ಸಾಹಸಿ ದಿಟ್ಟ ವೀರವನಿತೆ

ಸಾಹಸಿ ದಿಟ್ಟ ವೀರವನಿತೆ

ಕವನ

ಕನ್ನಡನಾಡಿನ ವೀರಮಹಿಳೆ ಓಬವ್ವ

ಜನಿಸಿದೆ ಕೂಡ್ಲಿಗಿಯ ಪವಿತ್ರ ಮಣ್ಣಲ್ಲಿ ನೀನವ್ವ|

ಛಲವಾದಿ  ಕಹಳೆ ಚಿನ್ನಪ್ಪನ ಕುಡಿಯವ್ವ

ನಮ್ಮ ಹೆಮ್ಮೆಯ ಕರುಣೆಯ ಕಡಲವ್ವ||

 

ಏಳುಸುತ್ತಿನ ಚಿತ್ರದುರ್ಗ ದ ಕಲ್ಲಿನ ಕೋಟೆ

ವರಿಸಿ ಬಂದೆ ಕಹಳೆ ಮದ್ದ ಹನುಮಪ್ಪನ|

ಪಾಳೆಗಾರರ ಆಡಳಿತದ ಆಡೊಂಬಲದಿ 

ಏನೂ ಅರಿಯದ ಮುಗುದೆ ನೀನಾಗಿದ್ದೆ ||

 

ಹೈದರಾಲಿಯ  ಆಕ್ರಮಣ  ಕೋಟೆ ಮೇಲಾಯ್ತು

ವಶವಾಗದೆ ನಿರಾಸೆಯಲಿ ಮನವು ಕುದಿಯಿತು|

ಕಳ್ಳದಾರಿ ಅರಸಿರೆಂದು ಬೇಹುಗಾರರಿಗೆ ಆಜ್ಞೆಯಾಯಿತು 

ಮೊಸರಗಡಿಗೆ ಹೊತ್ತ ಮುತ್ತ್ಯೆದೆಯ ಹಿಂಬಾಲಿಸಲಾಯಿತು||

 

ಪತಿದೇವಗೆ ಊಟವ ಬಡಿಸಿ ನೀರು ತರಲು

ಕಂಕುಳಲಿ ಕೊಡವನಿರಿಸಿ ಓಬವ್ವ ಬರಲು|

ಪಿಸುಮಾತು ಆಲಿಸಿ ಯೋಜನೆ ಹೊಳೆಯಲು

ಒನಕೆಯ ಅಸ್ತ್ರವಾಗಿಸಿ ಕಳ್ಳಕಿಂಡಿಯಲಿ ಬಡಿಯಲು||

 

ಶತ್ರು ಸೈನಿಕರ ಮಾರಣ ಹೋಮವಾಗಲು

ಕಿಂಡಿ ದಾರಿಯಲಿ ರಕುತದ ಹೊಳೆ ಹರಿಯಲು|

ಮಡದಿಯ ರಣಚಂಡಿ ಅವತಾರ ನೋಡಲು

ಹನಮಪ್ಪ ಉತ್ಸಾಹದಿ ಕಹಳೆಯ ಊದಲು||

 

ಮದಕರಿ ಸೈನಿಕರು ಒಟ್ಟಾಗಿ ಆಕ್ರಮಿಸಲು

ಹೈದರಾಲಿ ಪಡೆ ಸೋತು ಓಡಲು|

ಶತ್ರುವೊಬ್ಬ ಮೋಸದಿ ಓಬವ್ವಳ ಬೆನ್ನಿಗಿರಿಯಲು

ಬಸವಳಿದು ಭೂತಾಯಿಯ ಮಡಿಲ ಸೇರಿದಳು||

 

ಸಾಹಸಿ ದಿಟ್ಟ ವೀರ ವನಿತೆ ಓಬವ್ವ

ದುರ್ಗದ ಕೋಟೆಯ ಕಾಪಾಡಿದ ತಾಯವ್ವ||

ನೆನಪಿಗಾಗಿ ಕ್ರೀಡಾಂಗಣಕೆ ಹೆಸರಿಡಲಾಯಿತು

ಗೌರವ ಪೂರ್ವಕ ನೆನಪಿಸಲಾಯಿತು||

 

ಇಂದು ನಿನ್ನ ಜಯಂತಿ ಅವ್ವಾ

ನೆನಪು ಮನದಲಿ ಮೂಡಿತು ಅಕ್ಕವ್ವಾ|

ನೀನು ಕರುನಾಡಿನ  ಹೊನ್ನಿನ ಖನಿಯವ್ವ

ನಿನ್ನ ಹೆಸರು ಅಜರಾಮರ ಒನಕೆ ಓಬವ್ವ||

-ರತ್ನಾ ಕೆ ಭಟ್ ತಲಂಜೇರಿ ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್