ಸಾವಿಗೆ ಹೆದರದ ಯೋಗಿ

ಸಾವಿಗೆ ಹೆದರದ ಯೋಗಿ

ಸುಮಾರು ೨,೩೦೦ ವರ್ಷಗಳ ಹಿಂದೆ ನಮ್ಮ ದೇಶಕ್ಕೆ ಭೇಟಿ ನೀಡಿದ್ದ ಅಲೆಕ್ಸಾಂಡರನು ಇಲ್ಲಿನ ಯೋಗಿಗಳ ಜತೆ ನಡೆಸಿದ ಮುಖಾಮುಖಿ ಬಹಳ ಕುತೂಹಲಕಾರಿಯಾಗಿದೆ. ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಮಹದಾಸೆಯಿಂದ ಯುದ್ಧಗಳನ್ನು ಮಾಡುತ್ತಾ, ರಾಜ್ಯಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತಾ ಭಾರತಕ್ಕೆ ಬಂದ ಅಲೆಕ್ಸಾಂಡರನಿಗೆ ಸಿಂಧೂ ನದಿಯ ದಡದಲ್ಲಿ ವಿಚಿತ್ರ ಅನುಭವವಾಗುತ್ತದೆ. ಅದೇ ಯೋಗಿಗಳ ಮುಖಾಮುಖಿ.

ಆ ಪ್ರದೇಶದಲ್ಲಿ ಹಲವು ಯೋಗಿಗಳಿದ್ದಾರೆ ಎಂಬ ವಿಚಾರ ತಿಳಿದು, ಅಲೆಕ್ಸಾಂಡರನು ತನ್ನ ಸೈನಿಕರನ್ನು ಕಳುಹಿಸಿ, ಅವರನ್ನು ಕರೆತರಲು ಹೇಳುತ್ತಾನೆ. ಸೈನಿಕರು ಯೋಗಿಗಳನ್ನು ಹುಡುಕುತ್ತಾ ಹೊರಟಾಗ, ಊರಿನ ಹೊರ ವಲಯದಲ್ಲಿ ಒಬ್ಬ ಯೋಗಿಯ ಭೇಟಿಯಾಗುತ್ತದೆ. ಆ ಯೋಗಿ ಒಂದು ತುಂಡು ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಂಡು, ಧ್ಯಾನ ಮಾಡುತ್ತಾ ಕುಳಿತಿದ್ದರು. ಸೈನಿಕರು ಆತನ ಬಳಿ ಬಂದು ‘ಚಕ್ರವರ್ತಿಗಳು ಕರೆಯುತ್ತಿದ್ದಾರೆ. ನೀವು ಈಗಲೇ ಬರಬೇಕಂತೆ' ಎಂದು ಹೇಳಿದಾಗ, ಆ ಯೋಗಿಯು ನಸುನಕ್ಕು ಸುಮ್ಮನಾಗುತ್ತಾರೆ. ಸೈನಿಕರಿಗೆ ಅಚ್ಚರಿ. ಜಗತ್ತನ್ನೇ ಆಳುತ್ತಿರುವ ಚಕ್ರವರ್ತಿಯು ಹೇಳಿ ಕಳಿಸಿದರೂ, ಈ ವ್ಯಕ್ತಿ ನಸು ನಕ್ಕು ನಿರ್ಲಕ್ಷಿಸುತ್ತಿದ್ದನಲ್ಲಾ ಎಂದು.

ಯೋಗಿಯು ‘ಚಕ್ರವರ್ತಿ ನಿನಗೆ ಇರಬಹುದು. ನನಗಲ್ಲ. ಅವನನ್ನು ನೋಡಲು ನನಗೆ ಯಾವ ಆಸೆಯೂ ಇಲ್ಲ. ಆದ್ದರಿಂದ ನಾನು ಬರುವುದಕ್ಕೆ ಆಗುವುದಿಲ್ಲ. ನಿಮ್ಮ ಚಕ್ರವರ್ತಿಗೆ ನನ್ನನ್ನು ನೋಡುವ ಆಸೆ ಇದ್ದರೆ, ಅವನೇ ಬರಲಿ' ಎಂದು ಹೇಳುತ್ತಾರೆ. ಸೈನಿಕರು ಬರಿಗೈಯಲ್ಲಿ ಹೊರಟು, ಚಕ್ರವರ್ತಿಯ ಬಳಿ ಹೋಗಿ ಯೋಗಿ ಹೇಳಿದ್ದನ್ನೇ ಹೇಳುತ್ತಾರೆ. ಅಲೆಕ್ಸಾಂಡರನಿಗೆ ಅಚ್ಚರಿ. ಎಲ್ಲಾ ಕಡೆ ವಿಜಯವನ್ನೇ ಕಂಡ ತನ್ನ ಮಾತನ್ನು ಧಿಕ್ಕರಿಸುವ ಆ ಯೋಗಿ ಯಾರಿರಬಹುದು?

ಅಲೆಕ್ಸಾಂಡರನು ತನ್ನ ಜತೆ ಇದ್ದ ಒನೆಸ್ಕಾಟನ್ ಎಂಬ ಬರಹಗಾರನನ್ನು ಕಳಿಸಿ, ಆ ಯೋಗಿಯನ್ನು ಕರೆತರಲು ಹೇಳುತ್ತಾನೆ. ಆ ಬರಹಗಾರ ಬಂದಾಗ, ಯೋಗಿಯು ತನ್ನ ಪಾಡಿಗೆ ತಾನು ಪರ್ಣಕುಟೀರದಲ್ಲಿ ಧ್ಯಾನ ಮಾಡುತ್ತಾ ಕುಳಿತಿದ್ದರು. ‘ಚಕ್ರವರ್ತಿ ಕರೆಯುತ್ತಿದ್ದಾರೆ. ಬಂದರೆ ಚಿನ್ನ, ವಜ್ರ ವೈಡೂರ್ಯ, ಬಟ್ಟೆಗಳನ್ನು ಕೊಡುತ್ತಾರೆ. ಇಲ್ಲವಾದಲ್ಲಿ, ನಿನ್ನ ತಲೆ ಕತ್ತರಿಸಿದರೂ ಕತ್ತರಿಸುವ ಸಾಧ್ಯತೆ ಇದೆ' ಎಂದು ಆತ ಯೋಗಿಗೆ ಹೇಳುತ್ತಾನೆ. 

ಯೋಗಿಯು ನಸು ನಕ್ಕು, ‘ದೇವರೇ ನಿಜವಾದ ಚಕ್ರವರ್ತಿ. ಆತ ಹಿಂಸೆ ಮಾಡುವುದಿಲ್ಲ. ಬದಲಿಗೆ ನೀರು, ಅನ್ನ, ಬೆಳಕು ಮತ್ತು ಜೀವ ಕೊಡುತ್ತಾನೆ. ನಿನ್ನ ಚಕ್ರವರ್ತಿಯು ದೇವರಾಗಲು ಸಾಧ್ಯವೇ? ಇಲ್ಲ, ನಿನ್ನ ಚಕ್ರವರ್ತಿಗೆ ಹಿಂಸೆ ಎಂದರೆ ಇಷ್ಟ. ನೀನು ನನ್ನ ತಲೆಯನ್ನು ಕತ್ತರಿಸಿದರೂ, ನನ್ನ ಆತ್ಮವನ್ನು ನಾಶಪಡಿಸಲು ಅಸಾಧ್ಯ. ಹಳೆಯ ಬಟ್ಟೆಯನ್ನು ಬಿಸುಟಂತೆ, ಆತ್ಮವು ಈ ದೇಹವನ್ನು ತ್ಯಜಿಸುತ್ತದೆ. ನಿನ್ನ ಚಕ್ರವರ್ತಿ ನೀಡುವ ಏನೂ ನನಗೆ ಬೇಡ. ಆತನಿಗೆ ನಾನು ಬೇಕಾದರೆ, ಅವನೇ ಇಲ್ಲಿಗೆ ಬರಲಿ' ಎಂದರು.

ಈ ವಿಚಾರ ತಿಳಿದು ಅಲೆಕ್ಸಾಂಡರನಿಗೆ ಅಚ್ಚರಿ ಮತ್ತು ಕುತೂಹಲ. ಚಿನ್ನ ಬೇಡ ಎನ್ನುವ, ತಲೆ ಕತ್ತರಿಸಿದರೆ ಪರವಾಗಿಲ್ಲ ಎನ್ನುವ, ದೇಹವನ್ನು ಆತ್ಮ ತ್ಯಜಿಸುತ್ತದೆ ಎನ್ನುವ, ಅಹಿಂಸೆಯನ್ನು ಆರಾಧಿಸುವ ಯೋಗಿಗಳು ಭಾರತದಲ್ಲಿದ್ದಾರೆ ಎಂದು ಆತ ಕೇಳಿದ್ದ. ಈಗ ಕಣ್ಣಾರೆ ಕಾಣುವ ಅವಕಾಶವಾಯಿತು ಎಂದುಕೊಂಡು, ಆತನೇ ಊರ ಹೊರಗಿರುವ ಪರ್ಣಕುಟೀರದತ್ತ ಸಾಗಿದ. ಧ್ಯಾನಸ್ಥರಾಗಿದ್ದ ಯೋಗಿಯು ತನ್ನನ್ನು ಮಾತನಾಡಿಸುವ ತನಕ ಅಲೆಕ್ಸಾಂಡರನು ಒಂದು ಗಂಟೆಯ ಕಾಲ ಕಾಯಬೇಕಾಯಿತು. ಕೊನೆಗೆ ಯೋಗಿಯು ಹೇಳಿದರು ‘ನೀನೇಕೆ ನನ್ನ ಬಳಿಗೆ ಬಂದೆ. ನಿನಗೆ ಬೇಕಾಗುವ ಯಾವ ವಸ್ತುವೂ ನನ್ನ ಬಳಿ ಇಲ್ಲ. ಚಿನ್ನ, ಸಂಪತ್ತು ಎಂದರೆ ನನಗೆ ಕಾಲ ಕಸ. ನಾವೆಲ್ಲರೂ ದೇವರನ್ನು ಪ್ರೀತಿಸುತ್ತೇವೆ. ಆದರೆ ನೀವು ಲೌಕಿಕ ಸುಖವನ್ನು ಪ್ರೀತಿಸುತ್ತೀರಿ. ಚಿನ್ನವನ್ನು ಪ್ರೀತಿಸುತ್ತೀರಿ. ಅಧಿಕಾರಕ್ಕಾಗಿ ಜನರನ್ನು ಕೊಲ್ಲುತ್ತೀರಿ. ನಿಮಗೆ ಸಾವು ಎಂದರೆ ಭಯ.’

ಯೋಗಿಯ ಮಾತುಗಳನ್ನು ಕೇಳಿ ಅಲೆಕ್ಸಾಂಡರನು ಮೌನವಾಗಿ ಯೋಚಿಸಿದನು. ನಂತರ, ಯೋಗಿಗಳ ಜತೆ ಸುದೀರ್ಘ ಸಂಭಾಷಣೆಯನ್ನೂ ನಡೆಸಿ, ಅವರಿಗೆ ಗೌರವ ತೋರಿದನು. ಚಕ್ರವರ್ತಿ ಅಲೆಕ್ಸಾಂಡರನು ನಮ್ಮ ದೇಶದ ಯೋಗಿಗಳ ಜತೆ ನಡೆಸಿದ ಮಾತುಕತೆಯನ್ನು, ಆತನ ಬಳಿ ಇದ್ದ ಬರಹಗಾರರು ಅಕ್ಷರಗಳಲ್ಲಿ ದಾಖಲಿಸಿದ್ದಾರೆ. ಆ ಯೋಗಿಯ ಹೆಸರನ್ನು ದಂಡಮಿಸ್ ಎಂದು ಬರೆದಿಟ್ಟಿದ್ದಾರೆ. ಅವರಿಬ್ಬರ ಸಂಭಾಷಣೆಯನ್ನು ‘ಅಲೆಕ್ಸಾಂಡರ್ - ದಂಡಮಿಸ್ ಸಂಭಾಷಣೆ' ಎಂದು ಹೆಸರಿಸಲಾಗಿದೆ.

-ಶಶಾಂಕ್ ಮುದೂರಿ (ವಿಶ್ವವಾಣಿಯಿಂದ)

ಚಿತ್ರ ಕೃಪೆ: ಇಂಟರ್ನೆಟ್ ತಾಣ