ಸಾವಿನ ಕಣಿವೆ ಮತ್ತು ಇತರೆ ವಿಸ್ಮಯಗಳು
ನಮ್ಮ ಸುತ್ತಲೂ ಪ್ರಕೃತಿಯಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಕೆಲವು ಸಾಮಾನ್ಯ ಮತ್ತು ಕೆಲವು ಅಸಾಮಾನ್ಯ ಘಟನೆಗಳಾಗಿರಬಹುದು. ಆದರೆ ಅವುಗಳನ್ನು ನೋಡುವ ಅಸಾಮಾನ್ಯ ದೃಷ್ಟಿ ಮಾತ್ರ ನಮ್ಮಲ್ಲಿರಬೇಕಾಗುತ್ತದೆ. ಈಗ ಅಂತಹ ಕೆಲವು ಪ್ರಪಂಚದ ವಿಸ್ಮಯಕಾರಿ ವಿಷಯಗಳನ್ನು ನೋಡೋಣ ಬನ್ನಿ…
ಸಾವಿನ ಕಣಿವೆ: ಕುಬೆಟಾವೋ ಬ್ರೆಜಿಲ್ ದೇಶದ ಒಂದು ಪಟ್ಟಣ. ಇದಕ್ಕಿರುವ ಅಡ್ದ ಹೆಸರೇ ‘ಸಾವಿನ ಕಣಿವೆ' (the Valley of Death). ಇದಕ್ಕೆ ಕಾರಣ ಈ ಪಟ್ಟಣ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಮಾಲಿನ್ಯ ನಗರವಾಗಿರುವುದು. ಈ ನಗರದ ಹೊರವಲಯವನ್ನು ಅಣ್ವಸ್ತ್ರಗಳ ಸ್ಫೋಟಕ ವಲಯವಾಗಿ ಬಳಸಲಾಗುತ್ತದೆ. ಪರಿಣಾಮವಾಗಿ ಸುತ್ತಲಿನ ಅರಣ್ಯದಲ್ಲಿ ಸಸ್ಯವರ್ಗ ನಿರ್ನಾಮವಾಗಿ ಹೋಗಿದೆ. ಈ ಪರಮಾಣು ಸ್ಫೋಟಗಳಿಂದ ಇಲ್ಲಿಯ ನೀರು, ಗಾಳಿ ಮತ್ತು ಭೂಮಿ ವಿಷಮಯವಾಗಿದೆ.
೧೯೮೪ರಲ್ಲಿ ಇಲ್ಲಿ ತೈಲಾಗಾರಗಳು ಸ್ಫೋಟಿಸಿ ಅಪಾರ ಪ್ರಮಾಣದ ತೈಲವು ಭೂಮಿಯಲ್ಲಿ ಸೋರಿ ಹೋಯಿತು. ಇದು ನಡೆದದ್ದು ೨೦೦೯ರಲ್ಲಿ. ಇದನ್ನು ಶುಚಿಗೊಳಿಸಲು ಸುಮಾರು ೨೪ ಕೈಗಾರಿಕೆಗಳು ಅಹೋರಾತ್ರಿ ಶ್ರಮಿಸಿದವು. ಇದಕ್ಕೆ ಅಮೇರಿಕಾ ೧೨೦ ಶತಕೋಟಿ ಡಾಲರ್ ನೆರವು ನೀಡಿತು. ಆದರೆ ಇಂದಿಗೂ ಈ ಶುಚಿತ್ವದ ಕೆಲಸ ನಡೆಯುತ್ತಲೇ ಇದೆ. ಈ ನಗರದ ಇನ್ನೊಂದು ದುರದೃಷ್ಟದ ಸಂಗತಿ ಎಂದರೆ ಇಲ್ಲಿ ಹುಟ್ಟುತ್ತಿರುವ ಮಕ್ಕಳು ! ಇಲ್ಲಿ ಇತ್ತೀಚೆಗೆ ಜನಿಸುತ್ತಿರುವ ಬಹಳಷ್ಟು ಮಕ್ಕಳು ‘ಅನೆನ್ಸಫೆಲಿ' ಎಂಬ ಭೀಕರ ರೋಗಕ್ಕೆ ತುತ್ತಾಗಿ ಜನಿಸುತ್ತಿದೆ. ಅಂದರೆ ಮಕ್ಕಳು ಜನಿಸುವಾಗಲೇ ಅವುಗಳ ಮೆದುಳು, ತಲೆಬುರುಡೆ ಮತ್ತು ನೆತ್ತಿಯ ಭಾಗಗಳು ಕೇವಲ ಅರ್ಧಭಾಗ ಮಾತ್ರ ಇವೆ. ಹೀಗೆ ಹುಟ್ಟಿದ ಮಕ್ಕಳು ಕೆಲವೇ ಗಂಟೆಗಳಲ್ಲಿ ಇಹಲೋಕ ತ್ಯಜಿಸುತ್ತಿವೆ. ಇಂತಹ ಅತ್ಯಂತ ಭಯಾನಕ ಮಲಿನಕಾರಿ ಪಟ್ಟಣದಲ್ಲಿ ಇನ್ನೂ ೧.೧೦ ಲಕ್ಷ ಜನ ಬಾಳುತ್ತಿರುವುದೇ ಪರಮಾದ್ಭುತ.
ಜನಸಂಖ್ಯಾ ಭರಿತ ಏಷ್ಯಾ ಖಂಡ: ನಾವು ವಾಸಿಸುತ್ತಿರುವ ಏಷ್ಯಾ ಖಂಡದಲ್ಲಿ ನಿಮಗೆಲ್ಲಾ ಗೊತ್ತಿರುವ ವಿಷಯವೇ. ಇದು ಭೂಮಂಡಲದ ಶೇಕಡ ೩೦ ರಷ್ಟು ಪ್ರದೇಶವನ್ನು ಆವರಿಸಿದ್ದು, ಅತ್ಯಂತ ದೊಡ್ದ ಖಂಡವಾಗಿದೆ. ೧೭,೨೧೨,೦೦೦ ಚದರ ಮೈಲಿ ಇದರ ವಿಸ್ತಾರ. ೨೦೦೬ರ ಜನಗಣತಿಯಂತೆ ಇಲ್ಲಿರುವ ಸಂಖ್ಯೆ ೪,೧೬೨,೯೬೬,೦೮೬. ಅಂದರೆ ೪೦೦ ಕೋಟಿಗೂ ಜಾಸ್ತಿ. ಈ ಖಂಡದಲ್ಲಿ ಸುಮಾರು ೪೭ ರಾಷ್ಟ್ರಗಳಿದ್ದು ಸುಮಾರು ೪೦ಕ್ಕಿಂತಲೂ ಹೆಚ್ಚು ಭಾಷೆಗಳನ್ನು ಬಳಸಲಾಗುತ್ತಿದೆ. ಇಂದು ಏಷ್ಯಾ ಖಂಡದಲ್ಲೇ ಅದ್ಬುತ ಪ್ರಗತಿಯನ್ನು ಸಾಧಿಸಿದ ರಾಷ್ಟ್ರವೆಂದರೆ ದಕ್ಷಿಣ ಕೊರಿಯಾ. ೧೯೬೦ಕ್ಕಿಂತ ಮುಂಚೆ ಅತಿ ಹಿಂದುಳಿದ ರಾಷ್ಟ್ರಗಳ ಗುಂಪಿಗೆ ಸೇರಿದ್ದ ಈ ದೇಶವು ಈಗ ಅಪಾರ ಆರ್ಥಿಕ ಪ್ರಗತಿಯನ್ನು ಸಾಧಿಸಿ ‘ಏಷ್ಯಾದ ಹುಲಿ' ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಕೊರಿಯಾದ ಯುದ್ಧ ನಡೆದ ಕೇವಲ ೨೦ ವರ್ಷಗಳಲ್ಲಿ ದಕ್ಷಿಣ ಕೊರಿಯಾ ಸಾಧಿಸಿದ ಪ್ರಗತಿ ಒಂದು ದೊಡ್ದ ವಿಸ್ಮಯ.
ಬಾಹ್ಯಾಕಾಶದಲ್ಲಿ ಭೂಮಿಯ ವೇಗ: ನಿಮಗೆ ತಿಳಿದಿರಲಿ. ನಮ್ಮ ಭೂಮಿ ಪ್ರತಿ ಗಂಟೆಗೆ ೬೬,೭೦೦ ಮೈಲಿಗಳ ವೇಗದಲ್ಲಿ ಬಾಹ್ಯಾಕಾಶದಲ್ಲಿ ಸೂರ್ಯನ ಸುತ್ತ ಸುತ್ತುತ್ತಿದೆ. ಸೌರವ್ಯೂಹದಲ್ಲಿ ಬೇರೆ ಯಾವುದೇ ಗ್ರಹಕ್ಕಿರದ ಸುಲಭ್ಯಗಳು ನಮ್ಮ ಗ್ರಹವಾದ ಭೂಮಿಗಿದೆ. ನಮ್ಮ ಭೂಮಿಯ ಮೇಲಿನ ಒಟ್ಟು ವಿಸ್ತಾರ ಪ್ರದೇಶ ೧೯.೭ ದಶಲಕ್ಷ ಚದರ ಮೈಲಿಗಳು. ಈ ವಿಸ್ತೀರ್ಣವು ನೀರು, ಭೂಮಿ ಮತ್ತು ಹಿಮಪ್ರದೇಶವನ್ನೂ ಒಳಗೊಂಡಿದೆ. ಭೂಮಿಯ ಮೇಲಿನ ಅಪಾರ ಪ್ರಮಾಣದ ನೀರು, ಸೂರ್ಯನ ಬೆಳಕನ್ನು ಹೆಚ್ಚು ಪ್ರತಿಫಲಿಸುವುದರಿಂದ ಇಡೀ ಸೌರಮಂಡಲದಲ್ಲೇ ಅತ್ಯಂತ ಪ್ರಕಾಶಮಾನವಾದ ಗ್ರಹವಾಗಿದೆ.
ಅಂಟಾರ್ಟಿಕಾದ ಕಾಮನ್ ವೆಲ್ತ್ ಕೊಲ್ಲಿ: ಅಂಟಾರ್ಟಿಕಾದ ಕಾಮನ್ ವೆಲ್ತ್ ಕೊಲ್ಲಿಯನ್ನು ಆಸ್ಟ್ರೇಲಿಯಾದ ಸಂಶೋಧಕ ಡಗ್ಲಾಸ್ ಮಾಸನ್ ೧೯೧೨ರಲ್ಲಿ ಸಂಶೋಧಿಸಿದ. ಸುಮಾರು ೩೦ ಮೈಲಿ ಅಗಲವಿರುವ ಈ ಕೊಲ್ಲಿಯ ವಿಶೇಷವೆಂದರೆ ಇಡೀ ಪ್ರಪಂಚದಲ್ಲೇ ಇದು ಅತ್ಯಂತ ಹೆಚ್ಚು ಗಾಳಿ ಬೀಸುವ ಪ್ರದೇಶವಾಗಿರುವುದು. ಇಲ್ಲಿ ಬೀಸುವ ಗಾಳಿಯ ವೇಗ ಗಂಟೆಗೆ ೧೫೦ ಮೈಲಿ. ಈ ಕೊಲ್ಲಿ ಪಾಯಿಂಟ್ ಆಲ್ಡೇನ್ ಮತ್ತು ಕೇಪ್ ಗ್ರೇ ಪ್ರದೇಶಗಳ ನಡುವೆ ಕಂಡುಬರುತ್ತದೆ.
ತೂಕ ಕಳೆದುಕೊಳ್ಳುವ ಸುಲಭೋಪಾಯ: ನೀವು ನಿಮ್ಮ ಹೆಚ್ಚಿನ ತೂಕ ಕಳೆದುಕೊಳ್ಳಬೇಕೇ? ಅದಕ್ಕೆ ಇಲ್ಲಿದೆ ಸುಲಭ ಹಾಗೂ ಅತ್ಯಂತ ದುಬಾರಿ ಉಪಾಯ ! ಇಲ್ಲಿ ನೀವು ಯಾವುದೇ ವ್ಯಾಯಾಮ ಮಾಡಬೇಕಿಲ್ಲ. ಅಲ್ಲದೇ ಊಟೋಪಚಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ನೀವು ಇದನ್ನು ಸಾಧಿಸಬಹುದು. ಸ್ವಲ್ಪ ತಾಳಿ, ನೀವು ಇದನ್ನು ಸಾಧಿಸಲು ಮಂಗಳ ಗ್ರಹಕ್ಕೋ, ಚಂದ್ರಲೋಕಕ್ಕೋ ಪ್ರಯಾಣಿಸಬೇಕಾಗುತ್ತದೆ. ನೀವು ಮಂಗಳ ಗ್ರಹಕ್ಕೆ ಪ್ರಯಾಣಿಸಿದಿ ಎಂದು ಇಟ್ಟುಕೊಂಡರೆ, ಅಲ್ಲಿನ ಗುರುತ್ವ ಬಲವು ಭೂಮಿಯ ಗುರುತ್ವ ಬಲದ ಶೇಕಡಾ ೩೮ ಮಾತ್ರ. ಭೂಮಿಯ ಮೇಲೆ ೫೦ ಕೆ ಜಿ ತೂಗುವ ಒಬ್ಬ ವ್ಯಕ್ತಿ ಮಂಗಳನ ಮೇಲೆ ಕೇವಲ ೧೯ ಕೆ ಜಿ ಮಾತ್ರ ತೂಗುತ್ತಾನೆ. ಅಂದರೆ ಯಾವುದೇ ಪ್ರಯತ್ನವಿಲ್ಲದೇ ತೂಕ ಕಡಿಮೆಯಾದಂತೆ ತಾನೇ? ಭೂಮಿಯ ಮೇಲೆ ತೂಗುವ ೫೦೦ ಕಿಲೋ ಗ್ರಾಂನ ಕಾರ್ ನ ತೂಕ ಅಲ್ಲಿ ಕೇವಲ ೧೯೫ ಕೆ ಜಿ ಅಷ್ಟೇ.
ಇದೇ ರೀತಿ ನೀವು ಚಂದ್ರನ ಹೋದರೆ ಇನ್ನೂ ಹೆಚ್ಚಿನ ತೂಕವನ್ನು ಕಳೆದುಕೊಳ್ಳಬಹುದು. ಭೂಮಿಯ ಮೇಲೆ ನೀವು ೭೨ ಕೆ ಜಿ ತೂಗುವಿರಾದರೆ ಚಂದ್ರನಲ್ಲಿ ನಿಮ್ಮ ತೂಕ ಸುಮಾರು ೧೨ ಕೆ ಜಿ ಅಷ್ಟೇ. ನಿಮ್ಮ ತೂಕ ಕಡಿಮೆಯಾಯಿತಲ್ವಾ? ಮತ್ತೇಕೆ ಚಿಂತೆ?
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ