ಸಾಹಿತ್ಯ ಹೇಗಿರಬೇಕು?

ಸಾಹಿತ್ಯ ಹೇಗಿರಬೇಕು?

 

 ವನಗಳನ್ನು ಕಾದಂಬರಿಗಳನ್ನು ನಾಟಕಗಳನ್ನು ಪತ್ರಿಕೆಗಳನ್ನು ನಾವು ಓದಿ ಸಂತೋಷಪಡುತ್ತೇವೆ. ಒಂದೊಂದು ಕಾಲದಲ್ಲಿ ಒಂದೊಂದು ಸಾಹಿತ್ಯ ಪ್ರಕಾರಗಳು ಚೆನ್ನಾಗಿ ಬೆಳೆದು ಪ್ರಸಿದ್ಧವಾಗುತ್ತವೆ. ಇದಕ್ಕೆ ಕಾರಣ ಆ ಕಾಲದ ಸಮಾಜದ ರೀತಿ, ವ್ಯವಸ್ತೆ, ಸಮಸ್ಯೆಗಳು, ಧಾರ್ಮಿಕ ಭಾವನೆಗಳು ಹಾಗು ವೈಜ್ಞಾನಿಕ ವಿಚಾರಗಳು. ವಾಲ್ಮೀಕಿ ರಾಮಾಯಣವು ಒಂದು ಕಾಲದಲ್ಲಿ ಪ್ರಸಿದ್ಧ ಕಾವ್ಯಪ್ರಕಾರವಾಗಿತ್ತು. ಆಗಿನ ಕಾಲದ ಎಲ್ಲಾ ಸಮಸ್ಯೆಗಳಿಗೂ ಅದರಲ್ಲಿ ಉತ್ತರವಿದ್ದಿತ್ತು. ಆಗಿನ ಕಾಲದ ಸಂಪೂರ್ಣ ಚಿತ್ರಣವನ್ನು ಹೊಂದಿತ್ತು. ನಂತರ ಕಾಲ ಬದಲಾಯಿತು. ತುಳಸಿ ರಾಮಾಯಣ ಇತ್ಯಾದಿಗಳು ಬಂದವು. ಕಾಲಕ್ಕೆ ತಕ್ಕಂತೆ ರಾಮಾಯಣದ ಹೊಸ ಹೊಸ ಪ್ರಕಾರಗಳು ಬಂದವು. ಕನ್ನಡದಲ್ಲಿ ಮಜ್ಜಿಗೆ ರಾಮಾಯಣ ಎಂದೂ ಒಂದು ರಾಮಾಯಣ ಪ್ರಸಿದ್ಧಿಯಲ್ಲಿದೆ.

ಕಾಲ ಸಮಾಜಕ್ಕನುಗುಣವಾಗಿ ರಾಮಾಯಣ ಮಹಾಭಾರತ ಇತ್ಯಾದಿಗಳ ವಿವಿಧ ಪ್ರಕಾರಗಳು ಬಂದವು. ಪವಿತ್ರವಾದ ಭಗವದ್ಗೀತೆಯನ್ನು ಮನಸ್ಸಿಗೆ ಬಂದ ಹಾಗೆ ಬರೆಯುವ ಸಾಹಿತಿಗಳೂ ಇದ್ದಾರೆ. ಪುರಾತನ ಸಾಹಿತ್ಯದೊಡನೆ ಚರಿತ್ರೆ ಮತ್ತು ಭಾಷೆಗಳನ್ನು ಅಳವಡಿಸಿಕೊಂಡು ಕೃತಿ ರಚನೆ ಮಾಡುವವರೂ ಇದ್ದಾರೆ. ಆದರೆ ಬಹಳ ಮಂದಿ ಅದುವರೆಗೆ ಸಾಹಿತ್ಯದಲ್ಲಿ ಸಾಮಾಜಿಕ ವಿಚಾರಗಳನ್ನು  ಜನಜೀವನದ ಹಲವಾರು ಮಜಲುಗಳನ್ನು ಕುರಿತು ಅಭ್ಯಾಸ ಮಾಡಿರುವುದಿಲ್ಲ. ಅವುಗಳ ದಾರ್ಶನಿಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಸಾಹಿತ್ಯಕ್ಕೆ ಅಳವಡಿಸುವುದಕ್ಕೆ ಹೋಗುವುದಿಲ್ಲ.

ಸಾಹಿತಿಗಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಒಲವಿರಬೇಕು. ಸಾಮಾಜಿಕ ವಿಚಾರಗಳನ್ನು ಜನಜೀವನದ ಹಲವಾರು ಮುಖಗಳನ್ನು ಕುರಿತು ಅಭ್ಯಾಸ ಮಾಡಿರಬೇಕು. ಸಂಸ್ಕೃತಿಯನ್ನು ಕುರಿತಂತೆ ಬಹಳ ವ್ಯಾಪಕವಾದ ಆಳವಾದ ಪ್ರಾಸಾರಿತವಾದ ಅಧ್ಯಯನ ಮಾಡಿರಬೇಕು. ಸಮಾಜದ ಸಮಸ್ತ ಮುಖಗಳು, ಸಾಮಾಜಿಕ ಮತ್ತು ರಾಜಕೀಯ, ಧಾರ್ಮಿಕ ಮತ್ತು ದಾರ್ಶನಿಕ ಭಾವನೆಗಳು ಜನಪದ ಜೀವನದ ರೀತಿನೀತಿಗಳು ನಂಬಿಕೆಗಳು ವೈಜ್ಞಾನಿಕ ಚಿಂತನೆಗಳನ್ನು ಚೆನ್ನಾಗಿ ತಿಳಿದುಕೊಂಡಿರಬೇಕು.

ಭಾರತ ವೈವಿಧ್ಯಮಯವಾದ ದೇಶ. ಅನೇಕ ಕಡೆಗಳಲ್ಲಿ ಅನೇಕ ರೀತಿಯ ಸಂಸ್ಕೃತಿ ಪರಂಪರೆಗಳಿವೆ. ವಿದ್ವಾಂಸರು ಬೇರೆ ಬೇರೆ ಭಾಷೆಗಳನ್ನೂ ಅವುಗಳ ಸಾಹಿತ್ಯಯಗಳನ್ನೂ ದೃಷ್ಟಿಯಲ್ಲಿಟ್ಟು ಕೊಂಡು ಅಧ್ಯಯನ ನಡೆಸಬೇಕು. ಭಾರತದ ಭಾಷೆಗಳ ಮಾತೃಸ್ಥಾನದಲ್ಲಿರುವ ಮೂಲ ಸಂಸ್ಕೃತ ಸಾಹಿತ್ಯವನ್ನು ಕೂಡ ಅಧ್ಯಯನ ಮಾಡಿರಬೇಕು. ಸಮಗ್ರ ಭಾರತೀಯ ಸಾಹಿತ್ಯವನ್ನು ಮನದಲ್ಲಿಟ್ಟುಕೊಂಡು ಚಿಂತಿಸಬೇಕು. ಸಾಹಿತಿಗಳು ತಮ್ಮ ಪ್ರತಿಭೆಗಳಿಂದ ಹೊಸ ಹೊಸ ಕಲ್ಪನೆಗಳಿಂದ ಸಾಹಿತ್ಯಕ್ಕೊಂದು ಹೊಸ ಬೆಳಕನ್ನು ಕೊಡಬೇಕು. ಸಾಹಿತಿ ಸುತ್ತಮುತ್ತಲಿನ ಪರಿಸರವನ್ನು ಕಣ್ ತೆರೆದು ನೋಡಬೇಕು. ಜನರ ಕಷ್ಟ, ಸುಖ, ಸೊಗಸು, ಸ್ವರೂಪ, ಕುರೂಪ, ವಿಕಾರಗಳನ್ನು ಅರ್ಥಮಾಡಿಕೊಳ್ಳಬೇಕು. ತನ್ನ ಸಾಹಿತ್ಯದಿಂದ ಜನರ ಬಾಳು ಬೆಳಗುವಂತೆ ಸಾಹಿತ್ಯವನ್ನು ಸೃಷ್ಟಿಸಬೇಕು.

ಮನುಷ್ಯತ್ವ ಎಂಬುದು ನಮಗೆ ಕೇವಲ ಒಂದೇ ಜನ್ಮದಲ್ಲಿ ಸಿಕ್ಕಿದ್ದಲ್ಲ. ಸಹಸ್ರಾರು ವರ್ಷಗಳ ಕಾಲ ಸಾಧನೆ ಮಾಡಿ ನಾವು ಪಶುವಿನ ಸ್ಥಿತಿಯಿಂದ ಮನುಷ್ಯನ ಸ್ಥಿತಿಗೆ ಬಂದು ತಲುಪಿದ್ದೇವೆ. ಮನುಷ್ಯನಾಗಿ ವಿದ್ಯೆ ಇಲ್ಲದಿದ್ದರೆ ಅವನು ಪಶುವಿಗೆ ಸಮಾನ. “ವಿದ್ಯಯಾ ಹೀನಾಃ ಪಶುಭಿಸ್ಸಮಾನಾಃ” ಎಂಬ ಉಕ್ತಿಯಂತೆ ವಿದ್ಯೆ ಇಲ್ಲದಿದ್ದರೆ ಅವನು ಪಶುವಿಗೆ ಸಮಾನನಾಗುತ್ತಾನೆ. ಒಂದು ವೇಳೆ ಇಗ ನಾವು ಮನುಷ್ಯತ್ವವನ್ನು ಬಿಟ್ಟು ಪಶುತ್ವವನ್ನು ಒಪ್ಪಿಕೊಂಡರೆ ಇಷ್ಟು ಕಾಲದ ಸಾಧನೆಯ ಫಲವೇನು? ಸತ್ಯ, ಅಹಿಂಸೆ, ಪ್ರೇಮ, ಭಕ್ತಿ ಮೊದಲಾದ ಗುಣಗಳನ್ನು ಸಾಹಿತ್ಯದಲ್ಲಿ ಬೆಳೆಸಿಕೊಳ್ಳಬೇಕು. ಮನುಷ್ಯನ ಶ್ರೇಷ್ಠ ಗುಣಗಳನ್ನು ಸಾಹಿತ್ಯದಲ್ಲಿ ಚಿತ್ರಿಸಬೇಕು. ಕ್ರೌರ್ಯ, ಅಸೂಯೆ, ಕಾಮುಕತೆ, ಇತ್ಯಾದಿ ಗುಣಗಳಿಗೆ ಪ್ರಾಧಾನ್ಯತೆ ಕೊಡದೆ ಗೌಣವಾಗಿ ನೋಡಬೇಕು. ಈಗಲಂತೂ ಕ್ರೌರ್ಯ, ಕಾಮುಕತೆಗಳನ್ನು ಚಿತ್ರಿಸಲೆಂದೇ ಸಾಹಿತ್ಯ ಪ್ರಕಾರಾಗಳಿವೆ, ಪತ್ರಿಕೆಗಳಿವೆ. ಈ ವಿಧವಾದ ಸಾಹಿತ್ಯದಿಂದ ಮನುಷ್ಯನ ಹಾಗು ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಮನುಷ್ಯನು ತಾನು ಬೆಳೆಯುತ್ತಾ ಹೋದಂತೆಲ್ಲಾ ಹಿತವನ್ನು ಸಾಧಿಸಿಕೊಳ್ಳುತ್ತಾ ಪಯಣಿಸುತ್ತಿದ್ದಾನೆ. ಮಾನವ ಸಂಸ್ಕೃತಿಯ ವಿಕಾಸದಲ್ಲಿ ಸಾಹಿತ್ಯದ ಕೊಡುಗೆ ತುಂಬಾ ಮಹತ್ವಪೂರ್ಣವಾದುದು. ಹಾಗಾಗಿ ಒಂದು ಸಾಹಿತ್ಯದ ಕೃತಿ ಶ್ರೇಷ್ಠವಾಗಿದೆ ಎಂದು ತಿರ್ಮಾನ ಮಾಡಬೇಕಾದರೆ ಅದು ಎಷ್ಟರ ಮಟ್ಟಿಗೆ ಲೋಕ ಹಿತವನ್ನು ಉಂಟು ಮಾಡುತ್ತದೆ ಎಂಬುದನ್ನು ಅತ್ಯಗತ್ಯವಾಗಿ ತಿಳಿಯಬೇಕು.ಹಜಾರಿಪ್ರಾಸಾದ್ ದ್ವಿವೇದಿ ಅವರು ಸಾಹಿತ್ಯವನ್ನು ಜನರಲ್ಲಿ ಶ್ರೇಷ್ಠವಾದ ಗುಣಗಳನ್ನು ಬೆಳೆಸುವ ಸಾಧನವೆಂದು ತಮ್ಮ “ಸಾಹಿತ್ಯ್  ಕಾ ಸಾಥಿ” ಎಂಬ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ. ದ್ವಿವೇದಿಯವರ ಪ್ರಕಾರ “ಸಾಹಿತ್ಯವು ಸಮಾಜ ನಿರ್ಮಾಣದಲ್ಲಿ ಹೆಗಲು ಕೊಟ್ಟು ನಿಲ್ಲಬೇಕು. ಈ ಜವಾಬ್ದಾರಿಯನ್ನು ಅದು ಎಷ್ಟರ ಮಟ್ಟಿಗೆ ನಿರ್ವಹಿಸುತ್ತದೆ ಎಂಬುದೇ ಅದರ ಓರೆಗಲ್ಲು. ದುರ್ಗತಿ, ಹೀನಸ್ಥಿತಿ ಮತ್ತು ಸಣ್ಣತನಗಳಿಂದ ಮನುಷ್ಯನನ್ನು ಉಳಿಸಿ ಅವನ ಒಳಸ್ವರೂಪವನ್ನು(ಸ್ವಸ್ವರೂಪವನ್ನು) ಬೆಳಸದೇ ಇದ್ದರೆ ಎಂಥಾ ಮಾತಿನ ಜಾಲವೂ ಸಾಹಿತ್ಯವಾಗಲಾರದು. ಇನ್ನೊಬ್ಬರಲ್ಲಿ ವೇದನೆಯನ್ನು ಕಂಡಾಗ ಅದನ್ನು ಅರ್ಥಮಾಡಿಕೊಂಡು ಸಂವೇದನಾಶೀಲತೆ ಉಕ್ಕಿ ಬರದೇ ಹೋದಲ್ಲಿ ಅಂಥಹಾ ಬರವಣಿಗೆ ಸಾಹಿತ್ಯವಾಗಲಾರದು”.

ಸಾಹಿತ್ಯವು ಕೇವಲ ಮನೋರಂಜನೆಗೆಂದು ಇಲ್ಲದೆ ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ಹಾಗು ಪರಮಪುರುಷಾರ್ಥಸಿದ್ಧಿಗೆ ಸಹಾಯವಾಗಬೇಕು. ಕ್ರೌರ್ಯ, ಅಸೂಯೆಗಳೆಂದೂ ಮನುಷ್ಯನ ಸಹಜ ಸ್ವಭಾವಗಳಲ್ಲ. ಇಚ್ಛಾಪೂರ್ತಿ ಉಂಟಾಗದೇ ಇದ್ದಾಗ ಮನಸ್ಸು ವಿಕಾರವನ್ನು ಹೊಂದಿ ಕ್ರೌರ್ಯ ಅಸೂಯೆಗಳು ಮನಸ್ಸಿನಲ್ಲಿ ಉಂಟಾಗುತ್ತವೆ. ಮನುಷ್ಯನ ಸಹಜ ಸ್ವಭಾವವೆಂದರೆ ಶಾಂತಿ, ಸತ್ಯ, ಅಹಿಂಸೆ, ಪ್ರೇಮ,ಭಕ್ತಿ ಇತ್ಯಾದಿಗಳು. ಇವು ಮನಸ್ಸು ಶಾಂತವಾದಾಗ ಮನುಷ್ಯರಲ್ಲಿ ಕಾಣಬರುತ್ತವೆ. ಸಾಹಿತ್ಯವು ಮನುಷ್ಯನ ಮನಸ್ಸನ್ನು ವಿಕಾರಕ್ಕೆ ತೆಗೆದುಕೊಂಡು ಹೋಗದೆ ಶಾಂತತೆಯನ್ನು ಹೊಂದುವುದಕ್ಕೆ ಅನುವು ಮಾಡಿಕೊಡಬೇಕು. ಸಾಹಿತ್ಯವನ್ನೋದಿದರೆ ಮನುಷ್ಯನ ಮನಸ್ಸು ಶಾಂತವಾಗಬೇಕೆ ಹೊರತು ಕದಡಬಾರದು. ವೇದಗಳಲ್ಲಿ ಹೇಳಿರುವ ಸತ್ಯ ಅಹಿಂಸೆಗಳಿಗೆ  ಇಂದೂ  ಇದೆ. ಪ್ರೇಮ-ಭಕ್ತಿಗಳುಳ್ಳವರನ್ನು ಇಂದೂ ಸಹ ಜನ ಗೌರವಿಸುತ್ತಾರೆ. ಮನುಷ್ಯನು ತನ್ನಲ್ಲಿರುವ ದೈವತ್ವವನ್ನು ತಿಳಿದುಕೊಳ್ಳಲು ತನ್ನ ಅತ್ಯುನ್ನತ ಧ್ಯೇಯವನ್ನು ತಲುಪಲು ತನ್ನನ್ನು ತಾನು ಅರಿಯುವಂತಹ  ಶ್ರೇಷ್ಠವಾದ ಪ್ರೇರಣಾದಾಯಕ ಸಾಹಿತ್ಯವನ್ನು ಸಾಹಿತಿಗಳು ಸಮಾಜಕ್ಕೆ ಕೊಡಬೇಕು.