ಸಾಹಿತ್ಯ ಕಲೆ ಎಂದರೆ…

ಸಾಹಿತ್ಯ ಕಲೆ ಎಂದರೆ…

ಸಾಹಿತ್ಯ ಕಲೆ ಎಂದರೆ ಮನುಷ್ಯತ್ವ ಅಂತ ಅಂದುಕೊಳ್ಳಬೇಕಾಗಿಲ್ಲ. ಪ್ರಾಚೀನ ಸಾಹಿತ್ಯದಲ್ಲಿ ಒಬ್ಬ ವೀರನ ರಣಶೌರ್ಯವನ್ನು ಪ್ರಶಂಸಿಸ ಬೇಕಾದರೆ, ವೈರಿವನಿತೆಯರ ಕೆನ್ನೆಯ‌ ಮೇಲೆ ಸದಾ ಕಂಬನಿ ಹರಿಸಿದವನು ಎಂಬಂತಹ ವರ್ಣನೆ ಸಿಗುತ್ತವೆ. ಇಂತಹ ಅಮಾನುಷ ರೂಪಕಗಳನ್ನು ಹುಟ್ಟಿಸಿದ್ದು  ಹಿಂಸಾತ್ಮಕ ಊಳಿಗವಾದಿ ಯುದ್ಧಸಂಸ್ಕೃತಿ. ಇಲ್ಲಿ ಕವಿಯೂ ಆ ಸಂಸ್ಕೃತಿಯ ಬಲಿಪಶುವಾಗಿದ್ದರಿಂದಲೇ ಪಾಪಪ್ರಜ್ಞೆಯಿಲ್ಲದೆ ಇಂತಹ ರೂಪಕ ಸೃಷ್ಟಿಸಿದನು.

ನಮ್ಮಕಾಲದಲ್ಲೂ, ತಾವು ದ್ವೇಷಿಸುವ ಧರ್ಮಕ್ಕೆ ಜನಾಂಗಕ್ಕೆ ಭಾಷೆಗೆ ದೇಶಕ್ಕೆ ಸೇರಿದವರು ಪ್ರಾಕೃತಿಕ ವಿಕೋಪಗಳಿಂದ ಮರಣಿಸಿದಾಗ, ದುಷ್ಟ ಪ್ತಭುತ್ವಗಳಿಂದ ಜನತೆಯ ಹೋರಾಟಗಾರರು ದಮನಕ್ಕೆ‌‌ ಒಳಗಾದಾಗ, ಬಲಿಷ್ಠರು ಹೂಡಿದ ಅನ್ಯಾಯದ ಯುದ್ಧಗಳಲ್ಲಿ ಮಕ್ಕಳು ಮಹಿಳೆಯರು ನಾಶವಾಗುವಾಗ, ಸಂಭ್ರಮಿಸುವ ವ್ಯಕ್ತಿಗಳನ್ನು ನೋಡುತ್ತಿದ್ದೇವೆ. ಹಾಗೆ ನೋಡುವಾಗ,  ಅವರ ಮನಸ್ಸನ್ನು ಕಲುಷಿತಗೊಳಿಸಿದ, ಅವರ ಆಲೋಚನೆಯನ್ನು ಅಮಾನುಷಗೊಳಿಸಿದ, ಅವರ ವ್ಯಕ್ತಿತ್ವವನ್ನು  ಕ್ಷುದ್ರಗೊಳಿಸಿದ ಸಿದ್ಧಾಂತ ರಾಜಕಾರಣ ಸುದ್ದಿಮಾಧ್ಯಮ ಹಾಗೂ ಪ್ರಚೋದಕ ಭಾಷಣಗಳು ಯಾವುವು ಎಂಬುದನ್ನು ಸಾಮಾನ್ಯವಾಗಿ ಮರೆಯುತ್ತೇವೆ. ಆಯುಧ ಕಾಣುತ್ತದೆ.‌ ಆಯುಧ ರೂಪಿಸಿದ ತೆರೆಮರೆಯ ಮೆದುಳುಗಳಲ್ಲ. ಗೊಂಬೆ ಗೋಚರಿಸುತ್ತದೆ. ಗೊಂಬೆಗಳಿಗೆ ಬಿಗಿದ ಸೂತ್ರಗಳು ಅಗೋಚರ.

ಕಂಡವರ ಮೇಲೆ ವಿಷ ಉಗುಳುವವರು,  ಮೊದಲು ಆ ವಿಷವನ್ನು  ಸೇವಿಸಬೇಕು. ಅವರಿಗೆ ತಮ್ಮ ವಿಷದಿಂದ ಸಾಯುವವರಷ್ಟೆ ಕಾಣುತ್ತಾರೆ. ಅದಕ್ಕೂ ಮೊದಲು ತಾವೂ ಸತ್ತಿರುವುದು ಗೊತ್ತಾಗುವುದಿಲ್ಲ. 'ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು'. ನಂಜು ಕಾರುವುದನ್ನು ಹೇಳುವ ಯಾವುದೇ ಧರ್ಮ ರಾಜಕಾರಣ ಸಿದ್ಧಾಂತಗಳಿರಲಿ, ಅವುಗಳ ಮಾಯಾಜಾಲಕ್ಕೆ ಎಚ್ಚರವಿಲ್ಲದ ಗಳಿಗೆಯಲ್ಲಿ ಸಿಲುಕಿರುವ ಜನರನ್ನು, ಸೈದ್ಧಾಂತಿಕ  ಸೆರೆಮನೆಗಳಿಂದ ಹೊರತರುವುದು,  ಅವರನ್ನು ಖಂಡಿಸುವುದಕ್ಕಿಂತ ಮುಖ್ಯವಾದುದು. ಬುದ್ಧಗುರು ತಾನು ಮುಖಾಮುಖಿಯಾಗುವ ಸ್ವಭಾವತಃ ದುಷ್ಟರಲ್ಲದ, ಸಂದರ್ಭವಶಾತ್ ದುಷ್ಟರಾಗಿರುವ ಜನರನ್ನು ಬದಲಿಸುವ ಪರಿ ಸೋಜಿಗ ಹುಟ್ಟಿಸುತ್ತದೆ.

-ರಹಮತ್ ತರಿಕೆರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ