ಸಾಲ ಮೇಳ

ಸಾಲ ಮೇಳ

ಬರಹ

ಸಾಲ ಮೇಳ ಈಗ. ಅಮೇರಿಕೆಯಲ್ಲಿ. ಓಹೋ, ಏನು ನಮ್ಮ ಮಾಜಿ ಕೇಂದ್ರ ಹಣಕಾಸು ಸಚಿವರನ್ನು ಅನುಕರಿಸುತ್ತಿದ್ದಾರೋ ಹೊಸ ಅಧ್ಯಕ್ಷ ಒಬಾಮ ಅಂತ ಅಚ್ಚರಿ ಪಡಬೇಡಿ. ಇದು ಬೇರೆಯೇ ರೀತಿಯ ಸಾಲ ಮೇಳ. ಠಾಕು ಠೀಕಾಗಿ ಸೂಟು ಬೂಟು, ಗರಿಗರಿ ರೇಷ್ಮೆ ಟೈ ಕಟ್ಟಿಕೊಂಡು ಖಾಸಗಿ ವಿಮಾನದಲ್ಲಿ ಹಾರಿಬಂದ ಮಹಾನುಭಾವರ ಸಾಲ ಮೇಳ. ಇತ್ತೀಚೆಗೆ ಪದವಿ ಬಿಟ್ಟ ಬುಷ್ ರವರಿಂದ ಒಬಮಾರಿಗೆ ದಕ್ಕಿದ್ದು ೨ ಯುದ್ಧಗಳು ( ಇರಾಕ್, ಆಫ್ಘಾನಿಸ್ತಾನ ), ಮತ್ತು ಬಿಗಡಾಯಿಸಿದ ಹಣಕಾಸು ಪರಿಸ್ಥಿತಿ. ಬ್ಯಾಂಕುಗಳು, ಇನ್ಸೂರೆನ್ಸ್ ಕಂಪೆನಿಗಳು ಸೋತವು, ಕಾರು ಉತ್ಪಾದಿಸುವ ಕಂಪೆನಿಗಳು ಹತಾಶವಾದವು. ಎಲ್ಲಕ್ಕೂ ಮಿಗಿಲಾಗಿ ಬದುಕಿಡೀ ಕಷ್ಟಪಟ್ಟು ಮುಪ್ಪಿಗಾಗಿ ಜೋಪಾನವಾಗಿ ತೆಗೆದಿಟ್ಟ ಜನರ ಹಣ ಮಾಯವಾದವು. ಮಳಿಗೆಗಳಲ್ಲಿ ಹಿಂದಿನ ರೀತಿಯ ವ್ಯಾಪಾರವಿಲ್ಲ. ಡಿಸ್ಕೌಂಟ್ ಅಪ್ಪೋ, ಡಿಸ್ಕೌಂಟ್ ನ ವಾತಾವರಣ. ಜನ ಜಾಗೃತರಾಗಿ ಅಳಿದುಳಿದ ಪುಡಿಗಾಸುಗಳನ್ನು ಉಳಿಸತೊಡಗಿದರು. ಧೃತಿಗೆಡದ ಒಬಾಮ ಹೇಳಿದ್ದು, ಇದು ತಾತ್ಕಾಲಿಕ, ಇಂಥ ಸನ್ನಿವೇಶಗಳು ಹಿಂದೆಯೂ ಬಂದಿದ್ದವು, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಅಂತ. ಜನರ ಪ್ರಶ್ನೆ ಏನೆಂದರೆ ಹಣ ಮಾಯವಾಗಿದ್ದಾದರೂ ಎಲ್ಲಿಗೆ? ಉತ್ತರ ಬಹಳ ಸಿಂಪಲ್. ಕಂಪೆನಿಗಳು ಹಣವನ್ನು ತಮಗೆ ತೋಚಿದ್ದಲ್ಲಿ ಹೂಡಿ ಕೈ ಸುಟ್ಟು ಕೊಂಡಿದ್ದು. ಶೇರುದಾರರ ಹಣವನ್ನು ಅವರ ಅರಿವಿಲ್ಲದೆ ಬೇಕಾದ ಕಡೆಗಳಲ್ಲಿ ಹೂಡಿ ನಷ್ಟ ಅನುಭವಿಸಿದ್ದು. ಸರಿ, ಯಾರನ್ನೂ ಶಿಲುಬೆಗೇರಿಸಿ ಫಲವಿಲ್ಲ, ಎಂದು ನೂರಾರು ಕಂಪೆನಿಗಳನ್ನು ಸರಕಾರವೇ ಹಣ ವಿತರಣೆ ಮಾಡಿ ಉಳಿಸಲು ತೀರ್ಮಾನಿಸಿತು.( ಹೇಗೂ ವಿಶ್ವದ ಅನೇಕ ರಾಷ್ಟ್ರಗಳಿಗೆ ಜನರನ್ನು ಕೊಲ್ಲುವ ಯಂತ್ರಗಳನ್ನು ಮಾರಿದ ಹಣವಿದೆಯಲ್ಲ). ಹೀಗೆ ಡಾಲರ್ಗಳ ವಾಸನೆಯ ಜಾಡು ಹಿಡಿದು ದೊಡ್ಡ ದೊಡ್ಡ ಕಾರ್ಪೋರೇಶನ್ ಗಳ CEO ಗಳು ತಮ್ಮ ತಮ್ಮ ಖಾಸಗಿ ವಿಮಾನಗಳಲ್ಲಿ ಲಗ್ಗೆಯಿಟ್ಟರು ಅಮೆರಿಕೆಯ ರಾಜಧಾನಿಗೆ. ಕೊಡುವ ಕೈ ಯಾವಾಗಲೂ ಮೇಲೆಯೇ. ಸಾಲಕ್ಕಾಗಿ ಬಂದವನು ಸೂಟು ಹಾಕಿದರೇನು, ರೇಶಿಮೆ ಟೈ ಬಿಗಿದು ಕೊಂಡಿದ್ದರೇನು. ಒಂದಿಷ್ಟು ಕುಹಕ, ತಮಾಷೆ ಆಡಿಯೇ ಹಣ ಬಿಡುಗಡೆ ಮಾಡಿದ್ದು. ಸಾಲ ಕೇಳಲು ಇಷ್ಟು ಪೊಗರಿನಿಂದ ಅದೂ ಖಾಸಗಿ ವಿಮಾನಗಳಲ್ಲಿ ಬಂದಿರಾ ಅಂತ ಕೆಲವು congress men ( ಅಲ್ಲಿಯ ಶಾಸನ ಸಭೆಯ ಸದಸ್ಯರು) ಲೇವಡಿ ಮಾಡಿ ಹಣ ಕೊಟ್ಟು ಕಳಿಸಿದರು. ಈ ರೀತಿ ಹಣ ಪಡೆದ ಒಂದು ಇನ್ಸೂರೆನ್ಸ್ ಕಂಪೆನಿ ಮಾಡಿದ್ದು ಏನು ಗೊತ್ತಾ? ಹಣ ಪಡೆದು ತಮ್ಮ ಕಂಪೆನಿಯನ್ನು ತಪ್ಪು ತೀರ್ಮಾನಗಳಿಂದ ದುರ್ಗತಿಗಿಳಿಸಿದ executives ಗಳಿಗೆ ಬೋನಸ್ ನೀಡಿದ್ದು. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ. ಸುದ್ದಿ ಕೇಳಿದ ಒಬಾಮ ಕೆಂಡಾಮಂಡಲ.
ಇನ್ನು ನಮ್ಮ ಮೆಮೊರಿ ಯನ್ನು ಸ್ವಲ್ಪ ರೀವೈಂಡ್ ಮಾಡೋಣ.
೮೦ ರ ದಶಕದಲ್ಲಿ ಮೇಲೆ ಪ್ರಾರಂಭದಲ್ಲಿ ಹೇಳಿದ ಹಾಗೆ ಸಾಲ ಮೇಳ. ಆಗಿನ ಸಹಾಯಕ ಹಣಕಾಸು ಸಚಿವರೊಬ್ಬರು ಎಲ್ಲೆಲ್ಲೂ ಶಾಮಿಯಾನ ಹಾಕಿ ಸಾಲ ವಿತರಿಸಲು ತೊಡಗಿದರು. ಕೆಲಸವಿಲ್ಲದವರು ಸಾಲ ಪಡೆದು ಎಲ್ಲಾದರೂ ಗೂಡಂಗಡಿ ತೆರೆದು ಬದುಕಿಕೊಳ್ಳಲಿ ಎಂದು. ಆಗಿದ್ದು ಬೇರೆಯೇ. ಗೂಡಂಗಡಿ ತೆರೆಯುವ ಬದಲು ಹಣ ಪಡೆದ ಅನೇಕರು ಹೆಂಡದಂಗಡಿಯ ಯಾತ್ರೆ ಬೆಳೆಸಿದರು. ಸರಕಾರದ ಹಣ ಆಲ್ವಾ, ಹಿಂತಿರುಗಿಸಬೇಕಿಲ್ಲ. ಇದ ನೋಡಿ ಅವರ ಅರ್ಧಾಂಗಿನಿಯರು ಉಪಕಾರ ಮಾಡಲು ಹೊರಟ ಮಂತ್ರಿ ಮಹೋದಯರಿಗೆ ಹಿಡಿ ಹಿಡಿ ಶಾಪ ಹಾಕಿದರು. ವಿರೋಧ ಪಕ್ಷಗಳು ಕೇಕೆ ಹಾಕಿ ನಕ್ಕವು. ಹೀಗೆ ತೆರಿಗೆದಾರರ ಹಣವನ್ನು ಪೋಲು ಮಾಡುವವರ ಮೇಲೆ ಯಾವ ಕಾನೂನುಗಳೂ ಲಭ್ಯವಿಲ್ಲ. ಜನ ಸಾಮಾನ್ಯ ವಿದ್ಯುಚ್ಛಕ್ತಿಯ ಬಿಲ್ಲನ್ನು ಕಟ್ಟಲು ಒಂದು ದಿನ ತಡ ಮಾಡಿದರೂ ನಿರ್ದಾಕ್ಷಿಣ್ಯ ವಾಗಿ ಸರಬರಾಜು ನಿಲ್ಲಿಸಿ ಕತ್ತಲಿನ ಕೂಪಕ್ಕೆ ತಳ್ಳಿ ಬಿಡುತ್ತದೆ ಸರಕಾರ. ಆದರೂ ಪ್ರಜಾ ಪ್ರಭುತ್ವಕ್ಕೆ ಜೈ ಎಂದೇ ಹೇಳಬೇಕು, ವಿಧಿಯಿಲ್ಲದೆ.

ಚಿತ್ರ ಕೃಪೆ
http://www.mikhaela.net/