ಸಾಲದ ಪ್ರಸಂಗವೂ ಗಾನ ಮಾಲೆಯೂ !
ಬೆಳಿಗ್ಗೆ ಎದ್ದೆ. ಬೇಸಿಗೆ ರಜೆಗೆ ಹೋಗಿದ್ದ ಸಂಸಾರ ಇಂದು ಸಂಜೆಗೆ ಬರುವವರಿದ್ದರು. ಹಾಗಾಗಿ ಅಲ್ಲಿಯವರೆಗೆ ಮನೆಯಲ್ಲಿ ನನ್ನ ಬಿಟ್ಟರೆ, ಕೆಲವು ಜಿರಳೆಗಳನ್ನುಳಿದು ಇನ್ಯಾರೂ ಇಲ್ಲ.
ಹಿಂದಿನ ಸಂಜೆ ಸಂಗೀತ ಕಛೇರಿಗೆ ಹೋಗಿದ್ದರ ಫಲವೋ ಏನೋ, ದಾಸ ಸಾಹಿತ್ಯದ ದಿಗ್ಗಜರೆಲ್ಲ ಮನದಲ್ಲಿ ತುಂಬಿಕೊಂಡಿದ್ದರು. ಎಲ್ಲೆಲ್ಲೂ ಸಂಗೀತವೇ ಕೇಳುತ್ತಿತ್ತು. ಮನ್ಸಲ್ಲೆಲ್ಲ ಬರೀ ವೋಕಲ್ಲೋ vocalಉ!
ಬೆಳಿಗ್ಗೇ ಬೆಳಿಗ್ಗೆ ಯಾಕೆ ಎದ್ದೆ ಅನ್ನೋ ಬದಲು ಹೇಗೆ ಎದ್ದೆ?
ಅಲಾರಂ ಗಡಿಯಾರ ಹೊಡೆದುಕೊಳ್ಳಹತ್ತಿತು ... ಅಲಾರಂ ಆಫ್ ಮಾಡುವುದು ಮರೆತಿದ್ದರಿಂದ ಅದು ತನ್ನ ಕೆಲಸ ಮಾಡಿತ್ತು "ಹೊಡಿ ನಗಾರಿ ಮೇಲೆ ಕೈಯ, ಗಡ ಗಡ, ಹೊಡಿ ನಗಾರಿ ಮೇಲೆ ಕೈಯ" ಎನ್ನುತ್ತ ಗಡಿಯಾರದ ತಲೆ ಮೇಲೆ ಹೊಡೆದು ಮಲಗಿದೆ.
ಒಮ್ಮೆ ಎಚ್ಚರವಾದರೆ ಅಷ್ಟೇ ... ಮತ್ತೆ ಮಲಗಲು ಆಗುವುದಿಲ್ಲ ...ಹಾಸಿಗೆಯಿಂದ ಎದ್ದವನಿಗೆ ಕಣ್ಣಿಗೆ ಬಿದ್ದ ಮೊದಲ ದೈವ ಹನುಮ.. ಮುಖ್ಯಪ್ರಾಣ... ಎದ್ದೆ ಅಂದ ಮೇಲೆ ಪ್ರಾಣ ಇದೆ ಅಂತ ಅರ್ಥ ... ಅದಕ್ಕೇ ಮೊದಲು ಪ್ರಾಣದೇವರ ದರ್ಶನ ಕಮ್ ವಂದನೆ... "ಮುಂಜಾನೆ ಎದ್ದು ಸಂಜೀವನೆನ್ನಿ, ಅಂಜಿಕೆ ದುರಿತ ದೂರವೆನ್ನಿ" ಎಂದು ನಮಿಸಿ, ಬಚ್ಚಲಿಗೆ ನೆಡೆದೆ....
ಸ್ನಾನಾದಿ ನಿತ್ಯಕರ್ಮ ಮುಗಿಸಿ, ಹೊರಬಂದು, ಮಹಡಿಯಿಂದ ಕೆಳಗಿಳಿದು ಇಂದಿನ ಕೆಲಸವೆಲ್ಲ ನಿರ್ವಿಘ್ನವಾಗಿ ಸಾಗಲೆಂದು ಪ್ರಾರ್ಥಿಸುತ್ತ "ಗಜವದನಾ ಬೇಡುವೆ, ಗೌರೀ ತನಯ, ತ್ರಿಜಗ ವಂದಿತನೇ ಸುಜನರ ಪೊರೆವನೇ..." ಎಂದು ಸ್ಮರಿಸಿ, ಅಡುಗೆ ಮನೆಯತ್ತ ನೆಡೆದೆ.
ಮೊದಲು ಟೀ ಮಾಡಿಕೊಳ್ಳಲು ಅಣಿಯಾದೆ. ನೀರನ್ನು ಬಿಸಿ ಮಾಡಿಕೊಂಡು, ಟೀ ಪ್ಯಾಕೆಟ್ ತೆಗೆದುಕೊಂಡು ಡಿಪ್ ಡಿಪ್ ಮಾಡುವಾಗ "ಪಾಲೊಳಗದ್ದು ನೀರೊಳಗದ್ದು ಹರಿ ನಾ ನಿನ್ನ ನಂಬಿದೆನೋ .." ಎಂದು ಹಾಡಿ ಮುಗಿಸುವಷ್ಟರಲ್ಲಿ ಟೀ ಹೊಟ್ಟೆ ಸೇರಿತ್ತು.
ಮುಂದಿನ ಸರದಿ ತಿಂಡಿ. ಏನು ಮಾಡಿಕೊಳ್ಳೋಣ? ಉಪ್ಪಿಟ್ಟು ಮಾಡೋಣ ಎನ್ನಿಸಿ ತಂಗಳು ಪೆಟ್ಟಿಗೆ ತೆರೆದೆ. ಏನೇನೋ ತರಕಾರಿ ಇತ್ತು. ನನ್ನ ನೆಚ್ಚಿನ ತರಕಾರಿ ಕಣ್ಣಿಗೆ ಬಿದ್ದೊಡನೆ ಹಾಡು ಹೊರಳಿ ಹೊರಳಿ ಬಂತು "ಅವರೇ ಕಾಯ್ ಬೇಕು, ಕಾಲದಿ ಅವರೇ ಕಾಯ್ ಬೇಕು" ... ಉಪ್ಪಿಟ್ಟು ಸಿದ್ದವಾಗತೊಡಗಿದಾಗ ...
ಅವರೇಕಾಯಿ ಉಪ್ಪಿಟ್ಟಿಗೆ ಕೊಬ್ಬರಿ ತುರಿ ಹಾಕಲೇ? ಬೇಡವೇ?
ಮೊನ್ನೆ ಡಾಕ್ಟರ್ ಬಳಿ ಹೋಗಿದ್ದಾಗ, ಅವರು ಸ್ವಲ್ಪ ಕೊಲೆಸ್ಟ್ರಾಲ್ ಜಾಸ್ತಿ ಇದೆ ಎಂದದ್ದಿದ್ದರು. ಮನ "ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ" ಎಂದಿತ್ತು
ಈ ಮುನ್ನ ಉಪ್ಪಿಟ್ಟಿಗೆ ಕೊಬ್ಬರಿ ಹಾಕಿದರೆ, ಏನೋ ಒಂದು ರೀತಿ ಮುಜುಗರ. ಚಿಪ್ಪಿನ ಮೇಲಿನ ನಾರು ಸಿಗುತ್ತದೆ ಎಂದೋ, ಚಿಪ್ಪಿನ ಚೂರು ಸಿಗುತ್ತೆ ಅಂತೆಲೋ ಏನೋ ನೆಪ ಒಡ್ಡುತ್ತಿದ್ದೆ. ಈಗ ಕಣ್ಣ ಮುಂದೆ ಆ ಜಂಜಟ್ಟಿಲ್ಲದೆ ತುರಿದ ಕೊಬ್ಬರಿ ಇದೆ .. ತಿನ್ನಲು ಆಸೆ ಇದೆ .. ಆದರೆ? "ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ, ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವೆಯೆಲ್ಲೋ ಪ್ರಾಣಿ" ಎಂದು ಯಾರೋ ಹಾಡಿದಂತಾಯಿತು ಕೊಬ್ಬರಿ !!
ಕೊನೆಗೆ ನಾಲಿಗೆ ಚಪಲವೇ ಗೆದ್ದಿತು ಎನ್ನಿ. ಮೊದಲು ತಿನ್ನೋಣ ... ವ್ಯತ್ಯಾಸವಾದರೆ ಡಾಕ್ಟರ್’ಗೆ ಕರೆ ಮಾಡಿ, ಏನೂ ಅರಿಯದವನಂತೆ "ಎನ್ನ ಬಿನ್ನಪ ಕೇಳೋ, ಧನ್ವಂತ್ರಿ ದಯ ಮಾಡೋ, ಸಣ್ಣವನು ಇವ ಕೇವಲ" ಎಂದರಾಯ್ತು !!!
ತಿಂಡಿ ತಿಂದು ಮುಗಿಸುವ ಹೊತ್ತಿಗೆ ನನ್ನ ಸ್ನೇಹಿತ ಕರೆ ಮಾಡಿದ. ಮಧ್ಯಾನ್ನ ಊಟಕ್ಕೆ ಬಂದಿತ್ತು ಆಹ್ವಾನ !! ಒಂದು ಹೊತ್ತು ಅಡುಗೆ ಮಾಡೋದು ತಪ್ಪಿತು .. "ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ" ಎಂದು ಮನದಲ್ಲೇ ಪಾಯಸ ಚಪ್ಪರಿಸಿದೆ. ಅವನ ಮನೆಯಲ್ಲಿ ಪಾಯಸ ಮಾಡಿರ್ತಾರೆ ಅಂತ ನಾನ್ಯಾಕೆ ಅಂದುಕೊಂಡೆ ಅನ್ನಬೇಡಿ.
ಪ್ರಜಾಪ್ರಭುತ್ವ ಕಣ್ರೀ ... ನನಗೇನು ಬೇಕೋ ಅಂದುಕೊಳ್ಳಬಹುದು ... ಕೇಳುವವರಿಲ್ಲ ಅಷ್ಟೇ!
ಅವನ ಮನೆಗೆ ಹೋಗುವ ದಾರಿಯಲ್ಲೇ ಸುಂದರನ ಮನೆ ಇರುವುದು. ಸುಂದರ ಯಾರು ಅಂದಿರಾ? ನನ್ನಿಂದ ಸಾಲ ತೆಗೆದುಕೊಂಡು ನನಗೆ ಇನ್ನೂ ಆಟ ಆಡಿಸುತ್ತಿರುವ ಪುಣ್ಯಾತ್ಮ "ಕೊಟ್ಟ ಸಾಲವ ಕೊಡದೆ ಭಂಡಾಟ ಮಾಡುತಾನೆ, ಎಷ್ಟು ಬೇಡಿದರೆನ್ನ ಪೋಯೆನ್ನುತಾನೆ" ಪಾಪಿ. ಹೇಗಿದ್ರೂ ಆ ಕಡೆ ಹೊರಟಿದ್ದೀನಿ, ಒಂದು ಸಾರಿ ಅವನ ಮನೆಗೆ ಹೋಗಿಯೇ ಊಟಕ್ಕೆ ಹೋಗೋಣ ಎಂದುಕೊಂಡೆ.
ಅವನೋ ಹೆಸರಿಗೆ ಸುಂದರ ... ಹೆಸರಿನಲ್ಲೇನಿದೆ ಅಂತ ಅಂದುಕೊಂಡರೂ ಅವನ ವಕ್ರ ಬುದ್ದಿಗೆ ರೋಸಿ ಬೈಯ್ಯಬೇಕೂ ಅನ್ನಿಸುತ್ತೆ ... ಯಾಕೆ ಅಂದರೆ, ಅವನು ಮನೆ ಬದಲಿಸಿರುವುದು ನನಗೆ ಹೇಳಲೇ ಇಲ್ಲ ... ಇನ್ಯಾರಿಂದಲೋ ತಿಳಿಯಿತು. ಆ ಮನೆ ಹುಡುಕಿ, ಅವನಿಂದ ದುಡ್ಡು ಕಿತ್ತುಕೊಳ್ಳಬೇಕು ಈಗ.
ಹನ್ನೊಂದಕ್ಕೆ ಗಾಡಿ ಏರಿ ಹೊರಟೆ .... ಇವನ ಸಹವಾಸ ಯಾಕೆ ಮಾಡಿದೆ ಅನ್ನಿಸಿಬಿಟ್ಟಿದೆ .... "ಉತ್ತಮರ ಸಂಗ ಎನಗಿತ್ತು ಸಲಹೋ, ಚಿತ್ತಜ ಜನಕ ಸರ್ವೋತ್ತಮ ಮುಕುಂದ" ಎಂದು ಬೇಡಿಕೊಂಡೆ ...
ಹೆಚ್ಚು ಕಮ್ಮಿ ಅವನಿರುವ ಬಡಾವಣೆಗೆ ಬಂದಾಯ್ತು. "ಗೂಡು ಸಿಕ್ಕಲಿಲ್ಲ ಗೂಡಿನ ಜಾಡು ತಿಳಿಯಲಿಲ್ಲ"... ಒಂದಷ್ಟು ಹೊತ್ತು ಅಲೆದ ಮೇಲೆ, ಯಾವುದೋ ಮನೆಯ ಹೊರಗೆ ಗಾಡಿ ನೋಡಿ, ಅವನದೇ ಎಂದು ಗುರುತಿಸಿ ಗೇಟ್ ತೆರೆಯಲು ಹೋದೆ .. ನಾಯಿಯೊಂದು ಲೊಳ್ ಲೊಳ್ ಎಂದಿತ್ತು ... ಈ ನಡುವೆ ನಾಯಿ ಬೇರೆ ಸಾಕಿದ್ದಾನೆ ... ಭಡವ ... ಇರಲಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳೋಣವೆಂದು "ಡೊಂಕು ಬಾಲದ ನಾಯಕರೇ, ನೀವೇನೂಟವ ಮಾಡಿದಿರಿ" ಎಂದೆ. ಅದಕ್ಕೆ ಖುಷಿಯಾದಂತಾಯಿತು. ಬೊಗಳುವುದು ನಿಲ್ಲಿಸಿತು.
ಆ ಕ್ಷಣದಲ್ಲೇ ಮನೆ ಬಾಗಿಲು ಜಡಿದ ಸದ್ದು ಕೇಳಿಸಿತು. ಮನೆಯಾಕೆ ಇರಬೇಕು ಎಂದುಕೊಂಡು "ಕದವ ಮುಚ್ಚಿದಳೇಕೋ ಗಯ್ಯಾಳಿ ಮೂಳಿ, ಕದವ ಮುಚ್ಚಿದಳೇಕೋ" ಎಂದುಕೊಂಡು, ಬಾಗಿಲು ಬಡಿಯುತ್ತ ಕೂಗಿದೆ... "ಬಾಗಿಲನು ತೆರೆದು, ಸೇವೆಯನು ಕೊಡೊ ಹರಿಯೇ, ಕೂಗಿದರೂ ದನಿ ಕೇಳಲಿಲ್ಲವೇ?" ....
ಸ್ವಲ್ಪ ಹೊತ್ತಾದ ಮೇಲೆ, ಮನೆಯಾಕೆ ಹೊರಬಂದು "ಅವರು ಮನೆಯಲ್ಲಿ ಇಲ್ಲ" ಎಂದು ನಾನೇನಾದರೂ ಹೇಳೋ ಮುನ್ನವೇ ಬಾಗಿಲು ಮತ್ತೆ ಜಡಿದುಕೊಂಡರು .. "ಗಿಳಿಯು ಪಂಜರದೊಳಿಲ್ಲ, ರಾಮಾ, ರಾಮ" ಎಂದು ಮನ ನುಡಿದರೂ ಹೃದಯ ಒಪ್ಪಲಿಲ್ಲ. ಒಳಗಿದ್ದುಕೊಂಡೆ, ಇಲ್ಲ ಎಂದು ಹೇಳಿಸಿದ್ದಾನೆ ಭಡವ ಅಂಬೋದು ಖರೆ.
ಇವನಿಗೆ ದುಡ್ಡು ಕೊಟ್ಟು ನಾನು "ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ .. " ಎಂದುಕೊಂಡೆ. ಇಲ್ಲ, ನಾನು ಎಂದರೇನು, ಮೋಸ ಹೋಗುವುದು ಎಂದರೇನು? ಗಾಡಿಯನ್ನೇರಿ ಹೊರಟು, ಪಕ್ಕದ ಬೀದಿಯಲ್ಲಿ ನಿಲ್ಲಿಸಿ, ಇವನ ಮನೆಗೆ ನೆಡೆದು ಬಂದೆ !!!
ಅವನ ಮನೆಯಿಂದ ಸ್ವಲ್ಪ ಆಚೆಗೆ ನಿಂತು, ಅವನ ಮನೆಯ ಕಡೆಗೇ ನೋಡುತ್ತಿದ್ದೆ ... ಆಗ "ಬಂದ ಕೃಷ್ಣ ಚೆಂದದಿಂದ ಬಂದ ನೋಡೆ, ಗೋಪ ವೃಂದದಿಂದ ..." ಗೇಟ್ ತೆರೆದು ಹೊರಗೆ ಬಂದು ಗಾಡಿ ಏರಿದವನನ್ನು ಹಿಂದಿನಿಂದ ಹಿಡಿದು "ನೀ ಕೊಡೆ, ನಾ ಬಿಡೆ, ಕೇಳಯ್ಯ ಮಾತ ಗೋಕುಲಪತಿ ಗೋವಿಂದಯ್ಯ" ಎಂದೆ.
ಅವನೋ "ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ... " ಎಂದು ನುಡಿದು ಅದನ್ನು ನನಗೆ ದಾನ ಕೊಟ್ಟೆ ಎಂದುಕೊಂಡು ಬಿಟ್ಟುಬಿಡಯ್ಯ ಅಂದ. ನಾನು "ನಿನ್ನದು ನಿನಗೆ ಬಾರಿಸಿ ಕೊಟ್ಟೇನು ತಾರೇ ದಂಡಿಗೆಯಾ" ಎಂದೆ ... ಯಾರೂ ತರಲಿಲ್ಲ, ಅದು ಬೇರೇ ವಿಷಯ ... ಆದರೆ, ಅಲ್ಲಿ ನೆರೆದಿದ್ದ ಹೆಂಗಸರು ಮಕ್ಕಳ ಮುಂದೆ ಅವನ ಮಾನ ಹೋಗುತ್ತಿದೆ ಎಂದವನಿಗೆ ಅರಿವಾಗಿ "ಪರಾಕು ಮಾಡದೆ ಪರಾಂಬರಿಸಿ ಎನ್ನ ಅಪರಾದಂಗಳ ಕ್ಷಮಿಸೋ" ಎಂದು ಜೇಬಿಗೆ ಕೈ ಹಾಕಿ, ನಾನು ಅವನಿಗೆ ಕೊಟ್ಟಿದ್ದ "ನೂರು" ರುಪಾಯಿ ಸಾಲ ವಾಪಸ್ ಕೊಟ್ಟ !!!!!
ಇಷ್ಟು ದುಡ್ಡಿಗೆ, ಇಷ್ಟು ಗಲಾಟೆಯೇ, ಬೇಕಿದ್ರೆ "ಬೈಯಿರೋ ಬೈಯಿರೋ ಮನಮುಟ್ಟಿ ಬೈಯಿರೋ, ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೋ" ... ಅದು ನಾನು ಕಷ್ಟ ಪಟ್ಟು ದುಡಿದ ದುಡ್ಡು ಕಣ್ರೀ ... ಹೇಗೆ ಬಿಡೋಕ್ಕಾಗುತ್ತೆ .. ಈಗ ಈ ರೀತಿ ನಕ್ಷತ್ರಿಕನ ಹಾಗೆ ಕಾಡಿ ತೆಗೆದುಕೊಂಡರೆ, ಇನ್ಮುಂದೆ ಅವನು ನನ್ನ ಬಳಿ ಬರೋದಿಲ್ಲ !!
ಆದರೂ, ಪಾಪ ಅವನ ಮೇಲೆ ಸಿಟ್ಟಾಗಿ, ಎಲ್ಲರ ಮುಂದೆ ಸುಮ್ಮನೆ ಮಾನ ಕಳೆದೆನೆಲ್ಲ ಎಂದು ಬೇಸರಿಸಿಕೊಂಡು . ಅಲ್ಲಾ, ಇಷ್ಟು ದಿನ ಅವನು ದುಡ್ಡು ಕೊಡಲಿಲ್ಲ ಎಂದು ಚಿಂತೆ, ಈಗ ಅವನಿಗೆ ಬೇಸರ ಮಾಡಿದೆನೆಲ್ಲ ಎಂಬ ಚಿಂತೆ "ಎಂತು ನೋಡಿದರು ಚಿಂತೆ ಈ ಒಡಲು ನಿಶ್ಚಿಂತರಾಗಿಹರ ನಾನೆಲ್ಲು ಕಾಣೆ"
ಆದರೂ, ನಾಲ್ಕು ಜನರ ಮುಂದೆ ಅವನಿಗೆ ಒಂದು ನಾಲ್ಕು ತದುಕದೆ ಬಿಟ್ಟೆನೆಲ್ಲ ಅದಕ್ಕಾದರೂ ಅವನು "ನೀನೇ ದಯಾಳು ನಿರ್ಮಲ ಚಿತ್ತ ಗೋವಿಂದ ನಿಗಮಗೋಚರ ಮುಕುಂದ" ಎಂದೆನ್ನಲೇಬೇಕೆನಗೆ ...
ಒಟ್ಟಿನಲ್ಲಿ ಒಂದು ಪ್ರಮುಖ ಕೆಲಸ ಆಯ್ತಲ್ಲ ಎಂದುಕೊಂಡು, ಊಟಕ್ಕೆ ಕರೆದ ಪುಣ್ಯಾತ್ಮನ ಮನೆ ಕಡೆ ಹೊರಟೆ ... ಬಾಗಿಲು ಬಡಿದಿತ್ತು ... ಬೆಂಗಳೂರಿನಲ್ಲಿ, ಯಾರ ಮನೆ ಬಾಗಿಲು ಸುಮ್ಮನೆ ತೆರೆದಿರುತ್ತದೆ ಹೇಳಿ?
ಬಾಗಿಲು ಬಡಿದೆ .. ಒಳಗಿನಿಂದ ಸದ್ದು "ಯಾರೆ ರಂಗನ ಯಾರೆ ಕೃಷ್ಣನ ಯಾರೆ ರಂಗನ ಕರೆಯ ಬಂದವರು ..." ಎಂದಿತು ಆ ಸ್ನೇಹಿತನ ದನಿ ...
ಈ ಭೂಪತಿ ಯಾರಿಂದ ಸಾಲ ತೆಗೆದುಕೊಂಡಿದ್ದನೋ ಏನೋ, ಆ ಮನೆಯಾಕೆ "ಪೋಗಾದಿರೆಲೋ ರಂಗ, ಬಾಗಿಲಿಂದಾಚೆ ಪೋಗಾದಿರೆಲೋ ರಂಗ, ಭಾಗವತರು ಬಂದು ಎತ್ತಿಕೊಂಡೊಯ್ವರೋ" ಎನ್ನೋದೇ?
ನಾನು ಹೊರಗಿನಿಂದಲೇ "ಊಟಕ್ಕೆ ಬಂದೇವು ನಾವು, ನಿಮ್ಮ ಆಟಪಾಟವ ಬಿಟ್ಟು " ಎನ್ನುವಷ್ಟರಲ್ಲಿ ಬಾಗಿಲು ತೆರೆಯಿತು ... ಅದೇನೋ ನಾನು ಪಾಸ್-ವರ್ಡ್ ನುಡಿದಂತೆ ...
ಬಿದ್ದ ಹಲ್ಲಿನ ಬಾಯಬಿಟ್ಟುಕೊಂಡು, ಊರಗಲ ಬಾಯಿ ತೆರೆದು ’ಬಾರೋ’ ಎಂದು ಸ್ವಾಗತಿಸಿದ ಸ್ನೇಹಿತನ ಕಂಡು "ಎಂಥಾ ಚೆಲುವಗೆ ಮಗಳನು ಕೊಟ್ಟನೋ ಗಿರಿರಾಜನು ನೋಡಮ್ಮಮ್ಮ" ಎಂದುಕೊಂಡೆ ..
ಆದರೆ ನುಡಿಯಲಿಲ್ಲ...
ಮನೆಯೊಳಗೆ ಕಾಲಿಟ್ಟಂತೆ, ಸ್ನೇಹಿತನ ಮಗುವನು ಕಂಡೆ "ಅಂಬೆಗಾಲಿಕ್ಕುತಲಿ ಬಂದ ಗೋವಿಂದ" .. ಮಕ್ಕಳಿರುವ ಮನೆಯೇ ಚೆಂದ ಅಲ್ಲವೇ ? "ಭೂಷಣಕೆ ಭೂಷಣ ಇದು ಭೂಷಣ. ಶೇಷಗಿರಿವಾಸ ಶ್ರೀ ವರವೇಂಕಟೇಶ"
ನನ್ನ ಕಂಡ ಮಗುವಿನ ಮನ ನುಡಿದಿತ್ತು "ಆನೆ ಬಂದಿತಮ್ಮ, ಮರಿಯಾನೆ ಬಂದಿತಮ್ಮ,ತೊಲಗಿರೆ ತೊಲಗಿರೆ ಪ್ರಬ್ರಹ್ಮ" ... ಪ್ರಕೃತಿ ಸಹಜ ... ನನ್ನ ಕಂಡೊಡನೆ ಮಗು ಒಮ್ಮೆಗೆ ಅಳಲು ಹತ್ತಿತು ... ಆಗ "ಲಾಲಿಸಿದಳು ಮಗನ, ಯಶೋದೆ, ಲಾಲಿಸಿದಳು ಮಗನ"
ಸ್ವಲ್ಪ ಹೊತ್ತು ಅದೂ ಇದೂ ಮಾತಾನಾಡೋ ಹೊತ್ತಿಗೆ, ಮಗುವಿಗೂ ನಾನು ಅಡ್ಜಸ್ಟ್ ಆಗಿದ್ದೆ ... ನನ್ನ ಹೆಗಲ ಮೇಲೆ ಮಗುವನ್ನು ಹೊತ್ತಿದ್ದೆ ... ಮಗುವಿಗೆ ನುಡಿದ ಸ್ನೇಹಿತ "ಕುಣಿದಾಡೊ ಕೃಷ್ಣ ಕುಣಿದಾಡೋ, ಫಣಿಯ ಮೆಟ್ಟಿ, ಬಾಲವ ಪಿಡಿದು" ಎಂದು
ಊಟ ಮುಗಿಸಿ ಮನೆ ಕಡೆ ತೆರೆಳಿದೆ ....
ಮಗ - ಹೆಂಡತಿ ಕತ್ತಲಾಗುವುದರೊಳಗೆ ಮನೆ ಸೇರಿದ್ದರು ... "ಸಂಸಾರವೆಂಬಂಥ ಭಾಗ್ಯವಿರಲಿ, ಕಂಸಾರಿ ನೆನೆವೆಂಬ ಸೌಭಾಗ್ಯವಿರಲಿ"
ಊಟವಾದ ಮಲಗಲು ಹೊರಡುವ ಹೊತ್ತಿಗೆ ಕರೆಂಟ್ ಹೋಗಬೇಕೇ?
ಮಗರಾಯನಿಗೆ ಕುಡಿಯಲು ನೀರು ಬೇಕಿತ್ತು. ಕತ್ತಲಲ್ಲಿ ನಾನು ಹೋಗೋಲ್ಲ ನೀವೇ ಹೋಗಿ ಅಂದಳು ನನ್ನ ಧರ್ಮಪತ್ನಿ. ನಾನೆಂದೆ "ಯಾತರ ಭಯ ಶ್ರೀನಾಥನ ಪರಮ ಪ್ರೀತಿ ಪಡೆದವಗೆ .." ಎಂದು. ಅದಕ್ಕವಳು "ಅದೇನು ಅಷ್ಟು ಧೈರ್ಯ ಬಂದುಬಿಟ್ಟಿದೆ ಇವತ್ತು? ನಾನಿಲ್ಲದೆ ಇದ್ದಾಗ ಎಲ್ಲ ಜಿರಳೆಗಳ ದೋಸ್ತಿ ಮಾಡಿಕೊಂಡ ಹಾಗಿದೆ?" ಅಂದಳು !!
ನಾನೆಂದೆ "ನನ್ನ ಬಗ್ಗೆ ಅಲ್ವೇ ಹೇಳಿದ್ದು, ಹೋಗ್ಲಿ ಬಿಡು, ಈಗ ಬಂದೆ ... ". ಹೋಗಲಿ ಎಂದುಕೊಂಡು ಹೋದೆ... ನನ್ನ ಮಗನ ಜೊತೆ "ಹನುಮ ನಮ್ಮ ತಾಯಿ ತಂದೆ, ಭೀಮ ನಮ್ಮ ಬಂಧು ಬಳಗ" ಎಂದು ಹಾಡಿಕೊಂಡು !!
Comments
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by Jayanth Ramachar
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by manju787
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by bhalle
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by Harish Athreya
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by srimiyar
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by gopaljsr
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by partha1059
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by hamsanandi
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by nagarathnavina…
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by ksmanjunatha
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by ksraghavendranavada
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by raghumuliya
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by MADVESH K.S
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !
In reply to ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ ! by Chikku123
ಉ: ಸಾಲದ ಪ್ರಸಂಗವೂ ಗಾನ ಮಾಲೆಯೂ !