ಸಾವೆಂಬ ಸಕಲೇಶಪುರದಲ್ಲಿ....!

ಸಾವೆಂಬ ಸಕಲೇಶಪುರದಲ್ಲಿ....!

ಹೊತ್ತು ಕಳೆದದ್ದೇ ತಿಳಿಯಲಿಲ್ಲ 
ಪ್ರಾಯದಿಂದಭಿಪ್ರಾಯದತನಕ 
ಇನ್ನೂ ಬಾಲ ತಾರುಣ್ಯವೆ
ಎಂದು ಮನ ಹಪಹಪಿಸುತಿದ್ದರೂ 
ಬೆಳ್ಳಿ ರೇಖೆಯಂತೆ 
ಅಲ್ಲೊಂದು ಇಲ್ಲೊಂದು 
ಕಾಣಿಸೆಬಿಟ್ಟಿತಲ್ಲ 
ನೊರೆಗೂದಲೂ !
ನಲವತ್ತಕ್ಕೆ ಮತ್ತೈದುದುರಿ 
ಹಣೆ ಸುಕ್ಕುಗಳು ಒಳಗೊಳಗೇ ಮುದುರಿ 
ಕೆನ್ನೆ ಒಳಗೆಳೆದು 
ಕನ್ನಡಿಯೇ ಅದುರಿ 
ಕನ್ನಡಕದೊಳಗೆ ಅವಿತುಕೊಂಡಾಗ
ಶೀತಲ ನೆನಪು ಪಿಸುಗುಟ್ಟಿತು 
ಕಳೆದಾಯ್ತು ಹರೆಯ, ಮುಟ್ಟಿದೆಯ ಗುರಿಯ?
 
ಥಟ್ಟನೆ  ಹಿಂತಿರುಗಿ ನೋಡಿದರೆ ಕೆಳಗೆ 
ಹೆಜ್ಜೆ ಮೊದಲ ಮೆಟ್ಟಿಲ ಒಳಗೊಳಗೇ
ಮುಂದೆ ಮತ್ತಿನ್ನೂರು ಹೊಚ್ಚ ಹೊಸ ಮಳಿಗೆ!   
ಟುಸ್ಸ್ ಎಂದು ಬತ್ತಿ ಉತ್ಸಾಹವೆಲ್ಲ 
ಕುಗ್ಗಿ ಕೊನರಾಡಿದರೂ 
ಬಂಡನಂತೆ ಉತ್ತರ ಪೌರುಷದಲ್ಲಿ 
ನುಗ್ಗಿ ಹೆಣಗಾಡುವ 
ಅನಿವಾರ್ಯಕ್ಕೆ ಅಚ್ಚರಿಗೊಂಡು 
ಅಕಟಕಟ! 
ನಾನು ಅನಂತನೆಂಬ 
ಮೂರ್ಖ ಭ್ರಮೆಯಲ್ಲಿ 
ಮುಳುಗೇಳುತಿದ್ದಂತೆ 
ಸಕಲೇಶಪುರದಿಂದ ಬಂತವನ ಸಾವಿನ ಸುದ್ದಿ ...
ಛೆ! ಏನಾಗಿತ್ತವನ ವಯಸ್ಸು
ಮಿಕ್ಕಿರಲಿಕ್ಕಿಲ್ಲ ಸಹ ಐವತ್ತು?
 
ಅರೆ ಗಂಟೆ, ಅರ್ಧ ದಿನ ಕಾಡಿತ್ತು ನ'ಮನ
ಏನಾಯಿತಾಮೇಲೆ?
ದಿನದಿನದಂತೆ ಗಮನ
ಜಗಕೆ ಹೊಸದೇನಲ್ಲ ಸಾವಿನ ಸುದ್ದಿ
ಸೋಜಿಗವು
ನಮಗನ್ವಯಿಸದೆಂಬ ಮೊಂಡ ಬುದ್ದಿ!
ನಮ್ಮೊಳಡಗಿದೆ ನಿರಂತರ ಭಯ,ಭೀತಿ 
ಆದರೂ ಸದ್ಯಕ್ಕಲ್ಲ
ಮುಂದೆಂದೋ ಎಂಬ ಹುಸಿ ಭ್ರಾಂತಿ!
ಕಳೆದಂತೆ ಅರೆ ಆಯಸ್ಸು 
ಉಳಿದಿದೆಯ ನಿಜಕ್ಕೂ ಅರ್ಧ?
ಅರ್ಧದಲ್ಲರ್ಧದಲ್ಲರ್ಧದಲ್ಲರ್ಧ? 
ಬಲ್ಲವರಾರು? ಸಲ್ಲುವವರಾರು?
ಸಾವೆಂಬ ಸಕಲೇಶಪುರ ಸಮರ 
ಗೆಲ್ಲುವವರಾರು?
ಅರಿತು ಮೆಲ್ಲುವವರಾರು?
 

- ನಾಗೇಶ ಮೈಸೂರು, ಸಿಂಗಾಪುರದಿಂದ

Comments

Submitted by ರಾಮಕುಮಾರ್ Fri, 06/14/2013 - 12:35

In reply to by nageshamysore

ನಾಗೇಶ್ ನಿಮ್ಮ ಕವನ ಚೆನ್ನಾಗಿದೆ. ಪ್ರಾಸದ ಬಗ್ಗೆ ನಿಮ್ಮ ಚರ್ಚೆ ನನ್ನನ್ನು ಕಾವ್ಯ ಕಟ್ಟುವಿಕೆಯ ಒಟ್ಟು ಕ್ರಿಯೆಯ ಬಗ್ಗೆ ಯೋಚನೆಯನ್ನ ಉದ್ದೀಪಿಸಿತು. ಈ ಲಿಂಕುಗಳನ್ನ ಗಮನಿಸಿ. ಪ್ರಾಸದ ಬಗ್ಗೆ, ಕಾವ್ಯ ಕಟ್ಟುವಿಕೆಯ ಬಗ್ಗೆ ಸೊಗಸಾದ ಚರ್ಚೆಗಳಿವೆ. http://www.chukkubu… http://www.chukkubu… ನಮ್ಮದೇ ಕಾವ್ಯಮಾರ್ಗ ನಿರ್ಮಿಸಿಕೊಳ್ಳುವ ಬಗ್ಗೆ ಕೆ.ವಿ ತಿರುಮಲೇಶರ ಈ ಸಾಲುಗಳು ಮನನೀಯ ಅನ್ನ್ಸುತ್ತೆ. -- ಛೀ ಸಾಕು ಈ ಹುಚ್ಚು ಸೆಕೆಂಡ್ ಹ್ಯಾಂಡ್ ಕಾವ್ಯ ಯಾರ ಟೇಸ್ಟಿಗೋ ಮಾಡಿದ ಅಡಿಗೆಯಿದು ಪಂಪ ಕುಮಾರವ್ಯಾಸ, ಮಿಲ್ಟನರ ಕಿಸೆಗೆ ಕೈಹಾಕಿ ಪದ ವಿಜೃಂಭಣೆಯ ಅಮಲಿನಲ್ಲಿ ನಾನು ರಾಮಾಯಣ ಬರೆಯಲೊಲ್ಲೆ ನನ್ನ ದರ್ಶನ ಬೇರೆ... -- ನಾನು ಕವಿಯಲ್ಲ. ಆದರೂ ಹಿಂದೊಮ್ಮೆ ಹೀಗೆ ಪ್ರಯತ್ನ ಮಾಡಿದ್ದೆ... http://sampada.net/…
Submitted by nageshamysore Fri, 06/14/2013 - 19:01

In reply to by ರಾಮಕುಮಾರ್

ನಮಸ್ಕಾರ ರಾಮಕುಮಾರರವರೆ, ನೀವು ಕೊಟ್ಟ ಕವಿ ಮಂಜುನಾಥರ ಮತ್ತು ವಿವೇಕ ಶಾನುಭಾಗರ ಲಿಂಕು ಓದುತ್ತಿದ್ದರೆ ಕಣ್ಮುಂದೆ ಹೊಸ ವಿಶ್ವವೆ ತೆರೆದುಕೊಂಡ ಅನುಭವ , ಹಾಗೆ ನಾನಿನ್ನೂ ಇರುವ ಬಾಲಿಶ ಸ್ತರದ ಅರಿವಿನ ಸಂಕೋಚ - ಎರಡು ಒಟ್ಟಿಗೆ ಆಯ್ತು. ಈ ಪುಟ್ಟ ವಿಶ್ವ ದರ್ಶನ ಮಾಡಿಸಿದ್ದಕ್ಕೆ (ಮತ್ತು ಕವನ ಮೆಚ್ಚಿಗೆಯಾದದ್ದಕ್ಕೆ) ಧನ್ಯವಾದಗಳು. ಹಾಗೆ ತಿರುಮಲೇಶರ ಸೊಗಸಾದ ನುಡಿಗಳು ಅರ್ಥಪೂರ್ಣ. ಕವಿಯಾಗಿ ನಿಮ್ಮ ಯತ್ನ ನೋಡಲು ಯತ್ನಿಸಿದೆ - ಲಿಂಕು ಯಾಕೊ ಕೆಲಸ ಮಾಡಲಿಲ್ಲ; ಮತ್ತೊಮ್ಮೆ ಸರಿಯಾದ ಲಿಂಕು ಕೊಡಿರೆಂದು ಕೋರುತ್ತೇನೆ - ನಾಗೇಶ ಮೈಸೂರು, ಸಿಂಗಪುರದಿಂದ
Submitted by ksraghavendranavada Fri, 06/14/2013 - 20:32

ಚೆ೦ದದ ಕವನ.. ಆರ೦ಭದಲ್ಲಿ ಜನ್ಮದಿನದ೦ದು ಸ್ವ ವಿಮರ್ಶೆಯೇನೋ ಎ೦ಬ೦ತೆ! ಚೆನ್ನಾಗಿದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
Submitted by nageshamysore Sat, 06/15/2013 - 06:06

In reply to by ksraghavendranavada

ನಾವಡರೆ ನಮಸ್ಕಾರ - ಬರಿ ಒಂದು ಜನ್ಮದಿನದ್ದಲ್ಲ, ಜೀವಿತದ ಒಟ್ಟಾರೆ ಜನ್ಮದಿನಗಳ ಮೊತ್ತಕ್ಕೆ ಸೇರಿಸಿದ್ದು ಅಂದರೂ ತಪ್ಪೇನಿಲ್ಲ - ಒಂದು ರೀತಿಯಲ್ಲಿ 'ಮಿಡ್ ಲೈಫ್ ಕ್ರೈಸಿಸ್'ನ ಒಂದು ರೂಪವೆಂದೂ ಹೇಳಬಹುದೇನೊ...ನಮ್ಮಲ್ಲೆಲ್ಲರಿಗೂ ಒಂದಲ್ಲ ಒಂದು ವಿಧದಲ್ಲಿ ಕಾಡುವ ಅತೃಪ್ತಿ, ಗೊತ್ತು ಗುರಿಯಿರದ ಗಮ್ಯ - ಮತ್ತದನ್ನು ಇನ್ನು ತಲುಪಲಾಗದ ಆತಂಕ, ಇಂತಹ ಜಂಜಾಟಗಳ ನಡುವೆ ಯಾಂತ್ರಿಕವೆನಿಸಿಬಿಡುವ ಹುಟ್ಟು-ಸಾವುಗಳ ಸಂಭಮ-ಯಾತನೆ ಮತ್ತು ಸಾವಿನಂತಹ ಪ್ರಕ್ಷೇಪಗಳು ನಮಗಲ್ಲದ್ದೆಂಬ ನಿರ್ಲಕ್ಷ್ಯ - ಎಲ್ಲವು ಪೇರಿಸಿದ ಮಿಶ್ರಣದ ಫಲಿತ. ನಿಮಗೆ ಹಿಡಿಸಿದ್ದು ತುಂಬ ಸಂತಸ. ಪ್ರೋತ್ಸಾಹ ಹೀಗೆ ಇರಲಿ - ನಾಗೇಶ ಮೈಸೂರು, ಸಿಂಗಪುರದಿಂದ