ಸಾರಾ ಅಬೂಬಕ್ಕರ್ ರವರ ಬರಹದಲ್ಲಿ, ಬದುಕಿನಲ್ಲಿ...

ಸಾರಾ ಅಬೂಬಕ್ಕರ್ ರವರ ಬರಹದಲ್ಲಿ, ಬದುಕಿನಲ್ಲಿ...

ನಿನ್ನೆಗಳ ಆ ಸುಡು ಬಿಸಿಲು, ಮೊನ್ನೆಗಳ ಆ ಕರಿ ನೆರಳು, ಮುಸುಕಿನೊಳಗಿನ ಆ ನಿಟ್ಟಿಸಿರು…, ಚಂದ್ರಗಿರಿ ತೀರದಲ್ಲಿ ಕಾಣಬಹುದಾದ ನಿಯಮ -ನಿಯಮಗಳ ನಡುವೆ, ಇರುವ ಸತ್ಯದ ನಿಜ ಬದುಕಿನ ಚಹರೆಗಳು ಅನುದಿನವೂ ಮೆಲುಕು ಹಾಕುವಂತಹ ಖಾರಕಾರವಾದ ಸಾರವಿದೆ-ಸಾರಾ ಅಬೂಬಕ್ಕರ್ ರವರ ಇಡಿ ಬರಹದಲ್ಲಿ ಬದುಕಿನಲ್ಲಿ...

ಕೇರಳದ ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮವೊಂದರ ಕುಟುಂಬದಲ್ಲಿ ಮಗಳಾಗಿ ಹುಟ್ಟಿ, ಕರ್ನಾಟಕದ ಸೊಸೆಯಾಗಿ ಬಂದು ಮಂಗಳೂರಿನಲ್ಲಿ ನೆಲೆಸಿ, ಗಂಡ ಮನೆ ಮಕ್ಕಳು ಈ ಎಲ್ಲವನ್ನು ಕಟ್ಟಿಕೊಂಡು, ವಯಸ್ಸು ಮಾಗಿ, ಸುಖ ದುಃಖ ಶೋಷಣೆಯ ಅನುಭವದ ಸಾರ ಉಂಡು ನಲವತ್ತು ತುಂಬಿದ ನಂತರ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿ, ಅಂದಿನಿಂದ ಇಂದಿನವರೆಗೂ ಸುಮಾರು ನಾಲ್ಕುವರೆ ದಶಕಗಳ ಕಾಲ ನಿರಂತರ ಈ ನಾಡಿನ ಉದ್ದಗಲಕ್ಕೂ ತಮ್ಮ ಕಥೆ, ಕಾದಂಬರಿ, ಕವಿತೆ, ನಾಟಕ, ಅನುವಾದಗಳ- ಬರಹಗಳ ಮೂಲಕ ಸ್ತ್ರೀ ಶೋಷಣೆಯ ತಲ್ಲಣಗಳನ್ನು, ಅದರಲ್ಲೂ ತನ್ನ ಸಮುದಾಯದೊಳಗೆ ತಾನುಂಡ ಮುಸುಕಿನೊಳಗಿನ ನೋವು ನಲಿವುಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಗೊಳಿಸಿ ಗಟ್ಟಿ ದನಿಯ ದಿಟ್ಟ ಮಹಿಳಾ ಲೇಖಕಿಯಾಗಿ, ಚಂದ್ರಗಿರಿ ತೀರದ ಮೂಲಕ ಕರ್ನಾಟಕ ಮಾತ್ರವಲ್ಲ ದೇಶದಲ್ಲೆಡೆ  ಮನೆಮಾತಾದವರು-ಮನದ ಮಾತದವರು ಸಾರಾ ಅಬೂಬಕ್ಕರ್ ಅವರು,

ನನ್ನ ಕಾಲೇಜಿನ ದಿನಗಳಲ್ಲೇ ಅವರ ಬರಹಗಳು ನನ್ನನ್ನು, ನನ್ನಂತಹ ಅನೇಕರನ್ನು ತಬ್ಬಿದ್ದವು-ತಟ್ಟಿದ್ದವು, ಸಾರಾ ಎಂದರೆ  ಅರಬ್ಬಿಯಲ್ಲಿ ಸಂತೋಷದಾಯಕಿ, ರಾಜಕುಮಾರಿ ಎಂದು ಅರ್ಥಗಳಿವೆಯಂತೆ, ಆದರೆ, ಇವರ ಬದುಕು - ಬರಹಗಳೆಲ್ಲ  ಭವಣೆಗೊಳಗಾದ ಮಹಿಳೆಯರ ಬಗ್ಗೆಯೇ ಚಿಂತಿತವಾಗಿವೆ, ನಿಯಮ -ನಿಯಮಗಳ ನಡುವೆ ‘ಚಂದ್ರಗಿರಿ ತೀರವೆಂಬ’ ವೈಚಾರಿಕ ಕಾದಂಬರಿಯನ್ನು ತಂದಿಟ್ಟು, ‘ಅರ್ಧ ರಾತ್ರಿಯಲ್ಲಿ ಹುಟ್ಟಿದ ಕೂಸು’ ಎಂಬ ಕಥಾಸಂಕಲನ ಕೊಟ್ಟು, ‘ನಾನಿನ್ನೂ ನಿದ್ರಿಸುವೆ’ ಎಂಬ ಅನುವಾದ ಲೇಖನದ ಗುಚ್ಚ ನೀಡಿ, ಹಲವಾರು ಇನ್ನಿತರೆ ಪುಸ್ತಕಗಳ ಮೂಲಕ ಜನಪರ ಬೆಳಕಾಗಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನಾಡೋಜ ಗೌರವಕ್ಕೆ ಭಾಜನರಾಗಿ, ಎಲ್ಲ ಕಾಲದಲ್ಲೂ ಎಲ್ಲರಿಗೂ ಒಂದಲ್ಲ ಒಂದು ರೀತಿ ತಮ್ಮ ಬದುಕನ್ನು ಸಂದಾಯ ಮಾಡುತ್ತಲೇ ಬದುಕಿದ ನಾಡೋಜ ಡಾ. ಸಾರಾ ಅಬೂಬಕ್ಕರ್ ಅವರು ಸಾಹಿತ್ಯ ಲೋಕದ ನಿಜದ ಧ್ವನಿಯಾಗಿ ಒಂದು ತುಂಬು ಜೀವನವನ್ನು ನಡೆಸಿ ಸಾಹಿತ್ಯಕ್ಕೆ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟು ಇಂದು ವಯೋಸಹಜ ಕಾಯಿಲೆಯಿಂದ ಮಂಗಳೂರಿನಲ್ಲಿ ಇಹ ಬದುಕಿಗೆ ಮತ್ತು ತಮ್ಮ ಬರವಣಿಗೆಗೆ ಒಂದು ವಿದಾಯದ ಸಂಪೂರ್ಣ ವಿರಾಮ ನೀಡಿ ನಿರ್ಗಮಿಸಿದ್ದಾರೆ.

ಹೊಸ ತಲೆಮಾರಿನ, ವಾಸ್ತವಿಕ ನೆಲೆಗಟ್ಟಿನಲ್ಲಿ ಚಿಂತನೆ ಮಾಡುವ , ಜನಮುಖಿ ಚಿಂತನೆಯುಳ್ಳ ಗಟ್ಟಿ ಲೇಖಕಿಯರ ಕೊರತೆ ಎದ್ದು ಕಾಣುತ್ತಿರುವ ಈ ಹೊತ್ತಿನಲ್ಲಿ ಸಾರಾ ಅಬೂಬಕ್ಕರ್ ಅವರ ನಿರ್ಗಮನ ಸಾಹಿತ್ಯ ಲೋಕಕ್ಕೆ,ಅದರಲ್ಲೂ ಶೋಷಿತ ಮಹಿಳಾ ವರ್ಗಕ್ಕೆ ಅತಿ ದೊಡ್ಡ ನಷ್ಟವಾಗಿದೆ. ನಿಮ್ಮೆಲ್ಲ ಅ ಸೃಜನಶೀಲ  ಬರಹಗಳಿಗೆ ತಮ್ಮ ಹೋರಾಟದ ಬದುಕಿಗೆ ಗೌರವವನ್ನು ಕೊಡ ಮಾಡುತ್ತಾ, ಈ ಮೂಲಕ ಭಾವಪೂರ್ಣ ನಮನಗಳನ್ನು  ಸಮರ್ಪಿಸುತ್ತಿದ್ದೇನೆ.

-ಡಿ.ಎಂ.ಮಂಜುನಾಥಸ್ವಾಮಿ, ಚಿಕ್ಕಮಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ