ಸಾವಿರ ಕೋಟಿಯ ಸಂಸ್ಥೆ ಕಟ್ಟಿದ ಸಿಮೋನ್ ಟಾಟಾ

ಸಾವಿರ ಕೋಟಿಯ ಸಂಸ್ಥೆ ಕಟ್ಟಿದ ಸಿಮೋನ್ ಟಾಟಾ

ದೇಶ ವಿದೇಶದಲ್ಲಿರುವ ಬಹುತೇಕ ನಾಗರಿಕರಿಗೆ ‘ಟಾಟಾ’ ಎಂಬ ಹೆಸರು ಪರಿಚಿತ. ಯಾವುದೇ ಕ್ಷೇತ್ರವಿದ್ದರೂ ಅಲ್ಲಿ ಟಾಟಾ ಹೆಸರು ಇದ್ದೇ ಇದೆ. ವಿಮಾನಯಾನ ಸಂಸ್ಥೆ, ದಿನಬಳಕೆಯ ವಸ್ತು, ಕಟ್ಟಡ ಕಾಮಗಾರಿಯ ಸಂಸ್ಥೆ, ಮೋಟಾರು ವಾಹನ, ಬಟ್ಟೆ ಬರೆ ಹೀಗೆ ಎಲ್ಲದರಲ್ಲೂ ಟಾಟಾ ಸಂಸ್ಥೆಯ ಹೆಸರು ಜನಜನಿತ. ಇದಕ್ಕೆ ಕಾರಣ ಜೆ ಆರ್ ಡಿ ಟಾಟಾ ಎಂಬ ವ್ಯಕ್ತಿಯ ವಿಶಾಲ ದೃಷ್ಟಿಕೋನ ಮತ್ತು ಸಮರ್ಥ ನಾಯಕತ್ವ. ಇದೇ ಟಾಟಾ ಸಮೂಹದಲ್ಲಿ ವಿದೇಶೀ ಮಹಿಳೆಯೊರ್ವಳು ಪ್ರಮುಖ ಪಾಲುದಾರರಾಗಿ ಸಂಸ್ಥೆಯನ್ನು ಯಶಸ್ಸಿನತ್ತ ಮುನ್ನಡೆಸಿದ್ದ ವಿಷಯ ನಿಮಗೆ ತಿಳಿದಿದೆಯೇ? ಬನ್ನಿ ಆ ನೈಜ ಕಥೆಯನ್ನು ಓದುವ.

ಟಾಟಾ ಕುಟುಂಬದ ಸರ್ ರತನ್ ಜೀ ಟಾಟಾ ಮತ್ತು ನವಾಜಿಬಾಯಿ ಸೇತ್ ಇವರ ಸುಪುತ್ರ ನವಲ್ ಹೊರ್ಮುಸ್ಕಿ ಟಾಟಾರವರ ದ್ವಿತೀಯ ಪತ್ನಿಯೇ ಸಿಮೋನ್ ಟಾಟಾ ಎಂಬ ವಿದೇಶೀ ಮಹಿಳೆ. ಇವರು ಟಾಟಾ ಅವರ ಜನಪ್ರಿಯ ಬ್ರ್ಯಾಂಡ್ ಆಗಿದ್ದ ಲಾಕ್ಮೆ ಸೌಂದರ್ಯ ವರ್ಧಕಗಳ ಉತ್ಪನ್ನಗಳ ಕಂಪೆನಿಯ ಅಧ್ಯಕ್ಷರಾಗಿದ್ದರು. ಸ್ವಿಟ್ಜರ್ ಲ್ಯಾಂಡ್ ನಲ್ಲಿ ೧೯೩೦ರಲ್ಲಿ ಹುಟ್ಟಿದ ಸಿಮೋನ್ ಪ್ರಖ್ಯಾತ ಜಿನೋವಾ ವಿಶ್ವವಿದ್ಯಾನಿಲಯದ ಪದವೀಧರೆ. ೧೯೫೩ರಲ್ಲಿ ಭಾರತಕ್ಕೆ ಪ್ರವಾಸ ಬಂದ ಈಕೆಯ ಭೇಟಿ ನವಲ್ ಟಾಟಾ ಜೊತೆ ಆಗುತ್ತದೆ. ಭೇಟಿ, ಪರಿಚಯ ನಂತರ ಪ್ರೇಮಕ್ಕೆ ತಿರುಗಿ ೧೯೫೫ರಲ್ಲಿ ಮದುವೆಯಲ್ಲಿ ಅಂತ್ಯಗೊಳ್ಳುತ್ತದೆ. ಆದರೆ ಆ ಸಮಯದಲ್ಲಿ ನವಲ್ ಟಾಟಾ ಅವರಿಗೆ ಮೊದಲ ಮದುವೆಯಾಗಿತ್ತು. ಎರಡು ಮಕ್ಕಳೂ ಇದ್ದರು. ಅವರೇ ಈಗಿನ ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ (ಅಜ್ಜನ ಹೆಸರನ್ನೇ ಮೊಮ್ಮಗನಿಗೆ ಇಡಲಾಗಿದೆ) ಮತ್ತು ಜಿಮ್ಮಿ ಟಾಟಾ. ನವಲ್ ಟಾಟಾ ಅವರು ರತನ್ ಜೀ ಟಾಟಾ ಅವರ ದತ್ತುಪುತ್ರರಾಗಿದ್ದರು. 

ಮದುವೆಯ ಬಳಿಕ ಸಿಮೋನ್ ಟಾಟಾ ಅವರು ಮುಂಬಯಿಯಲ್ಲೇ ನೆಲೆ ನಿಂತರು. ಅವರಿಗೆ ನೋಯೆಲ್ ಟಾಟಾ ಎಂಬ ಮಗ ೧೯೫೭ರಲ್ಲಿ ಹುಟ್ಟಿದನು. ನೋಯೆಲ್ ಗೆ ಜನ್ಮ ನೀಡಿದ ಕೆಲವು ವರ್ಷಗಳ ಬಳಿಕ ೧೯೬೨ರಲ್ಲಿ ಸಿಮೋನ್ ಟಾಟಾ ಅವರು ಟಾಟಾ ಆಯಿಲ್ ಮಿಲ್ಸ್ ನ ಅಂಗಸಂಸ್ಥೆಯಾದ ಲಾಕ್ಮೆ (Lakme) ಗೆ ಸೇರಿಕೊಂಡರು. ಅಲ್ಲಿನ ಆಗು ಹೋಗುಗಳನ್ನೆಲ್ಲಾ ಅರಿತುಕೊಂಡ ಅವರು ಕ್ರಮೇಣ ಆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದರು. ನಂತರ ಎರಡು ದಶಕಗಳ ಬಳಿಕ ಅದೇ ಸಂಸ್ಥೆಯ ಅಧ್ಯಕ್ಷರಾದರು. 

ತಮ್ಮ ಸತತ ಪರಿಶ್ರಮದ ಮೂಲಕ ಸಿಮೋನ್ ಟಾಟಾ ಅವರು ಲಾಕ್ಮೆಯನ್ನು ಸೌಂದರ್ಯವರ್ಧಕ ಲೋಕದ ಅದ್ವಿತೀಯ ಬ್ರಾಂಡ್ ಆಗಿ ಬೆಳೆಯುವಂತೆ ನೋಡಿಕೊಂಡರು. ಇವರ ಪರಿಶ್ರಮವನ್ನು ಗಮನಿಸಿದ ಟಾಟಾ ಬಳಗ ಇವರನ್ನು ೧೯೮೯ರಲ್ಲಿ ಟಾಟಾ ಇಂಡಸ್ಟ್ರೀಸ್ ನ ಆಡಳಿತ ಮಂಡಳಿಗೆ ನೇಮಕ ಮಾಡಿದರು. ೧೯೯೬ರಲ್ಲಿ ಲಾಕ್ಮೆ ಬ್ಯಾಂಡ್ ಅನ್ನು ಹಿಂದೂಸ್ತಾನ್ ಲೀವರ್ ಲಿಮಿಟೆಡ್ (HLL) ಸಂಸ್ಥೆಗೆ ಮಾರಾಟ ಮಾಡಿದರು. ಆ ಮಾರಾಟದಿಂದ ಬಂದ ಹಣದಿಂದ ಟ್ರೆಂಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇವರು ಮುನ್ನಡೆಸಿ ಭದ್ರ ಬುನಾದಿಯನ್ನು ಹಾಕಿಕೊಟ್ಟ ಲಾಕ್ಮೆ ಸಂಸ್ಥೆಯು ಈಗಲೂ ಉತ್ತಮ ಸೌಂದರ್ಯ ವರ್ಧಕಗಳ ಕಂಪೆನಿ ಎಂದು ಹೆಸರುವಾಸಿಯಾಗಿದೆ. 

ಟ್ರೆಂಟ್ ಲಿ. ಸಂಸ್ಥೆಯು ವೆಸ್ಟ್ ಸೈಡ್ ಎಂಬ ಫ್ಯಾಷನ್ ರೀಟೈಲ್ ಅಂಗಡಿಯನ್ನು ತೆರೆಯಿತು. ಲಾಕ್ಮೆಯನ್ನು ಮಾರಾಟ ಮಾಡಿದ ಬಳಿಕ ಅದರ ಶೇರುದಾರರಾಗಿದ್ದವರಿಗೆ ಟ್ರೆಂಟ್ ನಲ್ಲಿಯೂ ಸಮಾನವಾದ ಶೇರುಗಳನ್ನು ನೀಡಲಾಯಿತು. ವೆಸ್ಟ್ ಸೈಡ್ ಪ್ರಸ್ತುತ ಭಾರತದಲ್ಲಿ ಸುಮಾರು ೨೦೦ ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಟ್ರೆಂಟ್ ಸುಮಾರು ೨೫೧೫ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ. ಸಿಮೋನ್ ಅವರು ಟ್ರೆಂಟ್ ಲಿ. ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಅಕ್ಟೋಬರ್ ೩೦, ೨೦೦೬ರ ವರೆಗೆ ಕಾರ್ಯನಿರ್ವಹಿಸಿದ್ದಾರೆ. 

ಇವರು ಕೇವಲ ತಮ್ಮ ಕುಟುಂಬ ಉದ್ದಿಮೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳದೇ ಅನೇಕ ಸಾಮಾಜಿಕ ಸೇವಾ ಸಂಸ್ಥೆಗಳಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅವರು ಮಕ್ಕಳ ವರ್ಲ್ಡ್ ಇಂಡಿಯಾ ಟ್ರಸ್ಟ್ ನ ಸ್ಥಾಪಕ ಟ್ರಸ್ಟಿಯೂ ಆಗಿದ್ದಾರೆ. ತಮ್ಮ ಪತಿ ನವಲ್ ಟಾಟಾ ಅವರ ನಿಧನದ ಬಳಿಕ ಸರ್ ರತನ್ ಜೀ ಟಾಟಾ ಇನ್ಸ್ಟಿಟ್ಯೂಟ್ ನ ಅಧ್ಯಕ್ಷರೂ ಆಗಿದ್ದಾರೆ. ಈ ಮೂಲಕ ಹಲವಾರು ಜನೋಪಕಾರಿ ಕೆಲಸಗಳನ್ನು ಮಾಡಿದ್ದರೆ. ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್ ಇದರ ಟ್ರಸ್ಟಿಯೂ ಆಗಿದ್ದಾರೆ. ತಮ್ಮ ಮಲಮಗ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರತನ್ ಟಾಟಾ ಜೊತೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ. ಹೊರ ದೇಶದಿಂದ ಬಂದು, ನಮ್ಮ ಸಂಸ್ಕೃತಿಯಲ್ಲಿ ಬೆರೆತು ಕೌಟುಂಬಿಕ ಉದ್ದಿಮೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿದ ಖ್ಯಾತಿ ಸಿಮೋನ್ ಟಾಟಾ ಅವರಿಗೆ ಸಲ್ಲಬೇಕು.

(ಆಧಾರ) 

ಚಿತ್ರ ಕೃಪೆ: ಅಂತರ್ಜಾಲ ತಾಣ