"ಸಾರ್ವಜನಿಕ ಗಣೇಶೋತ್ಸವ"

"ಸಾರ್ವಜನಿಕ ಗಣೇಶೋತ್ಸವ"

ಕವನ

ನಡೆದಿದೆ ಗಣೇಶ ವಿಸರ್ಜನಾ ಮೆರವಣಿಗೆ,

ಪ್ರಮುಖ ಬೀದಿಗಳಗುಂಟ

ಈಗ ಆಗಿದ್ದಾನೆ ಗಣಪ

ಅಲ್ಟ್ರಾ ಮಾಡರ್ನ್ ಹೈಟೆಕ್ ಗಣಪ
.
ವಿದ್ಯತ್ ಅಲಂಕಾರ ಸಿಡಿಮದ್ದುಗಳ ಭರಾಟೆ

ಕೋಲಾಟ ಡೊಳ್ಳು ಕುಣಿತ ಅಗ್ಗದ

ಸಿನೆಮಾ ಹಾಡು ಅರಚುವ ಮೈಕಾಸುರ

ಹುಚ್ಚೆದ್ದು ಹುಚ್ಚುಚ್ಚು ಕುಣಿವ ಸುರಾಧೀನ

ಭಕ್ತ ' ಜನ ಸಮೂಹ ' ಹುಡುಕಬೇಕು

ಭಕ್ತಿಯನು ದುರ್ಬಿನು ಹಚ್ಚಿ

ಮೊದಲು ಇದ್ದ ಗಣಪ ಕೈಲಾಸದಲಿ

ಅರಾಮವಾಗಿ ತಂದೆ ತಾಯಿಯರೊಡಗೂಡಿ

ಇದ್ದ ಬೇಕಾದವರ ಮನೆಗಳಿಗಷ್ಟೆ ಸೀಮಿತವಾಗಿ

ತಂದರು ಲೋಕಮಾನ್ಯ ತಿಲಕರು ಗಣಪನನು

ಬಂಧನದಿಂದ ಹೊರಗೆ

ಬಿತ್ತಿದರು ಸ್ವಾತಂತ್ರ ಸಂಗ್ರಾಮ ಬೀಜ

ಮಾಡಿದರು ಜನ ಜಾಗೃತಿ

ಎಲ್ಲ ಬಂಧ ಕಳಚಿ ಹೊರಬಂದ ಗಣಪ ಆದ

ಸರ್ವಂತರ್ಯಾಮಿ ' ಸಾರ್ವಜನಿಕ ಗಣಪ '

ಬಂದಿತು ಸ್ವಾತಂತ್ರ

ಹೋದರು ಆಂಗ್ಲರು ತಿಲಕರೂ ಹೋದರು

ಮುಕ್ತಳಾದಳು ಭಾರತಾಂಬೆ ಪರತಂತ್ರದಿಂದ

ಮತ್ತೆ ಕೈಬಿಡಲಿಲ್ಲ ಜನ

ಸಾರ್ವಜನಿಕ ಗಣಪನನು

ಈಗಲೂ ನಡೆಯುತ್ತಿವೆ ಗಣೇಶೋತ್ಸವಗಳು

ಎಲ್ಲ ಗ್ರಾಮ ನಗರಗಳ ಬೀದಿ ಬೀದಿಗಳಲ್ಲಿ

ವೈಭವದ ಪೆಂಡಾಲು ಝಗಿಮಗಿಸುವ

ವಿದ್ಯುದಲಂಕಾರ ಗಣಹೋಮ

ಇತ್ಯಾದಿ ಹೋಮ ಹವನಗಳು

ಎಲ್ಲ ಜನ ಅಂಗಡಿ ಮುಂಗಟ್ಟು

ಸಂಘ ಸಂಸ್ಥೆಗಳಿಂದ ಚಂದಾ ವಸೂಲಿ

ಉತ್ಸವ ಕಮಿಟಿ ಸಂಘಟಿಕರಿಂದ

ವರ್ಷದಿಂದ ವರ್ಷಕ್ಕೆ ಚಂದಾಹಣ ಏರಿಕೆ

ಇದಕಾಗಿ ಬಳಕೆ ಎಲ್ಲ ತಂತ್ರ

ಧರ್ಮಭೀರುಗಳನು ಸಿರಿವಂತರನು

ಹಾಡಿ ಹೊಗಳಿ ಮೊಂಡರನು ಛೇಡಿಸಿ

ಬಗ್ಗದವರನು ಹೆದರಿಸಿ ಜನರ

ಆರ್ಥಿಕಾನುಕೂಲ ಅವರ ಮನಾಭಿಪ್ರಾಯ

ಬೇಕಿಲ್ಲ ಉತ್ಸವ ಸಂಘಟಕರಿಗೆ .

ಇಷ್ಟವಿಲ್ಲದಿದ್ದರೂ ಜನ ಕೊಡಬೇಕು

ಚಂದಾ ಹಣ ಅವರ ಯೋಗ್ಯತೆ ಮೀರಿ

ಯಾವನಾದರೂ ತಲೆ ಕೆಟ್ಟವ

ಯಾಕೆ ಕೊಡಬೇಕೆಂದು ?

ತಿರುಗಿ ಕೇಳಿದರೆ ಮರು ಪ್ರಶ್ನೆ

ಕೆಲವು ಮತಾಂಧ ಸಂಘಟಕರಿಂದ

ನೀನು ಹಿಂದೂ ಅಲ್ಲವೆ ಎಂದು ? ಆತ

ಹಿಂದೂವಾದರೂ ಅದನು ಧೃಢಿಕರಿಬೇಕು

ಸಂಘಟಕರು ಕೇಳುವ ಚಂದಾಹಣ ಕೊಟ್ಟು

ಇಲ್ಲವಾದರೆ ಗ್ಯಾರಂಟೀ ಪಟ್ಟ

ಆತನಿಗೆ ಹಿಂದೂ ವಿರೋಧಿಯೆಂದು

ಆಗಾಗ ಅನಿಸುತ್ತೆ ಈ ಹಿಂದೆ

ಆ ನಮ್ಮ ಜಾಗೃತಿಗೆ ಕಾರಣನಾದ ಗಣಪ

ಆಗಿರುವನಿಂದು ಭಯ ಹುಟ್ಟಿಸುವ ಗಣಪ

ಆಗಿದ್ದು ಅವನಲ್ಲ ಮಾಡಿದ್ದು ನಾವು

ಹರಿಕಥೆ ಪುರಾಣ ಪ್ರವಚನಗಳಿಲ್ಲ

ಶಾಸ್ತ್ರೀಯ ಸಂಗೀತ ನೃತ್ಯ ಗಾನಗಳಿಲ್ಲ

ಕನ್ನಡ ನಡು ನುಡಿ ಉದ್ದೀಪಿಸುವ

ಕಾರ್ಯಕ್ರಮಗಳಿಲ್ಲ ಆರ್ಕೆಷ್ಟ್ರಾ ಇದ್ದರೆ ಸಾಕು

ಸೇರುತ್ತಾರೆ ಜನ ಗಲ್ಲಿ ರಸ್ತೆ ಬೀದಿಗಳ ತುಂಬ

ಅದು ಎಷ್ಟೇ ಅಧ್ವಾನ ಮುಜುಗರದ

ವಾತಾವರಣವಿದ್ದರೂ

ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆಯ ವರೆಗೆ

ಆತಂಕದ ಸ್ಥಿತಿ ಎಲ್ಲರಲೂ ಎಲ್ಲಿ ಯಾವಾಗ

ಏನು ಆಗತ್ತೊ ಎಂದು ಉಸಿರು ಬಿಗಿ ಹಿಡಿದು

ದಿನಗಳೆಯಬೇಕು ಯಾರೋ ಕೆಲವು ಕಿಡಿಗೇಡಿಗಳು

ಮತಾಂಧರು ಹುಟ್ಟು ಹಾಕುವ ವಿಷಬೀಜ ಕೃತ್ಯ

ಮಾಡುತ್ತದೆ ಪರಿಸ್ಥಿತಿಯನು ಉಧ್ವಿಗ್ನ

ಬೂಟುಗಾಲುಗಳ ಓಡಾಟ ಬೀಳುವ ಲಾಠಿಯೇಟು

ಕಲ್ಲು ಬೀರುವ ಜೀವ ತೆಗೆಯುವ ಕೊಲ್ಲುವ

ಕೊಲ್ಲಿಸಿ ಕೊಳ್ಳುವ ದುರ್ದೈವಿ ಜನಗಳು

ಅವರು ಮತಾಂಧರೂ ಇರಬಹುದು

ಅಮಾಯಕರೂ ಇರಬಹುದು

ಸಂಭ್ರಮದ ಗಣೇಶೋತ್ಸವ

ಕರಾಳ ದಾಖಲೆಯಾಗಿ ಇತಿಹಾಸ ಸೇರ್ಪಡೆ

ಪೀಳಿಗೆಯಿಂದ ಪೀಳಿಗೆಗೆ ವಿಷಬೀಜ ಬಿತ್ತನೆ

ಹೀಗಾಗಿ ಗಣೇಶೋತ್ಸವಗಳೇಕೋ

ನಮಗೆ ನಮ್ಮ ದೇಶಕ್ಕೆ ಭಾರವಾಗುತ್ತಿವೆ

ಕೇಳಿಕೊಳ್ಳಬೇಕಿದೆ ನಮಗೆ ನಾವೇ ಬೇಕಿವೆಯೆ ?

ನಮಗಿಂತಹ ' ಗಣೇಶೋತ್ಸವ ಗಳಿಂದು ' !

*