ಸಾಹಿತ್ಯ ರಚನೆಯೇ ಜೀವನದ ಒಡನಾಡಿ: ಕೆ ಕೆ ಕಾಳಾವರ್ ಕರ್

ಸಾಹಿತ್ಯ ರಚನೆಯೇ ಜೀವನದ ಒಡನಾಡಿ: ಕೆ ಕೆ ಕಾಳಾವರ್ ಕರ್

ಮೇಜಿನ ತುಂಬೆಲ್ಲಾ ಕಾಗದಗಳು ಹರಡಿತ್ತು. ಒಂದಷ್ಟು ಬರೆದ ಕಾಗದಗಳು, ಇನ್ನೊಂದಷ್ಟು ಕಾಲಿ ಕಾಗದಗಳು, ಒಂದೆರಡು ಪುಸ್ತಕಗಳು... ಒಳಗಡೆ ನೋಡುತ್ತೇನೆ, ದೇವರ ಫೋಟೋಗಳ ಕೆಳಗಡೆ ಉದ್ದನೆ ಬೆಂಚಿನ ಮೇಲೆ ಸಾಲು ಸಾಲಾಗಿ ಪುಸ್ತಕಗಳನ್ನು ಇಡಲಾಗಿದೆ. ಮನೆಯೊಳಗಡೆ ನನ್ನ ಪ್ರವೇಶವಾದ ಕಾರಣ, ಬರಹ ಅರ್ಧ ಪುಟದಲ್ಲಿ ನಿಂತಿದೆ. ಪೆನ್ನಿಗೆ ವಿಶ್ರಾಂತಿ ನೀಡಲಾಗಿದೆ.

ಇದು, ಕೆ. ಕೆ. ಕಾಳಾವರ್ ಕರ್ ರವರ ಮನೆಯೊಳಗಿನ ದೃಶ್ಯ (04/09/2022) ಹೌದು, ನಾನು ಕಾಳಾವರ್ ಕರ್ ರವರ ಮನೆಯಂಗಳಕ್ಕೆ ಕಾಲಿಡುವವರೆಗೂ ಅವರು ಧ್ಯಾನ ನಿರತರಾಗಿದ್ದರು. ನನ್ನ ಆಗಮನದಿಂದ ಅವರ ಧ್ಯಾನಕ್ಕೆ ಭಂಗ ಉಂಟಾಗಿತ್ತು. ಆದರೆ, ಆನಂತರದ ಅಷ್ಟೂ ಹೊತ್ತು, ನಮ್ಮ ನಡುವಿನ ಮಾತುಕತೆ, ಸಂವಾದ ಇದ್ದುದು ಕಾಳಾವರ್ ಕರ್ ಅವರು ಯಾವ ವಿಷಯದ ಮೇಲೆ ಧ್ಯಾನ ನಿರತರಾಗಿದ್ದರೋ, ಅದೇ ವಿಷಯದ ಮೇಲೆ. ಧ್ಯಾನವೆಂದರೆ ಕಣ್ಣು ಮುಚ್ಚಿ, ಕೈ ಬೆರಳುಗಳನ್ನು ಮುದ್ರೆಯಲ್ಲಿರಿಸಿ, ಸುಖಾಸೀನದಲ್ಲಿ ಕುಳಿತುಕೊಂಡು ಕೇವಲ ಒಂದು ರೂಪವನ್ನೇ ನೋಡುವುದೋ, ಒಂದು ಮಂತ್ರವನ್ನೋ, ಶ್ಲೋಕವನ್ನೋ ಧ್ಯಾನಿಸುವುದಷ್ಟೇ  ಅಲ್ಲ. ಯಾವುದೇ ಒಂದು ನಿರ್ಧಿಷ್ಟ ವಿಷಯದ ಮೇಲೆ, ನಿರ್ಧಿಷ್ಟ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಸಹ ಧ್ಯಾನವೇ. ಇಂಥ ಧ್ಯಾನ ತಪಸ್ಸೂ ಹೌದು. ಈ ರೀತಿಯ  ತಪಸ್ಸಿನ ಫಲವೇ ಯಶಸ್ಸು ಅಥವಾ ಸಾಧನೆ.

ಇಂಥ ನಿಜವಾದ ಧ್ಯಾನದ ಬಗ್ಗೆ  ಇನ್ನೂ ನಿಮಗೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದರೆ, ಅರ್ಥವಾಗಬೇಕಾದರೆ ಹಿರಿಯ ಗಾಂಧಿವಾದಿ, ಗಾಯತ್ರಿ ಉಪಾಸಕರಾದ ಹಿರಿಯಡ್ಕದ ರಾಜಗೋಪಾಲ ಎಂ. ಅವರು ಬರೆದ "ಧ್ಯಾನ, ಮಾತು ಮತ್ತು ಧ್ವನಿ" (ಕರ್ನಾಟಕ ಸಂಘ ಪುತ್ತೂರು / 2002) ಓದಬೇಕು. ಈ ಪುಸ್ತಕದಲ್ಲಿ ಧ್ಯಾನದ ವಿವಿಧ ಆಯಾಮಗಳ ಬಗ್ಗೆ ರಾಜಗೋಪಾಲರು ವಿಶದವಾಗಿ ವಿವರಿಸಿದ್ದಾರೆ.

ಕಾಳಾವರ್ ಕರ್ ಬಗ್ಗೆ ಬರೆಯುತ್ತಾ ಧ್ಯಾನದ ಕುರಿತು ಬರೆಯಲು ಇದೇ ಕಾರಣ. ಕಾಳಾವರ್ ಕರ್ ಅವರ ಸಾಹಿತ್ಯ ಸಾಧನೆಯೂ ಧ್ಯಾನದಿಂದಲೇ ಸಾಧಿತವಾಗಿದೆ. ಅವರ ಪುಸ್ತಕಗಳನ್ನು ಓದಿದರೆ, ಅವರ ಕುರಿತು ಬಂದ ಕಾದಂಬರಿಯನ್ನು ಓದಿದರೆ, ಅವರ ಜೊತೆ ಕುಳಿತು ಆರಾಮವಾಗಿ ಮಾತಿಗಿಳಿದಾಗ ನಮಗಿದರ ಅರಿವಾಗುತ್ತದೆ.

ಕೆ ಕೆ ಕಾಳಾವರ್ ಕರ್ (ಕಾಳಾವರ ಕೃಷ್ಣ ಕಾಳಾವರ್ ಕರ್) ಅವರು  ಸರಕಾರಿ ನೌಕರಿಯಲ್ಲಿದ್ದು ನಿವೃತ್ತರಾಗಿದ್ದಾರೆ. ಉಡುಪಿ ತಾಲೂಕಾಫೀಸಿನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸರಕಾರಿ ಉದ್ಯೋಗಕ್ಕೆ ಸೇರಿದ ಕಾಳಾವರ್ ಕರ್ ಅವರು, ಬಳಿಕ  ಕುಂದಾಪುರ ಎಸಿ ಕಚೇರಿಗೆ ವರ್ಗಾವಣೆಯಾದರು. ಇಲ್ಲಿಂದ ಮತ್ತೆ ವರ್ಗಾವಣೆಯಾಗಿ ಮುನ್ಸಿಫ್ ಕೋರ್ಟಿನಲ್ಲಿ ಸಾರ್ವಜನಿಕ ಸೇವೆ ಮುಂದುವರಿಸಿದರು. ಬಳಿಕ ಎಫ್ ಡಿ ಎ ಪರೀಕ್ಷೆ ಬರೆದು ಪ್ರಥಮ ದರ್ಜೆ ಸಹಾಯಕರಾಗಿ ಮಂಗಳೂರು ಜಿಲ್ಲಾ ಖಜಾನೆಯಲ್ಲಿ, ಕುಂದಾಪುರ, ಹೆಬ್ರಿ, ಬೈಂದೂರು ಮೊದಲಾದೆಡೆಗಳ ಉಪ ಖಜಾನೆಗಳಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ 2001ರಲ್ಲಿ ವೃತ್ತಿಯಿಂದ ನಿವೃತ್ತರಾದರು.

1943 ಜುಲೈ ಒಂದರಂದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಗರಗದ್ದೆ ಮನೆಯಲ್ಲಿ ಜನಿಸಿದ ಕೃಷ್ಣ ಕಾಳಾವರ್ ಕರ್ ರವರು. ಕುಂದಾಪುರದ ಕೋಣಿ ಶಾಲೆಯಲ್ಲಿ (ಒಂದರಿಂದ ಐದು), ಬೋರ್ಡ್ ಹೈಸ್ಕೂಲಿನಲ್ಲಿ (ಆರರಿಂದ ಹತ್ತು), ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಕಾಂ ಪದವಿ ಪಡೆದವರು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಎರಡು ಪ್ರಹಸನ ಮತ್ತು ಒಂದು ನಾಟಕ ರಚಿಸಿ ಪ್ರದರ್ಶಿಸಿ ಯಶಸ್ವಿಯಾದ ಕೃಷ್ಣ ಕಾಳಾವರ್ ಕರ್ ಅವರು, ಬಳಿಕ ಸಾಹಿತ್ಯ ರಚನೆಯನ್ನು ಒಂದು ಧ್ಯಾನದಂತೆ, ತಪಸ್ಸಿನಂತೆ ನಿರಂತರವಾಗಿ ಮುಂದುವರಿಸಿದರು. ಇವರ ಎಷ್ಟು ಕೃತಿಗಳು ಪ್ರಕಟವಾಗಿವೆಯೋ, ಇದಕ್ಕಿಂತ ಹಲವು ಪಟ್ಟು ಹೆಚ್ಚು ಕೃತಿಗಳು ಅಪ್ರಕಟಿತವಾಗಿ ಉಳಿದಿವೆ.  

ಮೂಕನ ಮದುವೆ, ಪ್ರೇಮದಾಸಿ, ವಿಧಿ ಸಂಕಲ್ಪ, ಶಿಲ್ಪಿ, ಕಾಲ, ಊರುಗೋಲು, ಪ್ರಶಸ್ತಿ, ಯಾರ ಹೆಂಡತಿ ಚೆಲುವೆ, ಬೇಟೆಗಾರರು, ಪಾಲಿಗೆ ಬಂದ ಪಂಚಾಮೃತ, ಬೆಳಕಿನೆಡೆಗೆ, ಮಹಾ ಚತುರ,  ಮಹಾ ಮಂತ್ರಿಕೆ, ಸತ್ಯ ಹರಿಶ್ಚಂದ್ರ, ಮೋಹಿನಿ ಭಸ್ಮಾಸುರ, ಶಾಲಾ ದೇವರು, ಭಕ್ತ ಪ್ರಹ್ಲಾದ, ಕೌಸಲ್ಯ ಪರಿಣಯ, ರೇಣುಕಾ ಮಹಾತ್ಮೆ, ಗಣೇಶನ ಜಾಣ್ಮೆ, ವಿಘ್ನೇಶ್ವರ ಮಹಿಮೆ, ತಾಯ್ತನ ಹೀಗೆ ಇಪ್ಪತ್ತಕ್ಕೂ ಅಧಿಕ ನಾಟಕಗಳನ್ನು (ಮಕ್ಕಳ ನಾಟಕಗಳನ್ನೂ ಒಳಗೊಂಡಂತೆ) ಕೆ ಕೆ ಕಾಳಾವರ್ ಕರ್ ರಚಿಸಿದ್ದಾರೆ. ಇವುಗಳಲ್ಲಿ ಹಲವು ನಾಟಕಗಳು ಪುಸ್ತಕವಾಗಿ ಮುದ್ರಣವಾಗಿವೆ. ಹತ್ತು ಹಲವಾರು ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿವೆ. ಕೆಲವು ನಾಟಕಗಳು ನೂರಾರು ಪ್ರದರ್ಶನಗೊಂಡಿವೆ. ಬೆನಿಫಿಟ್ ಶೋ ಕೂಡಾ ಆಗಿವೆ.

"ಕಾಲ" ನಾಟಕವನ್ನು ಕಾಳಾವರ್ ಕರ್ ರಚಿಸಿದ್ದು 1981ರಲ್ಲಿ. ಇದು ಇದೇ ಹೆಸರಿನಲ್ಲಿ ಚಲನಚಿತ್ರವಾಗಿ ಬಿಡುಗಡೆಗೊಂಡದ್ದು ಇನ್ನೊಂದು ವಿಶೇಷ. ಇದಾದದ್ದು 1996ರಲ್ಲಿ. ಬಿಡುಗಡೆಯಾದದ್ದು ಪ್ರಸ್ತುತ ಇತಿಹಾಸದ ಕಾಲಗರ್ಭದಲ್ಲಿ ಸೇರಿಹೋದ ಮಂಗಳೂರಿನ ಜ್ಯೋತಿ ಚಿತ್ರ ಮಂದಿರದಲ್ಲಿ. ಈ ಚಲನಚಿತ್ರದಲ್ಲಿ ಪಾತ್ರಿಯಾಗಿ ನಟಿಸಿ ಕಾಳಾವರ್ ಕರ್ ಮಿಂಚಿದ್ದಾರೆ. ಖಳ ನಟರಾಗಿ ಪ್ರಸಿದ್ಧಿ ಪಡೆದಿರುವ ಸತ್ಯಜಿತ್, ಮೊತ್ತಮೊದಲು ಪೂರ್ಣ ಪ್ರಮಾಣದ ಮುಖ್ಯ ಖಳನಟನಾಗಿ ನಟಿಸಿ ಹೆಸರು ಪಡೆದದ್ದೂ "ಕಾಲ"ದ ಮೂಲಕವೇ. ಬೆಂಗಳೂರಿನ ಜಾನಕಿ ಫಿಲಂಸ್ ನಿರ್ಮಿಸಿದ ಈ ಚಿತ್ರವನ್ನು ರಾಜ್ ಬಲ್ಲಾಳ್ ನಿರ್ದೇಶಿಸಿದ್ದಾರೆ. ಬಲ್ಲಾಳ್ ಸ್ವಂತ ನಿರ್ದೇಶಕರಾಗಿದ್ದೂ ಇದೇ ಸಿನಿಮಾವನ್ನು ನಿರ್ದೇಶಿಸುವ ಮೂಲಕವೇ. ಇವರೇ ಇದರಲ್ಲಿ ನಾಯಕ ನಟ. ಸರಕಾರ ಇದಕ್ಕೆ ಒಂದು ಲಕ್ಷ ರೂಪಾಯಿ ಗೌರವಧನವನ್ನೂ ನೀಡಿ ಪುರಸ್ಕರಿಸಿತ್ತು. ಸ್ವಾತಂತ್ರ್ಯ ಪೂರ್ವದ ದಲಿತರ ಬದುಕು ಬವಣೆಗಳ ಯಾತನಾಮಯ ಚಿತ್ರಣವೇ ಕಾಲ ನಾಟಕದ ವಸ್ತು - ವಿಷಯವಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದ 2017ರ ಸಾಲಿನ (ಮಂಗಳ ಪಠ್ಯ ಪುಸ್ತಕ ಮಾಲಿಕೆ 72) ಪ್ರಥಮ ಬಿ ಎಸ್ಸಿ, ಬಿ ಹೆಚ್ ಆರ್ ಡಿ, ಎಫ್ ಎನ್ ಡಿ (ಎರಡನೆಯ ಚತುರ್ಮಾಸ) ಪದವಿ ವಿದ್ಯಾರ್ಥಿಗಳ ಪಠ್ಯ ಪುಸ್ತಕ "ನುಡಿ ಶಿಲ್ಪ" (ಪ್ರಧಾನ ಸಂಪಾದಕರು: ಪ್ರೊ. ಬಿ. ಶಿವರಾಮ ಶೆಟ್ಟಿ, ಕಾರ್ಯನಿರ್ವಾಹಕ ಸಂಪಾದಕರು: ಡಾ. ನಾಗಪ್ಪ ಗೌಡ ಆರ್., ಸಂಪಾದಕರು: ಡಾ. ಜಯಂತಿ ಎನ್., ಡಾ. ಚಂದ್ರಾವತಿ ಶೆಡ್ತಿ, ಸಂಜೀವ ಕುದ್ಪಾಜೆ)ದಲ್ಲಿ ಕಾಳಾವರ್ ಕರ್ ರವರ "ಶಿಲ್ಪ" ನಾಟಕ ಅಳವಡಿಕೆಯಾಗಿರುವುದು ಗಮನಿಸಬೇಕಾದ ವಿಷಯವಾಗಿದೆ. ಸಂಗೀತ ಮತ್ತು ನಾಟ್ಯ ಪ್ರಧಾನವಾಗಿರುವ, ಅಲೆಮಾರಿ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿ ಅತ್ಯುತ್ತಮ ಜೀವಪರ ಸಂದೇಶ ಹೊಂದಿರುವ ನಾಟಕವಾಗಿದೆ. "ಕಾಲ" ಸಹಿತ ಇವರ ಕೆಲವು  ನಾಟಕಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಅಭಿನಯಿಸಲ್ಪಟ್ಟು ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿಗಳನ್ನೂ ಪಡೆದುಕೊಂಡಿರುವುದು ಇವರ ನಾಟಕಗಳ ಹೆಚ್ಚುಗಾರಿಕೆಯೂ ಆಗಿದೆ.

ಹಲವು ಯಕ್ಷಗಾನ ಪ್ರಸಂಗಗಳನ್ನೂ ಕೆ ಕೆ ಕಾಳಾವರ್ ಕರ್ ರಚಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ರಚಿಸಿದ ಯಕ್ಷಗಾನಗಳನ್ನು ಮೇಳಗಳು ಸಹ ಆಡಿವೆ, ಜನಪ್ರಿಯಗೊಂಡಿವೆ. ಚಿರಂಜೀವಿ, ಪ್ರೇಮಾಂಜಲಿ, ಮಹಾಮಂತ್ರಿ, ಅಂಗಾರಕ, ಕಚ್ಚೂರು ಶ್ರೀ ಮಾಲ್ತಿದೇವಿ ಮಹಿಮೆ, ನಾಗಾಂಬಿಕೆ ಇವರ ಕೆಲವು ಉಲ್ಲೇಖಾರ್ಹ ಯಕ್ಷಗಾನಗಳಾಗಿವೆ. ಇವರು 2016ರಲ್ಲಿ ರಚಿಸಿದ "ನಾಗಾಂಬಿಕೆ"ಯ ಪ್ರಥಮ ಪ್ರದರ್ಶನ 26/09/2022ರಂದು ಹಟ್ಟಿಯಂಗಡಿ ಮೇಳದಿಂದ ಕಟ್ಕೆರೆಯ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆಯಲಿದೆ.

ಹರಿಕಥೆಗಳನ್ನು ರಚಿಸುವುದರ ಜೊತೆಗೆ ಹರಿದಾಸರಾಗಿಯೂ ಕೆ ಕೆ ಕಾಳಾವರ್ ಕರ್ ಪ್ರಸಿದ್ಧರು. ಹೀಗಾಗಿಯೇ ಹಲವರು ಇವರನ್ನು "ಹರಿದಾಸ ಕಾಳಾವರ್ಕರ್" ಎಂದೂ ಕರೆಯುತ್ತಾರೆ. ಶಬರಿಮಲೆ ಕ್ಷೇತ್ರ ಮಹಾತ್ಮೆ, ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ ಮಹಾತ್ಮೆ, ವಿಘ್ನೇಶ್ವರ ಮಹಿಮೆ, ಭಕ್ತಿ ಪ್ರಭಾವ, ಭಕ್ತ ಪ್ರಹ್ಲಾದ, ರಾಮ ಮಂತ್ರದ ಮಹಿಮೆ ಮುಂತಾದ ಹರಿಕಥೆಗಳನ್ನು ರಚಿಸಿದ್ದಲ್ಲದೆ ಅಲ್ಲಲ್ಲಿ ಹರಿಕಥಾ ಕಾಲಕ್ಷೇಪವನ್ನೂ ನೀಡಿ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಥೆ - ಕವಿತೆಗಳ ರಚನೆಯಲ್ಲೂ ಕಾಳಾವರ್ ಕರ್ ಸಿದ್ದಹಸ್ತರು. 54 ಕವಿತೆಗಳಿರುವ "ಗೀತಗುಚ್ಛ" 2002ರಲ್ಲಿ ಪ್ರಕಟವಾಗಿವೆ (ಎನ್ ಆರ್ ಎ ಎಂ ಹೆಚ್ ಪ್ರಕಾಶನ, ಕೋಟೇಶ್ವರ). ಭಕ್ತಿಗೀತೆ, ಭಾವಗೀತೆ, ರಂಗ ಗೀತೆ, ಶಿಶುಗೀತೆ, ಜಾನಪದ ಗೀತೆ, ನೃತ್ಯ ಗೀತೆ ಹೀಗೆ ಇವರು ರಚಿಸಿದ ಕವಿತೆಗಳು ನೂರಾರು ಮತ್ತು ಇವುಗಳಲ್ಲೂ  ವೈವಿಧ್ಯಮಯ. ಮೂರು ಕಥೆಗಳಿರುವ "ಕಥಾ ಸಂಚಯ" (ಪ್ರಕಟಣೆ: ಸ್ವಾಗತ ಸಮಿತಿ, 74ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2007 / ಉಡುಪಿ) ಪ್ರಕಟವಾಗಿದ್ದು, ಇನ್ನುಳಿದ ಕಥೆಗಳು ಹಸ್ತಪ್ರತಿಯಲ್ಲಿಯೇ ಉಳಿದುಕೊಂಡಿವೆ.

ಕಥೆ, ಕವಿತೆ, ಕಾದಂಬರಿ, ನಾಟಕ, ಯಕ್ಷಗಾನ, ಹರಿಕಥೆಗಳಲ್ಲದೆ, "ಶ್ರೀ ದೇವಿ ರಕ್ತೇಶ್ವರಿ ವೈಭವ" (ಪೌರಾಣಿಕ ಕಥಾ ಚಿಂತನ / ಪ್ರಕಟಣೆ: ಶ್ರೀ ದೇವಿ ರಕ್ತೇಶ್ವರಿ ದೇವಸ್ಥಾನ, ಪೊಲೀಸ್ ಲೈನ್, ಕುಂದಾಪುರ / 2009), "ಆನೆಗುಡ್ಡೆಯ ಶ್ರೀ ಗಣಪತಿ" (ಸಚಿತ್ರ ಕ್ಷೇತ್ರ ಪರಿಚಯ) ಹೀಗೆ ವಿವಿಧ ಪ್ರಕಾರಗಳ ಸಾಹಿತ್ಯ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡವರು ನಮ್ಮ ಕಾಳಾವರ್ ಕರ್. 

"ತುಳುನಾಡಿನ ಮುಂಡಾಳರು ಮತ್ತು ಕುಂದಾಪುರ ಪರಿಸರದ ಆದಿ ದ್ರಾವಿಡರು" ಎಂಬ ವಿಷಯದ ಮೇಲೆ ತೌಲನಿಕ ಅಧ್ಯಯನದ ಮಹಾ ಪ್ರಬಂಧವನ್ನೂ ರಚಿಸಿರುವ ಕೆ ಕೆ ಕಾಳಾವರ್ ಕರ್ ಅವರು ಪ್ರಸ್ತುತ "ಸ್ಥಿತ" ಎಂಬ ಕಾದಂಬರಿಯನ್ನು ಬರೆಯುತ್ತಿದ್ದಾರೆ. ತನ್ನದೇ ಜೀವನದ ಜೊತೆಗೆ ತಮ್ಮ ಕುಟುಂಬದ ಹಿಂದಿನ ಮೂರು ತಲೆಮಾರುಗಳ ಜನರ ಜನಜೀವನ ಮತ್ತು ಆ ಕಾಲದ ಜನರ ಜನಜೀವನವೇ ಈ ಕಾದಂಬರಿಯ ಕಥಾವಸ್ತು ಎಂದು ಮಾತಾಡುತ್ತಾ ವಿವರಿಸಿದ ಕಾಳಾವರ್ ಕರ್, ನೋವುಂಡೂ ನಕ್ಕು ನಲಿಯುತ್ತಿರುವ ಸಾಧಕರು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನೋವಿನ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಅದರ ಜೊತೆಜೊತೆಗೆ ತಮ್ಮ ಸವಾಲಿನೊಂದಡಗೂಡಿದ ಸಾಧನೆಯ ಮೈಲಿಗಲ್ಲುಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತಿದ್ದರು ಕಾಳಾವರ್ ಕರ್ ಸರ್.

ಕೆ. ಕೆ. ಕಾಳಾವರ್ ಕರ್ ರವರ ನಿಜ ಜೀವನವನ್ನೇ ಕಥಾವಸ್ತುವನ್ನಾಗಿ ಹೊಂದಿರುವ ಕಾದಂಬರಿಯೂ ಈಗಾಗಲೇ ಪ್ರಕಟವಾಗಿರುವುದು (1997) ಮತ್ತೊಂದು ವಿಶೇಷ. ಇದು ಜಾನಪದದಲ್ಲಿ ಎಂಎ ಮಾಡಿದ ಶ್ರೀನಿವಾಸ ಕಾಳಾವರ ಅವರ ಮೊದಲ ಕಾದಂಬರಿಯೂ ಹೌದು. "ನಡೆದು ಬಂದ ದಾರಿ" ಎಂದು ಇದರ ಹೆಸರು.

ಮೂವರು ಮಕ್ಕಳ (ಮೋಹನಚಂದ್ರ, ಸತೀಶ್ಚಂದ್ರ, ಉಮೇಶ್ಚಂದ್ರ) ತಂದೆಯಾಗಿರುವ ಕೆ ಕೆ ಕಾಳಾವರ್ ಕರ್ (ಪತ್ನಿ ಅಹಲ್ಯಾ) ರವರ ತಂದೆ ಕಾಳಪ್ಪ. ತಾಯಿ ಚಿಕ್ಕು ಅವರು ಜನಪದ ಹಾಡುಗಾರ್ತಿಯಾಗಿದ್ದರು. ಆದರೆ ಅವರು ಹಾಡುತ್ತಿದ್ದ, ಮೌಖಿಕ ಪರಂಪಂರೆಯಲ್ಲಿ ಹರಿದು ಬಂದ ಜನಪದ ಹಾಡುಗಳೆಲ್ಲವೂ ತಾಯಿ ಚಿಕ್ಕು ಅವರ ನಿರ್ಗಮನದೊಂದಿಗೆ ಅಳಿದುಹೋಗಿದೆ ಎನ್ನುವುದನ್ನು ಬೇಸರದಿಂದಲೇ ಹೇಳಲು ಕಾಳಾವರ್ ಕರ್ ಮರೆಯುವುದಿಲ್ಲ.

2013ರಲ್ಲಿ ಸಿದ್ಧಾಪುರದಲ್ಲಿ ನಡೆದ ಕುಂದಾಪುರ ತಾಲೂಕು ಹದಿಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕಾಳಾವರ್ ಕರ್, ಅದೊಂದು ಕಾಲದಲ್ಲಿ ಕುಂದಾಪುರದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದ ತಂಡದ ಪ್ರಮುಖರಲ್ಲಿ ಒಬ್ಬರು. ಸರಳವಾಗಿ, ಅಷ್ಟೇ ಸಹಜವಾಗಿ ಸಾಹಿತ್ಯ ರಚನೆಯನ್ನೇ ತಮ್ಮ ಜೀವನದ ಸಂಗಾತಿಯನ್ನಾಗಿಸಿಕೊಂಡು ಬದುಕು ನಡೆಸುತ್ತಿರುವ ಬಹು ಅಪರೂಪದ ವ್ಯಕ್ತಿತ್ವದ ಕಾಳಾವರ ಕೃಷ್ಣ ಕಾಳಾವರ್ ಕರ್ ಜೊತೆಗೆ ಮೂರ್ನಾಲ್ಕು ಗಂಟೆಗಳ ಕಾಲ ಬಿಡದೆ ಆತ್ಮೀಯ ಸಂವಾದ ನಡೆಸಿದ ನಾನು ಕೊನೆಗೆ ಅವರೇ ಕೆತ್ತಿ ಪ್ರೀತಿ ಮತ್ತು ಗೌರವದಿಂದ ಕೊಟ್ಟ ಸಿಹಿಸಿಹಿಯಾದ ಬೊಂಡ ಕುಡಿದು ಕಾಳಾವರದಿಂದ ಬೈಕೇರಿ ಸಾಲಿಗ್ರಾಮದ ಕಡೆಗೆ ಪಯಣ ಮುಂದುವರಿಸಿದೆ.

~ ಶ್ರೀರಾಮ ದಿವಾಣ, ಉಡುಪಿ

ಚಿತ್ರ ೧- ತಮ್ಮ ಮನೆಯಲ್ಲಿ ಕೆ.ಕೆ.ಕಾಳಾವರ್ ಕರ್

೨-೫ ಕಾಳಾವರ್ ಕರ್ ಅವರ ಪ್ರಕಟಿತ ಕೃತಿಗಳು

೬ 'ಕಾಲ' ಚಿತ್ರದಲ್ಲಿ ಕಾಳಾವರ್ ಕರ್

೭. ಕಾಳಾವರ್ ಕರ್ 'ನಡೆದು ಬಂದ ದಾರಿ' ಪುಸ್ತಕ

೮. ಪ್ರಸಾರಾಂಗ, ಮಂಗಳೂರು ವಿ ವಿ ಯ 'ನುಡಿಶಿಲ್ಪ' ಪಠ್ಯಪುಸ್ತಕ