ಸಾವಿನಾಚೆಯ ಪ್ರೀತಿಗಳು
ಮನಸ್ಸಿನಾಳದ ನೋವುಗಳಿಗೆ ಮುಲಾಮು ಹಚ್ಚುವರಿದ್ದರೆ ಬನ್ನಿ
ಅದು ಪ್ರೀತಿಯಿಂದ ಆಗಬೇಕೇ ಹೊರತು ದ್ವೇಷದಿಂದಲ್ಲ
ಮನೆ ಮನದಂಗಳದಲ್ಲಿ ಮಹಾಮಾರಿ ವಕ್ಕರಿಸಿದೆ ನೋಡು
ಕೊರೋನಾಕ್ಕಿಂತಲೂ ಭಯಂಕರ ಮನುಷ್ಯರ ಒಳಗೆ ಪ್ರೀತಿಯಿಲ್ಲದ್ದು
ಕಾರಣವೂ ಇಲ್ಲದಿಲ್ಲ ? ಮನುಷ್ಯ ಸಂಘಜೀವಿ !
ಹುಟ್ಟುವಾಗ ಮಗು ಅಮ್ಮನ ಅಳಿಸಿ ಹುಟ್ಟುತ್ತದೆ
ಅದೇ ಸಾಯುವಾಗ ತಾನೇ ಅತ್ತು ಸಾಯುತ್ತದೆ
ಬದುಕೇ ಒಂದು ವಿಚಿತ್ರ ಸಂತೆಯಿದ್ದಂತೆ
ಅರಿತುಕೊಂಡರೆ ಅರಿವಿನ ಬಾಳು ಸರಾಗ !
ತರಿದುಕೊಂಡರೆ ಅಮಾವಾಸ್ಯೆಯ ನಗುವಿನಂತೆ ದುಃಖಗಳ ಸಾಗರ !!
ಕಪ್ಪೆಗಳಿಗೂ ಮದುವೆಯಾಗುತ್ತವೆ ಬಾವಿಯಲ್ಲಿ ವಟರ್ ವಟರ್ !
ಇಂದು ಮನುಷ್ಯರಲ್ಲೂ ಮದುವೆಯಾಗುತ್ತದೆ ನಾಳೆಗೆ ಡೈವರ್ಸ್ ಇಲ್ಲೂ ವಟರ್ ವಟರ್!!
ಸಂಬಂಧಗಳು ಪ್ರೀತಿಗಳ ಉಳಿಸುವ ಶಿಕ್ಷಣವಿಂದು ಎಲ್ಲಿದೆ ?
ಭಾವನೆಗಳ ಜೀವಂತ ಕೊಲ್ಲುವ ಶಿಕ್ಷಣವೇ ಎಲ್ಲೆಲ್ಲೂ ಇವೆ !
ಅದನ್ನು ಕಲಿತವರ ಮಾನಸಿಕ ನೆಮ್ಮದಿಯೇ ಹಾಳಾಗಿ ಹೋಗಿದೆ !
ಮಾನವೀಯತೆಯ ಬದಲು ಕೊಲೆ ಸುಲಿಗೆ ಭ್ರಷ್ಟಾಚಾರವೇ ದೇಶದಲ್ಲಿ ವಿಜೃಂಭಿಸಿದೆ!
ಇಂದಿನ ಜನಕ್ಕೆ ಶಿಕ್ಷಣವೇ ಮಹಾಮಾರಿಯಾಗಿದೆ !
ಇಂದಿನ ಮನೆಗಳಲ್ಲಿ ಯಜಮಾನರೇ ಇಲ್ಲ
ಆದ ಕಾರಣ ಯಜಮಾನಿಕೆಯೂ ಇಲ್ಲ ಅದಕ್ಕೇ ಇರಬೇಕು ?
ಹುಟ್ಟಿದ ಕೂಸಿನಿಂದ ಹಿಡಿದು ಸಾಯುವ ಮುದುಕಿಯವರೆಗೂ ಎಲ್ಲರೂ ಯಜಮಾನರೇ ?
ಇದರಿಂದ ಸಂಸಾರ ಸಂಸಾರದೊಳು ಮುಳುಗಿ ನೈಜತೆಯಿಲ್ಲದ
ಪಯಣದೊಂದಿಗೆ ಕೊನೆಗೆ ಮಸಣದ ದಾರಿ ಹಿಡಿಯುತ್ತದೆ !!
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
