ಸಿಂಗಾಪುರ - ಕೆಲವು ಟಿಪ್ಪಣಿಗಳು
ಎಲ್ಲರಿಗೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಿಂಗಾಪುರ ಎಂಬ ದೇಶಕ್ಕೆ ಹೋಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಲವು ವರ್ಷಗಳ ಹಿಂದೆ ಸಿಂಗಾಪುರ ಎಂಬುದು ಈಗಿನಂತಿರಲಿಲ್ಲ. ಆದರೆ ಅದು ಬದಲಾದ ಪರಿ ಬಹಳ ಅಚ್ಚರಿ. ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಗ್ರಗಣ್ಯ ದೇಶವಾಗಿ ಬದಲಾಗಿದೆ. ಪತ್ರಕರ್ತರಾದ ವಿಶ್ವೇಶ್ವರ ಭಟ್ ಅವರು ಹಲವು ಬಾರಿ ಸಿಂಗಾಪುರಕ್ಕೆ ಹೋಗಿ ಬಂದಿದ್ದಾರೆ. ಅವರು ಅಲ್ಲಿ ಕಂಡ, ಅನುಭವಿಸಿದ ವಿಷಯಗಳನ್ನು ಕೆಲವು ಟಿಪ್ಪಣಿಗಳ ಮೂಲಕ ಪುಸ್ತಕ ರೂಪದಲ್ಲಿ ಓದುಗರಿಗೆ ಉಣಬಡಿಸುವ ಮನಸ್ಸು ಮಾಡಿದ್ದಾರೆ. ಇದು ಸಿಂಗಾಪುರದ ಪರಿಚಯವಲ್ಲ. ಅಲ್ಲಿ ಕಂಡ ಕೆಲವೊಂದು ವಿಷಯಗಳ ಮಾಹಿತಿ. ವಿಶ್ವೇಶ್ವರ ಭಟ್ ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವೊಂದು ಸಾಲುಗಳು ನಿಮ್ಮ ಓದಿಗಾಗಿ..
“ನಾನು ಯಾವುದೇ ಊರು, ದೇಶಕ್ಕೆ ಹೋಗುವ ಮುನ್ನ ಆ ದೇಶದ ಜನ, ಪ್ರದೇಶ, ಸಂಸ್ಕೃತಿ, ಇತಿಹಾಸ, ಸಂಪ್ರದಾಯ, ಊಟ-ತಿಂಡಿ ಸೇರಿದಂತೆ ಆಸಕ್ತ ವಿಷಯಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುತ್ತೇನೆ. ಆ ದೇಶದಲ್ಲಿ ಇಳಿದು, ಅಲ್ಲೆಲ್ಲ ಸುತ್ತಾಡಿ, ಅಲ್ಲಿಂದ ವಾಪಸ್ ಬರುವ ತನಕ ಮತ್ತು ನಂತರ ಆ ದೇಶದ ಕುರಿತು ನನ್ನ ಅನುಭವಕ್ಕೆ ಸಿಕ್ಕಿದ ಸಂಗತಿಗಳನ್ನು ದಾಖಲಿಸುತ್ತಾ ಹೋಗುತ್ತೇನೆ. ಇದು ನನ್ನ ಅಭ್ಯಾಸ. ಇದು ಯಾವ ಕಾರಣಕ್ಕೂ ರನ್ನಿಂಗ್ ಕಾಮೆಂಟರಿ ಆಗದಂತೆ, ಮಾಹಿತಿಗಳ ಹೊರೆ ಆಗದಂತೆ ನಿಗಾವಹಿಸುತ್ತೇನೆ. ಹೋಗುವ ಮುನ್ನ ಮತ್ತು ಬಂದ ನಂತರ ಮಾಡಿಕೊಂಡ ಟಿಪ್ಪಣಿಗಳನ್ನು ತಾಳೆ ಹಾಕುತ್ತೇನೆ. ಕೆಲವು ಮಾಹಿತಿಯಲ್ಲಿ ವ್ಯತ್ಯಾಸಗಳಿರುತ್ತವೆ. ಅವುಗಳನ್ನು ಹಾಗೇ ಬಿಟ್ಟುಬಿಡುತ್ತೇನೆ. ಯಾವ ದೇಶಕ್ಕೆ ಹೋದರೂ, ಅದರ ಕುರಿತ ಆಸಕ್ತದಾಯಕ ಮತ್ತು ನಿಖರ ಮಾಹಿತಿ ನೀಡುವ ಪುಸ್ತಕಗಳನ್ನು ಅಲ್ಲಿಂದ ತರಲು ಮರೆಯುವುದಿಲ್ಲ. ನಾನು ಮಾಡಿಕೊಂಡ ಟಿಪ್ಪಣಿಗಳಿಗೆ, ಆ ಪುಸ್ತಕಗಳ ಓದು ಸೇರಿಕೊಳ್ಳುತ್ತವೆ. ಅವೆಲ್ಲವನ್ನೂ ಸೇರಿಸಿ ನಿಮ್ಮ ಮುಂದೆ ಇಡುತ್ತೇನೆ. ಹಾಗಂತ ನಾನು ಹೋದ ಎಲ್ಲ ದೇಶಗಳ ಬಗ್ಗೆಯೂ ಪುಸ್ತಕ ಬರೆದಿಲ್ಲ, ಬರೆಯುವುದೂ ಇಲ್ಲ. ಯಾವ ದೇಶವೂ ಒಂದು ಸಲಕ್ಕೆ ತನ್ನ ಗುಣವನ್ನು ಬಿಟ್ಟುಕೊಡುವುದಿಲ್ಲ. ಅಸಲಿಗೆ ನಮ್ಮ ಊರಿನಲ್ಲಿ, ಬಡಾವಣೆಯಲ್ಲಿ ದಶಕಗಳ ಕಾಲ ವಾಸಿಸಿದರೂ, ಅಲ್ಲಿನ ಮಣ್ಣಿನ ಗುಣ ತಿಳಿದಿರುವುದಿಲ್ಲ.
ಹೀಗಿರುವಾಗ ಯಾವುದೋ ವಿದೇಶದ ಬಗ್ಗೆ ಬರೆಯುವುದು ಹುಡುಗಾಟಿಕೆಯಾದೀತು. ಯಾರೇ ಯಾವ ದೇಶದ ಬಗ್ಗೆ ಬರೆದರೂ ಅದು ಆ ದೇಶದ ಬಗೆಗಿನ ಅವರ ಅನಿಸಿಕೆಯಾಗಬಹುದೇ ಹೊರತು ಅದೇ ಸತ್ಯ ಎಂದಲ್ಲ, ಕಾರಣ ಯಾವ ದೇಶವೂ ಯಾರ ಕೈಗೂ ಸುಲಭವಾಗಿ, ಸರಿಯಾಗಿ, ಇಡಿಯಾಗಿ ಸಿಗುವುದಿಲ್ಲ, ಹೀಗಿರುವಾಗ ಒಂದು ಸಲ ಹೋಗಿ ಬಂದವರು, ತನಗೆ ಎಲ್ಲ ಗೊತ್ತು ಎಂದು ಬರೆಯಬಾರದು. ನಾನು ಇಸ್ರೇಲಿಗೆ ಇಲ್ಲಿ ತನಕ ಒಂಬತ್ತು ಸಲ ಹೋಗಿ ಬಂದಿದ್ದೇನೆ. ಆದರೆ ಆ ದೇಶದ ಬಗ್ಗೆ ಪುಸ್ತಕ ಬರೆಯಲು ಹೋಗಿಲ್ಲ. ಹಾಗಂತ ಆ ದೇಶದ ಕುರಿತು ಅನೇಕ ಲೇಖನ, ಅಂಕಣಗಳನ್ನು ಬರೆದಿದ್ದೇನೆ. ಅವನ್ನೆಲ್ಲ ಸಂಗ್ರಹಿಸಿ ಪುಸ್ತಕ ಮಾಡಬಹುದು. ಆದರೆ ಅವನ್ನೆಲ್ಲ ಪಕ್ಕಕ್ಕಿಟ್ಟು, ಒಂದು ಪುಸ್ತಕ ಬರೆಯುವ ಧೈರ್ಯ ನನಗೆ ಇನ್ನೂ ಬಂದಿಲ್ಲ. ಈ ಮಾತು ಸಿಂಗಾಪುರ ಅಥವಾ ಈ ಕೃತಿಗೂ ಅನ್ವಯ.
ನಾನು ಇಪ್ಪತ್ತೈದಕ್ಕಿಂತ ಹೆಚ್ಚು ಸಲ ಸಿಂಗಾಪುರಕ್ಕೆ ಹೋಗಿರಬಹುದು. ಆದರೆ ಪುಸ್ತಕ ಬರೆಯಬೇಕು ಎಂದು ಎಂದೂ ಅನಿಸಿರಲಿಲ್ಲ. ನಾನು ಪ್ರತಿ ಸಲ ಅಲ್ಲಿಗೆ ಹೋದಾಗಲೂ ಮಾಡಿಕೊಂಡ ಟಿಪ್ಪಣಿಗಳ ಕೈಫಿಯತ್ತನ್ನು ಸೇರಿಸಿ, ಒಂದು ಪುಸ್ತಕ ಮಾಡಿದರೆ ಹೇಗೆ ಎಂದು ಅನಿಸಿತು. ಸಿಂಗಾಪುರಕ್ಕೆ ಹೋಗದವರಿಗೆ ಎಲ್ಲವೂ ಹೊಸತು ಅನಿಸಬಹುದು. ಈಗಾಗಲೇ ಹೋದವರಿಗೂ ಹೊಸ ವಿಷಯಗಳು ಸಿಗಬೇಕು, ಇದು ನನಗೆ ಕಾಣಲಿಲ್ಲ. ನನಗೆ ಈ ವಿಷಯ ಗೊತ್ತಾಗಲೇ ಇಲ್ಲ ಎಂದು ಅನಿಸಬೇಕು ಎಂಬ ಮನಸ್ಸಿನಲ್ಲಿಟ್ಟುಕೊಂಡು ಟಿಪ್ಪಣಿಗಳಿಗೆ ಪುಸ್ತಕದ ರೂಪ ಕೊಟ್ಟಿದ್ದೇನೆ. ಅಂಶವನ್ನು ಹಾಗಂತ ಸಿಂಗಾಪುರಕ್ಕೆ ಸಂಬಂಧಿಸಿದ ಸಮಗ್ರ ಕೃತಿ ಇದಲ್ಲ.
ನನ್ನ ಗ್ರಹಿಕೆಗೆ ಸಿಕ್ಕ ವಿಶೇಷ ಸಂಗತಿಗಳನ್ನಷ್ಟೇ ಇಲ್ಲಿ ನೀಡಿದ್ದೇನೆ. ಹೀಗಾಗಿ ಇದು ಸಿಂಗಾಪುರಕ್ಕೆ ಸಂಬಂಧಿಸಿದ ಅಪೂರ್ಣ ಕೃತಿಯೇ. ಹೀಗಾಗಿ ಇದು ವಿಮಾನದ ಐಲ್ ಸೀಟಿ (ನಡೆ ದಾರಿಗೆ ಹತ್ತಿರದ ಸೀಟು)ನಲ್ಲಿ ಕುಳಿತವನಿಗೆ ದಕ್ಕಿದಷ್ಟು ಹೊರನೋಟವಷ್ಟೇ.
ಆದರೆ ನೀವು ಈ ತನಕ ಕೇಳಿರದ ಕೆಲವು ಹೊಸ ವಿಷಯಗಳು ಸಿಕ್ಕರೂ ಸಿಗಬಹುದು. ಯಾವ ದೇಶದ ಬಗ್ಗೆ ಬರೆದ ಪುಸ್ತಕ ಸಿಕ್ಕರೂ ಅದು ನಿರರ್ಥಕ ಓದಲ್ಲ. ಕಾರಣ ನಮಗೆ ಗೊತ್ತಿರದ ಎಷ್ಟೋ ವಿಷಯಗಳು ಬೇರೆಯವರಿಗೆ ಕಂಡಿರುವ ಸಾಧ್ಯತೆ ಇರುತ್ತದೆ.
ನಾನು ಐಸ್ಲ್ಯಾಂಡಿಗೆ ಹೋಗಿ ಬಂದ ನಂತರ ಪಿಕೋ ಅಯ್ಯರ್ ಬರೆದ The Falling off The Map: Some Lonely Places ಎಂಬ ಪುಸ್ತಕ ಓದಿದೆ. ಅದರಲ್ಲಿ ಒಂದು ಅಧ್ಯಾಯ ಐಸ್ಲ್ಯಾಂಡ್ ಕುರಿತಿತ್ತು. ನಾನು ನೋಡಿದ ಐಸ್ಲ್ಯಾಂಡಿಗಿಂತ ಭಿನ್ನವಾದ ದೇಶವನ್ನು ಪಿಕೋ ಅಯ್ಯರ್ ನನಗೆ ತೋರಿಸಿದರು. ನನ್ನ ಗ್ರಹಿಕೆಗೂ, ಅವರ ಗ್ರಹಿಕೆಗೂ ವ್ಯತ್ಯಾಸವಿತ್ತು. ಈ ಕಾರಣಕ್ಕಾಗಿಯಾದರೂ ಒಂದು ಕೃತಿ ಮಹತ್ವವನ್ನು ಪಡೆಯುತ್ತದೆ.
ಸಿಂಗಾಪುರದ ಬಗ್ಗೆ ಅನೇಕರಿಗೆ ವಿಚಿತ್ರ ಕಲ್ಪನೆಗಳಿವೆ. ಅದೊಂದು ಪರಿಪೂರ್ಣ ನಗರ ಅಥವಾ ದೇಶ ಎಂಬ ಭಾವನೆ ಇದೆ. ಒಂದು ದೇಶದ, ಆಧುನಿಕತೆ, ಉತ್ಕೃಷ್ಟತೆ ಕುರಿತು ಹೇಳುವಾಗ ಸಿಂಗಾಪುರ ಪ್ರಸ್ತಾಪವಾಗುತ್ತದೆ. ಜಾಗತಿಕ ನಾಯಕರೂ ಸಿಂಗಾಪುರವನ್ನು ಒಂದು ಆದರ್ಶ ಅಥವಾ ರೋಲ್ ಮಾಡೆಲ್ ನಗರವಾಗಿ ಉಪಮೆಯಾಗಿ ಹೇಳುವುದುಂಟು. ಯಾವುದೇ ನಗರ, ದೇಶವನ್ನು ಮತ್ತೊಂದರ ಜತೆಗೆ ಹೋಲಿಸುವುದು ಸರಿಯಲ್ಲ. ಸಿಂಗಾಪುರಕ್ಕೆ ಅದೇ ಹೋಲಿಕೆಯಾದೀತು. ಆದರೆ ಒಂದು ನಗರದಲ್ಲಿರುವ ಉತ್ತಮ ಸಂಗತಿಗಳನ್ನು ನಮ್ಮ ಅಳವಡಿಕೆಗಾಗಿ ಎತ್ತಿಕೊಳ್ಳುವುದರಲ್ಲಿ ತಪ್ಪಿಲ್ಲ. ಇಂಥ ಹಲವು ಸಂಗತಿಗಳು ಸಿಂಗಾಪುರದಲ್ಲಿ ಕಾಣುವುದರಿಂದ, ಅದು ಪದೇ ಪದೆ ನಮಗೆ ಆದರ್ಶವಾಗಿ ಕಾಣಿಸಬಹುದು. ಹಾಗಂತ ಅಲ್ಲಿಯೂ ಅಂತರ್ಗತವಾದ ಅನೇಕ ಸಮಸ್ಯೆಗಳಿವೆ. ಒಂದು ಊರು ಎಂದ ಮೇಲೆ ಅವೆಲ್ಲ ಇದ್ದಿದ್ದೇ. ಈ ಕೃತಿ ಸಿಂಗಾಪುರದ ಬಗ್ಗೆ ಒಂದು ಝಲಕ್ ಅಥವಾ glimpse ಅಷ್ಟೇ. ನಾನು ಟಿಪ್ಪಣಿ ಮಾಡಿಕೊಂಡಿದ್ದೆಲ್ಲವನ್ನೂ ಸೇರಿಸಿದ್ದಿದ್ದರೆ, ಅದೂ ಸ್ವಾರಸ್ಯವಿರುತ್ತಿತ್ತಾ... ಗೊತ್ತಿಲ್ಲ. ಪುಸ್ತಕ ಓದಿದ ಬಳಿಕ ನಿಮ್ಮ ಅನಿಸಿಕೆ ತಿಳಿಸಿ.”
ಸುಮಾರು ೯೦ ಪುಟಗಳ ಈ ಪುಟ್ಟ ಪುಸ್ತಕವನ್ನು ಓದಿದರೆ ನಿಮಗೆ ಸಿಂಗಾಪುರಕ್ಕೆ ಹೋಗಬೇಕೆಂಬ ಆಸೆ ಇನ್ನಷ್ಟು ಅಧಿಕವಾಗುವುದರಲ್ಲಿ ಸಂದೇಹವಿಲ್ಲ.