ಸಾಸಿವೆ ಬೀಜದ ಪ್ರಯೋಜನಗಳು

ಸಾಸಿವೆ ಬೀಜದ ಪ್ರಯೋಜನಗಳು

‘ಸಾವಿಲ್ಲದ ಮನೆಯಿಂದ ಸಾಸಿವೆ ತಾ’ ಎನ್ನುವ ಭಗವಾನ್ ಗೌತಮ ಬುದ್ಧರ ನುಡಿ ಬಹಳ ಪ್ರಸಿದ್ಧಿ. ಸಾಸಿವೆ ಬಹಳ ಪುಟ್ಟದಾದ ಕಾಳು. ಆದರೆ ಅಡುಗೆಗೆ ಬಹಳ ಉಪಯುಕ್ತ. ಒಗ್ಗರಣೆ ಹಾಕಲಂತೂ ಸಾಸಿವೆ ಬೇಕೇ ಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆ ಸಿಡಿಸಿ, ಕರಿಬೇವು ಸೊಪ್ಪು ಹಾಕಿದರೆ ಆಹ್ಲಾದಕರ ಸುವಾಸಮೆ ಮನೆತುಂಬಾ ಬರುತ್ತದೆ. ಈ ಕಾರಣದಿಂದ ಎಲ್ಲಾ ಬಗೆಯ ಅಡಿಗೆಯಲ್ಲಿ ಒಗ್ಗರಣೆ ನೀಡಲು ಬಳಸುತ್ತಾರೆ. ಈ ಬೀಜದಲ್ಲಿ ಒಮೇಗಾ-೩ ಕೊಬ್ಬಿನಾಮ್ಲಗಳು, ಮೆಗ್ನೀಷಿಯಂ ಮತ್ತು ಸೆಲೆನಿಯಂ ನಂಥಹ ಅಂಶಗಳಿವೆ. ಜೊತೆಗೆ ಇದು ರಂಜಕ, ಮ್ಯಾಂಗನೀಸ್, ತಾಮ್ರ  ಮತ್ತು ವಿಟಮಿನ್ ಬಿ ೧ ನ ಉತ್ತಮ ಮೂಲ ಎಂದು ಹೇಳಲಾಗಿದೆ.

ಅಡುಗೆ ಮನೆಯಲ್ಲಿ ಅನೇಕ ಮಸಾಲೆಗಳಿರುತ್ತವೆ. ಆದರೆ ಸಾಸಿವೆ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೇ, ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ. ಇದನ್ನು ದೇಹವನ್ನು ತಂಪಾಗಿಸಲು ಮತ್ತು ಆರೋಗ್ಯವನ್ನು ಚೆನ್ನಾಗಿಡಲು ಜನರು ಬಳಸುತ್ತಾರೆ. ಈ ಪುಟ್ಟ ಸಾಸಿವೆ (Mustard) ಯನ್ನು ನೀರಿನಲ್ಲಿ ನೆನೆಸಿಟ್ಟು, ಆ ನೀರನ್ನು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳು ಇವೆ ಗೊತ್ತೇ?

ರಾತ್ರಿ ಮಲಗುವಾಗ ನೀರಿನಲ್ಲಿ ನೆನೆಸಿಟ್ಟ ಸಾಸಿವೆ ಕಾಳುಗಳ ನೀರನ್ನು ಬೆಳಿಗ್ಗೆ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸಿ, ದೇಹದ ಆರೋಗ್ಯ ಮಟ್ಟ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾದರೆ ಹೃದಯದ ರೋಗ, ಹೃದಯಾಘಾತ ಆಗುವ ಸಾಧ್ಯತೆ ಕಡಿಮೆ ಆಗುತ್ತದೆ. ಅದೇ ಸಮಯದಲ್ಲಿ, ಸಾಸಿವೆ ನೀರು ಚರ್ಮಕ್ಕೂ ಪ್ರಯೋಜನವಿದೆ. ಇದು ಚರ್ಮವನ್ನು ಒಣಗದಂತೆ ರಕ್ಷಿಸುತ್ತದೆ. ವಯಸ್ಸಾಗುತ್ತಿರುವಂತೆ ಕಾಣುವ ಚರ್ಮದ ಹೊಳಪನ್ನು ಕಾಪಾಡುತ್ತದೆ. ಚರ್ಮದ ಸೋಂಕಿನಿಂದ ನಿಮ್ಮನ್ನು ಕಾಪಾಡಿ ನೀವು ಇನ್ನಷ್ಟು ಯುವಕರಂತೆ ಕಾಣಿಸಲು ನೆರವಾಗುತ್ತದೆ.

ನಮ್ಮ ದೇಹದಲ್ಲಿ ಯಾವುದೇ ಆಂತರಿಕವಾಗಿ ಉರಿಯೂತವಿದ್ದರೆ, ಸಾಸಿವೆ ನೀರು ಅದನ್ನು ತೊಡೆದುಹಾಕಲು ನೆರವಾಗುತ್ತದೆ. ಇದಲ್ಲದೇ, ಇದರಲ್ಲಿ ಕಂಡು ಬರುವ ಮೆಗ್ನೀಷಿಯಂ ಅಸ್ತಮಾ, ಸಂಧಿವಾತ ಮತ್ತು ಕಡಿಮೆ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹು ಉಪಯೋಗಿ. ಸಾಸಿವೆಯ ಬಳಕೆ ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಬಾಯಿಯ ದುರ್ವಾಸನೆಯನ್ನು ನಿವಾರಣೆ ಮಾಡುತ್ತದೆ. 

ಇದು ಕೂದಲಿನ ಬೆಳವಣಿಗೆಗೆ ಉತ್ತಮ ಎಂಬ ಮಾಹಿತಿ ಇದೆ. ಸಾಸಿವೆಯ ಬಳಕೆಯಿಂದ ನಾವು ತಿನ್ನುವ ಆಹಾರದಿಂದ ಅಡ್ಡಪರಿಣಾಮಗಳಾಗುವುದಿಲ್ಲ. ನಿಮಗೆ ಬರುವ ಕೆಲವೊಂದು ತಲೆನೋವುಗಳು ಸಾಸಿವೆ ಬಳಕೆಯಿಂದ ನಿವಾರಣೆಯಾಗುತ್ತದೆ. ಮಕ್ಕಳಲ್ಲಿ ಮೊದಲು ಬರುವ ಹಾಲು ಹಲ್ಲುಗಳು ಮತ್ತು ಮೂಳೆಗಳನ್ನು ಬಲ ಪಡಿಸುತ್ತದೆ. ಸಾಸಿವೆ ನೀರನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ಪ್ರಯೋಜನಗಳು ಹಲವಾರು. ಈ ಕಾರಣದಿಂದ ಸಾಸಿವೆಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ನಿಯಮಿತವಾಗಿ ಬಳಸಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ