ಸಾವಿರದ ಒಂದು ಪುಸ್ತಕ

ಸಾವಿರದ ಒಂದು ಪುಸ್ತಕ

ಪುಸ್ತಕದ ಲೇಖಕ/ಕವಿಯ ಹೆಸರು
ನರೇಂದ್ರ ಪೈ
ಪ್ರಕಾಶಕರು
ಪುಸ್ತಕ ಮನೆ, ಕಾರ್ಕಳ
ಪುಸ್ತಕದ ಬೆಲೆ
ರೂ. ೨೨೦.೦೦, ಮುದ್ರಣ : ೨೦೨೪

ಯಾವುದೇ ಒಂದು ಪುಸ್ತಕಕ್ಕೆ ಉತ್ತಮ ವಿಮರ್ಶೆ ಕಲಶಪ್ರಾಯವಿದ್ದಂತೆ. ವಿಮರ್ಶೆ ಹೊಗಳಿಕೆಯಾಗಿರಲಿ, ತೆಗಳಿಕೆಯಾಗಿರಲಿ, ಸಲಹೆಯಾಗಿರಲಿ, ಟೀಕೆಯಾಗಿರಲಿ ಎಲ್ಲವೂ ಆ ಕೃತಿಯ ಲೇಖಕನಿಗೆ ಅತೀ ಮುಖ್ಯ. ವಿಮರ್ಶೆಗಳನ್ನು ಗಮನಿಸಿಯೇ ಆ ವ್ಯಕ್ತಿ ತನ್ನ ಮುಂದಿನ ಪುಸ್ತಕವನ್ನು ರೂಪಿಸಿಕೊಳ್ಳಬಹುದು. ಲೇಖಕರಾದ ನರೇಂದ್ರ ಪೈ ಅವರು ವಿಮರ್ಶೆಗಳ ಸಂಗ್ರಹವನ್ನೇ ಒಂದು ಕೃತಿಯನ್ನಾಗಿಸಿದ್ದಾರೆ. ಅದಕ್ಕೆ ಅವರಿಟ್ಟ ಹೆಸರು ‘ಸಾವಿರದ ಒಂದು ಪುಸ್ತಕ' ಈ ಬಗ್ಗೆ ಲೇಖಕರ ಮನದಾಳದ ಮಾತುಗಳು ಹೀಗಿವೆ...

“ನಾವು ನಮ್ಮ ಮೌನದಲ್ಲಿ ನಮಗೇ ಹೇಳಿಕೊಂಡ ಮಾತು ಇನ್ನೊಬ್ಬರಿಗೂ ತಲುಪಲು ಯೋಗ್ಯವಾಗಿದೆ ಅನಿಸಿದಾಗ ನಾನು ಬರೆಯುತ್ತೇನೆ ಎಂದಿದ್ದರು ಡಾ| ಯು ಆರ್ ಅನಂತಮೂರ್ತಿ, ಬಹುಶಃ ಬರವಣಿಗೆಯ ಮೂಲ ಇರುವುದೇ ಇಂಥ ಒಂದು ಒತ್ತಡದಲ್ಲಿ ಕನ್ನಡದಲ್ಲಿಲ್ಲದ ಕೃತಿಗಳನ್ನು ಅನ್ಯಭಾಷೆಯಲ್ಲಿ ಓದಿದಾಗ ಅದರ ಬಗ್ಗೆ ಕನ್ನಡದಲ್ಲಿ ಬರೆಯಲು ಬೇರಾವುದೇ ಕಾರಣಗಳಿಲ್ಲ. ಕೆಲವರಾದರೂ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುವ ಕೃತಿಗಳನ್ನು ಓದಲಿ ಎನ್ನುವುದು ಒಂದು. ಅದೂ ಸಾಧ್ಯವಾಗದವರು ಆ ಕೃತಿ ನಮ್ಮಲ್ಲಿ ಉದ್ದೀಪಿಸುವ ಕೆಲವಾದರೂ ಸಂವೇದನೆಗಳನ್ನು ಅರಿಯಲಿ ಎನ್ನುವುದು ಇನ್ನೊಂದು ಕನ್ನಡದ ಕೃತಿಗಳು ಬೆಳೆಯಬೇಕು. ಅತ್ಯುತ್ತಮವಾದ ಅಂತರಾಷ್ಟ್ರೀಯ ಮಾನ್ಯತೆಯ ಕೃತಿಗಳಿಗೆ ಸರಿಸಮವಾಗಿ ನಿಲ್ಲಬಲ್ಲ ಕೃತಿಗಳು ನಮ್ಮ ಹೊಸ ತಲೆಮಾರಿನ ಬರಹಗಾರರಿಂದ ಬರಬೇಕು ಎನ್ನುವುದೇ ಇದರ ಹಿಂದಿರುವ ಕಾಳಜಿ, ನಿರೀಕ್ಷೆ.

ಇಲ್ಲಿ ಕುಟ್ಸು, ಮಿಲನ್ ಕುಂದೇರಾ, ಇಕೊ ಉಂಬರ್ತೊ, ಓರಾನ್ ಪಮುಕ್, ಜೆನ್ನಿ ಎರ್ಪೆನ್‌ಬೆಕ್, ಓಲ್ಲಾ ತೊಗಾರ್ಝುಕ್, ಅದಾನಿಯಾ ಶಿಬ್ಲಿ, ಯೋನ ಫಾಸೆ, ಜಿಯಾ ಹೈದರ್ ರಹಮಾನ್, ಹನೀಫ್ ಖುರೇಶಿಯವರಂಥ ಪ್ರಸಿದ್ಧ ಲೇಖಕರು, ನೊಬೆಲ್ ಪುರಸ್ಕೃತರ ಕೃತಿಗಳ ಕುರಿತ ಲೇಖನಗಳಿರುವಂತೆಯೇ ಭಾರತೀಯರಾದ ಅಂಜುಂ ಹಸನ್, ಸೈರಸ್ ಮಿಸ್ತ್ರಿ, ಗೀತಾಂಜಲಿ ಶ್ರೀ, ಅಜಿತನ್ ಕುರುಪ್, ಹರೀಶ್ ಎಸ್ ಕೃತಿಗಳ ಕುರಿತ ಲೇಖನಗಳೂ ಇವೆ. ಇಬ್ಬರು ಮೂವರನ್ನು ಹೊರತು ಪಡಿಸಿದರೆ ಎಲ್ಲರೂ ಸಮಕಾಲೀನರೇ, ಈಗಲೂ ಬರೆಯುತ್ತಿರುವವರೇ, ಆಸ್ಟ್ರೇಲಿಯಾ, ಬಾಂಗ್ಲಾ, ಪ್ಯಾಲಸ್ತೇನ್, ಟರ್ಕಿ, ಫ್ರಾನ್ಸ್, ಜರ್ಮನಿ ಮುಂತಾಗಿ ವಿವಿಧ ದೇಶಗಳ ಲೇಖಕರು ಇರುವಂತೆಯೇ ಈಶಾನ್ಯ ಭಾರತ, ಮಹರಾಷ್ಟ್ರ, ಕೇರಳದ ಲೇಖಕರು ಇಲ್ಲಿದ್ದಾರೆ. ಇವೆಲ್ಲ ವಿವರಗಳಿಗಿಂತ ಮುಖ್ಯವಾದದ್ದು ಇಲ್ಲಿ ಉಲ್ಲೇಖಗೊಂಡಿರುವ ಕೃತಿಗಳೆಲ್ಲವೂ ಪ್ರತಿಯೊಬ್ಬರೂ ಓದಲೇ ಬೇಕಾದಂಥವು, ಬದುಕನ್ನು ಶ್ರೀಮಂತಗೊಳಿಸುವಂಥವು, ಸಾರ್ಥಕಗೊಳಿಸುವಂಥವು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ ಈ ಪುಸ್ತಕಗಳ ಓದು ಸಾವಿರದ ಒಂದು ಪುಸ್ತಕಗಳ ಓದಿಗೆ ಸಮಾ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಲ್ಲೆ. ಹಾಗಾಗಿಯೇ ಇಂಥ ಅದ್ಭುತ ಕೃತಿಗಳ ಬಗ್ಗೆ ನಿಮ್ಮ ಗಮನ ಹರಿಯುವಂತೆ ಮಾಡುವ ಪುಸ್ತಕಕ್ಕೆ ಕೂಡ ಸಾವಿಲ್ಲದ ಆಮರತ್ವ ಪ್ರಾಪ್ತವಾಗುತ್ತದೆ ಎನ್ನುವ ವಿಶ್ವಾಸ ನನ್ನದು!

ಇಂಥ ಒಂದು ಪುಸ್ತಕ ಹೊರಬರಲು ಮುಖ್ಯ ಕಾರಣ, ಮೂಲ ಪ್ರೇರಣೆ, ನನ್ನ ಯಾವ ಜನ್ಮದ ಬಂಧುವೋ ತಿಳಿಯದ ಪ್ರಿಯ ಮಿತ್ರ ರಾಘವೇಂದ್ರ ರಾವ್, ಇವರು ಕನ್ನಡದ ಓದುಗರಿಗೆ ಅನುಬೆಳ್ಳೆ ಎಂದೇ ಪರಿಚಿತರು. ಖ್ಯಾತರು. ಅವರ ಪ್ರೀತಿ, ಗೆಳೆಯನ ಪುಸ್ತಕ ತರಬೇಕು ಎನ್ನುವ ನಿಲುವು ಈ ಪುಸ್ತಕದ ಜೀವನಾಡಿ. ಅವರಿಗೆ ಕೃತಜ್ಞತೆ ಹೇಳುವುದು, ಧನ್ಯವಾದ ಸಮರ್ಪಿಸುವುದು ನಾನು ಮಾಡಬಹುದಾದ ತೀರ ಸಣ್ಣ ಸಂಜ್ಞೆಯಾದೀತಷ್ಟೇ. ಈ ಕೃತಿಯ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾದುದು ಅವರಿಗೇ.

ಹಾಗೆಯೇ ಪ್ರಕಾಶಕರಾದ ಪುಸ್ತಕ ಮನೆ, ಕಾರ್ಕಳ ಸಂಸ್ಥೆಗೂ, ಈ ಪುಸ್ತಕದ ಡಿಟಿಪಿ, ಚಿತ್ರಗಳು, ಮುಖಪುಟ, ಮುದ್ರಣ ಪ್ರತಿಯೊಂದರ ಹಿಂದೆಯೂ ನಮಗೆ ತಿಳಿದ, ತಿಳಿಯದ ಹಲವರ ಶ್ರಮ, ಪ್ರೀತಿ, ಶ್ರದ್ದೆ ಕೆಲಸ ಮಾಡಿದೆ. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ. ಓದುಗರು ಈ ಲೇಖನಗಳಿಗಿಂತ ಇಲ್ಲಿ ಉಲ್ಲೇಖಿಸಲ್ಪಟ್ಟ ಕೃತಿಗಳನ್ನು ಸ್ವತಃ ಓದಿ ತಮ್ಮ ಬದುಕನ್ನು ತುಂಬಿಕೊಳ್ಳಲಿ ಎಂದು ಹಾರೈಸುವೆ.”