ಸಾಹಸ ಕತೆಗಳು

ಸಾಹಸ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಪಳಕಳ ಸೀತಾರಮ ಭಟ್ಟ ಮತ್ತು ಇತರರು
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. 50/-

ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ.

ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ. ನಾಡೋರ, ಎನ್ಕೆ. ಸುಬ್ರಹ್ಮಣ್ಯ, ದು. ನಿಂ. ಬೆಳಗಲಿ, ನೀಲಾಂಬರಿ ಮತ್ತು ಸಹನ.

ಅಮ್ಮ ಹೇಳುತ್ತಿದ್ದ ಶೌರ್ಯದ ಕತೆಗಳನ್ನು ಕೇಳುತ್ತಾ ಬೆಳೆದಿದ್ದ ಶಿವಾಜಿ ಆ ಕತೆಗಳಿಂದ ಬಹಳ ಪ್ರಭಾವಿತನಾಗಿದ್ದ; ಮುಂದೆ ಅವನು ಒಬ್ಬ ಧೀರ ಯೋಧನಾಗಿ ರೂಪುಗೊಂಡು ಮರಾಠಾ ಸಾಮ್ರಾಜ್ಯ ಕಟ್ಟುವ ಸಾಧನೆ ಮಾಡಲು ಆತ ಬಾಲ್ಯದಲ್ಲೇ ಮಾನಸಿಕ ಸಿದ್ಧತೆ ಮಾಡಿದ್ದ ಎಂಬ ಪ್ರತೀತಿಯಿದೆ.

ಈಗಿನ ಮಕ್ಕಳಿಗೆ ಅಂಥ ಕತೆಗಳನ್ನು ಹೇಳಿ ಅವರನ್ನು ಆತ್ಮವಿಶ್ವಾಸದ ಮನುಷ್ಯರನ್ನಾಗಿ ರೂಪಿಸುವವರು ಯಾರು? ಈಗ ನಗರಗಳಲ್ಲಿ ವಾಸವಿರುವ ಕುಟುಂಬಗಳಲ್ಲಿ ಮಕ್ಕಳಿಗೆ ಕತೆ ಹೇಳಲು ಅಜ್ಜ-ಅಜ್ಜಿಯರಿಲ್ಲ. ಹೆತ್ತವರಿಗಂತೂ ಮಕ್ಕಳೊಂದಿಗೆ ಇರಲು ಸಮಯವೇ ಇಲ್ಲ. ಇನ್ನು ಶಾಲೆಗಳಲ್ಲಿ ಏನನ್ನು ಕಲಿಸುತ್ತಾರೆ? ಸಿಲೆಬಸ್‌ನಲ್ಲಿ ನಿಗದಿ ಪಡಿಸಿದ್ದನ್ನು ಕಲಿಸುತ್ತಾರೆ. ಭಾರತದ ಸಾವಿರಾರು ವರುಷಗಳ ಸಮೃದ್ಧ ಪರಂಪರೆಯ ಕತೆಗಳನ್ನು, ಚಾರಿತ್ರಿಕ ವೀರರ ಕತೆಗಳನ್ನು ತಿಳಿಸಲು ಆ ಸಿಲೆಬಸ್‌ಗಳು ಅವಕಾಶ ನೀಡುವುದಿಲ್ಲವೆಂದೇ ಹೇಳಬೇಕು. ಪಠ್ಯಪುಸ್ತಕಗಳದ್ದಂತೂ ದೊಡ್ಡ ರಾದ್ಧಾಂತ. ಒಂದು ಸರಕಾರವಿದ್ದಾಗ ಅವುಗಳಿಗೆ ಸೇರ್ಪಡೆಗೊಳಿಸಿದ ಭಾರತದ ಪಾರಂಪರಿಕ ಹಾಗೂ ಚಾರಿತ್ರಿಕ ಪಠ್ಯಗಳನ್ನೂ ಇನ್ನೊಂದು ಸರಕಾರ ಕಿತ್ತು ಹಾಕುವ ರಾಜಕೀಯ!

ಇಂತಹ ಹಿನ್ನೆಲೆಯಲ್ಲಿ, ನವಕರ್ನಾಟಕ ಪ್ರಕಾಶನದ “ಕಿರಿಯರ ಕಥಾಮಾಲೆ”ಯ “ಸಾಹಸ ಕತೆಗಳು” ಸಂಕಲನದ ಕತೆಗಳು ಮಕ್ಕಳಿಗೆ ಮೌಲಿಕ ಕತೆಗಳನ್ನು ಒದಗಿಸುವ ಕೆಲಸ ಮಾಡಿವೆ. ಬೇಬಿ ಮಾಣಿಯಾಟ್ ಅವರ “ಜಾಣ ಪುಟಾಣಿಗಳು” ಕತೆಯಲ್ಲಿ ಸಮುದ್ರ ತೀರಕ್ಕೆ ಹೋಗಿದ್ದ ನಾಲ್ವರು ಕಿರಿಯ ಗೆಳೆಯರು ಬಂಗಾರ ಕಳ್ಳಸಾಗಣೆ ಮಾಡುತ್ತಿದ್ದ ದುರುಳರನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡುತ್ತಾರೆ.

ಮತ್ತೂರು ಸುಬ್ಬಣ್ಣ ಬರೆದ “ಸಮಯ ಪ್ರಜ್ನೆ” ಕತೆ ಬಡಕುಟುಂಬದ ಕಮಲ ಎಂಬ ಬಾಲಕಿಯ ಜಾಣತನ ಹಾಗೂ ಚುರುಕುತನವನ್ನು ಕುರಿತಾಗಿದೆ. ಚೆನ್ನೈಯ ದಂಪತಿ ಕಮಲಳ ಪಟ್ಟಣಕ್ಕೆ ಬಂದು, ನಾಜೂಕಿನಿಂದ ಇವಳನ್ನು ಮಳಿಗೆಯೊಂದಕ್ಕೆ ಕರೆದೊಯ್ದು ಅಲ್ಲಿಂದ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಾರೆ. ಅವರು ಕಮಲಳನ್ನು ಮಳಿಗೆಯಲ್ಲೇ ಬಿಟ್ಟು ಕಣ್ಮರೆಯಾದಾಗ ಪೊಲೀಸರನ್ನು ಕರೆಸಲಾಗುತ್ತದೆ. ಅವರ ಹೆಸರಿನಿಂದ ತೊಡಗಿ ಅವರು ಏನೇನು ಮಾಡಿದರೆಂಬುದನ್ನು ಸರಿಯಾಗಿ ನೆನಪಿಟ್ಟುಕೊಂಡಿದ್ದ ಕಮಲ ಎಲ್ಲವನ್ನೂ ಪೊಲೀಸರಿಗೆ ತಿಳಿಸಿದ್ದರಿಂದ ಅವರನ್ನು ಬಂಧಿಸಲು ಸಾಧ್ಯವಾಗುತ್ತದೆ.

“ಪ್ರಾಣಿಗಳ್ಳರು ಮತ್ತು ಮಯೂರ” ಹಾಗೂ “ಮಯೂರನ ಸಾಹಸ” ಕತೆಗಳು ಮಯೂರ ಎಂಬ ಬಾಲಕನ ಧೈರ್ಯದಿಂದಾಗಿ ಕಳ್ಳರನ್ನು ಬಂಧಿಸಿದ್ದನ್ನು ವಿವರಿಸುತ್ತವೆ.

ಈ ಸಂಕಲನದಲ್ಲಿ ವಿದೇಶೀ ಬಾಲಕರ ಸಾಹಸದ ಕತೆಗಳೂ ಇವೆ. “ಒಂದು ಸಾವಿರ ಕೊಡ ನೀರು” ಎಂಬ ಕತೆ ಜಪಾನಿನ ಬಾಲಕ ಯುಕಿಯೋ ಎಂಬವನ ಸಾಹಸ ತಿಳಿಸುತ್ತದೆ. ತಿಮಿಂಗಿಲವೊಂದು ಸಮುದ್ರ ತೀರಕ್ಕೆ ಬಂದು ಬಿತ್ತು. ಅದು ಇನ್ನೇನು ಸಾಯುವುದರಲ್ಲಿತ್ತು. ಆದರೆ ಯುಕಿಯೋ ಕೊಡಪಾನದಲ್ಲಿ ನೀರು ತಂದು ತಂದು ಅದಕ್ಕೆ ಸುರಿಯುತ್ತಾ, ಅಂತಿಮವಾಗಿ ಊರಿನವರ ಸಹಾಯದಿಂದ ಅದರ ಜೀವ ಉಳಿಸುವ ಕತೆ ಇದು.

“ಸಾಹಸ ಕತೆಗಳು” ಸಂಕಲನದ ಎಲ್ಲ ಕತೆಗಳೂ ಮಕ್ಕಳ ಸಾಹಸಗಳನ್ನು ತಿಳಿಸುವುದರ ಜೊತೆಗೆ ಉತ್ತಮ ಸಂದೇಶಗಳನ್ನೂ ನೀಡುತ್ತವೆ. ಇದನ್ನು ಓದುವ ಮಕ್ಕಳಿಗೆ ಇವು ಖಂಡಿತವಾಗಿ ಸ್ಫೂರ್ತಿದಾಯಕ ಕತೆಗಳು. ಆದ್ದರಿಂದಲೇ ಇದು ಪ್ರತಿಯೊಂದು ಮನೆಯಲ್ಲಿ ಇರಲೇ ಬೇಕಾದ ಪುಸ್ತಕ. ಇಂತಹ ಪುಸ್ತಕಗಳು ಮನೆಯಲ್ಲಿದ್ದರೆ, ಮಕ್ಕಳು ಅವನ್ನು ಓದಿಯೇ ಓದುತ್ತಾರೆ. ಇದು ಅವರಲ್ಲಿ ಓದಿನ ಆಸಕ್ತಿ ಬೆಳೆಯಲು ಪೂರಕ.