ಸಾವಿತ್ರಿಬಾಯಿ ಫುಲೆ (ನಾಟಕ)

ಸಾವಿತ್ರಿಬಾಯಿ ಫುಲೆ (ನಾಟಕ)

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ನಟರಾಜ್
ಪ್ರಕಾಶಕರು
ಸುಧನ್ವ ಪಬ್ಲಿಕೇಷನ್ಸ್, ಜೆ ಪಿ ನಗರ ೧ನೇ ಹಂತ, ಬೆಂಗಳೂರು. ದೂ: ೯೯೮೬೧೦೯೧೫೪
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ೨೦೨೨

ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ನೀವು ಈಗಾಗಲೇ ಕೇಳಿರಬಹುದು. ಸಾವಿತ್ರಿಬಾಯಿಯವರ ಬದುಕಿನ ಹೋರಾಟದ ಕಥೆಯನ್ನು ನಾಟಕದ ಮೂಲಕ ಪ್ರಸ್ತುತ ಪಡಿಸಿದ್ದಾರೆ ವೈಜ್ಞಾನಿಕ ಬರಹಗಾರ, ಕವಿ ಕೆ ನಟರಾಜ್ ಅವರು. ತಮ್ಮ ಲೇಖಕರ ನುಡಿಯಲ್ಲಿ ಅವರು ಹೇಳಿದ್ದು

“ಸಾವಿತ್ರಿ ಬಾಯಿ ಫುಲೆ ಹಾಗೂ ಜ್ಯೋತಿರಾವ್ ಫುಲೆಯವರ ಹೆಸರು ಭಾರತದ ಇತಿಹಾಸದಲ್ಲಿ ಮರೆಯಲಾಗದ ಹೆಸರುಗಳು. ಕತ್ತಲೆಯ ಕೂಪದಂತಿದ್ದ ಭಾರತೀಯ ಸಮಾಜವನ್ನು ಬೆಳಕಿನಡೆಗೆ ಕೊಂಡೊಯ್ದವರು. ಭಾರತೀಯ ಸ್ತ್ರೀ ಸಮಾಜಕ್ಕೆ ಹೊಸ ಮನ್ವಂತರವನ್ನೇ ತಂದವರು. ಹೆಣ್ಣು ಮಕ್ಕಳಿಗಾಗುತ್ತಿದ್ದ ಶೋಷಣೆಗಳನ್ನು ಎತ್ತಿಹಿಡಿದು, ಅವುಗಳ ನಿವಾರಣೆಗೆ ಟೊಂಕ ಕಟ್ಟಿ ನಿಂತವರು. ಅದರಲ್ಲೂ ಹಿಂದುಳಿದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಇಡೀ ಸಮಾಜವನ್ನೇ ಎದುರು ಹಾಕಿಕೊಂಡು ಹೋರಾಡಿದವರು. ಆಗಿನ ಕಾಲದ ಸತಿ ಪದ್ಧತಿ, ಬಾಲ್ಯ ವಿವಾಹ, ವಿಧವಾ ಶೋಷಣೆ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದವರು. 

ಭಾರತೀಯ ಸಮಾಜದಲ್ಲಿ ಇದುವರೆಗೂ ಅನೇಕ ಮಹನೀಯರು ಈ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿರುವುದು ನಿಜ. ಹಾಗೆಯೇ ಫುಲೆ ದಂಪತಿಗಳೂ ಕೂಡ. ಆದರೆ ಒಬ್ಬ ಮಹಿಳೆಯಾಗಿ, ಮಹಿಳೆಯರಿಗಾಗಿಯೇ ಸಮಾಜವನ್ನು ಮೆಟ್ಟಿ ನಿಂತ ಪರಿಯಿದೆಯಲ್ಲಾ ಅದೊಂದು ವೀರಗಾಥೆಯೇ ಸರಿ; ಈ ನಿಟ್ಟಿನಲ್ಲಿ ‘ಸಾವಿತ್ರಿಬಾಯಿ ಫುಲೆ'ಯವರೇ ಆಧುನಿಕ ಭಾರತದಲ್ಲಿ ಪ್ರಥಮರೆನ್ನಿಸಿಬಿಡುತ್ತಾರೆ. ಆದುದರಿಂದ ಅವರ ಹೆಸರಿನಲ್ಲೇ ಈ ನಾಟಕ!” 

ಪುಸ್ತಕದ ಬೆನ್ನುಡಿಯಲ್ಲಿರುವ ಬರಹ ಹೀಗಿವೆ “ ಈಗ ನಾವು ಸಮಾಜದ ಬಹಳಷ್ಟು ಶೋಷಣೆಗಳಿಂದ ಮುಕ್ತವಾಗಿ ಮೇಲೇಳುತ್ತಿದ್ದೇವೆ. ಆದರೆ ಸುಮಾರು ೧೭೦ ವರ್ಷಗಳ ಹಿಂದಿನ ನಮ್ಮ ಭಾರತೀಯ ಸಮಾಜದ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ನಮ್ಮಲ್ಲಾದ ಪರಿವರ್ತನೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ಅಂದಿನ ನಮ್ಮ ಸಮಾಜದ ಹಿರಿಯರು ಮಾಡಿದ ತ್ಯಾಗ, ಬಲಿದಾನಗಳ ಮಹತ್ವದ ಅರಿವೂ ಸ್ಪಷ್ಟವಾಗಿ ಗೋಚರಿಸುತ್ತದೆ; ಇದಕ್ಕಾಗಿ ನಾವು ಅಂದಿನ ಸಮಾಜದ ಚಿತ್ರಣವನ್ನು ನೋಡಬೇಕಾದದ್ದು ಅತ್ಯಂತ ಅವಶ್ಯವೂ ಹೌದು.

ಒಂದು ಕಡೆ ಬ್ರಿಟೀಷರ ಆಡಳಿತ ಇನ್ನೊಂದು ಕಡೆ ನಮ್ಮ ಸಮಾಜದಿಂದಲೇ ಶೋಷಣೆ ಇವೆರಡರಿಂದ ಸಾಮಾನ್ಯ ಜನತೆ ನಲುಗಿ ಹೋಗಿದ್ದು ಸುಳ್ಳಲ್ಲ. ಅಂದಿನ ಸಮಾಜದಲ್ಲಿ ಹಿಂದುಳಿದವರ ಶೋಷಣೆ, ಬಾಲ್ಯ ವಿವಾಹ, ಸತೀ ಪದ್ಧತಿ. ವಿಧವೆಯರ ಶೋಷಣೆ ಹಾಗೂ ಮುಖ್ಯವಾಗಿ ಮಹಿಳಾ ಅನಕ್ಷರತೆ ಇವುಗಳಿಂದ ಅಂದಿನ ಭಾರತೀಯ ಸಮಾಜ ಜರ್ಜರಿತವಾಗಿ ಹೋಗಿತ್ತು. 

ಆ ಕಾಲದಲ್ಲೇ ಭಾರತೀಯ ಇತಿಹಾಸದಲ್ಲಿ ಸೂರ್ಯ-ಚಂದ್ರರಂತೆ ಮೇಲೆದ್ದವರು ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆಯವರು. ಭಾರತ ಅನೇಕ ಸಮಾಜ ಸುಧಾರಕರನ್ನು ಕಂಡಿದೆ ಅದು ನಿಜ ; ಆದರೆ ದಂಪತಿಗಳಿಬ್ಬರೂ ಇಂತಹ ಶೋಷಣೆಗಳ ವಿರುದ್ಧ ಜೊತೆಯಾಗಿ ಕಹಳೆ ಊದಿದ್ದು ಇತಿಹಾಸದಲ್ಲೇ ಅಪರೂಪ ಎನ್ನಬಹುದು. ಆ ಕಾಲದ ಹೋರಾಟದ ಪ್ರತಿಬಿಂಬವೇ ಈ ನಾಟಕದ ವಸ್ತು.” ಸುಮಾರು ೮೦ ಪುಟಗಳ ಈ ಪುಸ್ತಕವನ್ನು ಕೆ ನಟರಾಜ್ ಅವರು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ ಇವರಿಗೆ ಅರ್ಪಣೆ ಮಾಡಿದ್ದಾರೆ.