ಸಾಹಿತ್ಯ-ಸಂತೋಷ

ಸಾಹಿತ್ಯ-ಸಂತೋಷ

ಸಾಹಿತ್ಯ ಪ್ರಪಂಚ ಬಹಳ ವಿಶಾಲವಾದ ಬಯಲು. ಅಲ್ಲಿ ಗಿಡಮರ, ಬೆಟ್ಟ ಗುಡ್ಡ, ನದಿ ಸಮುದ್ರ, ಆಕಾಶ, ಭೂಮಿ, ಗಾಳಿ, ನೀರು ಎಲ್ಲವೂ ಇದೆ.ಎಲ್ಲವನ್ನೂ ಅರಿತು,ಕಲೆತು, ಕಲಿತು  ಬರೆಯುವ ಸಾಹಿತಿಗಳು ಎಷ್ಟಿದ್ದಾರೆ ಎಂಬುದೇ ಪ್ರಶ್ನೆ. ಕೀರ್ತಿ ಮತ್ತು ಹಣ ಇದರ ಹಿಂದೆ ಹೋದವರು ಅನೇಕರಿರಬಹುದು. ಎರಡೂ ಬೇಡ ಬರೆಯಬೇಕೆಂಬ ತುಡಿತ ಮಿಡಿತ  ಇರುವವರು ಒಂದಷ್ಟು ಜನ. ಜನರಿಗೆ ಏನಾದರೂ ಒಳ್ಳೆಯ ಅಂಶಗಳನ್ನು ನೀಡಬೇಕೆಂಬವರು ಇರುವರು. ಒಂದಷ್ಟು ಬರೆಯೋಣ ಎನ್ನುವವರೂ ಇದ್ದಾರೆ.

ಸಾಹಿತ್ಯ ಎಂದೊಡನೆ ಹಲವು ಪ್ರಕಾರಗಳಿರಬಹುದು. ನಮ್ಮ ಇಷ್ಟದ ಬರವಣಿಗೆಯೂ ಇರಬಹುದು. ಮತ್ತೊಬ್ಬರು ಎಲ್ಲಾ ಪ್ರಕಾರಗಳಲ್ಲಿ ಬರೆಯಲು ಪ್ರಯತ್ನಿಸಿ ಯಶಸ್ವಿಯಾಗಿರಬಹುದು. ಅದು ಅವರವರ ಸಂತೋಷ, ಯೋಚನೆ, ಯೋಜನೆಗೆ ಬಿಟ್ಟ ವಿಷಯ. ಒಬ್ಬರು ತಪ್ಪು ಬರೆದಿದ್ದಾರೆ ಎಂದು ನಮ್ಮ ಮನಸ್ಸಿಗೆ ಅನಿಸಿದರೆ, ನಮಗೆ ಸರಿಯಾದ ಜ್ಞಾನ ಅದರಲ್ಲಿದ್ದರೆ ಮಾತ್ರ ನಾವು ತಪ್ಪನ್ನು ಹೇಳಬೇಕು. ಇಲ್ಲದಿದ್ದರೆ ಅವರು ಮುಖಕ್ಕೆ ಹೊಡೆದ ಹಾಗೆ ಹೇಳಿದರೆ ನಾವು ಕೇಳಿಸಿಕೊಳ್ಳಲು ತಯಾರಿರಬೇಕು.

"ನೀವು ಹೀಗೆ ಟೈಪ್ ಮಾಡಿ ಬರೆದು ಕಳುಹಿಸಿದರೆ ಹಣ ಉಂಟಾ?"ಎಂದು ಕೆಲವರ ಪ್ರಶ್ನೆ. ಎಷ್ಟು ಬಾಲ ಮಾತುಗಳಲ್ವಾ? ಬರೆಯುವುದೆಲ್ಲ ಹಣಕ್ಕಾಗಿ ಎಂದಾಗಿದ್ದರೆ, ಇಂದು ಸಾಹಿತಿಗಳು ಮಹಡಿ ಮನೆಗಳಲ್ಲಿ, ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದರು.

ಎಲ್ಲಾ ಬರವಣಿಗೆಗಳು ಅವರವರ ಆತ್ಮ ತೃಪ್ತಿ, ಸಂತೋಷಕ್ಕಾಗಿ. ನಾಲ್ಕು ಜನರಿಗೆ ಉಪಕಾರವಾಗಲಿ. ಒಬ್ಬನ ರಚನೆ ನೋಡಿ ನಾನೂ ಹಾಗೆ ಬರೆಯಬೇಕೆಂಬ ತುಡಿತ ಮೂಡಲು ಸಹಾಯ. ಅದರಲ್ಲಿರುವ ಆನಂದ ಬೇರೆಲ್ಲಿ ಸಿಗಲು ಸಾಧ್ಯ? ನಮ್ಮ ಸುತ್ತ ಮುತ್ತಲಿನ ನಿಸರ್ಗ, ಮನೆಯ ಘಟನೆಗಳು, ಜೀವನಾನುಭವಗಳ ಸಾರವೇ ಬರಹರೂಪದಲ್ಲಿ ಹೊರಬರಬಹುದು.

ಆದರೆ ಪರರು ಕಷ್ಟ ಬಂದು ಬರೆದ ಪದಗಳನ್ನು, ವಾಕ್ಯಗಳನ್ನು ನಾಚಿಕೆಯಿಲ್ಲದೆ ತೆಗೆದುಕೊಂಡು, ಅದಕ್ಕೆ ಹೊಸತೊಂದು *ಬಂಗಾರದ ಸಣ್ಣ ಲೇಪ*ಮಾಡಿ ತನ್ನದೇ ಬರಹ ಹೇಳುವುದು ಯಾವತ್ತೂ ಸಂತೋಷವನ್ನು ತಾರದು. ಮನಸ್ಸಿನೊಳಗೆ ಪುಕುಪುಕು ಇದ್ದೇ ಇರುತ್ತದೆ ಎಗರಿಸಿದ್ದು ಎಂದು. ಯಾವುದೇ ವಿಷಯಗಳ ಒಳಹೊಕ್ಕು ತೂಗಿ ಆಲೋಚಿಸಿ ಬರೆದಾಗ ಅದು ಗಟ್ಟಿ ಸಾಹಿತ್ಯ ಪ್ರಕಾರವಾಗಬಲ್ಲುದು. ಕಾವ್ಯ ರಸಾಯನದ ಪಾಕ ಮೌಲ್ಯಯುತವಾಗಿರಲಿ ಅಲ್ಲವೇ? ಹೇಗೆ ಪನ್ನೀರಿನಲ್ಲಿ ಅದ್ದಿದ ವಸ್ತ್ರ ಪರಿಮಳ ಬೀರುವುದೋ ಹಾಗೆ ಸಾಹಿತ್ಯಗಳು ಸಹ ವಿಜೃಂಭಿಸಿದರೆ ಚೆನ್ನ.  

ವ್ಯಕ್ತಿಗತ ಆಸಕ್ತಿಗಳು, ಆಶಯಗಳು ಒಟ್ಟಾಗಿ ಸಮಾಜದ ಆಸೆ ಆಕಾಂಕ್ಷೆಗಳೊಂದಿಗೆ ಸಮರಸವಾಗಿ, ಸಾಮಾಜಿಕ ಚಿಂತನೆಯೊಂದಿಗೆ ಸೇರಿ ಸುಂದರವಾದ, ತೂಕದಿಂದ ಕೂಡಿದ ಬರವಣಿಗೆ ಹೊರಹೊಮ್ಮಲಿ. ಆದಷ್ಟು ಕಾಗುಣಿತ ದೋಷರಹಿತವಾದ ಬರಹಗಳು ಬರಲೆಂಬ ಆಶಯ.

ಯಾವುದೇ ಬರವಣಿಗೆಯ ಭಾಷೆ ಬೆಸೆಯುವ ಕೆಲಸವನ್ನು ಮಾಡಲಿ, ಬಿರುಕು ಮೂಡಿಸದಿರಲಿ. ಬದುಕಿಗೆ ಉಪಯುಕ್ತವಾದ ಅಮೃತ ಸಿಗಲೆಂಬ ಆಶಯ. ನಿಜವಾದ ಒಂದು ಬರವಣಿಗೆ ಓದಿದ ಮೇಲೆ ನಮ್ಮನ್ನು ಚಿಂತನೆಗೆ ಹಚ್ಚುವಂತಿರಬೇಕು. ಆಕರ್ಷಕವಾಗಿರಬೇಕು. ಇವರ ಬರವಣಿಗೆ ಇನ್ನಷ್ಟು ಓದಬೇಕು, ತೊಂದರೆಯಿಲ್ಲ ಹೇಳುವಂತಿರಬೇಕು. ಒಟ್ಟಿನಲ್ಲಿ ಉತ್ತಮವಾದ ಸಾಹಿತ್ಯ ಪ್ರಕಾರಗಳು ಬರಲಿ, ಓದಿ ಎಲ್ಲರೂ ಸಂಭ್ರಮಿಸಲಿ ಎಂಬ ಆಶಯದೊಂದಿಗೆ ವಿರಾಮ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ : ಇಂಟರ್ನೆಟ್ ತಾಣ