ಸಾಹಿತಿಗಳು ಗಮನಿಸದ ಓದುಗರು

ಸಾಹಿತಿಗಳು ಗಮನಿಸದ ಓದುಗರು

 "ನಾನೇಕೆ ಬರೆಯುತ್ತೇನೆ..." ಎಂಬ ಶೀರ್ಷಿಕೆಯಡಿಯಲ್ಲಿ ಹಳೆಯ ತಲೆಮಾರಿನ ಲೇಖಕರಿಂದ ಇಂದಿನವರವರೆಗೂ ಹಲವಾರು ಮಂದಿ ಬರೆದಿದ್ದಾರೆ. ಹಳಬರ ಬರೆಹಗಳನ್ನೆಲ್ಲಾ ನಾನು ಓದಿಲ್ಲ. ಶ್ರೀ ಭೈರಪ್ಪನವರ ಈ ಹೆಸರಿನ ಪುಸ್ತಕವನ್ನು ಬಹಳ ವರ್ಷಗಳ ಹಿಂದೆ ಅರೆ-ಬರೆ ಓದಿದ್ದೆನೆಂಬ ನೆನಪು; ಏನು ಅನ್ನುವದು ನೆನಪಿಗೆ ಬರುತ್ತಿಲ್ಲ; ಮನ್ನಿಸಬೇಕು. ಇವಲ್ಲದೆ ಬಿಡಿಯಾಗಿ ಕೆಲವು ಸಾಹಿತಿಗಳನ್ನು ಪತ್ರಿಕೆಯವರು ಸಂದರ್ಶಿಸಿದಾಗ ಈ ಪ್ರಶ್ನೆಗೆ ಉತ್ತರಿಸಿದ್ದನ್ನು ಓದಿದ್ದೇನೆ. ಕೆಲವು ಸಾಹಿತಿಗಳೊಡನೆ ಪತ್ರಮೈತ್ರಿಯಿದ್ದಾಗ ಈ ಪ್ರಶ್ನೆಗೆ ಅವರಿತ್ತ ಉತ್ತರಗಳನ್ನೂ ಓದಿದ್ದೇನೆ. ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಸಂಚಿಕೆಯಾಗಿ ಹೊರಬಂದ ‘ದ ಸಂಡೆ ಇಂಡಿಯನ್’ನಲ್ಲಿ ಎಂಟು ಮಂದಿ ಹೆಸರಾಂತ ಸಾಹಿತಿಗಳು ಈ ತಲೆಬರೆಹದಡಿ ಬರೆದದು ಪ್ರಕಟವಾಗಿದೆ. ಇದೇ ಪತ್ರಿಕೆಯಲ್ಲಿ ಇನ್ನೂ ಹತ್ತು ಸಾಹಿತಿಗಳಿಗೆ ಐದು ಪ್ರಶ್ನೆಗಳನ್ನಿತ್ತಿದ್ದು, ಅದರಲ್ಲಿ ಮೊದಲ ಪ್ರಶ್ನೆ, ‘ನಿಮಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಅನ್ನಿಸಲು ಕಾರಣವೇನು?’ ಎಂಬ ಪ್ರಶ್ನೆಗೆ ತಾವೇಕೆ ಬರೆಯುತ್ತಿದ್ದೇವೆ ಎಂಬುದನ್ನೂ ಸೇರಿಸಿಯೇ ಅವರು ಉತ್ತರಿಸಿದ್ದನ್ನು ಓದಿದೆ.

 ಇವರೆಲ್ಲರ ಉತ್ತರಗಳಲ್ಲಿ ಅವರವರ ಜೀವನದಲ್ಲಿ ತಾವು ಕಂಡದ್ದು, ಕೇಳಿದ್ದು, ಅನುಭವಿಸಿದ್ದು, ಓದಿದ ಭಾರತೀಯ ಹಾಗೂ ಪಾಶ್ಚಾತ್ಯ ಮಹಾನ್ ಸಾಹಿತಿಗಳ ಪುಸ್ತಕಗಳು, ಇತ್ಯಾದಿಗಳೆಲ್ಲಾ ತಮ್ಮಲ್ಲಿ ಯಾವ ಪರಿಣಾಮವನ್ನು ಬೀರಿದವು; ಅವುಗಳಿಂದ ತಮ್ಮಲ್ಲಿ ಯಾವ್ಯಾವ ರೀತಿಯ ಸ್ಪಂದನ-ತುಡಿತಗಳುಂಟಾದವು, ಮೊದಲಾದವುಗಳನ್ನೆಲ್ಲಾ ಬರೆದಿದ್ದಾರೆ. ಪದ, ವಾಕ್ಯಗಳ ವರ್ಣರಂಜಿತ ವೈಖರಿಗಳನ್ನು ಪ್ರದರ್ಶಿಸಿ ಬರೆದಿದ್ದಾರೆ. ಕೆಲವು ವಾಕ್ಯಗಳು ಉದ್ದುದ್ದವಾಗಿರುವವಲ್ಲದೆ ಕ್ಲಿಷ್ಟ ರಚನೆಗಳಿಂದ ಕೂಡಿದ್ದು, ಸುಲಭವಾಗಿ ಸಾಮಾನ್ಯ ಓದುಗರಿಗೆ ಅರ್ಥವಾಗುವಂತಿಲ್ಲ.

ಆದರೆ ಒಂದು ಮಾತ್ರ ಮನದಟ್ಟಾಗಿದೆ: ಇವರೆಲ್ಲ ಓದುಗರಿಗಾಗಿ ಬರೆಯುತ್ತಿಲ್ಲವೆಂದು ಹಾಗೆ ಬರೆಯದೇ ಸ್ಪಷ್ಟಪಡಿಸಿದ್ದಾರೆ! ತಾನು ಬರೆದಿದ್ದೇನೆ; ಸಾವಿರ, ಎರಡುಸಾವಿರ ಪ್ರತಿಗಳು ಪ್ರಕಟವಾಗಿವೆ; ಕನಿಷ್ಠ ಐದುನೂರು ಜನರಾದರೂ ಓದುತ್ತಾರೆ; ಎಂದೆಲ್ಲಾ ಇವರಲ್ಲಿ ಒಬ್ಬರೂ ಯೋಚಿಸಿಯೇ ಇಲ್ಲವೆಂಬಂತೆ ತೋರುತ್ತಿದೆ. ಯೋಚಿಸಿದ್ದರೆ ಅದನ್ನೇಕೆ ತಾನು ಬರೆಯುವದಕ್ಕೆ ಕಾರಣವೆಂದು ಹೇಳುವದಿಲ್ಲ? ಇವರು ಪ್ರಕಟಿಸಿದ ಪುಸ್ತಕಗಳ ಬೆಲೆ ಮೂವತ್ತು ರೂಪಾಯಿಗಳದರೂ ಸರಿ; ಮುನ್ನೂರಾದರೂ ಸರಿ, ಕೊಂಡು ಓದುವವರನ್ನು ಇವರು ಲೆಕ್ಕಿಸುವದೇ ಇಲ್ಲವೆಂದು ಇದರರ್ಥವೇ?

ತಮ್ಮ ಜೀವನಾನುಭವಗಳಿಂದ ಇವರಲ್ಲಿ ಕೋಪ-ತಾಪ, ದುಗುಡ-ದುಮ್ಮಾನ, ಮುಂತಾದವು ಭುಗಿಲೆದ್ದಿವೆ. ಅವನ್ನು ಬರೆಹಕ್ಕಿಳಿಸಬೇಕೆಂಬ ತುಡಿತ ತೀವ್ರಸ್ತರವನ್ನು ತಲುಪಿದೆ. ಬರೆದೇ ತೀರಬೇಕೆಂದು ಅನ್ನಿಸಿ ಬರೆದಿದ್ದಾರೆ. ಬರೆಯಲಿ; ಅಡ್ಡಿಯಿಲ್ಲ. ಆದರೆ ಯಾಕೆ ಅವನ್ನು ಪ್ರಕಟಿಸುತ್ತಾರೆ? ಈ ಪ್ರಶ್ನೆಯನ್ನು ಯಾರೂ ಕೇಳಿಲ್ಲ; ಉತ್ತರಿಸಿಯೂ ಇಲ್ಲ. ಸಾಧ್ಯತೆಗಳಿರುವ ಹಲವು ಉತ್ತರಗಳಿವೆ. ಪ್ರಕಟಿಸಿದರೆ ಮಾರಾಟದ ಹಣ ಬರುತ್ತದೆ; ಬಹುಮಾನದ ಹಣ ಬರುತ್ತದೆ; ಪ್ರಶಸ್ತಿ ಬರುತ್ತದೆ; ಹೆಸರು ಬರುತ್ತದೆ; ಮಾನ-ಸನ್ಮಾನಗಳು ಹೆಚ್ಚುತ್ತವೆ; ಇತ್ಯಾದಿ. ಎಲ್ಲವೂ ಬಂದಾವು; ಒಂದಾದರೂ ಬಂದೀತು. ಏನೂ ಬಾರದಿದ್ದರೆ ಮತ್ತೆ ಬರೆದು ಪ್ರಕಟಿಸುವವರಿರಲಾರರು.

ಓದುಗರು ತಾವು ಮೆಚ್ಚಿ ಅಭಿಮಾನಿಸುವ ಸಾಹಿತಿಗಳ ಪುಸ್ತಕಗಳನ್ನು ಅಂಗಡಿಗಳಿಗೆ ಹೋಗಿ ಹುಡುಕಿ ಕೊಳ್ಳುತ್ತಾರೆ. ಅವರ ಬರೆಹಗಳು ಇರುವ ಪತ್ರಿಕೆಗಳನ್ನು ಕಾದಿರಿಸಲು ಹೇಳಿ ಕೊಂಡೋದುತ್ತಾರೆ. ತಮ್ಮ ಮಿತ್ರರೊಡನೆ ತಮ್ಮ ಅನ್ನಿಸಿಕೆಗಳನ್ನು ಹೇಳಿಕೊಳ್ಳುತ್ತಾರೆ. ತಮ್ಮಲ್ಲೇ ‘ಒಡನಾಡೀ ಓದುಗರೆ’೦ದೋ, ‘ಸಾಹಿತ್ಯ ಕೂಟ’ವೆಂದೋ ಸೇರಿ ತಮ್ಮ ಮೆಚ್ಚಿನ ಸಾಹಿತಿಗಳ ಕುರಿತು ವಿಚಾರ ವಿನಿಮಯ, ಚರ್ಚೆ, ಇತ್ಯಾದಿಗಳನ್ನು ನಡೆಸುತ್ತಾರೆ. ಅಭಿಮಾನದಿಂದ ನಾಲ್ಕು ಸಾಲುಗಳನ್ನು ಅಭಿಪ್ರಾಯವೆಂದೋ ವಿಮರ್ಶೆಯೆಂದೋ ಪತ್ರಿಕೆಗಳಿಗೆ ಬರೆದು ಕಳುಹಿಸುತ್ತಾರೆ. ಇವರನ್ನು, ಇವರ ಅಭಿಮಾನವನ್ನು, ಅಭಿಪ್ರಾಯಗಳನ್ನು ಶ್ರೀಸಾಹಿತಿಗಳು ಗಮನಿಸುವದೇ ಇಲ್ಲವೇ?

ಚಲನಚಿತ್ರರಂಗದವರು ಹೇಳುತ್ತಾರೆ: ಪ್ರೇಕ್ಷಕರು ಬಯಸುವಂಥ ಚಿತ್ರಗಳನ್ನೇ ತಯಾರಿಸುತ್ತೇವೆಂದು. ತಮ್ಮ ಚಿತ್ರಗಳನ್ನು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಿಸುವವರು ಪ್ರೇಕ್ಷಕರು, ಎಂದು. ಪ್ರೇಕ್ಷಕರು ತಮ್ಮ ದೇವರೆನ್ನುತ್ತಾರವರು. ಅರ್ಧಾಂಶ ಸತ್ಯವಿರಬಹುದು; ಉತ್ಪ್ರೇಕ್ಷೆ ಇರಬಹುದು. ಆದರೆ ಅವರು ತಮ್ಮ ಗ್ರಾಹಕರನ್ನು ಗಣನೆಗೆ ತಂದುಕೊಳ್ಳುತ್ತಾರೆ. ಬಹುಶಃ ಚಲನಚಿತ್ರಗಳಿಗೆ expiry date ಇರುವದರಿಂದ ಬೇಗನೇ ಹೆಚ್ಚು ಜನರು ಅದನ್ನು ನೋಡಿದರೆ ಅವರಿಗೆ ಹಾಕಿದ ಹಣ ವಾಪಸಾಗುತ್ತದೆ. ಪುಸ್ತಕಗಳಿಗೆ expiry date ಇಲ್ಲದ್ದರಿಂದ ಓದುಗರು ನೋಡುಗರಷ್ಟು ಮುಖ್ಯರಲ್ಲದಿರಬಹುದು. ಆದರೂ ಪುಸ್ತಕಗಳನ್ನು ಪ್ರಕಟಿಸುವದು ಓದುಗರಿಗಾಗಿಯೇ ಅಲ್ಲವೇ? ಬರೆಯಬೇಕೆಂದು ತೀವ್ರವಾಗಿ ಅನ್ನಿಸಿದ್ದರಿಂದ ಬರೆದೆ; ಆಮೇಲೆ ಅದನ್ನು ತಿರುಗಿ ನೋಡುವ ಜಾಯಮಾನ ತನ್ನದಲ್ಲ; ಓದುಗರ ಪ್ರತಿಕ್ರಿಯೆಗಳು ತಮ್ಮ ಬೌದ್ಧಿಕ ಮಟ್ಟದಲ್ಲಿ ಇರುವದಿಲ್ಲ, ಎಂಬ ಧೋರಣೆ ಸರಿಯಲ್ಲ.

 

 

Comments