ಸಾವಿನ ಲೆಕ್ಕಾಚಾರದಲ್ಲಿ ರಾಜಕೀಯ ತರವಲ್ಲ
ಕೊರೊನಾ ಆರಂಭದ ಕಾಲದಿಂದಲೂ ವ್ಯತಿರಿಕ್ತ ಹೇಳಿಕೆಗಳಿಂದ ಮತ್ತು ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ, ಈಗ ಅಂಥದ್ದೇ ಮತ್ತೊಂದು ವಿವಾದಕ್ಕೆ ಕೈಹಾಕಿದೆ. ಈಗಿನ ಪ್ರಮುಖ ವಿಚಾರ, ಭಾರತ ಕೊರೊನಾದಿಂದ ಮಡಿದವರ ಲೆಕ್ಕವನ್ನು ಸರಿಯಾಗಿ ಕೊಟ್ಟಿಲ್ಲ ಎಂಬುದು. ಹಾಗೆಯೇ ನಾವು ಸರಿಯಾಗಿ ಕೊಡಲು ಪ್ರಯತ್ನಿಸುವಾಗ ಅದು ತಡೆದಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದೆ. ಈ ಬಗ್ಗೆ ಅಮೇರಿಕ ಮೂಲಕ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು ಈಗ ಒಂದಿಷ್ಟು ವಿವಾದಕ್ಕಿ ಕಾರಣವಾಗಿದೆ.
ಮೊದಲಿಗೆ ಹೇಳಬೇಕಾದರೆ, ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವಿಚಾರದಲ್ಲಿ ತನ್ನ ವಿಶ್ವಾಸಾರ್ಹತೆ ಹೊಂದಿದೆಯೇ ಎಂಬ ಪ್ರಶ್ನೆ ತಲೆದೋರುತ್ತದೆ. ಇಂದಿಗೂ ಕೊರೊನಾ ಉಗಮವಾಗಿದ್ದು ಎಲ್ಲಿ ಮತ್ತು ಹೇಗೆ ಎಂಬ ವಿಚಾರ ಇಡೀ ಜಗತ್ತನ್ನೇ ಕಾಡುತ್ತಿದೆ. ಅಮೇರಿಕವೂ ಸೇರಿದಂತೆ ಪ್ರಪಂಚದ ಬಹುತೇಕ ದೇಶಗಳ ಅನುಮಾನ ಚೀನದತ್ತಲೇ ಇದೆ. ಚೀನದಲ್ಲಿರುವ ವುಹಾನ್ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಜನ್ಮತಾಳಿರಬಹುದು ಎಂಬ ಸಂದೇಹಗಳಿವೆ. ಈ ಹಿಂದೆ ಅಮೇರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರು ವೈರಸ್ ಮೂಲ ಕಂಡು ಹಿಡಿಯಿರಿ ಎಂದು ಕೇಳಿದಾಗ, ಈ ಬಗ್ಗೆ ಅಸಹಾಯಕತೆಯಿಂದ ವರ್ತಿಸಿದ್ದು ಇದೇ ವಿಶ್ವ ಆರೋಗ್ಯ ಸಂಸ್ಥೆ ಇಡೀ ಜಗತ್ತಿನ ಅವ್ಯವಸ್ಥೆ ಅಪಾರ ಸಾವು ನೋವುಗಳಿಗೆ ಕಾರಣವಾಗಿರುವ ಈ ವೈರಸ್ ನ ಮೂಲವನ್ನೇ ಪತ್ತೆ ಹಚ್ಚದಿರುವ ಡಬ್ಲ್ಯೂ ಎಚ್ ಒ ಸಂಸ್ಥೆ ಈಗ ಭಾರತದಲ್ಲಿನ ಕೊರೊನಾ ಸಾವುಗಳ ಬಗ್ಗೆ ನಾವು ಭಾರೀ ದತ್ತಾಂಶಗಳನ್ನು ಸಂಗ್ರಹಿಸಿದ್ದೇವೆ. ಅದನ್ನು ಭಾರತದಲ್ಲಿ ಪ್ರಕಟಿಸಲು ಬಿಡುತ್ತಿಲ್ಲ ಎಂದು ಹೇಳುತ್ತಿದೆ.
ಡಬ್ಲ್ಯೂ ಎಚ್ ಒ ಪ್ರಕಾರ, ಭಾರತದಲ್ಲಿ ೫ ಲಕ್ಷ ಮಂದಿಯಲ್ಲ ಬದಲಾಗಿ ೪೦ ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಅದು ಬೇರೆ ಬೇರೆ ವಿಧಾನಗಳನ್ನು ಅಳವಡಿಸಿಕೊಂಡಿದೆ. ಅಮೇರಿಕದ ಪತ್ರಿಕೆಯ ವರದಿ ಬಳಿಕ ಕೇಂದ್ರ ಆರೋಗ್ಯ ಇಲಾಖೆ, ಈ ಸಾವಿನ ಲೆಕ್ಕಾಚಾರದ ಬಗ್ಗೆ ಸ್ಪಷ್ಟನೆಯನ್ನೂ ನೀಡಿದೆ. ಚಿಕ್ಕ ದೇಶಕ್ಕೂ ಮತ್ತು ದೊಡ್ಡ ಜನಸಂಖ್ಯೆ ಇರುವ ದೇಶಗಳಿಗೂ ಒಂದೇ ಲೆಕ್ಕಾಚಾರ ವಿಧಾನ ಸರಿ ಹೊಂದುವುದಿಲ್ಲ. ಹಾಗೆಯೇ ತಾಳೆ ಮಾಡುವುದಕ್ಕೂ ಸಾಧ್ಯವಿಲ್ಲ. ನಾವು ತಂತ್ರಜ್ಞಾನ ಬಳಸಿಕೊಂಡು ಕೊರೊನಾ, ಸೋಂಕಿತರ ಮತ್ತು ಸಾವಿನ ಲೆಕ್ಕಾಚಾರ ಹಾಕುತ್ತಿದ್ದೇವೆ. ಜತೆಗೆ ೧೩೦ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಒಂದೊಂದು ರಾಜ್ಯ ಒಂದೊಂದು ರೀತಿಯ ವಾತಾವರಣ ಹೊಂದಿವೆ. ಕೆಲವು ಕಡೆಗಳಲ್ಲಿ ಹವಾಮಾನ ಸಂಬಂಧಿ ಮರಣಗಳು ಉಂಟಾಗಿರಬಹುದು. ಇದನ್ನು ಕೊರೊನಾಕ್ಕೆ ಸೇರಿಸಲು ಸಾಧ್ಯವಿಲ್ಲ ಎಂದಿದೆ.
ನಿಜವಾಗಿಯೂ ಡಬ್ಲ್ಯೂ ಎಚ್ ಒ ವರದಿಗೆ ವಿಶ್ವಾಸಾರ್ಹತೆ ಬರಲೇ ಬೇಕು ಎಂದಾದಲ್ಲಿ ಎಲ್ಲ ಟಯರ್ ೧ ದೇಶಗಳಲ್ಲಿನ ಸಾವುಗಳನ್ನೂ ಇದೇ ಮಾದರಿಯಲ್ಲಿ ಲೆಕ್ಕ ಹಾಕಿ ವರದಿ ಕೊಡಿ. ಆಗ ಏನು ಫಲಿತಾಂಶ ಬರುತ್ತದೆ ನೋಡಿ ಎಂದೂ ಹೇಳಿದೆ. ಜತೆಗೆ ಈ ವರದಿಗೆ ಚೀನ, ರಷ್ಯಾ, ಈಜಿಪ್ಟ್, ಇರಾನ್ ದೇಶಗಳೂ ಆಕ್ಷೇಪ ಎತ್ತಿವೆ. ಈ ದೇಶಗಳ ಬಗ್ಗೆ ಹೆಚ್ಚು ಮಾತನಾಡದೆ, ಭಾರತದ ಮರಣ ಸಂಖ್ಯೆಯನ್ನು ಮಾತ್ರ ಪ್ರಕಟಿಸಿ ಉಳಿದ ದೇಶಗಳ ಸಾವಿನ ಸಂಖ್ಯೆಯನ್ನು ಏಕೆ ಬಹಿರಂಗ ಪಡಿಸಿಲ್ಲ ಎಂಬ ಪ್ರಶ್ನೆಯನ್ನೂ ಕೇಂದ್ರ ಆರೋಗ್ಯ ಇಲಾಖೆ ಕೇಳಿದೆ. ಈ ವರದಿ ಗಮನಿಸಿದರೆ ಎಲ್ಲೋ ಒಂದು ಕಡೆ ಪೂರ್ವಾಗ್ರಹ ಪೀಡಿತವಾಗಿ ಪ್ರಕಟಿಸಿರಬಹುದು ಎಂಬುದು ಕೇಂದ್ರ ಸರಕಾರದ ಸ್ಪಷ್ಟನೆಯಲ್ಲಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೮-೦೪-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ