ಸಿಂಪರಣೆಯಿಂದ ವಾಸಿಯಾಗದ ಅಡಿಕೆಯ ಎಲೆಚುಕ್ಕೆ ರೋಗ ! (ಭಾಗ ೨)

ಸಿಂಪರಣೆಯಿಂದ ವಾಸಿಯಾಗದ ಅಡಿಕೆಯ ಎಲೆಚುಕ್ಕೆ ರೋಗ ! (ಭಾಗ ೨)

ಯಾಕೆ ರೋಗ ಹೋಗಲಾಡಿಸಲು ಅಸಾಧ್ಯ?: ನಮ್ಮ ಕೃಷಿಕರ ಮನೋಸ್ಥಿತಿ ವಿಭಿನ್ನ. ಒಬ್ಬ ನಾನು ರಾಸಾಯನಿಕ ಬಳಸುವುದಿಲ್ಲ. ಏನಿದ್ದರೂ ಸಾವಯವ ಎಂಬ ಮಡಿವಂತಿಕೆ. ಮತ್ತೊಬ್ಬ ರಾಸಾಯನಿಕ ಮೂಲವಸ್ತುಗಳನ್ನು ಬಳಸಿಯೇ ಕೃಷಿ ಮಾಡುವವ. ಕೆಲವರು ಎರಡನ್ನೂ ಬಳಸುವವರು. ಒಬ್ಬ ನನ್ನಲ್ಲಿ ರೋಗವೇ ಇಲ್ಲ ಎನ್ನುವವ. ಇನ್ನೊಬ್ಬ ರೋಗ ಬಂದರೆ ಬರಲಿ. ಸಿಕ್ಕಿದ್ದು ಸಾಕು ಎಂಬ ಮನೋಸ್ಥಿತಿಯವ. ನನ್ನ ತೋಟ ಉಳಿಯಲಿ, ನೆರೆಯವನ ತೋಟ ಹಾಳಾಗಿ ಹೋಗಲಿ ಎಂಬ ಮನೋಸ್ಥಿತಿಯವರೂ ಸಾಕಷ್ಟು ಜನ. ಇಂತಹ ಮನೋಸ್ಥಿತಿಯಲ್ಲಿರುವ ನಾವು ರೋಗ ಬಂದರೆ ಅದನ್ನು ತಡೆಯುವುದು ಸಾಧ್ಯವೇ ಯೋಚನೆ ಮಾಡಿ. ರೋಗಗಳಿಗೆ ಕಾರಣವಾದ ಶಿಲೀಂದ್ರಗಳು ಅಥವಾ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳು ಗಾಳಿಯ ಮೂಲಕ, ನೀರಿನ ಮೂಲಕ, ವಾಹಕಗಳ ಮೂಲಕ ಪ್ರಸಾರವಾಗುತ್ತದೆ. ಇದನ್ನು ನಿಯಂತ್ರಣ ಮಾಡಬೇಕಿದ್ದರೆ ಸಾಮೂಹಿಕ ಪ್ರಯತ್ನವನ್ನು ಮಾಡಬೇಕಾಗುತ್ತದೆ. ನಾನು ಔಷಧಿ ಸಿಂಪಡಿಸುವುದು  ನೆರೆಯವರು ಸಿಂಪಡಿಸದೆ ಇರುವುದು, ಇಂತಹ ನಮ್ಮ ಚಟುವಟಿಕೆ ರೋಗವನ್ನು ಹದ್ದುಬಸ್ತಿಗೆ ತರಲು ಅಡ್ಡಿಯಾಗಿದೆ. ಸಿಂಪರಣೆ ಮಾಡುವುದು ಬಿಡುವುದು, ಕೃಷಿ ಮಾಡುವುದು ಪಾಳು ಬಿಡುವುದು ಅವನವನ  ಐಚ್ಚಿಕ ವಿಷಯವಾಗಿರುತ್ತದೆ.  ಸರಕಾರ ತೋಟಗಾರಿಕಾ ಇಲಾಖೆಯ ಮೂಲಕ  ಉಚಿತವಾಗಿ ಸಿಂಪರಣೆಗೆ ಬೇಕಾಗುವ ಶಿಲೀಂದ್ರ ನಾಶಕ ಪೂರೈಕೆಯಾದರೂ ಸಹ ಅದನ್ನು ಬಳಸುವವರೆಷ್ಟು ಮಂದಿ  ಇದ್ದಾರೆ?  ಇವೆಲ್ಲಾ ಕಾರಣಗಳಿಂದ ಎಲೆ ಚುಕ್ಕೆ ರೋಗವನ್ನು ಒಮ್ಮೆಗೆ ಸಿಂಪರಣೆ ಮಾಡಿ ನಿಯಂತ್ರಣಕ್ಕೆ ತರಬಹುದು ಹೊರತಾಗಿ ಅದನ್ನು ಶಾಶ್ವತವಾಗಿ ದೂರಮಾಡಲು ಅಸಾಧ್ಯ. 

ಎಲೆ ಚುಕ್ಕೆ  ರೋಗವನ್ನು ಅವರವರ ತೋಟದಲ್ಲಿ ಹದ್ದುಬಸ್ತಿನಲ್ಲಿ ಇಡಬೇಕಾದರೆ ಶಿಲೀಂದ್ರ ನಾಶಕವನ್ನು ಪ್ರತೀ ತಿಂಗಳೂ ಬಳಸಬೇಕಾಗಬಹುದು. ಶಿಲೀಂದ್ರ ನಾಶಕದ ಬೆಲೆ, ಸಿಂಪಡಿಸುವ ಖರ್ಚು ವೆಚ್ಚಗಳನ್ನು ಲೆಕ್ಕಾಚಾರ ಹಾಕಿದರೆ ಅದು ಬೆಳೆಗಾರರಿಗೆ ಭಾರೀ ನಷ್ಟದ್ದು. ಇದನ್ನು ಲೆಕ್ಕಾಚಾರ ಹಾಕಿಯೇ ಬಹಳಷ್ಟು ಜನ ಬೇರೆಯವರು ಸಿಂಪರಣೆ ಮಾಡಿದಾಗ ನನ್ನ ತೋಟದಲ್ಲಿ ಎಲೆ ಚುಕ್ಕೆ ರೋಗ ಕಡಿಮೆಯಾಗಬಹುದು ಎಂದು ಸುಮ್ಮನೆ ಇರುವುದು ಉಂಟು.

ಜನ ಈಗ ಬಹಳ ಬುದ್ಧಿವಂತರಾಗಿದ್ದಾರೆ: ಯಾವುದಾದರೂ ಒಂದು ಕೃಷಿ ಸಂಬಂಧಿತ ವಿಚಾರ ಸಂಕಿರಣ ನಡೆಯುವಾಗ ಸೇರಿದ ಜನರಲ್ಲಿ ಕೆಲವು ಜನರನ್ನು ಮಾತಾಡಿಸಿರಿ. ಅದರಲ್ಲಿ  ಹೆಚ್ಚಿನವರು  ಇದೆಲ್ಲಾ ಆಗು ಹೋಗುವಂತದ್ದಲ್ಲ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಾರೆ. ಇನ್ನು ಕೃಷಿ ವಿಜ್ಞಾನಿಗಳ ಮಾತಿನಲ್ಲೂ ನಂಬಿಕೆ ಇಲ್ಲದ ಜನ ನಮ್ಮಲ್ಲಿ ಸಾಕಷ್ಟು ಇದ್ದಾರೆ. ಇದೆಲ್ಲಾ ಟ್ರಾಯಲ್ ಎಂಡ್ ಎರರ್ ಎಂಬುದಾಗಿಯೂ ಹೇಳುವವರಿದ್ದಾರೆ. ಕೆಲವರು ಇನ್ನೂ ಮುಂದುವರಿದು ಔಷಧಿ ಕಂಪೆನಿಯವರ ಜೊತೆ  ಹೊಂದಾಣಿಕೆ ಮಾಡಿಕೊಂಡು ಔಷದೋಪಚಾರ ಶಿಫಾರಸು ಮಾಡಲಾಗುತ್ತಿದೆ ಎಂಬುದಾಗಿಯೂ  ಹೇಳುವುದುಂಟು.

ಪೋಷಕಾಂಶ ಕೊಟ್ಟು ನಿಯಂತ್ರಣ ಮಾಡುವುದು ಸಾಧ್ಯವಿದೆ:  ರೋಗ ಬರಲು ಕೆಲವು ಕಾರಣಗಳಿವೆ. ಒಂದು ಮೂಲದಿಂದ ಬಂದದ್ದು. ಈ ಹಿಂದೆ ಹೇಳಿದಂತೆ ರೋಗ ಇರುವ ಮರದ ಬೀಜದ ಆಯ್ಕೆಯಿಂದ  ರೋಗ ಪ್ರಸಾರವಾಗುತ್ತದೆ. ಬೀಜದ ಆಯ್ಕೆ ಮತ್ತು ಸಸಿ ಆಯ್ಕೆಯಲ್ಲಿ ನಾವು ತಪ್ಪಿದರೆ  ರೋಗ ಬಂದೇ ಬರುತ್ತದೆ.  ಇದರಲ್ಲಿ ಕೃಷಿಕರು ಜಾಗರೂಕರಾಗಿರಬೇಕು. ಬಹಳಷ್ಟು ಜನ ರೈತರು ಸಾವಯವ ಎಂದು ಮೈ ಮೇಲೆ ದೆವ್ವ ಬಡಿದವರಂತೆ ವರ್ತಿಸುತ್ತಾರೆ. ಒಂದು ಮರಕ್ಕೆ ಆರೋಗ್ಯಕರವಾಗಿ ಬೆಳೆಯಲು, ಫಲ ಕೊಡಲು ಬೇಕಾಗುವಷ್ಟು ಸಾವಯವ ಗೊಬ್ಬರ ಪೂರೈಕೆ ಮಾಡಲು ಅವರಲ್ಲಿ ಮೂಲವಸ್ತುಗಳಿದ್ದರೆ ಅದನ್ನು ಒಪ್ಪಬಹುದು. ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ  ಪೋಷಕಗಳನ್ನು ನೀಡುತ್ತಾ ಸಾವಯವ  ಎಂದು ಬೊಬ್ಬಿಡುವವರ ತೋಟ ರೋಗಗಳ ಗೂಡೇ ಆಗಿರುತ್ತದೆ. ಸಸ್ಯಕ್ಕೆ ಬೇಕಾಗುವಷ್ಟು ನೀರು, ಗೊಬ್ಬರವನ್ನು ಹಿತಮಿತವಾಗಿ ವಿಭಜಿತ ಕಂತುಗಳಲ್ಲಿ ಕೊಡುವ ಅಭ್ಯಾಸವನ್ನು ರೈತರಾದವರು ಮಾಡಬೇಕು.  ಬೇರುಗಳಿಗೆ ಘಾಸಿಯಾಗುವಂತೆ ವರ್ಷಕ್ಕೊಮ್ಮೆ ಗೊಬ್ಬರ ಸುರಿಯುವುದು ಮಾಡಬಾರದು. ಉತ್ತಮ ರೀತಿಯಲ್ಲಿ ಪೋಷಕಾಂಶಗಳನ್ನು ಒದಗಿಸಿದ ಬಹಳಷ್ಟು ಕಡೆ ರೋಗ ಹಾನಿಕಾರಕ ಸ್ಥಿತಿಯಲ್ಲಿ ಇಲ್ಲದಿರುವುದನ್ನು ನಾವೆಲ್ಲರೂ ಗಮನಿಸಬಹುದು. ಬೆಳೆಗಳಿಗೆ ಏನೆಲ್ಲಾ ಪೊಷಕಾಂಶ ಬೇಕು ಅದನ್ನು ಚಾಚೂ ತಪ್ಪದೆ ಒದಗಿಸಬೇಕು. ಮಣ್ಣು ಪರೀಕ್ಷೆಯ ಮೂಲಕ ಸೂಕ್ಷ್ಮ ಪೊಷಕಾಂಶಗಳ ಅಗತ್ಯವನ್ನು ತಿಳಿದು ಬಳಸಬೇಕು.

ಪೋಷಕಾಂಶ ಬಳಕೆ ಬಗ್ಗೆ ಮತ್ತೆ ಅಧ್ಯಯನ ಬೇಕು: ಅಡಿಕೆ ಮರಗಳಿಗೆ ಈಗಾಗಲೇ ಇಂತಿಷ್ಟು NPK ಪೊಷಕಾಶಗಳನ್ನು ನೀಡಬೇಕು ಎಂಬ ಶಿಫಾರಸು ಇದೆ. ಇದು ಈಗಿನ ಸ್ಥಿತಿಗೆ ಸಾಕೇ ಅಥವಾ ಇನ್ನೂ ಹೆಚ್ಚು ಕಡಿಮೆ ಮಾಡಬೇಕೇ ಎಂಬ ಬಗ್ಗೆ ಮತ್ತೆ ಅಧ್ಯಯನ ನಡೆಸಬೇಕಾಗಿದೆ. ಈಗ ಕೃಷಿ ಮಾಡಿದ ಭೂಮಿ, ಸತ್ವ ಕಳೆದುಕೊಡಿರಬಹುದು. ಕೃಷಿಗೆ ಸೇರ್ಪಡೆಯಾಗುತ್ತಿರುವ ಭೂಮಿ ಏನೇನೂ ಸಾರ ಹೊಂದಿರದೇ ಇರಬಹುದು. ಮೇಲ್ ಮಣ್ಣು ರಹಿತ ಕೃಷಿಯೇ ಈಗ ಜಾಸ್ತಿಯಾಗಿರುವ ಕಾರಣ ಮತ್ತೆ ಪೋಷಕಾಂಶಗಳ ಪೂರೈಕೆ ಬಗ್ಗೆ ಅಧ್ಯಯನ ಆಗಬೇಕು.

ಎಲೆ ಚುಕ್ಕೆ ರೋಗ ಉಲ್ಬಣಾವಸ್ಥೆಗೆ ತಲುಪು ಮೂಲ ಕಾರಣ ಎನೇ ಇರಲಿ. ಇದರಿಂದಾಗಿ ಇಳುವರಿ ಬಹಳಷ್ಟು ಕಡಿಮೆಯಾಗುತ್ತದೆ. ಮರಗಳು ಸಸಿಗಳು ನಿಸ್ತೇಜವಾಗುತ್ತದೆ. ಕಾರಣಸಮತೋಲನ ಗೊಬ್ಬರ, ಮತ್ತು ಅಗತ್ಯಬಿದ್ದರೆ ಶಿಫಾರಿತ ಪ್ರಮಾಣದ ಶಿಲೀಂದ್ರ ನಾಶಕನ್ನು ಸಿಂಪರಣೆ ಮಾಬೇಕು. ಸಸ್ಯಕೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಬೇಸಾಯ ಕ್ರಮ ಎಲ್ಲದಕ್ಕಿಂತ ಉತ್ತಮ. 

(ಮುಗಿಯಿತು)

ಚಿತ್ರ ಮತ್ತು ಮಾಹಿತಿ: ರಾಧಾಕೃಷ್ಣ ಹೊಳ್ಳ