ಸಾವಿನ ಚೇತೋಹಾರಿ ಆರಂಭ
ಇದೊಂದು ವಿಶಿಷ್ಟ ಪ್ರವಾಸ ಕಥನ. ಕೇವಲ ಸ್ಥಳಪುರಾಣಕ್ಕೋ, ಊಟ ತಿಂಡಿಗಳ ವರ್ಣನೆಗೋ ಕಥನವನ್ನು ಸೀಮಿತಗೊಳಿಸದೆ ಆದರೆ ಅವನ್ನೂ ಉಳಿಸಿಕೊಂಡು ಫಿನ್ಲೆಂಡ್ ಕನ್ನಡದ ಸಂಸ್ಕೃತಿಗಳ ನಡುವಣ ತುಲನೆ ಮತ್ತು ವಿಶ್ಲೇಷಣೆಗಳ ಜತೆಗೆ ಸಾಗುವ ಕಥನ ಇದು. ಇದು ಕನಿಷ್ಠ ಹತ್ತು ಭಾಗಗಳಲ್ಲಿ ಪ್ರಕಟವಾಗಲಿದೆ.
-ಸಂಪದ ನಿರ್ವಾಹಕ ಬಳಗ
ಸ್ಥಳ: ಫಿನ್ಲೆಂಡ್. ೨೦೦೪ರ ಏಪ್ರಿಲ್ ಎರಡು. ಸ್ಟುಡಿಯೊ ಒಳಕ್ಕಿರಲಿ ಫಿನ್ಲೆಂಡ್ ದೇಶದೊಳಕ್ಕೆ ಕಾಲಿಟ್ಟೇ ಕೇವಲ ಎರಡು ಗಂಟೆ ಕಾಲವಾಗಿತ್ತು. ಫೋನ್ ರಿಂಗಾಯಿತು. ಪರವಾಗಿಲ್ಲ. ಹೊರಕ್ಕೆ ಹೋಗುವ ಸೌಲಭ್ಯವಿನ್ನೂ ದೊರೆತಿರದಿಲ್ಲದಿದ್ದರೂ ಒಳ ಕರೆಗಳು ಬರುತ್ತಿವೆಯಲ್ಲ. ೨೦೦೧ರಲ್ಲಿ ಇಲ್ಲಿಗೆ ಬಂದಾಗ ಪರಿಚಯವಾಗಿದ್ದ ಛಾಯಾಗ್ರಾಹಕ ಸಕ್ಕರಿ ಇರಬಹುದೆ? ಈ ಸ್ಟುಡಿಯೊ-ಇನ್-ರೆಸಿಡೆನ್ಸಿಯ ಮುಖ್ಯಸ್ಥೆ, ಸಕ್ಕರಿಯ ಮಡದಿ ಇರ್ಮೆಲಿ ಕೊಕ್ಕೊ ಇರಬಹುದೆ? ಸದ್ಯದ ಮುಖ್ಯಸ್ಥೆ, ಕಲಾವಿದೆ ಮಿನ್ನ ಇರಬಹುದೆ?
ಯಾರಾದರೇನು. ಫೋನ್ ರಿಂಗಾಯಿತಲ್ಲ, ಅಷ್ಟೇ ಸಾಕು. ಇಡೀ ಒಂದೆರೆಡು ಗಂಟೆ ಕಾಲ ಸಂಜೆಯ ಮಳೆ, ಮಂಜು, ಕಾರ್ಮೋಡದಲ್ಲಿ ಫೋನಿಗಾಗಿ, ಈಗಾಗಲೇ ಗೊತ್ತಿರುವ ರಸ್ತೆಗಳನ್ನೆಲ್ಲ ಅಲೆದು ಸಾಕಾಗಿತ್ತು. ಫೋನ್ ಬೂತುಗಳೇನೋ ದಂಡಿಯಾಗಿತ್ತು. ಆದರೆ ಅದಕ್ಕೆ ಬೇಕಾದ ಕಾರ್ಡ್ ಕೊಳ್ಳುವುದು ಹೇಗೆಂದು ಗೊತ್ತಿರಲಿಲ್ಲ. ಕಾರ್ಡ್ ಮಾಡುವ ಅಂಗಡಿಗಳೆಲ್ಲ ಮುಚ್ಚಿಬಿಟ್ಟಿದ್ದವು. ಯಾರನ್ನಾದರೂ ಕೇಳೋಣವೆಂದರೆ ತಪ್ಪು ವಿಳಾಸ ಹೇಳಲಿಕ್ಕಾದರೂ ಇದೇನು ತಮಿಳುನಾಡೆ? ಅಥವ ಯಾವಾಗೆಂದರೆ ಆವಾಗ, ಎಲ್ಲೆಂದರಲ್ಲಿ ಜನರು ಕಣ್ಣಿಗೆ ಬೀಳಲು ಇದೇನು ಬೆಂಗಳೂರೆ? ಕಣ್ಣಿಗೆ ಬೀಳಲೂ ಒಂದು ಹೊತ್ತುಗೊತ್ತಿರುವ'ಶಿಸ್ತಿನ ಜನ ಇವರು
.
ರಸ್ತೆಯಲ್ಲಿ ಹುಡುಕಾಡುತ್ತ, ಈ ವಾಕ್ಯದಲ್ಲಿ ಈಗಾಗಲೇ ಆಗಿರುವಂತೆ ಏನನ್ನು ಹುಡುಕುತ್ತಿದ್ದೇನೆಂಬುದೇ ಮರೆತಂತಾಗಿತ್ತು. ಹಾರನ್ ಮಾತ್ರ ಜೋರಾಗಿಯೇ ಕೇಳಿತ್ತು. ಒಂದು, ಎರಡು, ಮೂರು--ಮೂರೇ ನೆಗೆತಕ್ಕೆ ರಸ್ತೆಯ ಆ ಬದಿ ಸೇರಿದ್ದೆ, ಕೇಂದ್ರ ರೈಲ್ವೇ ನಿಲ್ದಾಣದ ಮುಂಭಾಗದ ಜನರಹಿತ ರಸ್ತೆಯಲ್ಲಿ. ಹಿಂದಕ್ಕೇನಾದರೂ ಹೋಗುವ ಪ್ರಯತ್ನ ಪಟ್ಟಿದ್ದಲ್ಲಿ ಮೇಲಕ್ಕಷ್ಟೇ ಹೋಗಬೇಕಾಗಿತ್ತು. ಭಾರತವಿರಲಿ, ಲಂಡನ್ ಇರಲಿ, ಫಿನ್ಲೆಂಡ್ ಇರಲಿ, ಟ್ಯಾಕ್ಸಿ ಡ್ರೈವರ್‌ಗಳಲ್ಲೆ ಅದೆಂತಹ ಜೆನೆಟಿಕ್ಸ್-ಸಾಮ್ಯತೆ ಕಾರ್ಯನಿರ್ವಹಿಸುತ್ತದೆ ಸ್ವಾಮಿಶಾಂತ ಪ್ರಶಾಂತ ಸಾವಧಾನಿ ಫಿನ್ಲೆಂಡಿನಲ್ಲಿ ಟ್ಯಾಕ್ಸಿಗಳ ಓಟ ಒಂದು ಕಪ್ಪು ಚುಕ್ಕೆ.
ಸ್ಟುಡಿಯೊದ ಫೋನ್ ರಿಂಗಾಗಿದ್ದಕ್ಕೂ ಈ ಜೀವ ಉಳಿದ ಘಟನೆಗೂ ಸಂಬಂಧವಿದೆ. "ಟ್ಯಾಕ್ಸಿ ಅಡಿಯಲ್ಲಿ ಸಾಯುವುದಿದ್ದರೆ ಭಾರತದಲ್ಲೇ ಹಾಗೆ ಮಾಡುವೆ. ನಿನಗೇನು ಕ್ರೆಡಿಟ್ ಕೊಡುವುದು ಈಡಿಯಟ್" ಎಂದು ಬೆಂಗಳೂರಿನ ಕನ್ನಡದಲ್ಲೇ ಬಯ್ದುಕೊಂಡೆ. ಡ್ರೈವರ್ ಫಿನ್ನಿಶ್‌ನಲ್ಲಿ, "ನೀನು ಫಿನಿಶ್ ಆಗಿಬಿಡುತ್ತಿದ್ದೆ ಮಗನೆ" ಎಂದು ಹೇಳಿದ ಮೇಲೆ. ಎಂಟು ಸಾವಿರ ಮೈಲು ವ್ಯತ್ಯಾಸವಿದ್ದರೂ ಫಿನ್ನಿಶ್, ಕನ್ನಡದಲ್ಲಿ ಸಂವಾದ ಸಾಧ್ಯ ಎಂದು ಈ ಅಸಫಲ ದುರ್ಘಟನೆಯಿಂದ ಸಾಬೀತಾಯಿತು. "ಕನ್ನಡವು ಫಿನ್ನೋ-ಅಗ್ರೇರಿಯನ್ ಭಾಷೆಯಿಂದ ಸೃಷ್ಟಿಯಾಯಿತು" ಎಂದು ನಮ್ಮ ಕೆ.ವಿ.ಸುಬ್ಬಣ್ಣನವರು ಬರೆದದ್ದನ್ನು ಸಾಕ್ಷಿ ಸಮೇತ ನಾನು ಊರ್ಜಿತಗೊಳಿಸಿದ್ದೆ.
ಅದರ ನಂತರ ಹತ್ತು ನಿಮಿಷದಲ್ಲಿ ಸ್ಟುಡಿಯೋಗೆ ಹಿಂದಿರುಗಿದ ಕೂಡಲೆ, ಈ ಲೇಖನದ ಆರಂಭದ ನಾಲ್ಕನೆ ಸಾಲಿನಲ್ಲಿ ಟ್ರಿಣ್ ಅಂದಿತ್ತಲ್ಲ ಅದೇ "ಟ್ರಿಣ್" ಅಷ್ಟರಲ್ಲಿ ಇಷ್ಟೆಲ್ಲ ನಡೆದಿತ್ತು. ಝೆನ್ ಕೋನ್‌ಗಳಂತೆ ನನಗಂತೂ ಆಗ ಫೋನ್ ಫೋನಾಗಿರಲಿಲ್ಲ, ಟ್ರಿಣ್ ಟಿಣ್‌ಆಗಿರಲಿಲ್ಲ.
"ಹಲೋ?"
"ಹಲೋ. ಅನಿಲ್?"
"ಹೌದು. ಸುರೇಖ್. ಹಾಯ್?! ಈ ನಂಬರ್ ಹೇಗೆ ಸಿಕ್ತು"
"ಅಯ್ಯೋ ಮಾರಾಯ. ಮಿನ್ನಾಗೆ ಫೋನ್ ಮಾಡಿ ತೆಗೆದುಕೊಂಡೆ. ಅಲ್ಲಿ ಹೋಗಿದ್ ತಕ್ಷ್ಣ ಫೋನ್ ಮಾಡು ಅಂತ ಹೇಳಿರ್‌ಲಿಲ್ವ?"
"ತಕ್ಷ್ಣ ಅನ್ನೋದರ ಕಾಲಾವಕಾಶ ನಮ್ಮಿಬ್ಬರಿಗೂ ವ್ಯತ್ಯಾಸವಾಗುತ್ತೆ ಅಂತ ಗೊತ್ತಿಲ್ವ. ಇನ್ನೂ ಫೋನ್ ಕಾರ್ಡ್ ಸಿಕ್ಕಿಲ್ಲ. ಕಾರ್ಡ್ ಸಿಗೋ ಅಂಗ್ಡಿ ತೆಗ್ದಿಲ್ಲ. ಅದನ್ನ ತೆಗೆಯೋ ಜನ ಬಂದಿಲ್ಲ...ಗಾಭರಿ ಆಗ್ಬೇಡಿ"
"ಎಲ್ಲಾ ಸರಿಯಾಗಿದೆಯ?"
"ಫಿನ್ಲೆಂಡ್ ಮ್ಯಾಪ್ ೨೦೦೧ರಲ್ಲಿ ನಾವಿಬ್ಬ್ರೂ ಬಂದಿದ್ದಾಗ ಹೇಗಿತ್ತೋ ಹಾಗೇ ಇದೆ"
"ಷಟಪ್. ನೀನು ಆರಾಮಾನಾ?"
"ಇಲ್ದಿದ್ದ್ರೆ ಹೇಗೆ ಫೋನ್ ರಿಸೀವ್ ಮಾಡ್ತಿದ್ದೆ ಹೇಳು?" ಎಂದು ನಾನು ಉತ್ತರಿಸಿದಾಕ್ಷಣ ನೆನಪಿಗೆ ಬಂತು. ಆಕ್ಸಿಡೆಂಟ್. ಅಲ್ಲ ಅಸಫಲ ಆಕ್ಸಿಡೆಂಟ್!! ಇಷ್ಟು ಬೇಗ ಈ ಸುದ್ದಿ ಪ್ರಸಾರವಾಗಿಬಿಟ್ಟಿದೆಯಲ್ಲ, ಪರವಾಗಿಲ್ಲ. ಜಗತ್ತಿಗೇ ನೋಕಿಯವನ್ನು ನೂಕಿರುವ ತಂತ್ರಜ್ಣಾನ ಅದೆಷ್ಟು ಮುಂದುವರೆದಿದೆ ಎಂದುಕೊಳ್ಳಬೇಕು ಎಂದುಕೊಳ್ಳುತ್ತಿದ್ದೆ.
"ಒಂದು ವಿಷಯ ಹೇಳ್ತೀನಿ. ಗಾಭರಿಯಾಗ್ಬೇಡ. ನಿನ್ನನ್ನ ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಬಿಟ್ಟು ಮಧ್ಯರಾತ್ರಿ ಬಾಡಿಗೆ ಟ್ಯಾಕ್ಸಿಯಲ್ಲಿ ವಾಪಸಾಗುತ್ತಿದ್ದೆವಲ್ಲ ಪ್ರಕಾಶ್, ಭವಾನಿ ಮತ್ತು ನಾನು. ಮನೆ ಇನ್ನು ಅರ್ಧ ಮೈಲಿ ಇರೋಗ ರಾಮಯ್ಯ ಆಸ್ಪತ್ರೆ ಹತ್ರ ಆಕ್ಸಿಡೆಂಟ್ ಆಯ್ತು ನಮ್ಮ ಕಾರಿಗೆ. ಕುಡ್ದು ಬೈಕ್ ಓಡಿಸ್ತಿದ್ದ ಬಿಹಾರಿ ಸ್ಟೂಡೆಂಟ್ ತೀರ ಬಲಕ್ಕೆ ಬಂದು ಗುದ್ದಿದ್ದ. ಸ್ಪಾಟ್ ಡೆತ್. ಅಲ್ಲಿಂದ ಮನೆಗೆ ಒಬ್ಳೇ ಹೋದೆ ಅಷ್ಟೊತ್ನಲ್ಲಿ, ಪೋಲಿಸ್ ಮಹಜರಿ ಎಲ್ಲ ಆದ್ಮೇಲೆ. ಮನೇಲಿ ನೋಡಿದ್ರೆ ಕರೆಂಟ್ ಇರ್ಲಿಲ್ಲ. ರಾತ್ರಿ ಎಲ್ಲ ಇರ್ಲಿಲ್ಲ. ನೀನು ಆರಾಮ ತಾನೆ?"
"ಓಹ್! ಈಗ (ಆಗ) ತಾನೆ ಇಲ್ಲಿ ಮ್ಯಾನರ್ ಹಿಮ್ ಕಾತುವಿನಲ್ಲಿ (ಎಂ.ಜಿ.ರಸ್ತೆ ಎಂದು ಓದಿಕೊಳ್ಳುವುದು) ಟ್ಯಾಕ್ಸಿಯವ್ನು ಫ್ರೀಯಾಗಿ ಮೇಲಕ್ಕೆ ಕಳಿಸೊಕ್ಕೆ ಪ್ರಯತ್ನಿಸಿದ. ನೀನು ಬೇಕಾದ್ರೆ ಹೋಗು, ನಾನು ಸ್ವಲ್ಪ ತಡಮಾಡಿ ಬರ್ತೀನಿ ಮಾರಾಯ ಅಂತ ಹೇಳಿ ಈಗಷ್ಟೇ ಬಂದೆ" ಎಂದೆ. "ಒಂದು ವಿಷಯ ಹೇಳ್ತೀನಿ..."ಯೆಂಬ ವಾಕ್ಯದಿಂದ ಈ ವಾಕ್ಯದ "ಒಂದು ವಿಷಯ ಹೇಳ್ತೀನಿ..." ತನಕ ನಮ್ಮಿಬ್ಬರ ಸಂಭಾಷಣೆ ನಡೆದದ್ದು ಎರಡನೇ ದಿನ. ಮೊದಲ ದಿನ ಸುರೇಖ ಅದನ್ನು ಹೇಳಿರಲಿಲ್ಲ, ನಾನು ಗಾಭರಿಯಾಗದಿರಲೆಂದು, ಅಥವ ಗಾಭರಿಯಾಗುತ್ತೇನೆಂದು. "ಅಲ್ಲಿ ಸತ್ತ ಬಿಹಾರಿ ಹುಡುಗನೇನಾದರೂ ಇಲ್ಲಿ ಟ್ಯಾಕ್ಸಿ ಡ್ರೈವರನಾಗಿ ಬಂದಿದ್ದನೆ" ಎಂದೆಲ್ಲ ಯೋಚಿಸಲು ಏನೇನೋ ಪ್ರಯತ್ನ ಪಟ್ಟೆ. ನಾನೋ ಅಗ್ನೋಸ್ಟಿಕ್. ನನ್ನ ದೈವೀಕ ನಂಬಿಕೆಗೆ ಅಗ್ನಿಯೂ ಇಲ್ಲ, ಅದಕ್ಕೆ ಸ್ಟಿಕ್ಕಾನೂ ಆಗೋಲ್ಲ. ದೇವರ ಭಯವಿಲ್ಲದಿದ್ದರೂ ದೇಹದ ಭಯವಿದೆಯಲ್ಲ. ನಮ್ಮದಲ್ಲದ ತಪ್ಪಿಗೆ ನನಗೆ ಸರಿಯಾದ ಶಿಕ್ಷೆ ನೀಡಿದ್ದ ಆ ನಾನು ನಂಬದ ದೇವರು. ಶಿಕ್ಷೆ: ಮೂರು ತಿಂಗಳ ಫಿನ್ಲೆಂಡ್ ಘೋರ ಏಕಾಂಗೀತನದ ಶಿಕ್ಷೆ. ಈ ಮುಂಚೆ ಫಿನ್ಲೆಂಡಿಗೆ ಅದೇ ಯುನೆಸ್ಕೊ-ಆಶ್‌ಬರ್ಗ್ ಫೆಲೋಷಿಪ್ ಪಡೆದು ಬಂದಿದ್ದ ಗೆಳೆಯ ಪ್ರಕಾಶ್ ಏಕಾಂಗೀತನದ ಬಗ್ಗೆ ವಿಡಿಯೊ ಕಲೆ ಸೃಷ್ಟಿಸಿ ಬೆಂಗಳೂರಿನಲ್ಲಿ ಸಾಮೂಹಿಕವಾಗಿ ಏಕಾಂಗತನವನ್ನು ಹಂಚುತ್ತಿದ್ದ!
ಈ ಪ್ರವಾಸ ಕಥನದ ಇತರ ಭಾಗಗಳು