ಸಾಹುಕಾರನ ದುರಹಂಕಾರ

ಸಾಹುಕಾರನ ದುರಹಂಕಾರ

ಉಜ್ಜಯನಿ ಸಮೀಪದ ಒಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದ. ಆತನು ಕೃಷಿ ಕೆಲಸ ಮಾಡಿ ಧನ ಸಂಪಾದಿಸಿದ್ದ. ಜತೆಯಲ್ಲಿಯೇ, ವಿವಿಧ ರೀತಿಯ ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿ, ಹಲವು ವಿಚಾರಗಳನ್ನು ತಿಳಿದಿದ್ದ. ಆ ಊರಿನಲ್ಲಿ ಆತನಷ್ಟು ಅಧ್ಯಯನ ಮಾಡಿದವರು ಇರಲಿಲ್ಲ. ಇದರಿಂದಾಗಿ ಆತನಲ್ಲಿ ಹೆಮ್ಮೆ.

ಆತ ಒಂದು ತೋಟ ಮಾಡಿ ವೀಳ್ಯದ ಎಲೆ, ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಬೆಳೆಸಿದ್ದ. ಒಂದು ದಿನ ಒಂದು ಬಡಕಲು ಹಸು ಅದರೊಳಗೆ ಹೋಗಿ, ತರಕಾರಿ ಗಿಡಗಳನ್ನು ತಿನ್ನ ತೊಡಗಿತು. ಅದೇ ಸಮಯಕ್ಕೆ ತೋಟಕ್ಕೆ ಬಂದ ಆ ಸಾಹುಕಾರನು, ತನ್ನ ಕೈಯಲ್ಲಿನ ದೊಣ್ಣೆಯನ್ನು ಅದರ ಮೇಲೆ ಬೀಸಿ ಒಗೆದ. ಆ ಹಸುವನ್ನು ಬೆದರಿಸಬೇಕೆಂಬುದು ಆತನ ಅಭಿಲಾಷೆ. ಆದರೆ ದೂರದಿಂದ ಎಸೆದ ದೊಣ್ಣೆಯು ಆ ಬಡಕಲು ಹಸುವಿನ ತಲೆಗೆ ತಾಗಿದ್ದರಿಂದ, ಅದು ಅಲ್ಲೇ ಬಿದ್ದು ಸತ್ತು ಹೋಯಿತು.

ಸಾಹುಕಾರನಿಗೆ ಗಾಬರಿಯಾಯಿತು. ಹಸುವನ್ನು ಬೆದರಿಸಲು ಎಸೆದ ದೊಣ್ಣೆಯು ಅದರ ಪ್ರಾಣವನ್ನೇ ತೆಗೆಯಬಲ್ಲುದು ಎಂದು ಆತ ಊಹಿಸಿಯೇ ಇರಲಿಲ್ಲ. ಅಷ್ಟರಲ್ಲಿ ಆಚೀಚೆಗಿನ ತೋಟಗಳ ಜನ ಮತ್ತು ಹಸುವಿನ ಮಾಲಿಕ ಬಂದರು.

“ಹಸು ಸಾಯಲು ನೀವೇ ಕಾರಣ. ಆದ್ದರಿಂದ ಅದರ ಮೌಲ್ಯವನ್ನು ಕೊಡಿ" ಎಂದು ಅವರೆಲ್ಲಾ ದುಂಬಾಲು ಬಿದ್ದರು. “ಹಸು ಪವಿತ್ರವಾದ ಪ್ರಾಣಿ. ಅದನ್ನು ಸಾಯಿಸಿದ್ದೀರಿ. ಅದಕ್ಕೆ ತಕ್ಕ ಪರಿಹಾರ ಕೊಡಿ" ಎಂದರು ಎಲ್ಲರೂ.

ಸಾಹುಕಾರನು ನಕ್ಕು “ಶಾಸ್ತ್ರ ಗ್ರಂಥಗಳಲ್ಲಿ ಏನು ಹೇಳಿದೆ ಎಂದು ಗೊತ್ತೇ?” ಎಂದು ಕೇಳಿದ. ಆಚೀಚೆ ಇದ್ದವರು ತಲೆ ಅಲ್ಲಾಡಿಸಿದರು.

“ನಾನು ಹಿಮಾಲಯಕ್ಕೆ ಹೋಗಿ, ಯೋಗಿಗಳ ಬಳಿ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದೇನೆ ಕೇಳಿ..." ಎನ್ನುತ್ತಾ, ಕ್ಲಿಷ್ಟ ಪದಗಳ ನಾಲ್ಕು ಸಾಲುಗಳನ್ನು ದೊಡ್ದ ದನಿಯಲ್ಲಿ, ರಾಗವಾಗಿ ಹೇಳಿದ. ಸುತ್ತ ನೆರೆದಿದ್ದವರೆಲ್ಲರೂ, ಬೆಕ್ಕಸಬೆರಗಾಗಿ ಆತನ ಮಾತುಗಳನ್ನು ಕೇಳಿದರು. ಅವರಿಗೆ ಅದರ ಅರ್ಥ ಗೊತ್ತಾಗಲಿಲ್ಲ.

“ಇದರ ಅರ್ಥ ಗೊತ್ತೇ?” ಎಂದ ಸಾಹುಕಾರ. ಎಲ್ಲರೂ ಇಲ್ಲ ಎಂದು ತಲೆಯಲ್ಲಾಡಿಸಿದರು. “ಹೇಳುತ್ತೇನೆ ಕೇಳಿ, ಮನುಷ್ಯನು ಆಕಸ್ಮಿಕವಾಗಿ ಏನೇ ಕೆಟ್ಟ ಕೆಲಸ ಮಾಡಿದರೂ, ಅದಕ್ಕೆ ಆತ ಹೊಣೆ ಅಲ್ಲ. ದೈವವೇ ಹೊಣೆ. ಏಕೆಂದರೆ, ನಾನು ಬೀಸಿದ ದೊಣ್ಣೆಯಲ್ಲೂ ದೈವಾಂಶವಿದೆ. ಜೀವಕಣಗಳು ಇವೆ. ಕಲ್ಲಿನ ಗೋಡೆಯಿಂದ ನರಸಿಂಹನು ಬಂದು ಹಿರಣ್ಯಕಶಿಪುವಿನ ಹೊಟ್ಟೆ ಬಗೆದಿಲ್ಲವೇ? ಗೋಡೆಯಲ್ಲೂ, ದೊಣ್ಣೆಯಲ್ಲೂ ದೈವಾಂಶ ಇದೆ. ಆದ್ದರಿಂದ, ಇಂದು ನಡೆದ ಘಟನೆಗೆ ನಾನು ಜವಾಬ್ದಾರನಲ್ಲ" ಎಂದು ಮತ್ತೊಂದು ಕಠಿಣ ಪದ್ಯವನ್ನು ಹೇಳಿದ. ಊರಿನವರು ಏನೂ ಹೇಳಲು ತೋಚದೇ, ಗುಸು ಗುಸು ಮಾತಾಡಿಕೊಂಡು, ತಮ್ಮ ತಮ್ಮ ಮನೆಗಳಿಗೆ ಮರಳಿದರು.

ಇದಾಗಿ ಒಂದು ವಾರದ ನಂತರ, ಆ ಊರಿಗೆ ಒಬ್ಬ ಸಾಧು ಬಂದರು. ಈ ರೀತಿ ಒಂದು ಘಟನೆ ನಡೆದಿತ್ತು ಎಂದು ಅವರಿಗೆ ಯಾರೋ ಹೇಳಿದ್ದರು. ಅವರು ಸಾಹುಕಾರನ ತೋಟದ ಬಳಿ ಹೋದರು. ಸಾಹುಕಾರನು ತೋಟದಲ್ಲೇ ಇದ್ದ. “ಎಷ್ಟು ಸುಂದರ ತೋಟ!” ಎಂದು ಸಾಧುಗಳು ತೋಟದ ಬಳಿ ನಿಂತರು.

ಸಾಹುಕಾರನು “ ಸ್ವಾಮಿ, ಇದು ನನ್ನದೇ ತೋಟ" ಎಂದು ಅವರಿಗೆ ನಮಸ್ಕರಿಸಿದ.

“ಈ ಮರಗಳನ್ನು ಬೆಳೆಸಿದ್ದು ನೀನೇನಾ?” ಎಂದರು ಸಾಧು.

“ಹೌದು ಸ್ವಾಮಿ, ಮರ ಬೆಳೆಸಿ, ಗೊಬ್ಬರ ಕೊಟ್ಟೆ"

“ ಈ ಹೂವಿನ ಗಿಡಗಳು ಇಷ್ಟು ಚೆನ್ನಾಗಿ ಬೆಳೆಸಿದ್ದು ಯಾರು? ನೀರಿನ ಕಾಲುವೆ ಮಾಡಿಸಿದ್ದು?”

“ಇದನ್ನೂ ನಾನೇ ಮಾಡಿದ್ದು" ಎಂದ ಸಾಹುಕಾರ ಹೆಮ್ಮೆಯಿಂದ.

“ಹಾಗಿದ್ದ ಮೇಲೆ, ಕಳೆದ ವಾರದ ಹಿಂದೆ ನಿನ್ನ ತೋಟದಲ್ಲಿ ದನ ಸತ್ತಿತಲ್ಲಾ, ಅದು ನಿನ್ನ ದೊಣ್ಣೆಯಿಂದ ಸತ್ತಿತೋ ಅಥವಾ ದೈವ ಶಕ್ತಿಯಿಂದ ಸತ್ತಿತೋ?” ಎಂದು ಸಾಧು ಮಾರ್ಮಿಕವಾಗಿ ಕೇಳಿದರು. ಸಾಹುಕಾರನಿಗೆ ಈಗ ತನ್ನ ತಪ್ಪಿನ ಅರಿವಾಗಿ, ತಲೆ ತಗ್ಗಿಸಿದ. ಹಸುವಿನ ಬೆಲೆಯನ್ನು ಅದರ ಮಾಲಿಕನಿಗೆ ನೀಡಿದ.

(ಶಾಸ್ತ್ರ ಗ್ರಂಥಗಳ ಮಾಹಿತಿಯನ್ನು ಬಳಸಿ ಅಮಾಯಕರಿಗೆ ಟೋಪಿ ಹಾಕುವ ಕೆಲವರ ದುರಭ್ಯಾಸವನ್ನು ಈ ಕಥೆ ಎತ್ತಿ ತೋರಿಸುತ್ತದೆ. )

-ಶಶಾಂಕ್ ಮುದೂರಿ

(ಕೃಪೆ: ವಿಶ್ವವಾಣಿ ಪತ್ರಿಕೆ)

ಚಿತ್ರ ಕೃಪೆ: ಅಂತರ್ಜಾಲ ತಾಣ