ಸಾವಿಲ್ಲದವರು (ವಿಶ್ವಕಥಾಕೋಶ -೨೫)

ಸಾವಿಲ್ಲದವರು (ವಿಶ್ವಕಥಾಕೋಶ -೨೫)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ: ೨೦೧೮

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಹಾಗೂ ೨೦೧೨ರಲ್ಲಿ ತೃತೀಯ ಮುದ್ರಣ ಮಾಡಲಾಯಿತು. ೨೦೧೮ರಲ್ಲಿ ನಾಲ್ಕನೇ ಮುದ್ರಣ ನಡೆಸಲಾಗಿದೆ. ದ್ವಿತೀಯ ಮುದ್ರಣದ ಸಮಯದಲ್ಲಿ ಪ್ರಕಾಶಕರು ಬರೆದ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಇಪ್ಪತ್ತೈದನೆಯ ಸಂಪುಟ ‘ಸಾವಿಲ್ಲದವರು'. ವಿಶ್ವಕಥಾಕೋಶದ ಈ ಸಂಪುಟದಲ್ಲಿ ಪಂಚ ಮಹಾಕಾವ್ಯಗಳಿಂದ ಆಯ್ದ ಕಥೆಗಳಿವೆ. ಪ್ರಪಂಚದ ಐದು ಮಹಾಕಾವ್ಯಗಳಾದ ಗಿಲ್ಗಮೇಶನ ಮಹಾಕಾವ್ಯ, ಇಲಿಯಡ್, ಒಡಿಸ್ಸಿ, ರಾಮಾಯಣ, ಮಹಾಭಾರತ ಗಳಿಂದ ಆಯ್ದ ತಲಾ ಎರಡೆರಡು ಪ್ರಸಂಗಗಳನ್ನು ಇಲ್ಲಿ ಪ್ರಕಟಿಸಲಾಗಿದೆ. 

ಈ ಪುಸ್ತಕದಲ್ಲಿ ಇರುವ ೧೦ ಕಥೆಗಳೆಂದರೆ, ಗಿಲ್ಗಮೇಶನ ಮಹಾಕಾವ್ಯದಿಂದ ಎಂಕಿಡುವಿನ ಆಗಮನ, ಜಲಪ್ರಳಯ. ಇಲಿಯಡ್ ಮಹಾಕಾವ್ಯದಿಂದ ಮನೆಲಾಊಸ್ -ಅಲೆಕ್ಸಾಂದ್ರೋಸ್ ದ್ವಂದ್ವ ಯುದ್ಧ, ಹೆಕ್ತಾರನ ಮರಣ. ಒಡಿಸ್ಸಿ ಮಹಾಕಾವ್ಯದಿಂದ ಇಥಾಕಾದ ಕೂಡುಹ, ಸಭಾಭವನದಲ್ಲಿ ಸಮರ. ರಾಮಾಯಣ ಮಹಾಕಾವ್ಯದಿಂದ ದಶರಥನ ಧರ್ಮಸಂಕಟ, ವಾಲಿಯ ವದೆ ಮತ್ತು ಮಹಾಭಾರತ ಮಹಾಕಾವ್ಯದಿಂದ ದ್ರೌಪದಿಯ ಶಪಥ, ವೀರ ಅಭಿಮನ್ಯು ಕಥಾ ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿದೆ.

ಇಲ್ಲಿರುವ ಕಥೆಗಳನ್ನು ಸಿ.ಕೆ. ನಾಗರಾಜರಾವ್ ಅವರು ನಿರೂಪಣೆ ಮಾಡಿದ್ದಾರೆ. ಈ ನಾಲ್ಕನೆಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೭೦ ಪುಟಗಳನ್ನು ಹೊಂದಿದೆ. ಮಹಾಕಾವ್ಯಗಳ ಕಥಾ ಪ್ರಸಂಗಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ. ಇದು ವಿಶ್ವಕಥಾಕೋಶದ ಕೊನೆಯ ಸಂಪುಟ. ಎಲ್ಲಾ ಸಂಪುಟಗಳ ಪ್ರಧಾನ ಸಂಪಾದಕರಾಗಿದ್ದ ನಿರಂಜನ ಇವರು ತಮ್ಮ ಕೊನೆಯ ಮಾತಾದ ‘ಸಮಾರೋಪ' ದಲ್ಲಿ ಹೀಗೆ ಬರೆದಿದ್ದಾರೆ.

“ಕನ್ನಡ ಮತ್ತು ಭಾರತದ ಬೇರೆ ಕೆಲ ಭಾಷೆಗಳ ಕಥೆಗಳನ್ನು ಬಿಟ್ಟರೆ ಉಳಿದೆಲ್ಲ ಕಥೆಗಳು ಬಂದಿರುವುದು ಇಂಗ್ಲೀಷ್ ನಿಂದ ಅಥವಾ ಇಂಗ್ಲಿಷಿನ ದಾರಿಯಾಗಿ. ಭಾಷೆ ಯಾವುದೇ ಇರಲಿ, ಪ್ರತಿಯೊಬ್ಬ ಕಥೆಗಾರನದ್ದೂ ವಿಶಿಷ್ಟ ಶೈಲಿ. ಅದನ್ನು ಕನ್ನಡಕ್ಕಿಳಿಸುವುದು ಸುಲಭದ ಕೆಲಸವಲ್ಲ. ಅನುವಾದ ಕಾರ್ಯದಲ್ಲಿ ಎಷ್ಟೋ ಸಹೃದಯರ ನೆರವು ದೊರೆಯಿತು. ಹಸ್ತಪ್ರತಿಗಳು ಬಂದಂತೆಲ್ಲ ಮೂಲದೊಡನೆ ತಾಳೆ ಹಾಕಿ ನೋಡಿ ಎಸ್. ಆರ್. ಭಟ್ಟರು ನನ್ನ ಹೊಣೆಯನ್ನು ಹಗುರಗೊಳಿಸಿದರು. ಕನ್ನಡ ಸಾಹಿತ್ಯ ಭಂಡಾರಕ್ಕೆ ವಿಶ್ವಕಥಾಕೋಶ ಪುಟ್ಟ ಕೊಡುಗೆ.”

ಸಂಪಾದಕರಾದ ನಿರಂಜನ ಇವರು ಪುಟ್ಟ ಕೊಡುಗೆ ಎಂದು ಹೇಳಿದರೂ ವಿವಿಧ ದೇಶಗಳ ಸುಮಾರು ೪೦೦ ಕಥೆಗಳನ್ನು ಸಂಗ್ರಹಿಸಿ, ಅನುವಾದ ಮಾಡಿಸಿ ಪ್ರಕಟ ಮಾಡುವುದು ಕನ್ನಡ ಸಾರಸ್ವತ ಲೋಕಕ್ಕೆ ಅವರ ಬಹುದೊಡ್ಡ ಕೊಡುಗೆಯೇ ಸರಿ. ಇದರ ಹಿಂದಿನ ಎಲ್ಲಾ ರೂವಾರಿಗಳನ್ನು ನಾವಿಲ್ಲಿ ಸ್ಮರಿಸಲೇ ಬೇಕು.