ಸಾವಯವ ಕೃಷಿಯ ಹರಿಕಾರ ಎಲ್. ನಾರಾಯಣ ರೆಡ್ಡಿ
ಸಾವಯವ ಕೃಷಿ ಎಂದೊಡನೆ ತಟಕ್ಕನೆ ನೆನಪಿಗೆ ಬರುವ ಹೆಸರು ನಾಡೋಜ ಎಲ್. ನಾರಾಯಣ ರೆಡ್ಡಿ ಅವರದು. ಅಂತರರಾಷ್ಟ್ರೀಯ ಮಟ್ಟದಲ್ಲಿ “ಸಾವಯವ ಯೋಗಿ” ಎಂದು ಹೆಸರಾದ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ೧೪ ಜನವರಿ ೨೦೧೯ರಂದು ನಮ್ಮನ್ನಗಲಿದರು.
ಕಳೆದ ಹಲವು ದಶಕಗಳಿಂದ ಕೃಷಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಹಿರಿಯ ಪ್ರಾಧ್ಯಾಪಕರಂತೆ ಪಾಠ ಮಾಡುತ್ತಿದ್ದ ನಾರಾಯಣ ರೆಡ್ಡಿಯವರು ಜನಿಸಿದ್ದು ೧೮ ಸಪ್ಟಂಬರ್ ೧೯೩೫ರಂದು. ತಮ್ಮ ಯೌವನದಲ್ಲಿ ಹೋಟೆಲಿನಲ್ಲಿ, ಲಾರಿ ಆಫೀಸಿನಲ್ಲಿ ಕೆಲಸ ಮಾಡಿದ್ದ ರೆಡ್ಡಿಯವರು, ಅನಂತರ ಕೃಷಿಯಲ್ಲಿ ತೊಡಗಿದರು. ಕಳೆದ ೨೦ ವರುಷಗಳಿಂದ ದೊಡ್ದ ಬಳ್ಳಾಪುರ ತಾಲೂಕಿನ ಮರಲೇನ ಹಳ್ಳಿಗೆ ವಲಸೆ ಬಂದು, ಅಲ್ಲಿಯ ಜಮೀನಿನಲ್ಲಿ ಸಾವಯವ ಕೃಷಿಯ ಕಾಯಕ ಮುಂದುವರಿಸಿದ್ದರು. ಅಲ್ಲೇ “ಪರಾಶರ ಕೃಷಿ ಕೇಂದ್ರ” ಸ್ಥಾಪಿಸಿ, ಸಾವಿರಾರು ಜನರಿಗೆ ಸಾವಯವ ಕೃಷಿ ಹಾಗೂ ಗೋವು ಆಧಾರಿತ ಕೃಷಿಯ ಬಗ್ಗೆ ಅವರಿಂದ ತರಬೇತಿ. ಫ್ರಾನ್ಸ್, ಜರ್ಮನಿ, ಹಾಲೆಂಡ್, ಜಪಾನ್ ಇತ್ಯಾದಿ ವಿದೇಶಗಳಿಗೂ ಹೋಗಿ ಉಪನ್ಯಾಸ ನೀಡುತ್ತಿದ್ದ ಪರಿಣತ ಅವರು.
“ಸಾವಯವ ಕೃಷಿ ಯಾಕೆ? ಏನು? ಹೇಗೆ” ಎಂಬ ಪ್ರಶ್ನೆಗಳಿಗೆ ತಮ್ಮ ದಶಕಗಳ ಅನುಭವದ ಬಲದಿಂದ ಖಚಿತ ಉತ್ತರ ಕೊಡಬಲ್ಲವರಾಗಿದ್ದರು. ಕೃಷಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ಸರಕಾರಿ ಅಧಿಕಾರಿಗಳೊಡನೆ ಸಾವಯವ ಕೃಷಿಯ ಅಳವಡಿಕೆಯ ತುರ್ತಿನ ಬಗ್ಗೆ ಮಾತನಾಡುವಾಗಲೂ ಅವರದು ಗಟ್ಟಿ ದನಿ.
ಹಲವಾರು ಕೃಷಿಕರು ಬೇಸಾಯ ತೊರೆಯುವುದನ್ನು ತಪ್ಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕಾಂಪೊಸ್ಟ್ ತಯಾರಿ, ಹಸಿರೆಲೆ ಗೊಬ್ಬರ, ನೀರಿನ ದಕ್ಷ ಬಳಕೆ, ಸಾವಯವ ಲಘು ಪೋಷಕಾಂಶಗಳು, ಮಣ್ಣಿನ ಸೂಕ್ಷ್ಮಜೀವಿಗಳು, ಕುಲಾಂತರಿ ತಳಿಗಳ ಅಪಾಯ – ಇಂತಹ ವಿಷಯಗಳ ಬಗ್ಗೆ ತಮ್ಮ ಅನುಭವ ಮತ್ತು ಅಧ್ಯಯನದ ಆಧಾರದಿಂದ ನಿರರ್ಗಳವಾಗಿ ಮಾತನಾಡುತ್ತಿದ್ದರು ನಾರಾಯಣ ರೆಡ್ಡಿ.
ಸಾವಯವ ಕೃಷಿಯ ಹರಿಕಾರ ನಾರಾಯಣ ರೆಡ್ಡಿಯವರ ಮರಲೇನ ಹಳ್ಳೀಯ ತೋಟಕ್ಕೆ ೧೨ ಅಕ್ಟೋಬರ್ ೨೦೧೫ರಂದು ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ಬರೆದ ಲೇಖನ, ಅವರಿಗೆ “ನುಡಿ ನಮನ”ವಾಗಿ ಇಲ್ಲಿದೆ:
ಬೆಂಗಳೂರಿನಿಂದ ಹೊರಟು, ದೊಡ್ಡಬಳ್ಳಾಪುರ ಹಾದು ೧೨ ಅಕ್ಟೊಬರ್ ೨೦೧೫ರಂದು ಮರಲೇನ ಹಳ್ಳಿ ತಲಪಿದಾಗ ಮುಸ್ಸಂಜೆ ಹೊತ್ತು. ಆ ಮನೆಯಂಗಳದಲ್ಲಿ ಮುಖದ ತುಂಬ ಮುಗುಳ್ನಗೆಯೊಂದಿಗೆ ನಮ್ಮನ್ನು ಎದುರುಗೊಂಡವರು ಎಂಬತ್ತರ ವಯಸ್ಸಿನ ಹಿರಿಯ ನಾಡೋಜ ಎಲ್. ನಾರಾಯಣ ರೆಡ್ಡಿ ಅವರು.
“ಕತ್ತಲಾಗುವ ಮುಂಚೆ ತೋಟಕ್ಕೊಂದು ಸುತ್ತು ಹಾಕೋಣ, ಬನ್ನಿ” ಎನ್ನುತ್ತಾ ನನ್ನನ್ನೂ ಜೊತೆಗಿದ್ದ ಹರಿಪ್ರಸಾದ ನಾಡಿಗರನ್ನೂ ಕರೆದೊಯ್ದರು. ಕಾಯಿ ತುಂಬಿದ ಚಿಕ್ಕು (ಸಪೋಟ) ಮರಗಳನ್ನು ದಾಟಿ ಸಾಗುತ್ತಾ “ನನ್ನ ಜೀವಮಾನದಲ್ಲೇ ನಾನು ಸಾಲ ಮಾಡಿಕೋನಲ್ಲ; ಬಡ್ಡಿ ಕಟ್ಟಿದವನೂ ಅಲ್ಲ. ಆದರೆ ಈ ಕೃಷಿ ತರಬೇತಿ ಸಂಸ್ಥೆಗಾಗಿ ಸಾಲ ಮಾಡಬೇಕಾಯಿತು” ಎಂದರು, ತಮ್ಮ ಮನೆಯ ಹಿಂಬದಿಯ ತರಬೇತಿ ಸಂಸ್ಥೆಯ ಕಟ್ಟಡವನ್ನು ತೋರಿಸುತ್ತಾ.
“ಈ ಭೂಮಿ, ಈ ಸಸ್ಯ” ಮತ್ತು “ನೆಲದೊಡಲ ಚಿಗುರು” ಎಂಬ ಎರಡು ಪುಸ್ತಕಗಳಲ್ಲಿ ದಾಖಲಾಗಿರುವ ಅವರ ಕೃಷಿ ಚಿಂತನೆ ಹಾಗೂ ಅನುಭವಗಳ ಹರವು ದೊಡ್ಡದು. ಅವನ್ನೆಲ್ಲ ವ್ಯವಸ್ಥಿತವಾಗಿ ಆಸಕ್ತರೊಂದಿಗೆ ಹಂಚಿಕೊಳ್ಳಬೇಕು ಎಂಬ ಉದ್ದೇಶದಿಂದ ಕಟ್ಟಿದ್ದಾರೆ ಆ ಸಂಸ್ಥೆ. ಅದರ ಕಟ್ಟಡ ಮುಗಿಸಲಿಕ್ಕಾಗಿ ಅವರು ಜೀವಮಾನದಲ್ಲೇ ಮೊದಲ ಬಾರಿ ಸಾಲ ಮಾಡಬೇಕಾಗಿ ಬಂತು. ಅದನ್ನು ಷರತ್ತಿನಂತೆಯೇ ತೀರಿಸಿದ ಸಮಾಧಾನ ಅವರಿಗಿದೆ. ಜೊತೆಗೆ, ಕೃಷಿಯ ಆಳ-ಅಗಲ ತಿಳಿಯಲಿಕ್ಕಾಗಿ ಅಲ್ಲಿಗೆ ಬಂದು, ಕೆಲವು ದಿನ ಉಳಿಯುವ ಆಸಕ್ತರಿಗೆ ತನ್ನ ಜೀವನಾನುಭವ ಧಾರೆಯೆರೆದ ಧನ್ಯತಾ ಭಾವ.
ಬೇಸಾಯದಲ್ಲಿ ತಪ್ಪುಗಳಾಗುತ್ತವೆ. ಅವುಗಳಿಂದ ಕಲೀತಾ ಇರಬೇಕು. ನಾನು ಹತ್ತಾರು ಚಿಕ್ಕು ಗಿಡ ನೆಟ್ಟು ಬೆಳೆಸಿದ್ದೆ. ಒಳ್ಳೇ ಫಸಲು. ಆದರೆ ಏನ್ ಮಾಡೋದು? ಆಂಧ್ರದಿಂದ ಬೆಂಗಳೂರಿನ ಮಾರ್ಕೆಟಿಗೆ ಚಿಕ್ಕು ಬರಲಿಕ್ಕೆ ಶುರು ಆಯಿತು. ನಮ್ಮ ಚಿಕ್ಕು ಮಾರೋದೇ ಕಷ್ಟ ಆಯಿತು. ಅದಕ್ಕೆ ಕೆಲವು ಚಿಕ್ಕು ಮರ ಕಡಿದು, ಮಾವಿನ ಗಿಡ ನೆಟ್ಟಿದ್ದೇನೆ. ಚೆನ್ನಾಗಿ ಬೆಳೀತಿವೆ. ಮುಂಚೆ ನೆಟ್ಟಿದ್ದ “ಅನಂತಭಟ್ಟನ ಅಪ್ಪೆಮಿಡಿ”ಯ ಒಂದೇ ಮರದಿಂದ ಈ ವರುಷ ಎಷ್ಟು ಸಿಕ್ತು ಅಂತೀರಾ? ೧೭,೦೦೦ ರೂಪಾಯಿ ಕೈಗೆ ಬಂತು. ಬೆಳೆಯುತ್ತಿರುವ ಮಾವಿನ ಗಿಡಗಳಿಂದಲೂ ಮೂರ್ನಾಲ್ಕು ವರುಷದಲ್ಲಿ ಒಳ್ಳೇ ಆದಾಯ ಬಂದೇ ಬರ್ತದೆ ಎನ್ನುವಾಗ ಅವರ ಧ್ವನಿಯಲ್ಲಿ ಪ್ರವಾಹದ ವಿರುದ್ಧ ಈಜಿ ಗಿದ್ದ ಆತ್ಮವಿಶ್ವಾಸ.
ಬಲಬದಿಯ ಬೆಣ್ಣೆಹಣ್ಣಿನ ಮರಗಳನ್ನು ತೋರಿಸುತ್ತಾ ಅವರು ಹೇಳಿದ್ದು, ನೆಟ್ಟು ನೀರು ಕೊಟ್ರೆ ಸಾಕು. ಬೆಣ್ಣೆಹಣ್ಣಿನ ಗಿಡಗಳು ಚೆನ್ನಾಗಿ ಬೆಳೀತವೆ, ಮರ ತುಂಬಾ ಹಣ್ಣು ಕೊಡ್ತವೆ. ಅದಕ್ಕೇ ೮೦ ಗಿಡ ನೆಟ್ಟಿದ್ದೀನೆ, ನೋಡಿ. ಒಂದೊಂದು ಮರದಿಂದಲೂ ಹತ್ತು ಸಾವಿರ ರೂಪಾಯಿ ಆದಾಯ ಗ್ಯಾರಂಟಿ.
ಎಡಬದಿಯಲ್ಲಿರುವ ಆಳೆತ್ತರದ ಗೆದ್ದಲು ಹುತ್ತದ ಪಕ್ಕದ ಮಾವಿನ ಮರದ ಎಲೆ ತೋರಿಸುತ್ತಾ, ನಾರಾಯಣ ರೆಡ್ಡಿಯವರು ತೆರೆದಿಟ್ಟ ಒಳನೋಟ: ಇದರ ಎಲೆ ಯಾಕೆ ಇಷ್ಟು ಉದ್ದ ಇಷ್ಟು ಅಗಲವಿದೆ ಅನ್ನೋದಕ್ಕೆ ಯಾವ ವಿಜ್ನಾನಿಯೂ ಉತ್ತರ ಕೊಟ್ಟಿಲ್ಲ. ಇದಕ್ಕೆ ಕಾರಣ ಈ ಮಾವಿನ ಮರದ ಬುಡದಲ್ಲಿರೋ ಹುತ್ತ. ಆ ಹುತ್ತದೊಳಗಿನ ವ್ಯಾಕ್ಯೂಮಿನಿಂದಾಗಿ ಮಾವಿನ ಮರಕ್ಕೆ ಚೆನ್ನಾಗಿ ಆಕ್ಸಿಜನ್ ಸಿಗ್ತಾ ಇದೆ. ಆದ್ರಿಂದ ಎಲೆ ಈ ಗಾತ್ರಕ್ಕೆ ಬೆಳೆದಿದೆ (ಆ ಮಾವಿನ ಎಲೆಯ ಉದ್ದ ೧೦ ಇಂಚು, ಅಗಲ ೩.೫ ಇಂಚು).
ತುಸು ದೂರದಲ್ಲಿದ್ದ ಹುಣಿಸೆ ಮರ ತೋರಿಸುತ್ತಾ, ಅದರ ಕತೆ ಶುರುವಿಟ್ಟರು, “ಫಾರೆಸ್ಟ್ ಡಿಪಾರ್ಟ್ಮೆಂಟಿನವರು ಕೊಟ್ಟ ಗಿಡ ತಂದು ನೆಟ್ಟಿದ್ದೆ. ಈಗ ನೋಡಿ ಹೇಗೆ ಬೆಳೆದಿದೆ. ಅದರಲ್ಲಿ ಹುಣಿಸೆ ಹಣ್ಣಾದಾಗ ಗೆಲ್ಲುಗಳನ್ನು ಜಾಡಿಸೋದಷ್ಟೇ ನಮ್ಮ ಕೆಲಸ – ತೊಪತೊಪನೆ ಹಣ್ಣು ಬೀಳ್ತವೆ. ಮಾರಿದಾಗ ೭,೦೦೦ ರೂಪಾಯಿ ಸಿಗ್ತದೆ – ನಾವು ಏನೂ ಮಾಡದೇನೆ.” ಪುನಃ ಎಡಕ್ಕೆ ತಿರುಗಿ, ಅಲ್ಲಿದ್ದ ಎತ್ತರದ ತೇಗದ (ಸಾಗುವಾನಿ) ಮರಗಳನ್ನು ದಾಟುತ್ತಾ, “ಹೇಗೆ ಬೆಳೆದಿದೆ ನೋಡಿ, ಈ ತೇಗದ ಮರಗಳು. ನಾನು ಒಂದಷ್ಟು ನೀರು ಕೊಟ್ಟದ್ದು ಮಾತ್ರ” ಎನ್ನುವಾಗ ಅವರಲ್ಲಿ ಸಂತೃಪ್ತಿಯ ಭಾವ.
ತೋಟ ಸುತ್ತಿ ಮನೆಯ ಹತ್ತಿರ ಬರುತ್ತಿದ್ದಂತೆ, ಒಂದು ಗುಂಟೆ ಜಾಗದಲ್ಲಿ ಬೆಳೆದಿದ್ದ ಕ್ಯಾಬೇಜು ತೋರಿಸಿ, “ಇಷ್ಟೇ ಜಾಗದಿಂದ ನನಗೆ ೪,೦೦೦ ರೂಪಾಯಿ ಆದಾಯ ಬಂತು. ಇದಕ್ಕೆ ಒಂದೇ ಒಂದು ಹುಳ ಬಿದ್ದಿಲ್ಲ. ಮಣ್ಣಿನ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳ ಬೇಕು. ಆ ಮಣ್ಣಿನಲ್ಲಿ ಸಮತೋಲನದ ಗೊಬ್ಬರ ಹಾಕಿ, ಆಯಾ ಹಂಗಾಮಿಗೆ ಹೊಂದುವ ಬೆಳೆ ಬೆಳೆದ್ರೆ ಹುಳ ಬರಲ್ಲ. ಅದು ಬಿಟ್ಟು, ಚಳಿಗಾಲದಲ್ಲಿ ಬೆಳೀಬೇಕಾದ್ದನ್ನ ಬೇಸಿಗೇಲಿ ಬೆಳದ್ರೆ ಹುಳ ಬಂದೇ ಬರ್ತದೆ” ಎಂದು ವಿವರಿಸಿದರು.
ಬಹಳ ರೈತರು ಆಲೂಗಡ್ಡೆ ಬೆಳೀತಾರೆ. ನೆಡೋದಕ್ಕೆ ಮುಂಚೆ ಅದರ ಬೀಜಕ್ಕೆ ಪಾದರಸದ ಪೀಡೆನಾಶಕದಿಂದ ಬೀಜೋಪಾಚಾರ ಮಾಡಲೇ ಬೇಕು. ಅದರಿಂದಾಗಿ ಭೂಮಿಯಲ್ಲಿ ವಿಷ ತುಂಬಿ ಕೊಳ್ತದೆ. ಅನಂತರ ಆಲೂಗಡ್ದೆ ಬೆಳೆಗೆ ವೈರಸ್ ರೋಗ ಬಂದೇ ಬರ್ತದೆ. ಅದಕ್ಕೆ ಪುನಃ ವಿಷ ಹೊಡೀತಾರೆ. ಈ ಆಲೂಗಡ್ಡೆ ನಮಗ್ಯಾಕೆ ಬೇಕು? ಬೇರೆ ಎಷ್ಟೋ ಗೆಡ್ಡೆಗಳಿವೆ– ಮರಗೆಣಸು, ಗೆಣಸು, ಡಯಾಸ್ಕೋರಿಯಾ, ಸುವರ್ಣಗೆಡ್ದೆ. ಇವೆಲ್ಲ ನಿಧಿ ಇದ್ದಂಗೆ – ಈ ವರ್ಷ ಕಿತ್ ತೆಗೆಯದಿದ್ರೆ, ಮಣ್ಣೊಳಗೆ ಬೆಳೀತಾ ಇರ್ತವೆ.
ರೈತರ ಸಂಕಷ್ಟಗಳ ಮಾತು ಬಂದಾಗ, ಅವರು ತೋರಿದ ಪರಿಹಾರದ ದಾರಿ: ಬೆಳೆಯೋನು ರೈತ, ಆದರೆ ಫಸಲಿಗೆ ಬೆಲೆ ನಿರ್ಧಾರ ಮಾಡೋರು ಮಣ್ಣಿಗೆ ಇಳಿಯದೋರು. ಅದರಿಂದಲೇ ಸಮಸ್ಯೆ. ಬೀಜ, ಬಿತ್ತನೆ, ಗೊಬ್ಬರ, ನೀರು ಹಾಯಿಸೋದು, ಕಳೆ ತೆಗೆಯೋದು, ಕೊಯ್ಲು, ಒಕ್ಕಣೆ, ಸಾಗಾಟ ಎಲ್ಲಾ ಸೇರಿದ್ರೆ, ಒಂದು ಕಿಲೋ ರಾಗಿಗೆ ೨೫ ರೂಪಾಯಿ ಖರ್ಚು ಬರ್ತದೆ. ಸರ್ಕಾರ ರಾಗಿಗೆ ಕಿಲೋಕ್ಕೆ ೩೫ ರೂಪಾಯಿ ಬೆಲೆ ನಿಗದಿ ಮಾಡಲಿ. ಹಾಲಿಗೂ ಹಾಗೆನೇ, ಒಂದು ಲೀಟರ್ ಹಾಲಿಗೆ ೪೫ ರೂಪಾಯಿ ಖರ್ಚು ಬರ್ತದೆ. ಸರ್ಕಾರ ಹಾಲಿಗೆ ಲೀಟರಿಗೆ ೫೫ ರೂಪಾಯಿ ಬೆಲೆ ನಿಗದಿ ಮಾಡಲಿ. ಹೀಗೆ ಮಾಡಿದ್ರೆ ರೈತ ಉಳಿದಾನು.
ವಾಪಾಸು ಅವರ ಮನೆಯಂಗಳಕ್ಕೆ ಬಂದಾಗ ಕತ್ತಲಾಗಿತ್ತು. ನಾವು ಹೊರಡುತ್ತಿದ್ದಂತೆ, ಅಲ್ಲಿಗೆ ಕಾಲಿಟ್ಟಾಗ ಅವರು ಹೇಳಿದ ಮಾತು ನೆನಪಾಯಿತು: “ಭೂಮಿ ನಮಗೆ ಎಲ್ಲವನ್ನೂ ಕೊಡ್ತದೆ. ಅದನ್ನು ತಾಯಿಯಂತೆ ನೋಡ್ಕೋಬೇಕು. ಆದರೆ ನಾವು ಏನ್ ಮಾಡ್ತಾ ಇದ್ದೇವೆ? ನೋಡಿ, ೨೫ ವರ್ಷದ ಮುಂಚೆ ಇಲ್ಲಿ ನಾಲ್ಕೆಕ್ರೆ ಜಮೀನು ಖರೀದಿಸಿದ್ದೆ. ಈಗ ಇಲ್ಲಿ ಒಂದ್ ಕೋಟಿ ರೂಪಾಯಿ ಕೊಟ್ರೂ ಒಂದೆಕ್ರೆ ಜಮೀನು ಸಿಗಲ್ಲ. ಆಗ ೨೧ ಅಡಿ ಆಳಕ್ಕೆ ಇಲ್ಲಿ ನೀರು ಸಿಗ್ತಿತ್ತು. ಈಗ ನೀರು ಸಿಗಬೇಕಂದ್ರೆ ೧,೨೦೦ ಅಡಿ ಆಳಕ್ಕೆ ಬೋರ್ ಕೊರೀಬೇಕು. ಪುಕ್ಕಟೆ ಕರೆಂಟ್ ಸಿಗ್ತದೆಂತ ಬೋರ್ವೆಲ್ ಕೊರೆದು ಕೊರೆದು ನಾವು ಏನ್ ಮಾಡಿದ್ದೇವೆ ನೋಡಿ.”