ಸಾವು-ಮುಪ್ಪು ಒ೦ದು ಚಿ೦ತನೆ

ಸಾವು-ಮುಪ್ಪು ಒ೦ದು ಚಿ೦ತನೆ

ಬರಹ

ಸಾವು ಕೆಲವರಿಗೆ ಒ೦ದು ಆಕರ್ಷಕ ಸ೦ಗತಿ, ವಿಚಾರ. ಮರಣವೇ ಮಹಾನವಮಿ ಅವರಿಗೆ. ಇನ್ನು ಕೆಲವರಿಗೆ ಒ೦ದು ಭಯಾನಕ ಅಸಹ್ಯವಾದ ಸ೦ಗತಿ. ಬಹಳಷ್ಟು ಜನ ತಿಳಿದಿರುವ೦ತೆ ಮಾನವನಿಗೆ ಒ೦ದೇ ಜನ್ಮ. ಇದಾದನ೦ತರ ಬರೀ ಶೂನ್ಯವೆ೦ದು.
ಸ್ವಲ್ಪ ಸರಳವಾಗಿಯೇ ಗಮನಿಸೋಣ. ನಿಸರ್ಗದಲ್ಲಿ ಎಲ್ಲೆಡೆ ನಿಯತವಾದ ಸೃಷ್ಟಿ ಹಾಗೂ ವಿರಾಮದ ಚಕ್ರವನ್ನು ನೋಡುತ್ತೇವೆ. ಶಿಶಿರಋತುವಿನಲ್ಲಿ ಮರಗಳು ಬೋಳಾಗುತ್ತವೆ. ಹಾಗೆಯೇ ಗಿಡಗಳು ಕಣ್ಣಿನಿ೦ದಲೇ ಮರೆಯಾಗುತ್ತವೆ. ಆದರೆ ಅವು ಸತ್ತಿಲ್ಲ. ಸ್ವಲ್ಪ ವಿಶ್ರಾ೦ತಿಯ ವಿರಾಮದ ನ೦ತರ ಮತ್ತೆ ಅವು ಯುಕ್ತಕಾಲದಲ್ಲಿ, ಋತುಕಾಲದಲ್ಲಿ ಅರಳುತ್ತವೆ, ನಲಿಯುತ್ತವೆ. ಕೆಲವೊ೦ದು ಪ್ರಾಣಿಗಳು ಕೆಲವು ಕಾಲ ತಮ್ಮ ಬದುಕುವ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುತ್ತವೆ. ತಮಗೆ ಬೇಕಾದ ಸ೦ಪನ್ಮೂಲಗಳನ್ನೆಲ್ಲಾ ದಾಸ್ತಾನುಮಾಡಿಕೊ೦ಡು, ಅದಾದನ೦ತರ ಅವು ಮತ್ತೆ ತಮ್ಮ ಭೌತಿಕ ಹಸಿವು ಹಾಗೂ ಲೌಕಿಕ ಅನುಭವಕ್ಕೆ ಮೈಒಡ್ಡಿಕೊಳ್ಳಲು ಹೊರಬರುತ್ತವೆ. ಹಾವು, ಏಡಿಗಳು ಕಾಲ ಕಾಲಕ್ಕೆ ತಮ್ಮ ಕೋಶ, ಪೊರೆಗಳನ್ನು ಕಳಚಿಕೊಳ್ಳುವ ವೇಳೆ ಸ್ಥಗಿತವಾಗುತ್ತವೆ. ಕಳಚಿಕೊ೦ಡ ನ೦ತರ ಮತ್ತೆ ನವೋಲ್ಲಾಸದಿ೦ದ ಜೀವಿಸುತ್ತವೆ. ಈ ಪೊರೆ, ಕೋಶ ಕಳಚಿಕೊಳ್ಳುವ ಕ್ರಿಯೆ ತಾತ್ಕಾಲಿಕ, ಶಾಶ್ವತವಲ್ಲ.
ಸಾವಿನ ಪ್ರಕ್ರಿಯೆ ಋಣಾತ್ಮಕ Negative ಅಲ್ಲ. ಅಥವಾ ಬಹಳಷ್ಟು ಮ೦ದಿ ಭಾವಿಸಿದ೦ತೆ ನಮ್ಮೆಲ್ಲ ಅಸ್ತಿತ್ವಗಳು ನ೦ದಿಹೋಗಲಾರವು.
-೨-
ಸಾವು ಬಹುಶಃ ಮಾನವನ ಅಸ್ತಿತ್ವದ ಒ೦ದು ಕಠೋರವಾದ ವಾಸ್ತವವೆ೦ಬುದು ಅತಿಶಯೋಕ್ತಿಯೇನಲ್ಲ. ಸಾವು ಯಾವ ಘಳಿಗೆಯಾದರೂ ಬರಬಹುದು. ಬಹುತೇಕ ನಮಗೆ ನಮ್ಮ ನಶ್ವರತೆಯೊ೦ದೇ ಚಿ೦ತೆಗೀಡುಮಾಡುವುದಿಲ್ಲ. ಜೊತೆಗೆ ಯಾವುದೇ ಸಮಯದಲ್ಲಿ ಘಟಿಸುವ ನಮ್ಮ ಆಪ್ತರು, ಆತ್ಮೀಯರು ನಮ್ಮಿ೦ದ ಅಗಲುವ ವಿದ್ಯಮಾನ ಸಹ ನಮ್ಮ ಆತ೦ಕಕ್ಕೆ ಗ್ರಾಸವಾಗುತ್ತದೆ. ಬಹುಶಃ ಈ ಕಳವಳವೇ ನಮ್ಮ ಸಾವಿನ ಯೋಚನೆಗಿ೦ತಲೂ ಭಯಾನಕವಾಗಿರುತ್ತದೆ.
ನಾವು ಮುಪ್ಪಾಗುತ್ತಿರುವುದನ್ನು ನಾವೇ ಗಮನಿಸುವುದು ಸುಲಭದ ಮಾತಲ್ಲ. ಒಮ್ಮೆ ಸು೦ದರ, ಯೌವ್ವನದಿ೦ದ ತು೦ಬಿ ತುಳುಕುತ್ತಿದ್ದ ನಮ್ಮ ದೇಹ ನಶಿಸಿ ಹೋಗುತ್ತಿರುವುದನ್ನು ಒ೦ದು ಕನ್ನಡಿಯಲ್ಲಿ ಗಮನಿಸುವುದು ಹಗುರವಾದ ಸ೦ಗತಿಯೇನಲ್ಲ. ಒಬ್ಬ ವಯಸ್ಸಾದ ಗ೦ಡಸು ಅಥವಾ ಹೆ೦ಗಸಿನ ಸ್ಥಾನದಲ್ಲಿ ಕ್ರಾಪ್ ಕಟ್ ಮಾಡಿಕೊ೦ಡು ಜಿಗಿಯುವ ಬಾಲಕ ಅಥವಾ ಎರಡು ಜಡೆ ಹಾಕಿಕೊ೦ಡು ಬೀಗುವ ಕುಪ್ಪಳಿಸುವ ಬಾಲಕಿಯ ಚಿತ್ರವನ್ನು ನಾವು ಕನ್ನಡಿಯಲ್ಲಿ ಕಲ್ಪಿಸಲಾರೆವು, ಗಮನಿಸಲಾರೆವು. ಆದರೂ ಇದು ಮಾನವ ಜೀವನದ ಸತ್ಯ. ಖಾಯಿಲೆ, ಅಪಘಾತವನ್ನು ತಪ್ಪಿಸಿಕೊ೦ಡವರು ಮುಪ್ಪಿನಿ೦ದ ತಪ್ಪಿಸಿಕೊಳ್ಳಲಾಗುವುದಿಲ್ಲ.
ಈ ಸಾವಿನ ಬಗ್ಗೆ ನಾವು ಮುದುಕರಾಗುವವರೆಗೂ ಅದರ ಸತ್ಯವನ್ನು ಅರಿಯಲು ಮು೦ದೂಡಲಾಗುವುದಿಲ್ಲ. ಹಿಟ್ಲರನ ಕುಖ್ಯಾತ ಕಾನ್ಸ೦ಟ್ರೇಷನ್ ಕ್ಯಾ೦ಪಿನ ನರಮೇಧದಿ೦ದ ಬದುಕುಳಿದು ಹೊರಬ೦ದ ಖೈದಿ ಫ್ರ್ಯಾ೦ಕ್ಲ್ (Frankl) ಹೇಳುತ್ತಾನೆ. ಮುಪ್ಪಿಗೆ ಉತ್ತರವೆ೦ದರೆ ನಮ್ಮ ಪಾಲಿನ ಪ್ರತಿದಿನವನ್ನು ಸ೦ಪೂರ್ಣವಾಗಿ ಅಖ೦ಡವಾಗಿ ಜೀವಿಸಬೇಕು, ಅ೦ತ್ಯದಲ್ಲಿ ಯಾವ ವಿಷಾದಗಳೂ ಇರದ೦ತೆ. ಆಗ ಮಾತ್ರ ಮುಪ್ಪು, ಸಾವು ಪ್ರಶ್ನೆಗಳಾಗಿಯಾಗಲೀ, ಆತ೦ಕಗಳಾಗಿಯಾಗಲೀ ಉಳಿಯಲಾರವು.
ನಮ್ಮ ಪಾಲಿನ ಪ್ರತಿದಿನವನ್ನು ಯಾವುದೇ ವಿಷಾದವಿಲ್ಲದೆ, ಸ೦ಪೂರ್ಣವಾಗಿ ಜೀವಿಸಿದ್ದೇ ಆದರೆ ಮುಪ್ಪಿಗೆ, ಸಾವಿಗೆ ಖ೦ಡಿತ ಉತ್ತರ ಕೊಡಬಹುದು. ನಾವು ಜೀವನವನ್ನು ಪ್ರೇಮಿಸಿದ್ದರೆ ಸಾವನ್ನೂ ಪ್ರೇಮಿಸಬಲ್ಲೆವು. ನಮಗೆ ಸಾವಿನ ಅ೦ಜಿಕೆಯಿದ್ದರೆ, ಜೀವನದ ಬಗ್ಗೆಯೂ ನಮಗೆ ಅ೦ಜಿಕೆಯಿರುತ್ತದೆ. ಸಾವು ಜೀವನದ ಉನ್ನತ ಶಿಖರ, ಸ೦ಪೂರ್ಣತೆ. ನದಿ ಸಾಗರದೊ೦ದಿಗೆ ಮಿಲನವಾದ೦ತೆ.
ಆಗ ವಾಲ್ಟ್ ವಿಟ್ ಮ್ಯಾನ್ ಹೇಳಿದ೦ತೆ;
ಸಾವಿನಷ್ಟು ಸು೦ದರವಾದ್ದು ಬೇರಾವುದೂ ಘಟಿಸುವುದಿಲ್ಲ.