ಸಾರಿಗೆ ನಿಯಮಾವಳಿ ಕಟ್ಟುನಿಟ್ಟಾಗಿ ಅನುಷ್ಟಾನಗೊಳ್ಳಬೇಕು

ಸಾರಿಗೆ ನಿಯಮಾವಳಿ ಕಟ್ಟುನಿಟ್ಟಾಗಿ ಅನುಷ್ಟಾನಗೊಳ್ಳಬೇಕು

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಸಾರ್ವಜನಿಕ ಸಾರಿಗೆ ವಾಹನ ಅಪಘಾತಗಳು ಪ್ರತೀದಿನ ಎಂಬಂತೆ ಸಂಭವಿಸುತ್ತಿದ್ದರೂ ಮೃತರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ಪರಿಹಾರ ನೀಡಿ ಕೈತೊಳೆಯುವ ಪ್ರವೃತ್ತಿ ಬೆಳೆಯುತ್ತಿದೆಯೇ ವಿನಾ ಅಪಘಾತಗಳಿಗೆ ಕಡಿವಾಣ ಹಾಕುವ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ಅಪಘಾತ ಸಂಭವಿಸಿದಾಗ ಅದಕ್ಕೆ ಕಾರಣವಾದ ಅಂಶಗಳು, ಮತ್ತವುಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸಾರಿಗೆ ಇಲಾಖೆ ಮುಂದಾಗುತ್ತಿಲ್ಲ.’

ಶನಿವಾರ (೧೯ ಮಾರ್ಚ್) ಪಾವಗಢ ತಾಲೂಕಿನ ಪಲವಳ್ಳಿಕಟ್ಟೆಯ ಬಳಿ ಸಂಭವಿಸಿದ ಭೀಕರ ಅಪಘಾತಕ್ಕೆ ಬಸ್ ನ ಚಾಲಕನೇ ಹೊಣೆಗಾರ ಎಂದು ಹೇಳಿ ಪ್ರಕರಣಕ್ಕೆ ಅಂತ್ಯ ಹಾಡುವುದು ಬಲು ಸುಲಭದ ಮಾರ್ಗ. ಬಸ್ ನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರೂ ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಮುಖ್ಯ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆದರೆ ಇಡೀ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸಾರಿಗೆ ಇಲಾಖೆ ಇನ್ನೂ ತನ್ನ ಹಳೆ ಜಮಾನದಿಂದ ಹೊರಬಾರದಿರುವುದು ಸ್ಪಷ್ಟವಾಗುತ್ತದೆ. ದಶಕಗಳ ಹಿಂದಿನಿಂದಲೂ ಜಡ್ಡು ಗಟ್ಟಿದ ವ್ಯವಸ್ಥೆಯಿಂದ ಹೊರಬರಲು ಇಲಾಖೆ ಪರದಾಡುತ್ತಿದೆ. ಕಠಿನ ನಿಯಮಾವಳಿಗಳೆಲ್ಲವೂ ಬಡಪಾಯಿಗಳ ಜೇಬಿಗೆ ಕತ್ತರಿ ಹಾಕುತ್ತಿವೆಯೇ ಹೊರತು ಬಲಾಢ್ಯರನ್ನು ಮುಟ್ಟಲೂ ಇಲಾಖೆಗೆ ಸಾಧ್ಯವಾಗುತ್ತಿಲ್ಲ.

ನಿಗದಿತ ಪ್ರಮಾಣದ ತೆರಿಗೆ ಸಂಗ್ರಹವಾಗಿಲ್ಲ ಎಂದಾದರೆ ಮಾತ್ರ ಸಾರಿಗೆ ಇಲಾಖೆ ಅಧಿಕಾರಿಗಳು ನಗರ ಪ್ರದೇಶದ ಎಲ್ಲೋ ಒಂದು ಆಯಕಟ್ಟಿನ ಸ್ಥಳದಲ್ಲಿ ನಿಂತು ಸಾರಿಗೆ ನಿಯಮಗಳನ್ನು ಮೀರಿ ಸಂಚರಿಸುವ ವಾಹನಗಳ ಚಾಲಕರು ಯಾ ಮಾಲಕರಿಂದ ದಂಡ ಸಂಗ್ರಹಕ್ಕೆ ಮುಂದಾಗುತ್ತಾರೆ. ಇದರಲ್ಲೂ ಅದೆಷ್ಟು ಹಣ ಸರಕಾರದ ಬೊಕ್ಕಸ ಸೇರುತ್ತದೆ? ಎಷ್ಟು ಸಾರಿಗೆ ಇಲಾಖೆಯ ಅಧಿಕಾರಿಗಳ ಜೇಬಿಗಿಳಿಯುತ್ತದೆ? ಎಂಬುದು ಬೇರೆ ಮಾತು. ಇಂಥ ಲೋಪಗಳಿಂದಾಗಿಯೇ ಸಾರಿಗೆ ನಿಯಮಾವಳಿಗಳು ತೀರಾ ನಿರ್ಲಕ್ಷ್ಯಕ್ಕೊಳಗಾಗಿವೆ, ಇದರಿಂದಾಗಿ ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಂತೂ ಸರಕಾರ ನೀಡುವ ಪರಿಹಾರದಲ್ಲಿ ಕಣ್ಣೀರು ಒರೆಸಿಕೊಂಡು ಸಮಾಧಾನ ಪಟ್ಟುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಪಲವಳ್ಳಿಕಟ್ಟೆಯಲ್ಲಿ ಅಪಘಾತಕ್ಕೀಡಾದ ಬಸ್ ಗೂ ಮುನ್ನ ೨ ಬಸ್ ಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದಿದ್ದುದರಿಂದ ಅವರು ನತದೃಷ್ಟ ಬಸ್ ನ ಟಾಪ್ ನಲ್ಲಿ ಕುಳಿತು ಪ್ರಯಾಣಿಸುವ ಅನಿವಾರ್ಯತೆ ಒದಗಿ ಬಂತು ಮತ್ತು ಬಸ್ ಚಾಲಕ ಮೊಬೈಲ್ ಸಂಭಾಷಣೆಯಲ್ಲಿ ನಿರತನಾಗಿದ್ದ ಎಂಬುದು ಈ ಘಟನೆಯ ಇನ್ನೊಂದು ಮಗ್ಗುಲು. ಸಾರ್ವಜನಿಕ ಸಾರಿಗೆ ವಾಹನಗಳು ಮತ್ತವುಗಳ ಚಾಲಕರು ಈ ರೀತಿ ವರ್ತಿಸಿದರೆ ಈ ವಾಹನಗಳನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳು ಮತ್ತು ಜನರನ್ನು ರಕ್ಷಿಸುವವರಾರು? ಎಂಬ ಬಗ್ಗೆಯೂ ಸಾರಿಗೆ ಇಲಾಖೆ ಉತ್ತರ ನೀಡಬೇಕಾಗಿದೆ.

ಸರಕಾರಿ ಇರಲಿ, ಖಾಸಗಿ ಬಸ್ ಇರಲಿ ಎಲ್ಲವೂ ಸಾರಿಗೆ ನಿಯಮಗಳನ್ನು ಅನುಸರಿಸಿದರೆ ಅಪಘಾತಗಳನ್ನು ತಪ್ಪಿಸಬಹುದು. ಸಾಕಷ್ಟು ಬಸ್ ಗಳಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಅಗತ್ಯ ಸಂಖ್ಯೆಯ ಬಸ್ ವ್ಯವಸ್ಥೆ ಕಲ್ಪಿಸಬೇಕು. ಯಾವುದಕ್ಕೂ ಷರಾ ಬರೆಯುವ ಮುನ್ನ ಮುನ್ನುಡಿ ಬರೆಯಬೇಕಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ತಾನೇ ರೂಪಿಸಿದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೧-೦೩-೨೦೨೨

ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ