ಸಾಹಿತ್ಯಲೋಕದಲ್ಲಿ ಸ್ತ್ರೀವಾದ
ಈ ಪವಿತ್ರ ಭೂಮಿಯ ಹೆಂಗಳೆಯರು ಕಾಣಿಸಿಕೊಂಡಿದ್ದು ಪುತ್ರವಾತ್ಸಲ್ಯದ ಮಾತೃಗಳಾಗಿ, ಭ್ರಾತೃವಾತ್ಸಲ್ಯದ ಭಗಿನಿಗಳಾಗಿ, ಪತಿಭಕ್ತಿಯುಳ್ಳ ಪತ್ನಿಯಾಗಿ, ಮತ್ತು ಅಂತರಂಗದ ಸಖಿಯಾಗಿ. ಇದು ನಮ್ಮ ಸಂಸ್ಕೃತಿ. ಸ್ತ್ರೀ ಮನಸ್ಸು ಇದರಿಂದಾಚೆ ಹೋಗಲಾರದು. ಅವಳು ಭಾವನೆಗಳಿಗೆ ಬೆಲೆಕೊಡುತ್ತಾಳೆ. ಅದರ ಜೊತೆಯಾಗಿಯೇ ಬೆಳೆಯುತ್ತಾಳೆ. ಎಲ್ಲಿಯತನಕ ಭಾವನೆಗಳು ಬದುಕಿರುವುದೋ ಅಲ್ಲಿಯವರೆಗೆ ಸ್ತ್ರೀ ಅಂದರೆ ಒಂದೇ ಅರ್ಥ.
ಪುರುಷ ಮತ್ತು ಸ್ತ್ರೀ ಇವೆರಡೂ ಭಿನ್ನ ಸೃಷ್ಟಿ.ಆದರೆ ಯಾವುದೇಒಂದು ಪ್ರಭಲ ಸೃಷ್ಟಿ ಅಲ್ಲ. ನನಗನಿಸುವಂತೆ ಇವೆರಡೂ ದೇಹ ಮತ್ತು ಮನಸ್ಸುಗಳಿರುವಂತೆ.ಆಧ್ಯಾತ್ಮಕ್ಕೆಬಾಗಿ ಮನಸ್ಸೆಂಬುದನ್ನು ಆತ್ಮವೆಂದು ತಿಳಿಯುವುದು ಬೇಡ. ಮನಸ್ಸೆಂದರೆ ಬುದ್ಧಿ ದೇಹವೆಂಬುದು ಕಾರ್ಯ ಎಂದು ತಿಳಿದರೆ ಎರಡರ ಪ್ರಾಮುಖ್ಯತೆಯೂ ಅರ್ಥವಾಗುತ್ತದೆ.
ಸ್ತ್ರೀಯ ಭಾವನೆಗಳು ಪುರುಷನ ಭಲಿಷ್ಟತೆಯ ಒಳಗೆ ಅಡಗಿ ಹೋಗಬಾರದು. ಎಂದು ಅವಳ ಮೂಲ ಅಸ್ತಿತ್ವವೇ ಇಲ್ಲವಾಗುವಂತ ಪರಿಸ್ಠಿತಿಗಳುಂಟಾದವೋ, ಎಂದು ಅವಳ ಭಾವನೆಗಳು ಸಮಾದಿಯಾಗತೊಡಗಿತೋ, ಅಂದು ಅಲ್ಲಲ್ಲಿ ಸಣ್ಣ ಧನಿಗಳು ಮೂಡತೊಡಗಿದವು. ಅನುಭವಿಸುವ ತಾರತಮ್ಯದ ಧೋರಣೆ, ಧೌರ್ಜನ್ಯ ಹಾಗು ಶೋಷಣೆಗಳನ್ನು ಗುರುತಿಸಿ ಅದನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನದ ಬೆಳಕು ಮೂಡಿತು. ಆ ಪ್ರಯತ್ನವನ್ನು 'ಸ್ತ್ರೀವಾದ'ಎನ್ನಬಹುದು. ಅದು ಮನುಷ್ಯ ಮನುಷ್ಯರ ನಡುವೆ ಸಮಾನತೆಯನ್ನು ಭಯಸುವಂತದ್ದು.
ಸ್ತ್ರೀವಾದ ಮೊದಲು ಅಮೇರಿಕಾ ಫ್ರಾನ್ಸ್ ಮೊದಲಾದ ದೇಶಗಳಲ್ಲಿ ಕಾಣಿಸಿಕೊಂಡಿತು.ಇದು ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರದೆ ಸ್ತ್ರೀ ಪರಂಪರೆಯ ಸ್ಥಿತಿಗತಿಗಳಿಗನುಗುಣವಾಗಿ ಭಿನ್ನ ಭಿನ್ನ ಸ್ವರೂಪದಲ್ಲಿ ವಿಕಾಸವನ್ನು ಹೊಂದುತ್ತಾ ಹೋಯಿತು. ಸತಿಪದ್ಧತಿ ಬಾಲ್ಯವಿವಾಹಗಳಂತ ಅನರ್ಥ ಆಚರಣೆಗಳನ್ನು ತೊಡೆದುಹಾಕಿತು. ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಕಳೆದುಹೋದ ಮಹಿಳೆಯರು ಚೇತರಿಸಿಕೊಳ್ಳಲನುವಾದರು. ಅಜ್ಞಾನ ಅವಿಧ್ಯೆ ಮತ್ತಿತರ ಕಾರಣಗಳಿಂದ ವಾಸ್ತವವಾಗಿ ಭಾರತದ ಬಹುಪಾಲು ಮಹಿಳೆಯರು ಅವಕಾಶವಂಚಿತರಾಗಿರುವುದರಿಂದ ಸ್ತ್ರೀವಾದ ಮುಂದುವರೆದಿದೆ. ೧೯೮೦ರ ದಶಕದಲ್ಲಿ ಮತ್ತು ಅದರಿಂದೀಚೆಗೆ ಭಾರತದಲ್ಲಿ ಸ್ತ್ರೀವಾದಿ ಚಳುವಳಿಗಳು ತೀವ್ರತೆಯನ್ನು ಪಡೆದಿವೆ.
ಸ್ತ್ರೀವಾದೀ ಚಳುವಳಿಯ ಒಂದು ಪ್ರಮುಖ ಬೆಳವಣಿಗೆಯಾಗಿ ಸ್ತ್ರೀವಾದಿ ಸಾಹಿತ್ಯ ಹಾಗೂವಿಮರ್ಶೆ ಹುಟ್ಟಿಕೊಂಡಿತು. ಸ್ತ್ರೀ ಸುತ್ತ ಅವಳ ಬದುಕಿನಸುತ್ತ ಅವಳ ಭಾವನೆಗಳ ಸುತ್ತ ಅವಳ ದೌರ್ಭಲ್ಯದ ಸುತ್ತ ಅವಳ ಜವಾಬ್ದಾರಿಗಳಸುತ್ತ ಅದೆಷ್ಟೋ ಕಾದಂಬರಿಗಳು ಹುಟ್ಟಿಕೊಂಡವು. ಅದೆಷ್ಟೋ ಸ್ತ್ರೀವಾದಿ ಸಾಹಿತಿಗಳು ಹುಟ್ಟಿಕೊಂಡರು. ಹೆಣ್ಣನ್ನು ಓದುಗಳನ್ನಾಗಿಸಿ,ಕಷ್ಟಗಳನ್ನು ಕಥಾವಸ್ತುವನ್ನಾಗಿಸಿ ಪರಿಹರಿಸಿ ನಡೆದು ಬಂದದಾರಿಯನ್ನು ಎಲ್ಲರ ಮನಮುಟ್ಟುವಂತೆ ಬಿಂಬಿಸಿದರು.
ತೊಂಬತ್ತರದಶಕದಲ್ಲಿ ಬಿ.ಎನ್ ಸುಮಿತ್ರಾಭಾಯಿ, ವಿಜಯದಬ್ಬೆ ತಿರುಮಲಾಂಬಾ, ಶಾಂತಾದೇವಿ, ನೇಮಿಚಂದ್ರ ಮೊದಲಾದ ಲೇಖಕಿಯರು ಕನ್ನಡದಲ್ಲಿ ಸ್ತ್ರೀವಾದಿ ವಿಮರ್ಶೆಯ ಅತ್ಯಂತ ಸ್ಪಷ್ಟ ಹೆಜ್ಜೆಯನ್ನು ಮೂಡಿಸಿದ್ದಾರೆ ಎನ್ನಲಾಗುತ್ತದೆ. ಕನ್ನಡದಲ್ಲಿ ಸ್ತ್ರೀವಾದಿ ವಿಮರ್ಶೆಯ ಆರಂಭಿಕ ಕೃತಿಗಳಲ್ಲಿ ಮಹತ್ವದ್ದಾಗಿದ್ದು ವಿಜಯದಬ್ಬೆಯವರ "ಮಹಿಳೆ ಸಾಹಿತ್ಯ ಮತ್ತು ಸಮಾಜ". ಗುಲ್ವಾಡಿ ವೆಂಕಟರಾಯರ 'ಸೀಮಂತಿನಿ' ಅನ್ನಾಜಿರಾಯರ 'ಗೌರಿ' ಜಿ.ರಾಘವೇಂದ್ರರಾಯರ 'ಸೀತೆ' ಮೊದಲಾದವು ಪ್ರಸಿದ್ಧವಾಗಿವೆ. ಸ್ತ್ರೀಸುಧಾರಣೆಯ ಪರವಾಗಿ ಆ ಉದ್ದೇಶದಿಂದಲೇ ರಚಿತವಾದ ಕಾದಂಬರಿಗಳಲ್ಲಿ ಪ್ರಮುಖವಾದುದು'ಇಂದಿರಾಬಾಯಿ' ಮತ್ತು 'ಭಾಗೀರಥಿ'. ಶಿವರಾಮಕಾರಂತರ 'ಸರಸಮ್ಮನ ಸಮಾಧಿ'ಯಲ್ಲಿ ಜಾಗೃತ ಸ್ತ್ರೀಪ್ರಜ್ಞೆಯ ಸ್ಪಷ್ಟ ಅಸ್ತಿತ್ವವನ್ನು ಗುರುತಿಸಲಾಗಿದೆ. ಹೀಗೆಯೇ ಹಲವಾರು ಕಾದಂಬರಿಗಳು ಸ್ತ್ರೀಪ್ರಪಂಚದ ಪ್ರಮುಖ ಚಹರೆಗಳನ್ನು ದಾಖಲಿಸಿವೆ. ಹೀಗೇ ಸಾಗುತ್ತಿದೆ ಸಾಹಿತ್ಯ ಲೋಕದಲ್ಲಿ ಸ್ತ್ರೀವಾದ.