ಸಾವು - ಚಿರಂಜೀವತ್ವ - ಪುನರ್ಜನ್ಮ - ಮೋಕ್ಷ: ಒಂದು ಅಭಿಪ್ರಾಯ

ಸಾವು - ಚಿರಂಜೀವತ್ವ - ಪುನರ್ಜನ್ಮ - ಮೋಕ್ಷ: ಒಂದು ಅಭಿಪ್ರಾಯ

ಮನುಷ್ಯನ ಸಹಿತ ಜನ್ಮಕ್ಕೆ ಬರುವ ಪ್ರತಿಯೊಂದು ಜೀವಿಗೂ ಸಾವಿದೆ. ಇದರಲ್ಲಿ ವಿಶೇಷವೇನಿದೆ ಎಂದರೆ ಏನಿಲ್ಲ. ಮರ ಗಿಡ ಬಳ್ಳಿಗಳ ಸಹಿತ ಯಾವುದು ಹುಟ್ಟಿದೆಯೋ, ಅವುಗಳು ಸತ್ತಿವೆ, ಸಾಯುತ್ತವೆ.

ಆದರೂ ಕೆಲವು ಹಿಂದಿನ ಗ್ರಂಥಕರ್ತರು ಕೆಲವರನ್ನು ಚಿರಂಜೀವಿಗಳೆಂದೂ, ಅವರು ಈಗ ಅಲ್ಲಿದ್ದಾರೆ, ಇಲ್ಲಿದ್ದಾರೆ, ಅಲ್ಲಿಗೆ ಬರುತ್ತಾರೆ, ಇಲ್ಲಿಗೆ ಬರುತ್ತಾರೆ, ಈಗಲೂ ತಪಸ್ಸು ಮಾಡುತ್ತಿದ್ದಾರೆ, ಮುಂದೆ ಬರಲಿಕ್ಕಿದ್ದಾರೆ ಎಂಬಿತ್ಯಾದಿಯಾಗಿ ವಿವಿಧ ರೀತಿಯಲ್ಲಿ ಬರೆದಿದ್ದಾರೆ. ಹಲವರು ಇದನ್ನೇ ಅಲ್ಲಲ್ಲಿ, ಆಗಾಗ ಹೇಳುತ್ತಿರುತ್ತಾರೆ. ಮತ್ತೆ ಮತ್ತೆ ಬರೆಯುತ್ತಿರುತ್ತಾರೆ ಇದೆಲ್ಲ ಸತ್ಯವಲ್ಲ, ಕೇವಲ ಭ್ರಮೆ, ಕಾಲ್ಪನಿಕ ಕಸರತ್ತು, ವೈಭವೀಕರಣ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ.

ಕೆಲವು ವಿಷಯಗಳಿಗೆ ಕೆಲವು ಗ್ರಂಥಕರ್ತರು, ಇನ್ನೊಂದು ಗ್ರಂಥವನ್ನು ಪ್ರಮಾಣಗಳೆಂದು ಹೇಳಿ ಅಂತಿಮ ತೀರ್ಮಾನವೆಂಬಂತೆ ಘೋಷಿಸಿ ಕೈತೊಳೆದುಕೊಳ್ಳುತ್ತಾರೆ. ಯಾವ ಗ್ರಂಥವೇ ಇರಲಿ, ಗ್ರಂಥವನ್ನು ರಚಿಸಿದವರು ಮನುಷ್ಯರೇ. ಮೌಖಿಕವಾಗಿ ಬಂದ ವಿಷಯಗಳು ಸಹ ಮನಯಷ್ಯರಿಂದಲೇ ಬಂದ ವಿಷಯಗಳೇ ಹೊರತು ಮತ್ತೇನೂ ಅಲ್ಲ.

ಚಿರಂಜೀವಿ ಎಂಬ ಪದವನ್ನು, ಒಬ್ಬ ವ್ಯಕ್ತಿ ಮಾಡಿದ ಕೆಲಸಗಳ ಮೇಲೆ ಆತನ ಹೆಸರು ಶತ ಶತಮಾನಗಳ ಕಾಲ ಉಳಿಯುವುದಕ್ಕೆ ಹೋಲಿಸಿದರೆ ಅದನ್ನು ಒಪ್ಪಬಹುದು. ಇಲ್ಲಿ ಇದಕ್ಕೆ ಒಳ್ಳೆಯ ಕೆಲಸ ಮತ್ತು ಕೆಟ್ಟ ಕೆಲಸ ಎಂದೇನೂ ಇಲ್ಲ. ಕೆಲವು ಕಥೆ - ಕಾದಂಬರಿ - ಕಾವ್ಯಗಳಲ್ಲಿ ಬರುವ ಪಾತ್ರಗಳು (ನಾಯಕ, ಖಳ ನಾಯಕ, ಇತ್ಯಾದಿ ಪಾತ್ರಗಳು) ಮತ್ತು ಗ್ರಂಥಕಾರರ ಹೆಸರು ಶತ ಶತಮಾನಗಳ ನಂತರವೂ ಉಳಿದುಕೊಂಡು ಬಂದಿವೆ. ಹೀಗೆ ಜನಮಾನಸದಲ್ಲಿ ಉಳಿದುಕೊಂಡು ಬರುವುದನ್ನು ಚಿರಂಜೀವಿ ಎಂಬ ಅರ್ಥದಲ್ಲಿ ಗ್ರಹಿಸಿದರೆ ಇದನ್ನು ಒಪ್ಪಬಹುದು. ಇದು ಬಿಟ್ಟು ಶತ ಶತಮಾನಗಳ ಹಿಂದಿನ ಯಾವನೋ ಒಬ್ಬ ಈಗಲೂ ಇದ್ದಾನೆ ಎಂದು ವಾದಿಸ ಹೊರಟರೆ, ಇದು ಕುತರ್ಕ, ಶತಮೂರ್ಖತನ ಎಂದಷ್ಟೇ ಹೇಳಬಹುದು.

ಸಾವಿನ ನಂತರ ಸ್ವರ್ಗವನ್ನೋ, ನರಕವನ್ನೋ ಅನುಭವಿಸಿ ಮತ್ತೆ ಬಂದವರು ಯಾರೂ ಇಲ್ಲ. ಕಥೆಗಳಲ್ಲಿ ಇರಲೂಬಹುದು. ಕಥೆಗಳನ್ನು ಕಥೆಗಳೆಂದೇ ತಿಳಿದರೆ ಇಲ್ಲಿ ಈ ವಿಷಯಕ್ಕೆ ಚರ್ಚೆಯೇ ಇಲ್ಲ. ಕಥೆಗಳನ್ನು ವಾಸ್ತವ ಎಂದು ಹೇಳಹೊರಟಾಗ ವಿಷಯ ಚರ್ಚೆಗೆ, ಸಮುದ್ರ ಮಥನಕ್ಕೆ ಕಾರಣವಾಗುತ್ತದೆ.

ಹುಟ್ಟಿದ ಪ್ರತಿ ಜೀವಿಯೂ  ಸಾಯಲೇಬೇಕು. ಸತ್ತ ಜೀವಿ ಮತ್ತೆ ಹುಟ್ಟಿ ಬರುತ್ತಾನಾ, ಇಲ್ಲವಾ ಗೊತ್ತಿಲ್ಲ. ಕೆಲವು ಗ್ರಂಥಗಳಲ್ಲಿ ಪುನರ್ಜನ್ಮ ಇದೆ ಎಂದು ಹೇಳುತ್ತವೆ. ಇನ್ನು ಕೆಲವು ಗ್ರಂಥಗಳು ಪುನರ್ಜನ್ಮವಿಲ್ಲವೆಂದು ಹೇಳುತ್ತವೆ. ಇವೆರಡೂ ಅಂತಿಮ ಸತ್ಯವೆಂದು ಹೇಳಲು ಸಾಧ್ಯವಿಲ್ಲ. ಆದರೆ ಕೆಲವು ಗ್ರಂಥಗಳಲ್ಲಿ ಕೆಲವರಿಗೆ ಮಾತ್ರ ಮತ್ತೆ ಪುನರ್ಜನ್ಮವಿಲ್ಲದೆ ದೇವರು ಮೋಕ್ಷ ಕರುಣಿಸುತ್ತಾನೆ ಎಂಬ ಹೇಳಿಕೆಗಳಿವೆ.

ಪುನರ್ಜನ್ಮ ಸಿದ್ಧಾಂತವನ್ನು ಪ್ರತಿಪಾದಿಸುವ ಕೆಲವು ಗ್ರಂಥಗಳಲ್ಲಿ ಕೆಲವರಿಗೆ ಮಾತ್ರ ಮತ್ತೆ ಜನ್ಮವಿಲ್ಲದ ಮೋಕ್ಷ ಇದೆ ಎಂಬ ಹೇಳಿಕೆಗಳಿವೆ. ಈ ರೀತಿಯ ಮೋಕ್ಷದ ಪ್ರತಿಪಾದನೆಗೆ ಮಾತ್ರ ಯಾವುದೇ ಒಂದು ಸರಿಯಾದ ಸಮರ್ಥನೆಗಳಿಲ್ಲ. ಇದೊಂದು ಭ್ರಮೆ ಅಥವಾ ಕಲ್ಪನೆಯಷ್ಟೇ ಆಗಿದೆ. ಈ ಮೋಕ್ಷದ ಪ್ರತಿಪಾದನೆಗೆ ಸ್ವಾರ್ಥ, ಸ್ವಜನ ಪಕ್ಷಪಾತ, ಪೂರ್ವಗ್ರಹಪೀಡೆಯೇ ಕಾರಣ ಇರಲೂಬಹುದು.

~ ಶ್ರೀರಾಮ ದಿವಾಣ

ಚಿತ್ರ ಕೃಪೆ: ಇಂಟರ್ನೆಟ್ ತಾಣ