ಸಾಹಿತ್ಯ ಲೋಕದ ಸಾಧಕಿ - ಸಾರಾ ಅಬೂಬಕ್ಕರ್‌

ಸಾಹಿತ್ಯ ಲೋಕದ ಸಾಧಕಿ - ಸಾರಾ ಅಬೂಬಕ್ಕರ್‌

ಕನ್ನಡ ಭಾಷೆ- ಸಾಹಿತ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಬಂದಿರುವ ಸಾರಾ ಅಬೂಬಕ್ಕರ್‌ ಅವರ ನಿಧನ ನಾಡಿಗೆ, ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟ. ಸಾರಾ ಅಬೂಬಕ್ಕರ್‌ ಅವರ ಕುರಿತಾಗಿ ಮಲಯಾಳಂ ದೈನಿಕ ‘ಮಾತೃಭೂಮಿ' ಪತ್ರಿಕೆಯಲ್ಲಿ ಪ್ರಕಟವಾದ ಬರಹದ ಕನ್ನಡಾನುವಾದ ನಿಮ್ಮ ಓದಿಗಾಗಿ ನೀಡಲಾಗಿದೆ. ಮಲಯಾಳಂ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ ಅನುವಾದಕರ ಹೆಸರು ಸಿಗಲಿಲ್ಲ. ಆದರೆ ಆ ಆಜ್ಞಾತ ಬರಹಗಾರರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಈ ಬರಹವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ.

ಚಂದ್ರಗಿರಿ ತೀರದ ಅಲ್ಪಸಂಖ್ಯಾತ ಮಹಿಳೆಯ ಅಕ್ಷರ ದನಿ ಸಾರಾ ಅಬೂಬಕ್ಕರ್.‌ ಮಹಿಳೆಯರ ಸಮಸ್ಯೆಗಳನ್ನು ಸಾಹಿತ್ಯದಲ್ಲಿ ಪರಿಣಾಮಕಾರಿಯಾಗಿ ಅರ್ಥೈಸುವ ಪ್ರತಿನಿಧಿಯಾಗಿದ್ದರು. ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಕಾಸರಗೋಡಿನಲ್ಲಿ ಹುಟ್ಟಿ ಕನ್ನಡ ಸಾಹಿತ್ಯಲೋಕದ ಮುಂಚೂಣಿಯಲ್ಲಿದ್ದ ಮಹಿಳಾ ಬರಹಗಾರ್ತಿ. ಕಾದಂಬರಿ, ಕಥಾಸಂಕಲನ, ಸಣ್ಣಕತೆಗಳು ಅನುವಾದ ಇವರ ಸಾಹಿತ್ಯ ಪ್ರಕಾರಗಳು. ದಕ್ಷಿಣ ಭಾರತದಲ್ಲೇ ಮೆಟ್ರಿಕ್ಯುಲೇಷನ್‌ ಪಾಸ್‌ ಆದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಸರು ಈ ಗಡಿನಾಡ ಲೇಖಕಿಯದ್ದು.

ಕಾಸರಗೋಡಿನ ಹೆಸರಾಂತ ವಕೀಲ ಫೋರ್ಟ್‌ ರೋಡ್‌ ತೆರುವತ್ತ್‌ ಕುನ್ನಿಲ್‌ ಪುದಿಯ ಪುರಯಿಲ್‌ ಅಹಮ್ಮದ್‌ ಮತ್ತು ಸೈನಬಿ ದಂಪತಿಯ ಆರು ಮಕ್ಕಳಲ್ಲಿ ಏಕ ಹೆಣ್ಣು ಮಗಳಾಗಿ ಜನಿಸಿದವರು ಸಾರಾ. ವಿದ್ಯಾಭ್ಯಾಸದ ಮೇಲೆ ತನಗಿರುವಂತೆ ತಂದೆಗೂ ಹೆಚ್ಚಿನ ಆಸಕ್ತಿ ಇದ್ದುದೇ ಸಾರಾ ಅವರಿಗೆ ಉತ್ತಮ ಶಿಕ್ಷಣ ಸಿಗಲು ಕಾರಣ.

ಅಂದು ಮೆಟ್ರಿಕ್ಯುಲೇಶನ್‌ ಪರಿಧಿ ೧೧ನೇ ತರಗತಿಯಾಗಿದ್ದು, ತರಗತಿಯಲ್ಲಿದ್ದ ಒಟ್ಟು ೧೬ ವಿದ್ಯಾರ್ಥಿಗಳಲ್ಲಿ ಉತ್ತೀರ್ಣರಾಗಿದ್ದು ೪ ಮಕ್ಕಳು ಮಾತ್ರ. ಅವರಲ್ಲಿ ಸಾರಾ ಅವರೂ ಒಬ್ಬರು. ಮುಂದೆ ಉನ್ನತ ವಿದ್ಯಾಭ್ಯಾಸ ಪೂರೈಸಲು ಸಮೀಪದಲ್ಲಿ ಯಾವುದೇ ಕಾಲೇಜುಗಳಿರದ ಕಾರಣ ಪರ ಊರಿಗೆ ಹೋಗಲು ಸಾಧ್ಯವಾಗದೆ ಶಿಕ್ಷಣ ಅಲ್ಲಿಗೇ ನಿಂತುಹೋಗುತ್ತದೆ. ಮುಂದೆ ತಮ್ಮ ಅನನ್ಯವಾದ ಬರವಣಿಗೆಗಳಿಂದ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಸಾಹಿತ್ಯಕ್ಕೆ ಪೂರಕವಾದ ಬಾಲ್ಯದ ಕನ್ನಡ ಶಿಕ್ಷಣ: ನಾಲ್ಕನೇ ತರಗತಿ ವರೆಗೆ ಮಲಯಾಳಂ ಮಾಧ್ಯಮದಲ್ಲಿ ಕಲಿತು ಮುಂದೆ ಸಮೀಪದಲ್ಲಿ ಮಲಯಾಳಂ ಶಾಲೆ ಇರದ ಕಾರಣ ಕನ್ನಡ ಮಾಧ್ಯಮ ಶಾಲೆಗೆ ಸೇರಿದರು. ಕನ್ನಡ, ಮಲಯಾಳಂ ಭಾಷೆಗಳು ಮಾತ್ರ ಬರುತ್ತಿದ್ದ ಸಾರಾ ಅವರಿಗೆ ತರಗತಿಯಲ್ಲಿ ಕನ್ನಡ ಮಾತನಾಡುವ ಮಕ್ಕಳ ಮಧ್ಯೆ ಇರಬೇಕಾಯಿತು. ಇದು ಇವರನ್ನು ಒಬ್ಬಂಟಿಯಾಗಿ ಮಾಡಿದ್ದಲ್ಲದೆ ಕನ್ನಡ ಭಾಷೆ ಇವರಲ್ಲಿ ಜಾಗೃತವಾಗುತ್ತಾ ಹೋಯಿತು. ಮುಂದೆ ಇದಕ್ಕೆ ಪರಿಹಾರವಾಗಿ ಶಾಲೆಯ ಶಿಕ್ಷಕಿಯೊಬ್ಬರು ಅಲ್ಲಿನ ಎಲ್ಲಾ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮಾತನಾಡಲು ಆದೇಶಿಸಿದರು. ಗಡಿನಾಡು ಆಗಿರುವುದರಿಂದ ಕನ್ನಡ ಭಾಷೆ ಸಮಸ್ಯೆ ಇರುವ ಮಕ್ಕಳ ಮನೆಮನೆಗಳಿಗೆ ಹೋಗಿ ಕನ್ನಡ ಕಲಿಸುತ್ತಿದ್ದರು. ಹೀಗೆ ಶಾಲೆಯ ಲೈಬ್ರೆರಿಯಲ್ಲಿ ಕನ್ನಡ ಪುಸ್ತಕಗಳನ್ನೇ ಓದುತ್ತಾ ಸಂಪೂರ್ಣವಾಗಿ ಕನ್ನಡ ಭಾಷೆ, ಸಾಹಿತ್ಯಕ್ಕೆ ತೊಡಗಿಸಿಕೊಳ್ಳಲು ಬಾಲ್ಯದ ಶಿಕ್ಷಣ ಇವರಿಗೆ ಪೂರಕವಾಯಿತು.

ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸಿದ ಸಾರಾ: ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ಸಾರಾ ಅವರು ಮೊದಲಿನಿಂದಲೂ ಸಹಿಸುತ್ತಿರಲಿಲ್ಲ. ಜಾತಿ-ಮತ-ಭಾಷೆಯ ಹೆಸರಿನಲ್ಲಿ ನಡೆಯುವ ವರ್ಗೀಕರಣವನ್ನು ಸುಡಲು ಹಾಗೂ ಮಹಿಳೆಯರನ್ನು ಕೀಳಾಗಿ ನೋಡುವ ವ್ಯವಸ್ಥೆಯ ವಿರುದ್ದ ದನಿ ಎತ್ತಲು ಸದಾ ಮಹಿಳೆಯರನ್ನು ಹುರಿದುಂಬಿಸುತ್ತಾ ಬಂದ ಲೇಖಕಿಯಾಗಿಯೂ ಇವರು ದುಡಿದಿದ್ದಾರೆ ಅನ್ನುವುದೇ ವಿಶೇಷ. ಇವರ ನೇತೃತ್ವದ ʻಕರ್ನಾಟಕ ರೈಟರ್ಸ್‌ ಆಂಡ್‌ ರೀಡರ್ಸ್‌ ಅಸೋಸಿಯೇಷನ್‌ʼ ನಲ್ಲಿ ಸುಮಾರು 300 ಕ್ಕಿಂತಲೂ ಅಧಿಕ ಮಹಿಳೆಯರು ಸದಸ್ಯರಾಗಿದ್ದಾರೆ.

ಸಾರಾ ಅವರು ರಚಿಸಿದ ಕೃತಿಗಳಲ್ಲಿ ʻಚಂದ್ರಗಿರಿಯ ತೀರದಲ್ಲಿʼ, ʻಕದನ ವಿರಾಮʼ ಹಾಗೂ ʻಸಹನʼ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡವುಗಳಾಗಿವೆ. ಜೊತೆಗೆ, ಮಲಯಾಳಂ ಲೇಖಕಿ ಮಾಧವಿ ಕುಟ್ಟಿ (ಕಮಲಾ ದಾಸ್)‌ ಅವರ ʻಮನೋಮಿʼ, ಲೇಖಕ ಪಿ.ಕೆ. ಬಾಲಕೃಷ್ಣ ಅವರ ʻಇನಿ ಞಾನ್‌ ಉರಙಟ್ಟೆʼ ಮುಂತಾದ 8 ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ʻಚಂದ್ರಗಿರಿ ಪ್ರಕಾಶನʼ ಹೆಸರಿನ ತಮ್ಮದೇ ಆದ ಪ್ರಕಾಶನ ಸಂಸ್ಥೆಯೊಂದನ್ನೂ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇವರು ಬರವಣಿಗೆಯನ್ನು ನಿಲ್ಲಿಸಿದ್ದರು.

ಸಿನೆಮಾ ಆದ ಕಾದಂಬರಿಗಳು: ಸಾರಾ ಅಬೂಬಕ್ಕರ್‌ ಅವರ ಕಾದಂಬರಿಗಳು ನಾಟಕ ಹಾಗೂ ಸಿನಿಮಾ ಆಗಿ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಿಳಿದಿದೆ. ಅಲ್ಪಸಂಖ್ಯಾತ ಸಮುದಾಯದೊಳಗಿನ ಪುರುಷರ ಅಧಿಕಾರ ಮತ್ತು ಧರ್ಮದ ಒಳಗಿನ ಬಿಗಿಹಿಡಿತಗಳು ಮಹಿಳೆಯನ್ನು ಆವರಿಸಿಕೊಂಡಿದ್ದ ಪರಿಯೇ ʼಚಂದ್ರಗಿರಿ ತೀರದಲ್ಲಿʼ. ಲೇಖಕಿ ಸಾರಾ ಅಬೂಬಕ್ಕರ್‌ ಅವರ ಚಂದ್ರಗಿರಿ ತೀರದಲ್ಲಿ ಕಾದಂಬರಿ ನಾಟಕವಾಗಿ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿತ್ತು. ನಾಟಕವು, ಕಾಸರಗೋಡಿನ ಚಂದ್ರಗಿರಿಯ ನದಿ ತೀರದಲ್ಲಿ ವಾಸಿಸುವ ಬಡ ಮುಸ್ಲಿಂ ಕುಟುಂಬದ ಹೆಣ್ಣು ಮಕ್ಕಳ ಮೇಲಿನ ಶೋಷಣೆಗಳನ್ನು ತೆರದಿಟ್ಟಿದೆ.

ಈ ಚಿತ್ರವನ್ನು ನಯನಾ ಸೂಡ ನಿರ್ದೇಶಿಸಿದ್ದಾರೆ. ನಾದಿರಾ ಪಾತ್ರಕ್ಕೆ ನಯನಾ ಪರಕಾಯ ಪ್ರವೇಶದಂತಿತ್ತು. ಧರ್ಮದ ಸುಳಿಯಲ್ಲಿ ಸಿಲುಕಿದ ಮಹಿಳೆ ಏನೂ ಮಾಡದಂತಹ ಅಸಹಾಯಕ ಸ್ಥಿತಿಗೆ ತಲುಪಿ ಚಂದ್ರಗಿರಿ ನದಿ ಪಾಲಾಗುವುದು ನಾಟಕದಲ್ಲಿದೆ. ಆದರೆ, ಸಾರಾ ಅಬೂಬಕ್ಕರ್‌ ಅವರು ತಮ್ಮ ಕಾದಂಬರಿಯಲ್ಲಿ ನಾದಿರಾ ಮನೆ ಬಿಟ್ಟು ಮಸೀದಿಯತ್ತ ಹೊರಡುವುದನ್ನು ಬರೆದಿದ್ದಾರೆ. ಚಂದ್ರಗಿರಿಯ ತೀರದಲ್ಲಿ ನಾಟಕ ಬೆಂಗಳೂರಿನಲ್ಲಿ ಈ ನಾಟಕ ಎರಡು ತಿಂಗಳ ಕಾಲ ಇಪ್ಪತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು.

ಸಾರಾ ಅಬೂಬಕ್ಕರ್‌ ಅವರ ಮತ್ತೊಂದು ಕಾದಂಬರಿ ‘ವಜ್ರಗಳು’. ಈ ಕಾದಂಬರಿ ‘ಸಾರಾ ವಜ್ರಗಳು’ ಎಂಬ ಕನ್ನಡ ಸಿನಿಮಾವಾಗಿ ಮೂಡಿಬಂದಿತ್ತು. ಕಾಸರಗೋಡಿನ ಮುಸ್ಲಿಂ ಮಹಿಳೆಯೊಬ್ಬಳು ಮದುವೆಯಾದ ಬಳಿಕ ಪಡುವ ಯಾತನೆಯೆ ಈ ಚಿತ್ರದ ಕಥಾವಸ್ತು. ನಫೀಸಾ ಎಂಬ ಮುಖ್ಯ ಪಾತ್ರದಲ್ಲಿ ನಟಿ ಅನುಪ್ರಭಾಕರ್‌ ಕಾಣಿಸಿಕೊಂಡಿದ್ದರು. ಸಾರಾ ಅವರ ೮೫ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರ ಪ್ರೇಕ್ಷಕರಿಗೆ ಅಷ್ಟಾಗಿ ಮೆಚ್ಚುಗೆಯಾಗದಿದ್ದರೂ ಚಿತ್ರ ವಿಮರ್ಶಕರ ಮನಗೆದ್ದಿತ್ತು. 

ಹೀಗೆ ಕನ್ನಡ ಭಾಷೆ- ಸಾಹಿತ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಬಂದಿರುವ ಸಾರಾ ಅಬೂಬಕ್ಕರ್‌ ಅವರ ನಿಧನ ನಾಡಿಗೆ, ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟವಾಗಿದೆ.

-ಮೂಲ: ಮಾತೃಭೂಮಿ ದಿನಪತ್ರಿಕೆ (ಮಲಯಾಳಂ)