ಸಾರಮತಿ

ಸಾರಮತಿ

ಪುಸ್ತಕದ ಲೇಖಕ/ಕವಿಯ ಹೆಸರು
ಸಾಯಿಗಣೇಶ್ ಎನ್ ಪಿ
ಪ್ರಕಾಶಕರು
ಶ್ರಾವಣ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೨೨

'ಸಾರಮತಿ' ಪುಸ್ತಕವು ಸಂಗೀತಕ್ಕೆ ಸಂಬಂಧಿಸಿದ ಕೃತಿ. ಇದರ ಬೆನ್ನುಡಿಯಲ್ಲಿ "ಕಲಾವಿದರಲ್ಲಿ ಶೋಧಿಸುದಕ್ಕಿರುವ ತುಡಿತದ ಕಾರಣವೇನು? ಸಂಪ್ರದಾಯ ಎನ್ನುವಂಥದ್ದು ಕೇವಲ ಅನುಕರಣೆಯಾದಾಗ ಆಗುವ ಸಮಸ್ಯೆ ಎಂಥದ್ದು? ಸೃಷ್ಟಿಶೀಲಮನಸ್ಸುಳ್ಳ, ಪ್ರತಿಭೆಯುಳ್ಳ ಕಲಾವಿದನಲ್ಲಿ ಏಕೆ ಅದು ಪ್ರಶ್ನೆಗಳನ್ನು ಎಬ್ಬಿಸುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಕಳೆದ ಶತಮಾನ ಕಂಡ ಶ್ರೇಷ್ಟ ಸಂಗೀತಗಾರರಲ್ಲಿ ಒಬ್ಬರು ಆಂಧ್ರದ ವೋಲೇಟಿ ವೆಂಕಟೇಶ್ವರಲು, ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಂಪ್ರದಾಯಕ್ಕೊಂದು ವ್ಯಕ್ತಿರೂಪವೆಂದು ಪರಿಗಣಿಸಬಹುದಾದ ಡಾ. ಶ್ರೀಪಾದ ಪಿನಾಕಪಾಣಿಯವರ ಶಿಷ್ಯ. ಇಷ್ಟಾಗಿಯೂ ವೋಲೇಟಿಯವರ ಸಂಗೀತ ತಮ್ಮ ಗುರುಗಳ ಬಾಣಿಗಿಂತ ಭಿನ್ನ ಮತ್ತು ಸ್ವತಂತ್ರ. ಒಂದು ರೈಲು ಪ್ರಯಾಣವನ್ನು ಗಮನಿಸುವುದಾದರೆ, ಅಲ್ಲಿ ಎರಡು ಬಗೆಯ ಪ್ರಯಾಣಿಕರನ್ನು ಗಮನಿಸಬಹುದು. ಬಂಡಿ ಹತ್ತಿ, ನಿಗದಿತವಾದ ಆಸನದಲ್ಲಿ ಕುಳಿತು, ಅದರಲ್ಲಿ ಒಂದು ಬಗೆಯ ಭದ್ರತೆಯನ್ನು ಕಂಡುಕೊಂಡು ತಮ್ಮ ಗಮ್ಯ ತಲುಪಿದ ಆನಂತರ ಆಸನವನ್ನು ಬಿಟ್ಟೆದ್ದು ಇಳಿದು ಹೋಗುವ ಪ್ರಯಾಣಿಕರದ್ದು ಒಂದು ಬಗೆಯಾದರೆ, ಮತ್ತೊಂದು ಬಗೆಯ ಪ್ರಯಾಣಿಕರ ಕ್ರಮವೇ ಬೇರೆ. ರೈಲು ಬಂಡಿಯನ್ನು ಹತ್ತಿ ಗಂಟೆಯಾಗಿರುವುದಿಲ್ಲ. ತಮ್ಮ ಆಸನ ಬಿಟ್ಟು ಏಳುತ್ತಾರೆ ; ಭರ್ರನೆ ಬೀಸುವ ಗಾಳಿಗೆ ಮೈಯೊಡ್ಡುವ ಸುಖಕ್ಕಾಗಿ ಬಾಗಿಲಲ್ಲಿ ನಿಲ್ಲುವ ಸಾಹಸ ಮಾಡುತ್ತಾರೆ. ಮಧ್ಯೆ ನಿಲ್ಲುವ ನಿಲ್ದಾಣಗಳಲ್ಲಿ ಇಳಿಯುವುದೋ, ಟಿಟಿಯ ಜೊತೆ ಸ್ನೇಹದ ಸಂಭಾಷಣೆ ನಡೆಸುವುದೋ, ನಡುವೆ ಏನೋ ತಿಂಡಿ-ತಿನಸುಗಳನ್ನು ಕೊಂಡು ಮತ್ತೊಬ್ಬರಿಗೆ ಕೊಡುವುದೋ! ಒಟ್ಟು ಗಮ್ಯ ತಲುಪುವಷ್ಟರಲ್ಲಿ ತಮ್ಮದೇ ಮತ್ತೊಂದು ಪ್ರಯಾಣ ನಡೆಸಿರುತ್ತಾರೆ. ವೋಲೇಟಿಯವರ ಸಂಗೀತ ಯಾತ್ರೆ ಎರಡನೇ ಬಗೆಯ ಪ್ರಯಾಣಿಕರಂಥದ್ದು. ಎಲ್ಲರಂತೆಯೇ ಅವರದ್ದು ಒಂದು ಪಥದಲ್ಲೇ ಸಾಗಿದ್ದರೂ, ಅವರ ಪ್ರಯಾಣ ಮಾತ್ರ ಸ್ವತಂತ್ರವಾದ್ದು ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ತಮ್ಮ ಗುರುಗಳ ಸಂಗೀತದ ತತ್ವವನ್ನು ಹಿಡಿದರಷ್ಟೇ, ಆದರೆ, ಅವರ ಪ್ರಯಾಣ ಸ್ವಂತದ್ದು." ಎಂದಿದ್ದಾರೆ.