ಸಾಲವಿಲ್ಲದ ಮನೆಯ ಸಾಸುವೆ!

ಸಾಲವಿಲ್ಲದ ಮನೆಯ ಸಾಸುವೆ!

       ಚಲೋ ಮಲ್ಲೇಶ್ವರ ಸೀರಿಯಲ್ಲು ಓದುತ್ತಿರುವವರಿಗೆ ಅಂಡಾಂಡ ಬಂಡ ಜ್ಯೋತಿಷಿಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ನಾನೀಗ ಹೇಳ ಹೊರಟಿರುವುದು, ಧರಣಿ ಮಂಡಲ ಮಧ್ಯದೊಳಗೆ, ಕರ್ಣಾಟ ದೇಶದೊಳಿದ್ದ ಭಂಡ-ಗುಂಡನ ಕಥೆಯನ್ನು. ಪುರಾತನ ಸಮಸ್ಯೆಯನ್ನು ಈ ಭಂಡ-ಗುಂಡ ಸ್ವಾಮಿಗಳು ಬಗೆಹರಿಸಿದ ಪರಿಯ ನಾನ್ವಿಂತು ಪೇಳ್ವೆನು, ಕೇಳಿ ಆನಂದಿಸುವಂತಾಗಿರೈ ಸಂಪದಿಗರೇ! ಈ ಕತೆಯನ್ನು ಈ ಮೊದಲು ನೀವು ಬೇರೆಯಲ್ಲಿಯಾದರೂ ಓದಿರಬಹುದು ಅಥವಾ ಕೇಳಿರಬಹುದು; ಇರಲಿ ಇನ್ನು ಮೂಲ ಕಥೆಗೆ ಬರೋಣ, ಅದು ಹೀಗಿದೆ:

     ಗುಂಡ ಸಂಸಾರದಲ್ಲಿ ಬೇಸತ್ತು, ಸಂನ್ಯಾಸ ಸ್ವೀಕರಿಸಿದ, ಸ್ವಲ್ಪ ಕಾಲ ಹಿಮಾಲಯದಲ್ಲಿದ್ದು ಅಲ್ಲಿ ಹಲವು ಸಿದ್ಧಿಗಳನ್ನು ಪಡೆದು (ನಿಜಕ್ಕೂ ಪಡೆದನೋ, ಇಲ್ಲಾ ಹಾಗೆಂದುಕೊಂಡನೊ, ಬಲ್ಲವರಾರು?) ತನ್ನ ಹುಟ್ಟೂರಿಗೆ ಹಿಂತಿರುಗಿದ. ಗುಂಡ ಈಗ ದೊಡ್ಡ ಸನ್ಯಾಸಿಯಾಗಿರುವುದನ್ನು ತಿಳಿದು ಅವನಿಂದ ಆಶೀರ್ವಾದ ಪಡೆಯಲು ತಂಡೋಪ-ತಂಡವಾಗಿ ಜನ ಬರಲಾರಂಭಿಸಿದರು. ಆ ಗುಂಪಿನಲ್ಲಿ ತನ್ನ ಶಿಶುವನ್ನು ಕಳೆದುಕೊಂಡ ಓರ್ವ ಮಹಿಳೆಯೂ ಇದ್ದಳು. ಅವಳು ಈ ಗುಂಡ ಸನ್ಯಾಸಿಯ ಬಳಿಗೆ ಬಂದು ತನ್ನ ಮಗನನ್ನು ಬದುಕಿಸಿಕೊಡೆಂದು ಭಿನ್ನವಿಸಿಕೊಂಡಳು. ಆಗ ನಮ್ಮ ಈ ಮಾರ್ಡನ್ ಗುರುವಿಗೆ, ಕಿಸಾ ಗೌತಮಿಯ ಕಥೆ ನೆನಪಾಯಿತು, ತಾನೂ ಭಗವಾನ್ ಬುದ್ಧನಂತೆ ಸಾವಿಲ್ಲದ ಮನೆಯಿಂದ ಸಾಸಿವೆ ತಾರೆಂದು ಹೇಳಿ ಈ ಸಮಸ್ಯೆಯಿಂದ ಪಾರಾಗಬಹುದೆಂದು ಆಲೋಚಿಸಿದ. ಆದರೆ ಈಗೆಲ್ಲಾ "ಒಟ್ಟು ಕುಟುಂಬ"ಗಳ  ಬದಲಿಗೆ ಕೇವಲ ಒಂಟಿ ಕುಟುಂಬಗಳೇ, ಹಾಗಾಗಿ ಸಾವಿಲ್ಲದ ಮನೆಗಳು ಬಹಳೇ ಸಿಗುತ್ತವೆ. ಇದು ಆಧುನಿಕ ಯುಗ, ಹಾಗಾಗಿ ಅವನಿಗೊಂದು ಉಪಾಯ ಹೊಳೆಯಿತು. ಅದರಂಥೆ, ಆ ಹೆಂಗಸಿಗೆ "ಸಾಲವಿಲ್ಲದ ಮನೆಯಿಂದ ಸಾಸಿವೆ" ತೆಗೆದುಕೊಂಡು ಬಂದರೆ ಅವಳ ಮಗುವನ್ನು ಬದುಕಿಸಿ ಕೊಡುವುದಾಗಿ ತಿಳಿಸಿದ. ಆ ಹೆಂಗಸು ಇದು ಬಹಳ ಸುಲಭವೆಂದುಕೊಂಡು ಅಲ್ಲಿಂದ ಹೊರಟಳು, ಆದರೆ ಅವಳ ನಿರೀಕ್ಷೆ ಸುಳ್ಳಾಗಲು ಬಹಳ ಸಮಯ ಹಿಡಿಯಲಿಲ್ಲ. ಅವಳು ಮನೆಯೊಂದರ ಕಾಲಿಂಗ್ ಬೆಲ್ ಒತ್ತಿ ತನಗೆ ಬೇಕಾಗಿರುವ ಸಾಸಿವೆಯ ಬಗ್ಗೆ ಕೇಳಿದಳು.ಆಗ ಆ ಮನೆಯ ಒಡತಿ ಹೇಳಿದಳು, "ಅಯ್ಯೋ, ಈ ಮನೆ ಕಟ್ಟಿಸುವ ಸಲುವಾಗಿ ತುಂಬಾನೆ ಸಾಲ ಮಾಡಿಕೊಂಡಿದ್ದೇವೆ, ಆದನ್ನ ಇನ್ನೂ ತೀರಿಸಬೇಕಾಗಿದೆ." ಆಗ ಆ ಹೆ೦ಗಸು ಎರಡನೆಯ ಮನೆಯ ಬಾಗಿಲು ತಟ್ಟಿದಳು, ಆ ಮನೆಯವರು ಹೇಳಿದರು,  "ಮೊನ್ನೆ ನಮ್ಮ ಸಂಬಂಧಿಕರಿಂದ ಕೈಸಾಲ ಪಡೆದು ಸೈಟ್ ಕೊಂಡುಕೊಂಡ್ವಿ, ಅದನ್ನೇ ಇನ್ನೂ ತೀರಿಸಬೇಕಾಗಿದೆ". ನಿರಾಶಳಾದ ಹೆಣ್ಣುಮಗಳು ಮೂರನೆಯ ಮನೆಯ ಹತ್ತಿರ ಹೋಗಿ ಕೇಳಿದಳು. ಅವರು ತಮ್ಮ ಮಗನ ವಿದ್ಯಾಭ್ಯಾಸಕ್ಕೆ ಸ್ನೇಹಿತರಿಂದ ಸಾಲ ಪಡೆದದ್ದಾಗಿ ತಿಳಿಸಿದರು. ಅಲ್ಲಿಯೂ ಅವಳಿಗೆ ಸಾಸಿವೆ ಸಿಗಲಿಲ್ಲ. ಇದು ಬೇಡವೆಂದು ಇನ್ನೂ ಹಲವರ ಬಳಿ ಹೋದಳು, ಒಬ್ಬರು ತಮ್ಮ ಕಂಪನಿಯ ಅಭಿವೃದ್ಧಿಗಾಗಿ ಬ್ಯಾಂಕಿನಿಂದ ಸಾಲ ಪಡೆದಿರುವುದಾಗಿ ತಿಳಿಸಿದರೆ, ಇನ್ನೂ ಕೆಲವರು ಕಂತಿನ ಸಾಲದಲ್ಲಿ ಮನೆಗೆ ವಸ್ತುಗಳನ್ನೋ ಇಲ್ಲಾ ವಾಹನ ಮೊದಲಾದವುಗಳನ್ನು ಖರೀದಿಸಿದ್ದಾಗಿ ತಿಳಿಸಿದರು. ಹಾಗಾಗಿ ಆ ಬಡ ಹೆಂಗಸಿಗೆ ಎಲ್ಲಿಯೂ "ಸಾಲವಿಲ್ಲದ ಮನೆಯ ಸಾಸಿವೆ" ದೊರಕದೆ, ತನ್ನ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ. ಗುಂಡ ಸ್ವಾಮಿಗಳು  ತನ್ನ ಮಗುವನ್ನು ಬದುಕಿಸಿಕೊಡುವುದಾಗಿ ಹೇಳಿದರೂ ಕೂಡ ತನಗೆ  ಸಾಲವಿಲ್ಲದ ಮನೆಯಿಂದ ಸಿಗದ ಸಾಸಿವೆಗಾಗಿ ತನ್ನ ವಿಧಿಯನ್ನು ಹಳಿದುಕೊಳ್ಳುತ್ತಾ ಆ ಹೆಂಗಸು ಅಲ್ಲಿಂದ ಹೊರಟುಹೋದಳು. ಸಧ್ಯಕ್ಕೆ ನಮ್ಮ ಸ್ವಾಮಿಗಳು ತಮಗೊದಗಿದ ಪರೀಕ್ಷೆಯಲ್ಲಿ ಪಾಸಾಗಿದ್ದರು, ತಮ್ಮ ಆಧುನಿಕ ಚಿಂತನೆಯ ಫಲದಿಂದ!!!
 

Comments