ತು ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. ೧೧೬ ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ, ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . .
-ಕ.ವೆಂ.ನಾಗರಾಜ್.
****************
ಅರ್ಪಣಾಭಾವ
ಅಗ್ನಿಹೋತ್ರ ಮಾಡುವಾಗ ಮೊದಲು ಒಂದುಸಲ 'ಅಯಂತ ಇಧ್ಮ. ' ಎಂದು ಹೇಳುತ್ತೇವೆ. ಆಮೇಲೆ ೫ ಸಲ . 'ಅಯಂತ ಇಧ್ಮ'. ಎಂದು ಹೇಳುತ್ತೇವೆ. ಅಗ್ನಿಹೋತ್ರ ಮಾಡುವ ವಿಚಾರದಲ್ಲಿ ತಿಳಿದುಕೊಳ್ಳಬೇಕಾದ್ದಿದೆ. ವಾಯುಶುದ್ಧಿ, ಜಲಶುದ್ದಿ ಇವೆಲ್ಲಾ ಇದ್ದದ್ದೇ. ಎಲ್ಲರಿಗೂ ಅರ್ಥವಾಗುತ್ತೆ. ಆಧ್ಯಾತ್ಮಿಕ ಭಾವನೆಯನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಹೋಮ, ಹವನ ಮಾಡಿದೆವು ಅಂತೀವಿ, ನಮ್ಮ ಉದ್ಧಾರವಾಗುತ್ತೋ, ಭಗವಂತನ ಉದ್ಧಾರವಾಗುತ್ತೋ ತಿಳಿದುಕೊಳ್ಳುವುದಿಲ್ಲ., ಭಗವಂತ, ನೀನು ಮಹಾನ್ ಅಗ್ನಿ, 'ಅಯಂ ಆತ್ಮಾ ತೇ ಇಧ್ಮ' - ನನ್ನ ಆತ್ಮ ಇದು ನಿನಗೆ ಸಮಿತ್ತು- ಅಂತ. ನಾನು ಸಮಿತ್ತು. ನನ್ನ ಆತ್ಮ ಇದೆಯಲ್ಲಾ, ಭಗವಂತಾ, ಅದನ್ನು ನಿನಗೆ ಸಮರ್ಪಿಸುತ್ತಿದ್ದೇನೆ, ಅಂತ. ಅರ್ಥ ಮಾಡಿಕೊಳ್ಳಿ, ಅಗ್ನಿಯಲ್ಲಿ ಬೆಳಕಿದೆ, ಸಮಿತ್ತಿನಲ್ಲಿ ಸ್ವತಃ ಬೆಳಕಿಲ್ಲ. ಅಗ್ನಿಯೊಡನೆ ಬೆರೆತಾಗ ಸಮಿತ್ತು ಉರಿದು ಬೆಳಕು ಕೊಡುತ್ತದೆ. ಹೀಗೆ, ಪರಮಾತ್ಮ ಜ್ಯೋತಿಸ್ವರೂಪ, ಸರ್ವಶಕ್ತ, ನಮ್ಮ ಆತ್ಮ ಅಲ್ಪಜ್ಞ, ಅಲ್ಪಶಕ್ತ. ಒಳ್ಳೆ ಕೆಲಸಾನೂ ಮಾಡ್ತೇವೆ, ಕೆಟ್ಟ ಕೆಲಸಾನೂ ಮಾಡ್ತೇವೆ. ಒಳ್ಳೆ ಕೆಲಸ ಮಾಡಿದಾಗ ಸ್ವಲ್ಪ ಮೇಲೇರುತ್ತೇವೆ, ಕೆಟ್ಟ ಕೆಲಸ ಮಾಡಿದಾಗ ಕೆಳಕ್ಕೆ ಬೀಳುತ್ತೇವೆ. ಈ ಏಳೋದು, ಬೀಳೋದು ನಮ್ಮ ಹಣೆಬರಹ. ಅದರ ಫಲವೇನೇ ಈ ಸುಖ-ದುಃಖ ಅನ್ನುವುದು,.ಒಳ್ಳೆ ಕೆಲಸ ಮಾಡಿದಾಗ ಸುಖ, ಕೆಟ್ಟ ಕೆಲಸ ಮಾಡಿದಾಗ ದುಃಖ. ಇದು ಇದ್ದದ್ದೇ. ಇದನ್ನು ಇಲ್ಲವೆನ್ನುವಂತಿಲ್ಲ. ಇದನ್ನು ಮೀರಿ, ಪರಮಾತ್ಮನಲ್ಲಿ ಆತ್ಮ ಸಮರ್ಪಣೆ ಮಾಡಿಕೊಂಡರೆ ಜೀವಾತ್ಮಕ್ಕೆ ಪ್ರಕಾಶ ಬರುತ್ತದೆ. ಜೀವಾತ್ಮ ಸಮಿತ್ತಿದ್ದಂತೆ, ಅದಕ್ಕೆ ಸ್ವಯಂಪ್ರಕಾಶವಿಲ್ಲ, ಪರಮಾತ್ಮನೆಂಬ ಅಗ್ನಿಯೊಂದಿಗೆ ಒಂದಾದಾಗ ಅದಕ್ಕೆ ಪ್ರಕಾಶ ಬರುತ್ತದೆ. .ಈಶ್ವರ ಸನ್ನಿಧಾನ ಅಂತ ಹೇಳ್ತೀವಲ್ಲಾ, ಏನಿದರ ಅರ್ಥ? ತ್ರಿಕರಣ ಪೂರ್ವಕವಾಗಿ ನಮ್ಮನ್ನು ಅಂದರೆ ಆತ್ಮನನ್ನು ಪರಮಾತ್ಮನೊಂದಿಗೆ ಅರ್ಪಿಸಿಕೊಂಡಾಗ ನಮಗೆ ಪರಮಾನಂದ ಸಿಕ್ಕುತ್ತೆ.
ನಾವೆಲ್ಲರೂ ದೇವರ ಮಕ್ಕಳು
ಯಾರೋ ಒಬ್ಬರನ್ನು ದೇವರ ಮಗ ಅನ್ನುವುದು ಎಷ್ಟು ಸರಿ? ಆ ರೀತಿ ಹೇಳುವವರಿಗೆ ಒಬ್ಬ ಕೇಳಿಯೇ ಬಿಟ್ಟ: 'ನಾವು ಭಗವಂತನ ಮಕ್ಕಳಲ್ಲ ಅಂತೀರಲ್ಲಾ, ಹಾಗಾದರೆ ನಾವೆಲ್ಲಾ ಏನು ಶೈತಾನನ ಮಕ್ಕಳಾ? ಪಿಶಾಚಿಗಳ ಮಕ್ಕಳಾ?' ವೇದ ಹೇಳುತ್ತೆ: 'ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ . . . .' ಈ ದಿವ್ಯವಾದ ಲೋಕ ಲೋಕಾಂತರದಲ್ಲಿ ಎಷ್ಟು ಜನ ಬದುಕಿದ್ದಾರೆ, ಜೀವಿಸಿದ್ದಾರೆ, ಅವರೆಲ್ಲಾ 'ಅಮೃತಸ್ಯ ಪುತ್ರಾಃ' - ಅವರೆಲ್ಲರೂ ಆ ಅಮರನಾದ ಪರಮಾತ್ಮನ ಮಕ್ಕಳೇ. ಯಾರೋ ಒಬ್ಬರನ್ನು ಮಾತ್ರ ದೇವರ ಮಗ ಅನ್ನುವುದು ಸರಿಯಲ್ಲ.
ಚೇತನ ಅಚೇತನ ವಸ್ತುವನ್ನು ಪೂಜಿಸಬೇಕೆ?
ಯಥಾ ಪ್ರಕಾರ ಸತ್ಸಂಗಕ್ಕೆ ಬಂದ್ರು, ಕೂತ್ಕೊಂಡ್ರು, 'ಪಂಡಿತಜಿ ಬಹಳ ಸೊಗಸಾಗಿ ಮಾತನಾಡಿದರು' ಅನ್ನೋದು. ಹೊರಗೆ ಹೋಗುವಾಗ ಕೇಳಿದ್ದನ್ನೆಲ್ಲಾ ಪಂಡಿತಜಿಗೇ ಬಿಟ್ಟು ಹೋಗೋದು. ತೆಗೆದುಕೊಂಡು ಹೋಗೋದು ಏನೂ ಇಲ್ಲ, ಮನೆಗೆ ಹೋದ ಮೇಲೆ ಅದೇ ಪ್ರಕಾರ ಮೂರ್ತಿ ಪೂಜೆ, ಅದೇ ಪ್ರಕಾರ ನಡೆದುಕೊಳ್ಳುವುದು, ಮೂರ್ತಿಪೂಜೆ ಮಾಡಲೇಬೇಕು ಅನ್ನುವ ಹಟ ಇದ್ದರೆ, ಪರಮಾತ್ಮನ ಮೂರ್ತಿ ಆಚಾರ್ಯ, ತಂದೆಗೆ ಪ್ರಜಾಪತಿ ಸ್ಥಾನ, ತಾಯಿಯೇ ಪೃಥ್ವಿ, ಅವರುಗಳನ್ನು ಪೂಜೆ ಮಾಡಿ, ಅದು ಬಿಟ್ಟು ಜೀವ ಇಲ್ಲದ ಅಚೇತನವಾದ ವಸ್ತುಗಳನ್ನು ಎದುರಿಗೆ ಇಟ್ಟುಕೊಂಡು ಅಡ್ಡ ಬೀಳುವುದೇಕೆ? ಅವಕ್ಕೆ ಗೊತ್ತಾಗುತ್ತಾ?
ಭಗವಂತನ ಭಕ್ತರ ಭಯ!
ನನಗೆ ಭಕ್ತರ ಭಯ, ಭಗವಂತನ ಭಯವಿಲ್ಲ, ಭಗವಂತನ ಭಕ್ತರಿದ್ದಾರಲ್ಲಾ, ಅವರದ್ದೇ ಯಾವಾಗಲೂ ಅಪಾಯವೇ. ಹಿಂದೆ ಒಮ್ಮೆ ಗ್ರಾಮದೇವತೆಯ ಉತ್ಸವ ಮೂರ್ತಿ ಹೊತ್ತುಕೊಂಡು ಬಂದು ನಮ್ಮ ಬಾಡಿಗೆ ಮನೆಯ ಮುಂದೆ ನಿಲ್ಲಿಸಿದರು. ಉತ್ಸವ ಮಾಡುವಾಗ ಗ್ರಾಮದೇವತೆಯ ಕಥೆ ಹೇಳುವುದಿಲ್ಲ, ಸಂಬಂಧವಿಲ್ಲದ ಸಿನೆಮಾ ಸಾಂಗ್ಸು ಹಾಕಿಕೊಂಡು ಕುಣೀತಾ ಹೋಗೋದು. ಅದೆಂಥಾ ಭಕ್ತಿ? ನಾನು ಹೇಳಿದೆ: "ತೆಗೆದುಕೊಂಡು ಹೋಗ್ರಪ್ಪಾ, ಬೇರೆ ಎಲ್ಲಾದರೂ ಕೂಡಿಸಿಕೊಳ್ಳಿ, ಯಾಕೆ ನಮ್ಮ ಪ್ರಾಣ ತಿಂತೀರಿ?" ಅವರುಗಳು, "ಅಯ್ಯಯ್ಯೋ, ಅಮ್ಮ, ತಾಯಿ, ಹೋಗು ಅಂತ ಹೇಳಿದರೆ ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ, ಶಿಕ್ಷೆ ಕೊಡ್ತಾಳೆ". ಆವಾಗ ನಾನು ಹೇಳಿದೆ: "ನೀವು ಭಕ್ತರು ಇದ್ದೀರಲ್ಲಾ, ನೀವು ಏನೂ ಮಾಡೋದಿಲ್ಲ ಅಂತ ಭರವಸೆ ಕೊಡಿ, ಆಗ ನಾನು ಈ ಮೂರ್ತಿಗೆ ನಾನು ಮಾಡುವ ರೀತಿಯಲ್ಲಿ ಪೂಜೆ ಮಾಡ್ತೀನಿ, ಏನಾಗುತ್ತೋ ನೋಡೋಣ". ಏನಾಗುತ್ತೆ? ಏನೂ ಆಗಲ್ಲ.
ವಿದ್ವಾಂಸರಲ್ಲಿ ದೇವರನ್ನು ಕಾಣೋಣ
ಈ ಪ್ರಪಂಚದಲ್ಲಿ ಯಾರು ವಿದ್ವಾಂಸರು ಇರುತ್ತಾರೋ ಅವರನ್ನೇ ದೇವರು ಅನ್ನಬಹುದು. ಆ ವಿದ್ವಾಂಸರಲ್ಲಿ ಫಟಿಂಗರೂ ಇರುತ್ತಾರೆ, ಎಲ್ಲರೂ ಒಳ್ಳೆಯವರಿರುವುದಿಲ್ಲ. ಜನರಿಗೆ ಟೋಪಿ ಹಾಕುವುದಕ್ಕೆ ಏನು ಬೇಕೋ ಅದನ್ನು ಹೇಳುವವರು ಇರುತ್ತಾರೆ. ಋಜು ಮಾರ್ಗದಲ್ಲಿ, ನೇರ ಮಾರ್ಗದಲ್ಲಿ ಯಾರು ನಡೆಯುತ್ತಾರೋ ಅಂತಹ ವಿದ್ವಾಂಸರ ಬುದ್ಧಿ ನಮಗೆ ಬರಲಿ, ವಿದ್ವಾಂಸರುಗಳು ನೇರವಾದ ಮಾರ್ಗವನ್ನು ತೋರಿಸಬೇಕು. 'ಜ್ಞಾನ ಕೊಡುವ, ಫಲ ಕೊಡುವ ವಿದ್ವಾಂಸರೇ ನಮಗೆ ಉಪದೇಶ ಕೊಡಿ' ಇದು ವೇದ ಹೇಳುವ ಮಾತು. ಆ ಪುಣ್ಯಾತ್ಮನಿಗೇ ಜ್ಞಾನ ಇಲ್ಲದೇ ಹೋದರೆ, ಅವನೇ ಅವಿದ್ಯಾವಂತನಾದರೆ ಅವನಿಂದ ನಮಗೆ ಏನು ಸಿಕ್ಕುತ್ತೆ? ಆದ್ದರಿಂದ ವಿದ್ವಾಂಸರಿಗೆ ಶರಣಾಗಬೇಕು, ಜ್ಞಾನಿಗಳಿಗೆ ಶರಣಾಗಬೇಕು, ಅವರನ್ನು ನಾವು ಪ್ರಾರ್ಥನೆ ಮಾಡಬೇಕು.
ಗಂಭೀರವಾಗಿ ಯೋಚಿಸಿ, ಆಲೋಚಿಸಿ. ವೇದದ ಮಂತ್ರ ಹೇಳುತ್ತೆ,:"ಸತ್ಕರ್ಮ ಮಾಡುವುದನ್ನು ಬಿಟ್ಟು ಬೇರೆಡೆ ಹೊರಳದಿರೋಣ, ನಾವು ಯಾವ ದಾರಿಯಲ್ಲಿ ಹೋಗಬೇಕೋ ಆ ದಾರಿಯನ್ನು ಬಿಟ್ಟು ಹೋಗದಿರೋಣ'. ಸರ್ವೈಶ್ವರ್ಯನಾದ ಪರಮಾತ್ಮ ನಮಗೆ ಬದುಕು ಕೊಟ್ಟಿದ್ದಾನೆ, ಜೊತೆಗೆ ಐಶ್ವರ್ಯವನ್ನೂ ಕೊಟ್ಟಿದ್ದಾನೆ. ಸೋಮ ಅನ್ನುವ ಪದ ಇದೆ, ಆ ಪದಕ್ಕೆ ೪೦ ಅರ್ಥ ಇದೆ. ಎಲ್ಲಾ ಬೇಡ, ೨-೩ ಅರ್ಥ ನೋಡೋಣ, ಒಂದು ಮಥನ ಮಾಡು ಅಂತ. ಹಾಲನ್ನು ಸುಮ್ಮನೆ ಇಟ್ಟರೆ ಕೆನೆ ಸಿಕ್ಕುವುದಿಲ್ಲ, ಕಾಯಿಸಿ ಹೆಪ್ಪಿಟ್ಟರೆ ಮೊಸರಾಗುತ್ತದೆ, ಮಥಿಸಿದರೆ ಬೆಣ್ಣೆ ಸಿಗುತ್ತದೆ, ಆ ಮಥನ ಶಕ್ತಿ ನಿಮ್ಮಲ್ಲಿರಬೇಕು. ಇನ್ನೊಂದು ವಿಚಾರ ಮಾಡುವ ಶಕ್ತಿ, ಆಲೋಚನೆ ಮಾಡುವ ಶಕ್ತಿ. ಗುರೂಜಿ ಎಲ್ಲಾ ಯೋಚನೆ ಮಾಡಿಬಿಟ್ಟಿದ್ದಾರೆ, ನಾವೇನು ಯೋಚನೆ ಮಾಡುವುದು ಬೇಡ, ಅವರು ಹೇಳಿದಂತೆ ನಡೆದರೆ ಸಾಕು ಎಂದು ಭಾವಿಸುವುದು ಸರಿಯಲ್ಲ. ಗುರು ಅಂದರೆ ಎರಡು ನಮೂನೆ - ಒಂದು ಸತ್ಯೋಪದೇಶ ಮಾಡುವವನು, ಇನ್ನೊಂದು ಭಾರ ಅಂತ. ಈಗ ಹೆಚ್ಚಿನ ಗುರುಗಳು ಭಾರವಾಗಿರುವವರೇ.
*****************
ಹಿಂದಿನ ಲೇಖನಕ್ಕೆ ಲಿಂಕ್:
. . ಮುಂದುವರೆಯುವುದು. .
Comments
ಉ: ಸಾರಗ್ರಾಹಿಯ ರಸೋದ್ಗಾರಗಳು -4
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -4 by venkatb83
ಉ: ಸಾರಗ್ರಾಹಿಯ ರಸೋದ್ಗಾರಗಳು -4
ಉ: ಸಾರಗ್ರಾಹಿಯ ರಸೋದ್ಗಾರಗಳು -4
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -4 by makara
ಉ: ಸಾರಗ್ರಾಹಿಯ ರಸೋದ್ಗಾರಗಳು -4
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -4 by kavinagaraj
ಉ: ಸಾರಗ್ರಾಹಿಯ ರಸೋದ್ಗಾರಗಳು -4
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -4 by makara
ಉ: ಸಾರಗ್ರಾಹಿಯ ರಸೋದ್ಗಾರಗಳು -4